(ಬೊಗಳೂರು ಅಶುಚಿ ಬ್ಯುರೋದಿಂದ)
ಬೊಗಳೂರು, ಸೆ.13- ಕರ್ನಾಟಕ ರಾಜ್ಯಾದ್ಯಂತ ಸ್ವಚ್ಛತಾ ಕ್ರಾಂತಿಯಾಗಿದೆ. ಈ ಅಭೂತಪೂರ್ವ ಬೆಳವಣಿಗೆಗೆ ಈಗಿನ ಸರಕಾರವೇ ಕಾರಣ ಎಂಬ ಆರೋಪಗಳು ತೀವ್ರವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಅನ್ವೇಷಿಯ ಅನ್ವೇಷಣಾ ಯಾತ್ರೆ ಹೊರಟಿತು.
 
ದಾರಿಯಲ್ಲಿ ಹಲವಾರು ಕೊಳೆಗೇರಿಗಳಲ್ಲಿ ಮರಳಿನ ರಾಶಿ ಹಾಕಲಾಗಿತ್ತು... ನಮ್ಮ ತಂಡದ ಕಣ್ಣಿಗೆ ಒಂದಿಷ್ಟು ಮರಳು ಮರಳಿ ಮರಳಿ ಬೀಳುತ್ತಿದ್ದರೂ ಇದ್ಯಾಕೆ ಎಂದು ಪ್ರಶ್ನಿಸಿದಾಗ ಅಲ್ಲಿದ್ದ ಹೆಂಡಸರು-ಗಂಗಸರು ಎಲ್ಲರೂ ನಮ್ಮನ್ನೇ ಯಾವುದೇ ಪ್ರಾಣಿಯನ್ನು ನೋಡಿದಂತೆ ಕತ್ತು ಕೊಂಕಿಸಿ ಮುನ್ನಡೆದರು.
 
ನಮ್ಮೂರ್ನಾಗೆ ಮಹಾರಾಜ್ರು ಬರ್ತಾವ್ರೆ... ಅವ್ರಿಗೆ ಮಲ್ಗೋಕೆ ಸ್ವಲ್ಪನಾದ್ರೂ ಸ್ವಚ್ಛ ತಾಣ ಬೇಡ್ವೇನ್ರಿ ಎಂದು ಪಾಪದ ಹುಡುಗನೊಬ್ಬ ಹೇಳತೊಡಗಿದ. ಮನೆ ಮನೆ ತೊಳೆಯಲು ಮರಳಿನ ರಾಶಿ ಹಾಕಲಾಗಿದೆ. ಮತ್ತೆ ಕೆಲವರು ಮೈಯ ಕೊಳೆ ಕಳೆಯಲು ಸ್ನಾನಕ್ಕೂ ಅದನ್ನೇ ಬಳಸುತ್ತಾರೆ ಎಂದು ಆತನೇ ವಿವರಿಸಿದ.
 
ಹಾಗಿದ್ದರೆ ಮನಸ್ಸಿನ ಕೊಳೆಯನ್ನೂ ಇಲ್ಲೇ ಕಳೆಯಲಾಗುತ್ತದೆಯೇ ಎಂದು ಯೋಚಿಸುತ್ತಾ ಮುನ್ನಡೆದಾಗ, ಮೋರಿಗೆ ಹಾಕಲಾಗುವ ದೊಡ್ಡ ದೊಡ್ಡ ಕಾಂಕ್ರೀಟ್ ಪೈಪುಗಳೊಳಗೆ ವಾಸಿಸುತ್ತಿದ್ದವರು ಕೂಡ ತಮ್ಮ ತಮ್ಮ 'ವಾಸ ಸ್ಥಾನ'ವನ್ನು ತಿಕ್ಕುತ್ತಿದ್ದರು.
 
ಎಲ್ಲಾದ್ರೂ ನಮ್ಮ ಮಣ್ಣಿನ ಮೊಮ್ಮಗ ಇಲ್ಲೇ ಬಂದು ಠಿಕಾಣಿ ಹೂಡಿದ್ರೂ ಹೂಡಬಹುದು ಎಂಬ ದೂರದ ಆಶಾಭಾವನೆ ಅವರದಾಗಿತ್ತು. ಇದೇ ಆಶಾವಾದವೇ ರಾಜ್ಯವಿಡೀ ನಳನಳಿಸುವಂತೆ ಮಾಡತೊಡಗಿದೆ ಎಂಬುದು ಬ್ಯುರೋ ಕಂಡುಕೊಂಡ ಪರಮಾಸತ್ಯ.
 
ಹೀಗಿರಲಾಗಿ, ಕೊನೆಗೆ ಮುಖ್ಯಮಂತ್ರಿಯವರನ್ನೇ ಒಂದು ಮೂಲೆಗೆ ಕರೆದುಕೊಂಡು ಹೋಗಿ ಅವರ ಕಿವಿಯಲ್ಲಿ ಅವರಿಗೆ ಮಾತ್ರ ಕೇಳಿಸುವಂತೆ ಪ್ರಶ್ನೆ ಕೇಳಲಾಯಿತು-"ಸಾರ್, ನೀವ್ಯಾಕೆ ಊರು ಬಿಟ್ಟು ಇಂಥ ಹಳ್ಳಿಗಳಲ್ಲಿ ವಾಸ್ತವ್ಯ ಹೂಡೋದು?"
ಅದಕ್ಕೆ ಮಣ್ಣಿನ ಮೊಮ್ಮಗರು, ಯಾರಲ್ಲೂ ಹೇಳಬೇಡಿ ಎನ್ನುತ್ತಾ ಅನ್ವೇಷಿ ಕಿವಿಯಲ್ಲಿ ಉತ್ತರಿಸಿದ್ದು ಹೀಗೆ:
 
"ಊರಲ್ಲಿದ್ದರೆ ಗಣಿ ಗಲಾಟೆ, ಲಂಚ ಆರೋಪ, ಸಿ.ಡಿ. ಎಲ್ಲಾ ತೋರಿಸ್ತಾರೆ... ಪತ್ರಿಕೆಗಳಲ್ಲಿ ದಿನ ಬೆಳಗಾಗೆದ್ದರೆ ಇದೇ ಗಲಾಟೆ. ಇಲ್ಲಾದ್ರೆ, ಪೇಪರ್ ಬರೋದಿಲ್ಲ, ಟೆಲಿಫೋನ್ ಸಂಪರ್ಕ ಇಲ್ಲ, ವಿದ್ಯುತ್ ಸೌಲಭ್ಯ ಇಲ್ಲ, ಟೀವಿ ಇಲ್ಲ... ಸಿ.ಡಿ. ಅಂದ್ರೇನು ಅಂತ ಹಳ್ಳಿಗರಿಗೆ ಗೊತ್ತೇ ಇಲ್ಲ... ಹಾಗಾಗಿ ಯಾವುದೇ ಚಿಂತೆ ಇಲ್ದೆ ಗಡದ್ದಾಗಿ ನಿದ್ದೆ ಹೊಡೀಬಹುದು!".

4 Comments

ಏನಾದ್ರೂ ಹೇಳ್ರಪಾ :-D

 1. ಸಿಡಿ ಯಾರದ್ದು, ಮೊಮ್ಮಗ ಅವರದ್ದಾ? ಅವರು ಊರಲಲ್ಲಿದೇ ಇದ್ದಾಗ ಅವರ ಸಿಡಿ‍ನ ಇತರರು ನೋಡೋಕ್ಕಾಗಲ್ವಾ?

  ಜಗತ್ತನ್ನು ಸಾರಿಸಿ ಗುಡಿಸಿ, ಸ್ವಚ್ಛವಾಗಿಡುವ ಇಂತಹ ಮಣ್ಣಿನ ಮಕ್ಕಳು ಮೊಮ್ಮಕ್ಕಳು ಹೆಚ್ಚು ಹೆಚ್ಚಾಗಿ ಬರಲಿ. ಅಲ್ಯಾರೋ ನೆಲ ಮಗ ಅಂತ ಬೇರೆ ಇದ್ದಾರಂತೆ. ಅವರೂ ಸ್ವಚ್ಛತಾ ಕ್ರಾಂತಿ ಪ್ರಾರಂಭಿಸಿದ್ದಾರಂತೆ.

  ReplyDelete
 2. ಮಾವಿನ ರಸರೇ,
  ಮನೆ ತೊಳೆಯುವವರು ನಿಮ್ಮಲ್ಲಿಗೂ ಬಂದಾರು... ಜೋಕೆ...!

  ReplyDelete
 3. ಎಸ್ಸೆಮ್ ಕಿಸನರಾಗಿದ್ದರೆ ಇಲ್ಲಿ ಇ-ಮೇಲಿನ ತೊಂದರೆ ಇಲ್ಲ ಎನ್ನುತ್ತಿದ್ದರೇನೊ? ಜೇಚ್ ಟೆಪಾಲರಾಗಿದ್ದರೆ ಇಲ್ಲಿ ಹೆಂಡ ಮತ್ತು ಫಿಮೇಲಿನ ತೊಂದರೆ ಇಲ್ಲ ಎನ್ನುತ್ತಿದ್ದರೇನೋ?

  -ಪಬ್

  ReplyDelete
 4. ಹ್ಹ ಹ್ಹಾ... ಪಬ್ಬಿಗರೇ,

  ನಿಮ್ಮ ಕಿಸ್ಸೆಮ್ ಎಸನ ಮತ್ತು ಕಚ್ಚೆ ಪೇಟೇಲರು ಕೇಳಿಸ್ಕೊಂಡ್ರೆ ಮೇಲ್‌ಗಳನ್ನು ಕಳಿಸಿ ಫಿಮೇಲ್‌ಗಳ ಮೇಲೆ ಕ್ರಮ ಕೈಗೊಳ್ಳಬಹುದು. :)

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post