ಬೊಗಳೆ ರಗಳೆ

header ads

Soft ಡ್ರಿಂಕ್ಸ್ hot hot ಮಾರಾಟ!!

(ಬೊಗಳೂರು ಜಾಗತೀಕರಣ ಪ್ರೋತ್ಸಾಹ ಬ್ಯುರೋದಿಂದ)

ಬೊಗಳೂರು, ಆ.3- ದೇಶಾದ್ಯಂತ ಪೆಪ್ಸಿ, ಕೋಕಾ ಕೋಲಾ ಮುಂತಾದ soft ಹೆಸರು ಅಂಟಿಸಿಕೊಂಡಿರೋ hot ಡ್ರಿಂಕ್ಸ್‌ಗಳ ಮಾರಾಟ ದಿಢೀರನೆ ರಾತ್ರಿ ಬೆಳಗಾಗುವುದರೊಳಗೆ ಹೆಚ್ಚಳವಾಗಿರುವ ಅಂಶ ನಿಜಕ್ಕೂ 'ಕೋಲಾ'ಹಲಕ್ಕೆ ಕಾರಣವಾಗಿದೆ.

ಇದು ಆಲ್-ಕೋಲಾಹಲಕ್ಕಿಂತ ಭಿನ್ನವಾದ ಕೋಲಾ ಆಗಿದ್ದು, ಇದರ ಹಿಂದೆ ಪರಿಸರ ಮತ್ತು ವಿಜ್ಞಾನ ಸಂಶೋಧನಾ ಕೇಂದ್ರದ ಕೈವಾಡವಿದೆ ಎಂಬುದು ಇಲ್ಲಿ ಸಾಬೀತಾಗಿದೆ.

ಇದಕ್ಕೆ "ಪೆಪ್ಸಿ, ಕೋಲಾ ಮುಂತಾದ un-alcolaಹಲಗಳಲ್ಲಿ ಕೀಟನಾಶಕ ವಸ್ತುಗಳಿವೆ" ಎಂದು ಈ ಸಂಸ್ಥೆ ವರದಿಯೊಂದನ್ನು ಎಲ್ಲಾ ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟವಾಗುವಂತೆ ನೋಡಿಕೊಂಡದ್ದೇ ಕಾರಣ ಎಂಬುದು ಅ-ಸತ್ಯಾನ್ವೇಷಣೆ ವೇಳೆ ಪತ್ತೆಯಾಗಿದೆ.

ಈ ವರದಿಯಿಂದ ಪ್ರೇರಣೆ ಪಡೆದ ರೈತಾಪಿ ವರ್ಗ, ತಮ್ಮೆಲ್ಲಾ ಗದ್ದೆಗಳಿಗೆ ಪೀಪಾಯಿಗಟ್ಟಲೆ ಈ ಪಾನೀಯಗಳನ್ನು ಖರೀದಿಸಿರುವುದೇ ಈ ಅಬ್ಬರದ ಮಾರಾಟದ ಹಿಂದಿನ ರಹಸ್ಯ.

ಇದರಲ್ಲಿ ಕೋಲಾ-ಹಲ ಕಂಪನಿಗಳ ಕೈವಾಡವಿದೆ ಎಂದು ಕೀಟನಾಶಕ ಕಂಪನಿಗಳು ಆರೋಪಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಸರಕಾರೀ ಕೀಟನಾಶಕಗಳು ಎಲ್ಲಾ ಕಡೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರು ಈ ಕೋಲಾ-ಹಲಗಳನ್ನೇ ಬಳಸುತ್ತಿರುವುದರಿಂದ ಸರಕಾರದ ಕೀಟನಾಶಕ ಗೋಡೌನ್‌ಗಳಲ್ಲಿ ವ್ಯಾಪಾರ gone-down ಆಗಿದೆ ಎಂದು ತಿಳಿದುಬಂದಿದೆ.

ಇದಲ್ಲದೆ ಕೆಲವು ಮಾರಣಾಂತಿಕ ಕೀಟನಾಶಕಗಳಿಗೆ (eg: Heptachlor) ಭಾರತದಲ್ಲಿ ನಿಷೇಧವಿದೆ. ಅವು ಭಾರತದಲ್ಲಿ ದೊರೆಯುತ್ತಲೇ ಇಲ್ಲ. ಆದರೆ ಈ ಪಾನೀಯ ಎಂಬ ಹೆಸರಿನಲ್ಲಿರುವ ದ್ರಾವಣಗಳಲ್ಲಿ ಅವು ಯಥೇಚ್ಛ ದೊರೆಯುತ್ತಿವೆ. ಇದರ ಪೂರ್ಣ ಪ್ರಯೋಜನವನ್ನು ರೈತರು ಪಡೆಯಲಾರಂಭಿಸಿದ್ದಾರೆ.

ಈ ಹಿಂದೆ ಲಘುಪೇಯದಲ್ಲಿ ಕಾಂಡೋಮ್ ಹಾಕುವ ಮೂಲಕ ಸಂತಾನ ನಿಯಂತ್ರಣಕ್ಕೆ ಮುಂದಾಗಿದ್ದ ಕಂಪನಿಗಳು, ಕೀಟನಾಶಕ ಬಳಸುವ ಮೂಲಕ ಮಾನವ ಸಂತಾನನಿಯಂತ್ರಣ ಕ್ಷೇತ್ರದತ್ತಲೂ ಹೆಚ್ಚಿನ ಗಮನ ಹರಿ'ಸತ್ತಿವೆ'. ಇದಕ್ಕಾಗಿಯೇ ಅವುಗಳು "ಸಂತಾನ ನಿಯಂತ್ರಣಕ್ಕೆ ಕಾಂಡೋಮ್ ಏಕೆ, ನಮ್ಮ ಲಘುಪೇಯವೇ ಓಕೆ" ಎಂಬ ಘೋಷಾವಾಕ್ಯ ಹೊರಡಿಸಲು ನಿರ್ಧರಿಸಿವೆ.

ವಾಸ್ತವವಾಗಿ, ಏಡ್ಸ್ ಮುಂತಾದ "ಸೆಕ್ಸೀ ರೋಗ"ಗಳ ನಿಯಂತ್ರಣಕ್ಕೆ ತಾವು ಬಾಟ್ಲಿಯೊಳಗೆ ಕಾಂಡೋಮ್ ಇರಿಸಿರುವುದಾಗಿ ಕಂಪನಿ ಹೇಳಿಕೆ ನೀಡಿತ್ತು.

ಇದೀಗ ಭಾರತದ ಬೆನ್ನೆಲುಬು ಆಗಿರುವ ರೈತರ ಬೆನ್‌ಗಾವಲಿಗೆ ವಿದೇಶೀ ಮೂಲದ ಕಂಪನಿಗಳು ಮುಂದಾಗಿರುವುದು ಜಾಗತೀಕ-ರಣದ ಹೊಸ ಬೆಳವಣಿಗೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

15 ಕಾಮೆಂಟ್‌ಗಳು

 1. ಇನ್ನೇನು ಸ್ವಲ್ಪ ದಿನಗಳಲ್ಲೇ ನಮ್ಮ ದೇಶದ ಜನಸಂಖ್ಯೆ ಇಳಿಮುಖ ಕಾಣುವುದು. ಹೀಗೇ ಆದರೆ ನಾವೆಲ್ಲಿಗೆ ಹೋಗಿ ಮುಟ್ತೀವಿ ಹೇಳಿ? (ಗುಟ್ಟಿನ ವಿಷಯ - ನಾನು ಮಾತ್ರ ಈ ಡ್ರಿಂಕ್ಸ್ ಕುಡಿಯೋಲ್ಲ - ಯಾರಾದರೂ ಒತ್ತಾಯ ಮಾಡಿದರೂ ಕುಡಿದ ಹಾಗೆ ನಟನೆ ಮಾಡುವೆ).

  ಪ್ರತ್ಯುತ್ತರಅಳಿಸಿ
 2. ಕುಡೀಬೇಕು ಗುರೂ, ಬರೀ ನೀರೋ ಎಳನೀರೋ ಕುಡಕ್ಕೊಂಡು ಬಿದ್ದಿದ್ದ್ರೆ ಈ ಬಹು ರಾಷ್ಟ್ರೀಯ ಸಂಸ್ಕೃತಿ ಪೂರ್ಣ ಪ್ರಮಾಣದಲ್ಲಿ ಬರೋದಾದ್ರೂ ಹ್ಯಾಗೆ?!

  ಪ್ರತ್ಯುತ್ತರಅಳಿಸಿ
 3. ಗಣಿ ವಿಷಯ ಅಗಣಿತ ಚರ್ಚೆಗೊಳಗಾಗಿರುವಾಗಲೇ ಇನ್ನೊಂದು 'ಕೋಲಾ'ರ ಚಿನ್ನದ ಗಣಿ!!

  ಪ್ರತ್ಯುತ್ತರಅಳಿಸಿ
 4. ಮಾವಿನರಸರೆ,
  ಓಹೋ....ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ... ಇದು ಲಘುಪಾನೀಯ, ಗುರ್-ಪಾನೀಯ ಅಲ್ಲ... ಅಂದ್ರೆ ಆಗಸದಲ್ಲೇ ತೇಲಾಡಿಸುವ ಪಾನೀಯವಲ್ಲ.
  Drinks ಅಂದ ತಕ್ಷಣ ನೀವೇಕೆ ತೇಲಾಡುವುದು ಅಂತಾನೇ ಗೊತ್ತಾಗ್ತಿಲ್ಲ....
  :)

  ಪ್ರತ್ಯುತ್ತರಅಳಿಸಿ
 5. ಕಾಳೂ ಅವರೆ,
  ರಾಷ್ಟ್ರೀಯ ಸಂಸ್ಕೃತಿಗೆ बहु ರಾಣಿಗಳು ಸೇರಿಕೊಂಡರಷ್ಟೇ ಬಹು-ರಾಷ್ಟ್ರೀಯ ಆಗುತ್ತದೆ.

  ಆದ್ರೆ ಇಲ್ಲಿನ ಪಾನೀಯ ಕಾಳೂ ಅವರ ಊರಿನ ಕಳ್ಳು ಆಗಿದ್ದಿರಬಹುದೇ?

  ಪ್ರತ್ಯುತ್ತರಅಳಿಸಿ
 6. ಜೋಷಿ ಅವರೆ,
  ಗಣಿ ಆಗಿರಲಿ, ಕೋಲಾರವೇ ಆಗಿರಲಿ....ಅಲ್ಲೆಲ್ಲಾ ಹನಿಗೂಡಿದರೆ ಹಳ್ಳವಾಗುತ್ತದೆ.... ಆದರೆ ಈ ಕೋಲಾ-ರದಲ್ಲಿ ಹನಿಗೂಡಿದರೆ ಆ ಹಳ್ಳದಲ್ಲೇ 'ತೇಲಾ'ಡಬಹುದು

  ಪ್ರತ್ಯುತ್ತರಅಳಿಸಿ
 7. ಓಹ್ ಹಾಗೋ. ನಾನೆಲ್ಲೋ ಹಾಟ್ ಡ್ರಿಂಕ್ಸ್ ಅಂತ ತಿಳಿದಿದ್ದೆ. ಪೆಪ್ಸಿ, ಕೋಕ್ ಅಂತಾರಲ್ಲ - ಅವುಗಳೂ ಹಾಟ್ ಅಲ್ವಾ? ಒಮ್ಮೆ ಪೆಪ್ಸಿ ಕುಡಿದಿದ್ದೆ. ಹೊಟ್ಟೆಯೊಳಗೆಲ್ಲಾ ಉರಿ. ವ್ಯಾ! ಗಬ್ಬು ವಾಸನೆ. ಏನೇ ಹೇಳಿ, ತಿಳಿ ಮಜ್ಜಿಗೆ ಮುಂದೆ ಇನ್ನೊಂದಿಲ್ಲ. ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಉಪ್ಪು ಹಾಕಿ ಕುಡಿದರೆ, ಸ್ವರ್ಗ ಮೂರೇ ಗೇಣು.

  ನಮ್ಮೂರ ರೈಲ್ವೇ ನಿಲ್ದಾಣಗಳಲ್ಲಿ ನೀರಾ ಅಂತ ಮಾರ್ತಾರೆ, ಅದೇನು ಅಂತ ತಿಳಿಯದು. ಇದರ ಬಗ್ಗೆ ನಿಮಗೇನಾದ್ರೂ ಗೊತ್ತಾ? (ನನ್ನ ಸ್ನೇಹಿತರುಗಳನ್ನು ಕೇಳಿದೆ, ಅವರು ಕುಡಿದು ನೋಡು, ತೂರಾಡ್ತೀಯೋ ಇಲ್ವೋ ಗೊತ್ತಾಗತ್ತೆ ಅಂತ ತಮಾಷೆ ಮಾಡ್ತಿದ್ದಾರೆ).

  ಪ್ರತ್ಯುತ್ತರಅಳಿಸಿ
 8. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 9. ಮಾವಿನರಸರೇ,
  ನೀರಾ ನೀರೆ ಮತ್ತು ಭಾರ್ಯೆ ಯಾವಗಲೂ ಅಪಾಯಕಾರಿಯೆ!!!:)
  ಎನಂತೀರಾ ಅ-ಸತ್ಯಿಗಳೇ?

  ಪ್ರತ್ಯುತ್ತರಅಳಿಸಿ
 10. ಮಾವಿನರಸರೆ,
  ನೀರಾ ಎಂದ ತಕ್ಷಣ ನಂಗೆ ಬಾಯಿ ಚಪ್ಪರಿಸಿದಂತಾಯಿತು. ನಾನು ಕೂಡ ಮುಂಬಯಿಯ ಕಾಂದೀವಲಿ ಸ್ಟೇಶನ್‌ನಲ್ಲೊಮ್ಮೆ ಗುಟುಕರಿಸಿದ್ದೆ.

  ಆದ್ರೆ ಅದು ಕುಡಿದು ಬಿಸಿಲಿಗೆ ಹೋಗಬಾರ್ದು ಅಂತ ಯಾರೂ ಹೇಳಿರ್ಲಿಲ್ಲ ನೋಡಿ..... ತೂರಾಡುತ್ತಾ ಯಾರದ್ದೋ ಮನೆ ತಲುಪಿದ್ದೆ!!!!!

  ಪ್ರತ್ಯುತ್ತರಅಳಿಸಿ
 11. ಮಹಾಂತೇಶರೇ,

  ಏನೋ...ಪ್ಪ ನಿಮ್ಮ ಅನುಭವಾಮೃತಗಳಿರಬಹುದು.
  ನೀರಾ ನೀರೆ ಹೌದು, ಆದರೆ ಯಾರ ಭಾರ್ಯೆ ಅಪಾಯಕಾರಿ? ಎಂಬುದು ಪ್ರಶ್ನೆ....
  :)

  ಪ್ರತ್ಯುತ್ತರಅಳಿಸಿ
 12. ಭಾರ್ಯೆ ಭಾರಿಯಾದರೆ ಮಾತ್ರ ಅಪಾಯಕಾರಿ. ಇಲ್ಲದೇ ಇದ್ದರೆ ನಿರಪಾಯಕಾರಿ ಅಲ್ಲದೇ ಉಪಾಯಕಾರಿ ಕೂಡಾ ಆಗಬಹುದು. ಇದರ ಅನುಭವ ನನಗಿದೆ. ಇನ್ನು ನೀರಾ ನೀರೆ ಅಪಾಯಕಾರಿ ಇದ್ದರೂ ಇರಬಹುದು. ನನಗೆ ಇದರ ಬಗ್ಗೆ ಅನುಭವ ಇಲ್ಲ, ಆದರೆ ಅನುಭವಸ್ಥರನ್ನು ಕಂಡಿರುವೆ, ಅವರ ಸ್ಥಿತಿಯನ್ನು ನೋಡಿ ಮರುಗಿರುವೆ.

  ಭಾರ್ಯಾ ಗೃಹಮುಚ್ಯತೇ ಆಗುವ ಬದಲು ಗೃಹಮುಚ್ಚಿತೇ ಆಗೋದು ಬೇಡ.

  ಪ್ರತ್ಯುತ್ತರಅಳಿಸಿ
 13. ಮಾವಿನರಸರೆ
  ಭಾರ್ಯೆ ಭಾರಿ ಯಾದರೆ
  ಗೃಹದ ಬಾಗಿಲು ಮುಚ್ಚೀತೇ?
  ಅಂತ ನೀವು ಕೇಳ್ತಾ ಇದ್ದೀರಾ?

  ಪ್ರತ್ಯುತ್ತರಅಳಿಸಿ
 14. ನಮ್ಮ ರೈತರೂ ಕೀಟನಾಶಕವಾಗಿ ಈ ಸಾಪ್ಟ್ ಡ್ರಿಂಕ್ಸ್ ಬಳಸಿದ ನಂತರ ಬೆಳೆ ಕೈ ಕೊಟ್ಟರೆ ಅದೇ ಸಾಪ್ಟ್ ಡ್ರಿಂಕ್ಸ್ ಕುಡಿದು ಅತ್ಮಹತ್ಯೆ ಮಾಡಿಕೊಳ್ಳದಿದ್ದರೆ ಸಾಕು.

  ಅದರೆ ನಮ್ಮ ಸರ್ಕಾರ ರೈತರ ಬಗ್ಗೆ ಕಾಳಜಿವಹಿಸಿದೆ ಇನ್ನೂ ಹೆಚ್ಚಿನ ಸಾಪ್ಟ್ ಡ್ರಿಂಕ್ಸ್ ಗಳನ್ನು ಕೊಟ್ಟರೆ ಕಷ್ಟ..

  ಪ್ರತ್ಯುತ್ತರಅಳಿಸಿ
 15. ಶಿವ್
  ಛೆ.... ನೀವು ಆತ್ಮಹತ್ಯೆಗೂ ಸಾಫ್ಟ್ ಡ್ರಿಂಕ್ಸ್ ಬಗ್ಗೆ ಹೇಳಿ ನಮ್ಮ ಸರಕಾರದ ಕಣ್ಣು ತೆರೆಸಿದ್ದೇಕೆ? ಅವರು ನೋಡಿ.... ಇನ್ನು ಮುಂದೆ ಸಾಫ್ಟ್ ಡ್ರಿಂಕ್ಸ್ ಬೇಡಿಕೆ ಹೆಚ್ಚಾಗತೊಡಗಿದಂತೆ ಅದಕ್ಕೆ ತೆರಿಗೆಯನ್ನೂ ಹೆಚ್ಚಿಸುತ್ತಾರೆ....

  ಮಾತ್ರವಲ್ಲದೆ ರೈತರಿಗೆ ಘೋಷಿಸುವ ಪ್ಯಾಕೇಜ್‌ನಲ್ಲೂ ಸಾಫ್ಟ್ ಡ್ರಿಂಕ್ಸ್ ಹಾಕಿಕೊಟ್ಟರೆ....?

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D