ಬೊಗಳೆ ರಗಳೆ

header ads

ಎಳನೀರು ಹತ್ಯೆ ತಡೆಯಿರಿ, Pesti Cola ಕುಡಿಯಿರಿ!

(ಬೊಗಳೂರಿನ ಜನಾಂದೋಲನ ಕಾರ್ಯಕ್ರಮ ವಿಶೇಷ)
ಬೊಗಳೂರು, ಆ.21- Pesti Colaಗಳನ್ನು ಕುಡಿಯಬಾರದು, ಅದಕ್ಕೆ ನಿಷೇಧ ಹೇರಬೇಕು ಎಂಬ ಬಗ್ಗೆ ಭಾರಿ ಕೋಲಾ-ಹಲವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಫಲವತ್ತಾದ ಫಸಲು ಬೆಳೆಸಲು ಹಾಲಾಹಲದ ಮೂಲಕ ಸಹಕರಿಸುವ ಈ ಕಂಪನಿಗಳ ಕೋಲಾ-ಹಲಕ್ಕೆ ಯಾರು ಕೂಡ ಕಿವಿಗೊಡುತ್ತಿಲ್ಲವಲ್ಲಾ ಎಂದು ಹಪಹಪಿಸಿದ ಬೊಗಳೆ ರಗಳೆ ಬ್ಯುರೋ, ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತು ಹೇಗಾದರೂ ಗಳಿಸುವ ನಿಟ್ಟಿನಲ್ಲಿ ಅದರ ಪರವಾಗಿ ಬರೆಯಲು ನಿರ್ಧರಿಸಿರುವುದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಗಳಲ್ಲಿ ಭರ್ಜರಿ ತನಿಖಾ ವರದಿಯಾಗಿದೆ.
 
ದೇಶಾದ್ಯಂತ ಯುವ ಜನಾಂಗ ಹಾಟ್ ಹಾಟ್ ಆಗಿರೋ ಡ್ರಿಂಕ್‌ಗಳನ್ನು ಬಿಟ್ಟು ಈ ಕೂಲ್ ಖೂಳ ಡ್ರಿಂಕ್‌ಗೆ ಮೊರೆ ಹೋಗಿವೆ. ಹಾಗಿರುವಾಗ ಭವ್ಯ ಭಾರತದ ಭಾವೀ ಪ್ರಜೆಗಳ ಮನನೋಯಿಸುವುದು ಎಷ್ಟು ಸರಿ ಎಂಬುದು ಬ್ಯುರೋದಿಂದ ಬಿತ್ತರಗೊಳ್ಳುವ ಮೊದಲನೇ ಪ್ರಶ್ನೆ.
 
ಇನ್ನು.... ಈಗಾಗಲೇ Pesti Colaಗಳನ್ನು ಕುಡಿದು ಕುಡಿದು ಜನರ ಪಿತ್ತ ಕೋಶ, ಕರುಳು ಇತ್ಯಾದಿಗಳಲ್ಲಿ ರಂಧ್ರಗಳಾಗಿ ಹೆಚ್ಚುವರಿ ಜಾಗ ಸೃಷ್ಟಿಯಾಗಿದೆ. ಇದು ಹಸಿವನ್ನು ಹೆಚ್ಚಿಸುತ್ತದೆ. ಅಂದರೆ ಆ ರಂಧ್ರಗಳನ್ನು ತುಂಬಬೇಕಲ್ಲ? ಅಲ್ಲಿ ಆಹಾರ ತುಂಬಿ ಕ್ಷೀಣ ಶರೀರಿಗಳು ದಷ್ಟಪುಷ್ಟನೆ ಕಾಣಿಸಿಕೊಳ್ಳಬಹುದಾಗಿದೆ.
 
ಮತ್ತೊಂದು ದೊಡ್ಡ ಅನಾಹುತ ಎಂದರೆ.... ಈಗಾಗಲೇ Pesti Cola ಕುಡಿಯುತ್ತಿದ್ದವರಿಗೆ ಪ್ರಾಕೃತಿಕವಾಗಿ ಲಭ್ಯವಿರುವ ಎಳನೀರು ಅಥವಾ ನೀರುಮಜ್ಜಿಗೆ ಕೇವಲ ಒಂದು ಗುಟುಕು ಕುಡಿಸಿಬಿಡಿ ನೋಡೋಣ... ಪೆಸ್ಟಿ ಅಂಶಗಳಿಗೇ ಒಗ್ಗಿ ಹೋಗಿರುವ ಅವರ ಜೀರ್ಣಾಂಗವ್ಯೂಹವು ಖಂಡಿತವಾಗಿ ಎಳನೀರನ್ನು ಹೊಟ್ಟೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಹಾಗಾಗಿ ಭವ್ಯ ಭವಿಷ್ಯದ ಭಾವೀ ಪ್ರಜೆಗಳು ವಾಂತಿ ಮಾಡಿ ಮಾಡಿ ನರಪೇತಲರಂತಾಗಬೇಕೇ? ಎಂದು ಬ್ಯುರೋ ಬಲವಾಗಿ ಪ್ರಶ್ನಿಸುತ್ತದೆ.
 
ಹಾಗಿರುವಾಗ ಯುವಜನಾಂಗದ ಜೀರ್ಣಾಂಗಕ್ಕೆ ಒಗ್ಗದ ಎಳನೀರು ಬಲವಂತವಾಗಿ ಕುಡಿಸುವುದು ಮಹಾಪರಾಧ. ಎಳನೀರು ಸೇವಿಸುವುದು ಭ್ರೂಣಹತ್ಯೆಯಷ್ಟೇ ಮಹಾಪಾಪ... ಎಂಬ ಪ್ರಚಾರಾಂದೋಲನವನ್ನು ಆರಂಭಿಸಲಾಗಿದೆ. ಎಳನೀರು ಮುಂದೆ ದೊಡ್ಡದಾಗಿ ಬೆಳೆದು ಜೀವನ ಸಾಗಿಸಬೇಕಾಗಿದೆ. ಅದು ತೆಂಗಿನಕಾಯಿಯಾಗಿ ಬೆಳೆಯಲು ದೇವರ ಪಾದದಲ್ಲಿ ಛಠಾಳ್ ಎಂದು ಒಡೆಸಿಕೊಳ್ಳಲು ನಾವೆಲ್ಲಾ ಕೈಜೋಡಿಸಬೇಕಾಗಿದೆ. ಆದುದರಿಂದ ಎಳನೀರು ಹತ್ಯೆಯ ತಡೆಗೆ ರಾಷ್ಟ್ರೀಯ ಆಂದೋಲನ ಆರಂಭಿಸಬೇಕು ಎಂದು ಬ್ಯುರೋ ಒತ್ತಾಯಿಸುತ್ತದೆ.
 
ನಮ್ಮ ಸವಾಲು: ಎಳನೀರು ಬಳಸಿ ನಿಮ್ಮ ಮನೆಯ ಬಾತ್ ರೂಮ್, ಟಾಯ್ಲೆಟ್‌ಗಳನ್ನು ಕ್ರಿಮಿಕೀಟಗಳಿಲ್ಲದಂತೆ ಸ್ವಚ್ಛಗೊಳಿಸಿ ನೋಡೋಣ...!!! ಬೇಕಿದ್ದರೆ  ಒಂದಲ್ಲ, 10 ಬಳಸಿ. ಅದು ನಿಮ್ಮಿಂದ ಸಾಧ್ಯವೇ? Pesti Colaದ ಒಂದೇ ಹನಿಯಿಂದ ಆಗುವುದನ್ನು ನಿಮ್ಮ ಪುಟಗೋಸಿ ಹಚ್ಚಹಸಿರಿನ ಎಳನೀರು ರಾಶಿಯಿಂದ ಮಾಡುವುದು ಸಾಧ್ಯವೇ? ಅದಕ್ಕೇ ಹೇಳೋದು, ಥಂಡಾ ಕಾ ಮತ್‌ಲಬ್ ಟಾಯ್ಲೆಟ್ ಕ್ಲೀನಿಂಗ್!!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ನನಗೆ ಈ ಜೀವ ಬಿಡೋಕ್ಕೆ ಇಷ್ಟ ಇಲ್ಲ. ನಾನೊಬ್ಬ ನರಪೇತಲ. ಹೀಗೆಯೇ ಇದ್ರೆ ಒಳಿತು. ತೂಕ ಹೆಚ್ಚಿಸಿಕೊಂಡ್ರೆ ನಮ್ಮ ಫ್ಲಾಟ್ ತುಸಕ್ಕೆಂದೆ ಕೆಳಗೆ ಹೋಗಿ, ಕೆಳಗಿನ ಮನೆಯವರು ಪರಂಧಾಮ. ಪ್ರಾಣ ಹತ್ಯೆ ಬ್ರಹ್ಮ ಪಾಪವಂತೆ.

  ನನಗೆ ಎಳನೀರೂ ಬೇಡ, ಪೆಸ್ಟಿಕೋಲಾನೂ ಬೇಡ. ಹೇಗಿದ್ರೂ ನಮ್ಮ ಅನಾನಸರು ಒಳ್ಳೆಯ ರಾಮರಸ ಕೊಡ್ತಾರೆ. ಅಷ್ಟೇ ಸಾಕು.

  ಇದೀಗ ಬಂದ ಸುದ್ದಿ, ಬೊ-ರ ಪತ್ರಿಕೆಯಲ್ಲಿನ ಈ ಸುದ್ದಿ ಓದಿದ ನಮ್ಮ ಮನೆಯವರು ಟಾಯ್ಲೆಟ್ ಕ್ಲೀನ್ ಮಾಡಲು ಒಂದು ಕ್ರೇಟ್ ಪೆಸ್ಟಿ ಕೋಲಾ ತಂದಿರಿಸಿದ್ದಾರಂತೆ. ಬಹಳ ಚೆನ್ನಾಗಿ ಕ್ಲೀನ್ ಆಗ್ತಿದೆಯಂತೆ. ದುರ್ದರ್ಶನದವರು ನಮ್ಮ ಮನೆಯವರ ಸಂದರ್ಶನ ಮಾಡಿದ್ದಾರಂತೆ

  ಪ್ರತ್ಯುತ್ತರಅಳಿಸಿ
 2. ಮಾವಿನರಸರೆ,

  ದುರ್ದರ್ಶನದೋರು ದುರುಗುಟ್ಟಿ ನೋಡಲು ಬಂದಿದ್ದಾರೆ ಅಂದ್ಮೇಲ್... ಈ ಟಾಯ್ಲೆಟ್ ಕ್ಲೀನಿಂಗ್ ಪೇಯದ ಪೇಟೆಂಟ್ ಸಿಗೋದು ಗ್ಯಾರಂಟಿ....

  ಪ್ರತ್ಯುತ್ತರಅಳಿಸಿ
 3. ಪೆಸ್ಟಿ ಕೋಲ, ನಮ್ಮ ಭೂತ ಜಗತ್ತಿನಲ್ಲಿ ಪ್ರಚಲಿತವಾಗಿಲ್ಲ. ಸದ್ಯ, ನಾವುಗಳು ಮನುಷ್ಯರ ಕಣ್ಣಿಗೆ ಕಾನಿಸುವುದು ಅಪರೂಪ, ನಮ್ಮಗಳ ಕಣ್ಣಿಗೆ ಕಾಣಿಸುವುದು ಕಷ್ಟವಾಗುತ್ತಿತ್ತೇನೋ?

  ಭೂತ

  ಪ್ರತ್ಯುತ್ತರಅಳಿಸಿ
 4. ಓಹ್
  ಭೂತ ಇನ್ನೂ ಸಂಚರಿಸುತ್ತಾ ಇದೆ. :)
  ಆಗಾಗ್ಗೆ ಮಾಯ ಆಗುತ್ತಾ... ಅಥವಾ ಮಾಯಾಂಗನೆಯ ಬೆನ್ನು ಬೀಳುತ್ತಾ... ಮತ್ತೆ ಬರುತ್ತಾ ಇದೆ...

  ನಿಮ್ಮ ಮಗಳ ಕಣ್ಣಿಗೂ ನೀವು ಕಾಣಿಸದಿರುವುದು ಅಕ್ಷಮ್ಯ ಅಪರಾಧ...

  ಪ್ರತ್ಯುತ್ತರಅಳಿಸಿ
 5. ಶಾಲಾ ಮಕ್ಕಳಿಗೆ ಪೆಪ್ಸಿ-ಕೋಲಾ ಟಾರ್ಗೆಟ್ ಮಾಡೋಲ್ಲವಂತೆ ! ಒಳ್ಳೆ ಮಾರ್ಕೆಟಿಂಗ್ ನೀತಿ..
  Forbidden apples are always longed..ಅನ್ನೋ ಹಾಗೆ ಆಗುತ್ತೆ..

  ಅಂದಾಗೆ ಎಳನೀರು ಅಂದ್ರೆ ಎನ್ರೀ !

  ಪ್ರತ್ಯುತ್ತರಅಳಿಸಿ
 6. ಶಿವ್ ಅವರೆ,
  ಎಳನೀರು ಅಂದ್ರೆ ಎಳೆಯರಿಗೇ ನೀರು ಕುಡಿಸೋದು ಅಂತಲ್ಲಾ...

  ದೇವರಾಣೆಗೂ ಬೀರಿಗೂ ಅದಕ್ಕೂ ಸಂಬಂಧವಿಲ್ಲ...!!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D