ಬೊಗಳೆ ರಗಳೆ

header ads

ಭ್ರಷ್ಟಾಚಾರವನ್ನು ಶಿಷ್ಟಾಚಾರವಾಗಿಸಲು ಯತ್ನ

(ಬೊಗಳೂರು ಭ್ರಷ್ಟಾಚಾರ ಬ್ಯುರೋದಿಂದ)
ಬೊಗಳೂರು, ಜು.5- ಭ್ರಷ್ಟಾಚಾರ ಪರವಾಗಿ ಸಮರ ಸಾರಿರುವ ಬೊಗಳೆ ರಗಳೆ ಬ್ಯುರೋ, ಇಂದು ಮತ್ತೊಂದು ಬಾರಿ ಮುಮ ಅವರನ್ನು ಭೇಟಿ ಮಾಡುವ ಅನಿವಾರ್ಯತೆ ಸೃಷ್ಟಿಸಿದ್ದು ಪ್ರಜಾವಾಣಿ ಪತ್ರಿಕೆ ವರದಿ ಮಾಡಿದ ಒಂದಕ್ಕೊಂದು ತಾಳೆಯಾಗದ ತದ್ವಿರುದ್ಧ ಸುದ್ದಿಗಳು. ಇದು ಮುಖ್ಯಮಂತ್ರಿಯವರ ತಪ್ಪಲ್ಲ ಎಂಬುದು ಪ್ರಾಥ'ಮಿಕ' ತನಿಖೆಯಿಂದ ಗೊತ್ತಾಗಿದೆ.
 
ಪತ್ರಿಕೆಯೇ ತದ್ವಿರುದ್ಧ ಹೇಳಿಕೆಯನ್ನು ಜು.2ರಂದು ಮತ್ತು ಜು.3ರಂದು ಮುಖಪುಟದಲ್ಲಿ ಆಯ್ದು ಪ್ರಕಟಿಸಿದೆ ಎಂಬುದು ಅಧಮ ಮಂಡಳಿಯ ಸ್ಪಷ್ಟನೆ.
 
ಕೋಲಾಯುಕ್ತರಿಗೆ ಕೋಲು, ಹಲ್ಲು ಕೊಡುತ್ತೇವೆ ಎಂದು ಹೇಳಿಕೆ ನೀಡಿದ ಬೆನ್ನಿಗೇ ಪ್ರಜಾವಾಣಿ, ಅವರ ಅಧಿಕಾರಾವಧಿ ವಿಸ್ತರಣೆ ಇಲ್ಲ ಎಂದು ಪ್ರಕಟಿಸಿದೆಯಲ್ಲಾ ಎಂದು ಮುಮ ಅವರನ್ನೇ ನೇರವಾಗಿ ತರಾಟೆ ಸಂದರ್ಶನಕ್ಕೆ ಒಳಪಡಿಸಲಾಯಿತು.
 
ಅವರು ತಮ್ಮ ಸಮರ್ಥನೆಯನ್ನು ಸಮರ್ಥವಾಗಿಯೇ ಸಮರ್ಥಿಸಿಕೊಂಡಿದ್ದಾರೆ. ಇನ್ನು ಮುಂದಿನದು ನಮ್ಮ ಬ್ಯುರೋ ಮಾತನಾಡುವುದಿಲ್ಲ. ಮುಮ ಅವರೇ ಮಾತನಾಡಿದ್ದಾರೆ. ಅವರ ಬಾಯಲ್ಲೇ point-wise ಆಗಿ ಕೇಳಿ.
 
1."ಭ್ರಷ್ಟಾಚಾರದ ವ್ಯಾಪ್ತಿ ಲೋಕಾಯುಕ್ತರ ವ್ಯಾಪ್ತಿಗಿಂತಲೂ ದೊಡ್ಡದು. ಆದುದರಿಂದ ಶ್ರೀಮಂತರ ಎದುರು ಸಣ್ಣವರನ್ನು ಕದನಕ್ಕೆ ಇಳಿಸುವುದು ಅನ್ಯಾಯವಲ್ಲವೇ?".
 
2. ಈ ಭೂಮಿ ಹುಟ್ಟಿದಂದಿನಿಂದಾರಭ್ಯ ಡೊಂಕಾಗಿರುವ ನಾಯಿಬಾಲವನ್ನು ಸರಿಪಡಿಸಿದವರಿದ್ದರೆ ತೋರಿಸಿ ನೋಡೋಣ. ಇದು ಲೋಕಾಯುಕ್ತರಿಗಂತೂ ಅಸಾಧ್ಯದ ಮಾತು.
 
3. ಲಂಚಾಧಿಕಾರಿಗಳು ರಕ್ತಬೀಜಾಸುರ ಸಂತತಿಯವರು. ಆದರೆ ಲೋಕಾಯುಕ್ತರಲ್ಲ, ರಕ್ತಬೀಜಾಸುರ ಸಂಹಾರ ರಕ್ತೇಶ್ವರಿಯಿಂದ ಮಾತ್ರವೇ ಸಾಧ್ಯ ಹೊರತು, ಸಂತತಿ ಸಣ್ಣದಾಗಿರುವ ಲೋಕಾಯುಕ್ತರಿಂದ ಅಸಾಧ್ಯ.
 
4. ಯಃಕಶ್ಚಿತ ಸರಕಾರಿ ಗುಮಾಸ್ತನೊಬ್ಬ ದಿನಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗುವುದು ನಮ್ಮ ರಾಜ್ಯದ ಪ್ರಗತಿಯ ಸಂಕೇತ, ಅಭಿವೃದ್ಧಿಯ ಸಂಕೇತ. ರಾಜ್ಯಕ್ಕೆ ಸಮೃದ್ಧಿಯ ಹೆಸರು ಬರುವುದರಿಂದ ಬಂಡವಾಳ ಹರಿದು ಬರುತ್ತದೆ. ಆಗ ಮೇಯಲು ಸಾಕಷ್ಟು ಹುಲ್ಲುಗಾವಲು ಕೂಡ ದೊರಕಿದಂತಾಗುತ್ತದೆ.
 
5. ರಾಜ್ಯದಲ್ಲಿ ಭ್ರಷ್ಟಾಚಾರವನ್ನೇ ಶಿಷ್ಟಾಚಾರವಾಗಿಸುವ ಇರಾದೆ ಇರುವುದರಿಂದ ಮತ್ತು ಅನಿವಾರ್ಯವೂ ಆಗಿಬಿಟ್ಟಿರುವುದರಿಂದ ಲೋಕಾಯುಕ್ತ ಹುದ್ದೆಯೇ Waste, waste, waste.!
 
6. ಅವರು ಇದುವರೆಗೆ ಮಾಡಿದ್ದು ಅಲ್ಲಲ್ಲಿ ದಾಳಿ ನಡೆಸಿದ್ದು ಮತ್ತು ವರದಿ ಸಲ್ಲಿಸಿದ್ದು ಮಾತ್ರ. ಏನಾದರೂ ಪರಿಣಾಮಕಾರಿಯಾದ ಕ್ರಮ ಕೈಗೊಂಡಿದ್ದಾರೆಯೇ? ಅಥವಾ ಭ್ರಷ್ಟಾಚಾರಿಗಳ ಸಂಖ್ಯೆಗೆ ಏನಾದರೂ ಕಡಿವಾಣ ಹಾಕುವುದು ಅವರಿಗೆ ಸಾಧ್ಯವಾಗಿದೆಯೇ? ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಅವರೆಲ್ಲಾ ಹೊರಬರಲಿಲ್ಲವೇ? ಲೆಕ್ಕ ಕೊಡಿ ನೋಡೋಣ.
 
7. ಕಾಗದದ ಹುಲಿ ಯಾವತ್ತಿದ್ದರೂ ನೋಡುವುದಕ್ಕೆ ಮಾತ್ರವೇ ಚೆಂದ. ಆದುದರಿಂದ ನಿಜವಾದ ಹುಲಿ ತರುವ ಉದ್ದೇಶವೇ ಇಲ್ಲ.
 
8. ನಮ್ ಮಂತ್ರಿಮಂಡಲದಲ್ಲಿ ಯುವಕರಿಗೆ ಆದ್ಯತೆ ನೀಡಿ, ಹಳಬರಿಗೆ ನಿವೃತ್ತಿಯ ಮಾರ್ಗ ತೋರಿದ್ದೇವೆ. ಅಂತೆಯೇ ಲೋಕಾಯುಕ್ತರು ಕೂಡ ದಣಿದಿದ್ದಾರೆ, ಅವರಿಗೆ ವಿಶ್ರಾಂತಿ ಅಗತ್ಯ.
 
9. ಇಂದಲ್ಲ ನಾಳೆ ಅವರು ನಮ್ಮ ಮೇಲೂ ದಾಳಿ ಮಾಡುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದದ್ದು ನಮ್ಮ ಧರ್ಮ-ಕರ್ಮ.
 
10. ಅವರಿಗೇನಾದರೂ ಹೆಚ್ಚು ಅಧಿಕಾರ ಕೊಟ್ಟರೆ ಮತ್ತು ಮುಂದುವರಿಸಿದರೆ, ಜನಸಾಮಾನ್ಯರು ಅಭಿನಂದನೆಗಳ ಸುರಿಮಳೆ ಸುರಿಸುತ್ತಾರೆ. ಈ ಮಳೆಯಿಂದ ಪ್ರವಾಹ ಬರಬಹುದು, ಕನ್ನಂಬಾಡಿ ಕಟ್ಟೆ ಒಡೆಯಬಹುದು, ತಮಿಳುನಾಡಿನವರು ನೀರು ಬಿಡೀ ಅಂತ ಗೋಗರೆಯಬಹುದು... ಇನ್ನೂ ಏನೇನೋ ಸರಣಿ ಅನಾಹುತಗಳಾಗಬಹುದು.
 
ಕೊಟ್ಟ ಕೊನೆಯದಾಗಿ ವಿಧಾನ ಸೌಧದ ಸುತ್ತ ಠಳಾಯಿಸಿ ಒಳ ಹೊಕ್ಕು ಅಲ್ಲಿ ಸದನ ಕಲಾಪ ವೇಳೆ ಗಡದ್ದಾಗಿ ಯೋಚನಾಮಗ್ನರಾದ ಶಾಸಕರನ್ನು ಬಡಿದೆಬ್ಬಿಸಿ ಲೋಕಾಯುಕ್ತರ ಬಗ್ಗೆ ಕೇಳಲಾಯಿತು.
 
"ಲೋಕಾಯುಕ್ತ.....?"
 
ಇಷ್ಟೇ ಕೇಳಿದ್ದು. ಧಡಕ್ಕನೆ ಸೀಟಿನೆಂದೆದ್ದು, ಆಕಾಶವೇ ಕಳಚಿಬಿದ್ದಂತೆ, ಕಳವಳ, ಆತಂಕ ಮುಖಭಾವದಿಂದ (ಬಹುಶಃ ಲೋಕಾಯುಕ್ತರು ತಮ್ಮ ಮನೆಗೇ ದಾಳಿ ಮಾಡಿದ್ದಾರೆ ಎಂದು ಯೋಚಿಸಿರಬೇಕು) ಅವರಿಂದ ದೊರೆತ ಉತ್ತರ-
"ಇಲ್ಲ, ಇಲ್ಲ.. ಖಂಡಿತವಾಗಿಯೂ ನಾನು ಅಕ್ರಮವಾಗಿ ಸಂಪಾದಿಸಿಲ್ಲ, ಜನರೇ ಕೆಲಸ ಮಾಡಿಸಲೆಂದು ನನಗೆ ಕೊಟ್ಟದ್ದು. ಇದು ಯಾರೋ ವಿರೋಧ ಪಕ್ಷದವರ ಕುತಂತ್ರ. ಇದನ್ನು ಬಯಲಿಗೆಳೆಯುತ್ತೇವೆ. ನಾನು ಸ್ವಚ್ಛ ಅಂತ ಸಾಬೀತುಪಡಿಸುವೆ"!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಮುಮ ಅವರು ಸತ್ಯವಾದ ಮಾತನ್ನೇ ಹೇಳಿದ್ದಾರೆ. ನಮ್ಮ ಮಾನ ಉಳಿಸಲು ಮುಂದಾಗುತ್ತಿರುವ ಮುಮ ಅವರಿಗೊಂದು ಮಮ್ಮು. ಈ ನಿಟ್ಟಿನಲ್ಲಿ ನೀವೂ ನಮಗೆ ಸಹಾಯ ಹಸ್ತ ಚಾಚುವಿರೆಂದು ನಂಬಿರುವೆ.

    ಪ್ರತ್ಯುತ್ತರಅಳಿಸಿ
  2. ಅಬ್ಬಾ,
    ಮಾನ ಮುಚ್ಚಿದ ಮುಮಗಳಿಗೆ ಮಮ್ಮು ನೀಡಲು ನಿಮಗೆಷ್ಟು ದಮ್ಮು!

    ಎಲ್ಲಿಂದ ಬಂತು ಈ ದಮ್ಮು, ನಮಗೂ ಹೇಳಿಕೊಡಿ.

    ಖೋಟಾ ರಾಜನ್ ಗೆ ಮಾತ್ರ ಹೇಳಬೇಡಿ.

    ಪ್ರತ್ಯುತ್ತರಅಳಿಸಿ
  3. "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು..."

    - ಕುವೆಂಪು

    "ಕುಮಾರಸ್ವಾಮಿಯು ಕಾಡಿದನೆಂದರೆ colleague pauperಆಗುವನು..."

    - ಕಿವಿಗಿಂಪು
    (ಯಾರ ಕಿವಿಗಳೆಂದರೆ ಲೋಕಾಯುಕ್ತರ ಕಲಿಯುಗ್‍ಗಳಾದ ಇತರೆ ಸರಕಾರಿ ನೌಕರರಿಗೆ)

    ಪ್ರತ್ಯುತ್ತರಅಳಿಸಿ
  4. ಹೌದು, ಜೋಷಿಯವರೇ,
    ಖಂಡಿತವಾಗಿಯೂ
    ಕಲಿಯುಗ ಪಾಪರ್ ಆಗುವುದು

    ಪ್ರತ್ಯುತ್ತರಅಳಿಸಿ
  5. ಲೋಕಾಯುಕ್ತರ ಸ್ಥಾನಕ್ಕೆ ಅಸತ್ಯಿಗಳನ್ನೇ ನೇಮಕ ಮಾಡಬೇಕೆಂದು ನಮ್ಮ ಮನವಿ..
    ಕಳ್ಳನ ಕೈಗೆ ಚಾವಿ ಕೊಟ್ಟರೆ ಹೆಂಗೆ ಅಂತಾ ಯಾರ್ರೀ ಕೇಳಿದ್ದು :)

    ಪ್ರತ್ಯುತ್ತರಅಳಿಸಿ
  6. ಶಿವ್ ಹೇಳಿದ್ದು ನನಗೂ ಕೇಳಿಸಿಲ್ಲ.... ಹ್ಹೆ ಹ್ಹೆ... !

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D