(ಬೊಗಳೂರು ಕಲಿಗಾಲ ಬ್ಯುರೋದಿಂದ)
ಬೊಗಳೂರು, ಜೂ.23- ಇದು ಕಲಿಗಾಲ. ಆದುದರಿಂದಾಗಿಯೇ ಗುಜರಾತಿನ ಭರೂಚ್ ಎಂಬಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಜನಸಂಖ್ಯೆ ದಿಢೀರನೇ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಬೊಗಳೂರಿನ ಮುಂಬಯಿ ರ'ಗೆಳೆಯ' ನಾಮ್ ಕೇ ವಾಸ್ತೇ ಬ್ಯುರೋ ಸಹಾಯ ಪಡೆದು ಗುಜರಾತಿಗೆ ಭೇಟಿ ನೀಡಿ ಅನ್ವೇಷಣೆ ನಡೆಸಿದಾಗ ಹೊಸ ಹೊಸ ವಿಷಯಗಳು ದಬದಬನೆ ಹೊರ ಬೀಳಲಾರಂಭಿಸಿದವು.

ಕಳೆದ ವರ್ಷ ಈ ಪುಟ್ಟ ಹಳ್ಳಿಯಲ್ಲಿ ಸೆನ್ಸ್ ಇಲ್ಲದ ರೀತಿಯಲ್ಲಿ ಸೆನ್ಸಸ್ (ಜನಗಣತಿ) ನಡೆಸಿದಾಗ ಅಲ್ಲಿನ ಮಕ್ಕಳ ಸಂಖ್ಯೆ ಕೇವಲ 3. ಈಗ ಅಲ್ಲಿ ಮಕ್ಕಳು-ಮರಿಗಳ ಸಂಖ್ಯೆ ಸೆಂಚುರಿ ದಾಟಿ ನಾಟೌಟ್ ರೀತಿಯಲ್ಲಿ ಡಬಲ್ ಸೆಂಚುರಿಯತ್ತ ಧಾವಿಸುತ್ತಿದೆ.

ಇದಕ್ಕೆಲ್ಲ ಕಾರಣ ಸಂಪ್ರದಾಯಬದ್ಧ ಎಂದು ಕರೆಸಿಕೊಂಡು ವಿದೇಶೀ ಸಂಪ್ರದಾಯಗಳನ್ನೆಲ್ಲಾ ತನ್ನತ್ತ ಸೆಳೆದುಕೊಳ್ಳುತ್ತಿರುವ ಮತ್ತು ಆ ಸಂಪ್ರದಾಯಕ್ಕೆ ಬದ್ಧವಾಗುತ್ತಿರುವ ಭಾರತಕ್ಕೆ ಬಂದ ಹೊಸ ರೋಗ. ಅದುವೇ ---- ಇಲ್ಲಿ ಪತ್ನಿಯರು ಬಾಡಿಗೆಗೆ ಲಭ್ಯ!

ಇಷ್ಟು ಮಾತ್ರವೇ ಆಗಿದ್ದರೆ ಕಥೆ ಮುಂದುವರಿಯುತ್ತಿರಲಿಲ್ಲ. ಬೇರೆಯವರ ಪತ್ನಿಯನ್ನು ಕರೆಸಿಕೊಂಡು ಬಾಡಿಗೆಗೆ ಇರಿಸಿಕೊಳ್ಳುವ ಈ ವಿನೂತನ ಸಂಪ್ರದಾಯಕ್ಕೆ ಈ ಸುಮಂಗಲಿಯರ "ಏಕಪತ್ನೀ ವ್ರತಸ್ಥ" ಗಂಡಂದಿರೂ ಕೂಡ ಬೆಂಬಲ ನೀಡುತ್ತಿರುವುದು. ತನ್ನ ಪತ್ನಿ ತನ್ನಿಂದ ದೂರವಾಗಿದ್ದ ಬಗ್ಗೆ ಆಕ್ರೋಶಗೊಂಡು ಆಕೆಯನ್ನು ಕರೆಸಲು ಪೊಲೀಸ್ ಸಹಾಯ ಪಡೆದು ಕೊನೆಗೆ ಕೈಬಿಟ್ಟಿದ್ದ ದಂಡ ಗಂಡ, ಕೊನೆಗೆ ಪತ್ನಿ ಅಲ್ಲಿಂದಲೇ ಪ್ರತಿತಿಂಗಳು 8 ಸಾವಿರ ರೂ. "ದುಡಿದು" ಸಂಪಾದಿಸುತ್ತಾಳೆ ಎಂದು ತಿಳಿದಾಗ ಮತ್ತು ತನ್ನ ಜೇಬು ಕೂಡ ತುಂಬತೊಡಗಿದಾಗ ಆತ CD ಪ್ಲೇಟ್ ಬದಲಿಸಿದ. "ರಜೆಯಲ್ಲಿ" ಬಂದ ಪತ್ನಿಯನ್ನು ತಕ್ಷಣವೇ ಹೋಗುವಂತೆ ಒತ್ತಾಯಿಸತೊಡಗಿಸುವಷ್ಟರ ಮಟ್ಟಿಗೆ ಈ ರೋಗ ಆತನಿಗೂ ತಟ್ಟಿತ್ತು.

ಗುಜರಾತಿನ ಭರೂಚ್ ಜಿಲ್ಲೆಯಲ್ಲಿ ಕಾಣಿಸಿಕೊಂಡ ಈ ರೋಗವು ಸುತ್ತಮುತ್ತಲಿನ ಹಳ್ಳಿಗಳಿಗೂ ವ್ಯಾಪಿಸಿದ್ದು, ದೇಶಾದ್ಯಂತ ಹರಡಿ ಭಾರತವನ್ನು ನಂ.1 ಆಗಿಸುವ ಗುರಿಯತ್ತ ದಾಪುಗಾಲಿಡುತ್ತಿದೆ. ಯಾವುದರಲ್ಲಿ ಗೊತ್ತೇ? ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ!

12 Comments

ಏನಾದ್ರೂ ಹೇಳ್ರಪಾ :-D

 1. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು. ಈ ರೋಗವನ್ನು ಹೀಗೆಯೇ ಹಬ್ಬಲು ಬಿಟ್ಟರೆ ಇಡೀ ಜಗತ್ತಿನಲ್ಲಿರುವವರೆಲ್ಲರೂ ನಮ್ಮವರೇ ಆಗುವರು. ಅವರ ಆಸ್ತಿಯೆಲ್ಲಾ ನಮ್ಮದೇ ಆಗುವುದು. ಭಾರತ ನಂ. ೧ ದೇಶ ಆಗುವುದು. ನಮಗ್ಯಾರೂ ವೈರಿಗಳಿರುವುದಿಲ್ಲ.
  ನಿಮ್ಮ (ನನ್ನ ಅಂತ ನೀವು ಹೇಳ್ತಿದ್ದೀರಾ!) ಅನ್ವೇಷಣೆ ಪ್ರಕಾರ ಈಗಿರುವ ತೊಂದರೆ ಎಂದರೆ ಜನಸಂಖ್ಯಾ ಆಸ್ಫೋಟ. ಇದಕ್ಕೆ ಉತ್ತರವನ್ನೂ ನೀವೇ ಒಮ್ಮೆ ಇಲ್ಲಿ ಹೇಳಿದಂತೆ ನನಗೆ ನೆನಪಿದೆ. ಅದೇ ಬಾಟಲಿನಲ್ಲಿ ಅದೇನೋ ಸಿಕ್ಕಿತ್ತು ಅಂತ. ಈ ಸಮಾಜ ಸೇವೆಯಲ್ಲಿ ತೊಡಗಿರುವ ಸಮಾಜಸೇವಕರಿಗೆ ಬಾಟಲಿಗಳನ್ನು ಸಪ್ಲೈ ಮಾಡುವ ಕಾರ್ಯವನ್ನು ಸರಕಾರಕ್ಕೆ ಸೂಚಿಸಿದರೆ ಒಳಿತಲ್ಲವೇ?

  ನೀವೇನಂತೀರೀ?

  ReplyDelete
 2. ನಿಮ್ಮ ದುರಾಲೋಚನೆ ಮತ್ತು ದೂರಾಲೋಚನೆ ಚೆನ್ನಾಗಿಯೇ ಇದೆ.

  ಇಂಥ ಎಷ್ಟು ಬಗೆಯ ಆಲೋಚನೆಗಳು ನಿಮ್ಮ ಡಿಕ್ಷನರಿಯಲ್ಲಿವೆ ಮಾವಿನರಸರೆ?

  ಮತ್ತೆ ನೀವು ಬಾಟಲಿಯಲ್ಲಿ ಸಿಕ್ಕಿದ್ದನ್ನು ಹಿಡಿಯಲು ಹೋಗಿದ್ದೇಕೆ?

  ReplyDelete
 3. ಬಹುಷಃ ಇದಕ್ಕೆ ದೊಡ್ಡವರು 'ವಸುದೈವ ಕುಟುಂಬಕಂ' ಅಂದಿದ್ದರೋ ಏನೋ !

  ಇದು ಹೀಗೆ ಮುಂದುವರಿದರೆ ಮುಂದೆ ಒಂದು ದಿನ ಈಡೀ ವಿಶ್ವವೇ ಒಂದು 'ಜೇನು ಗೂಡು'..ಒಂದು ರಾಣಿ ಜೇನು ಮತ್ತು ಅದರ ಆಳ್ವಿಕೆಯಲ್ಲಿ ನೂರಾರು ಸೇವಕ ಜೇನುಗಳು..

  ಅಸತ್ಯಿಗಳೇ, ಮಾವಿನಯನಸರು ನಿಮಗೆ ಈ ವರದಿಯಲ್ಲಿ ಹೇಗೆ ಸಹಾಯ ಮಾಡಿದರು ಅಂತಾ ತಿಳಿಯಲಿಲ್ಲ

  ReplyDelete
 4. Exact ಶಬ್ದ ನಿಮ್ಮ ಪಾತರಗಿತ್ತಿ ಹುಡುಕಿಕೊಟ್ಟಿದೆ ಶಿವ್ ಅವರೆ, (ವಸುಧೈವ ಕುಟುಂಬಕಂ)

  ಮಾವಿನ ರಸದವರು ಮತ್ತು ನಾವು ಇಬ್ಬರೂ ಜೊತೆಯಲ್ಲಿಯೇ ತನಿಖಾ ವರದಿಗೆ ತೆರಳಿದ್ದು ಎಂಬ ಅಸತ್ಯ ನಿಮಗೆ ಹೊಳೆಯಲಿಲ್ಲವೇ?

  ReplyDelete
 5. ಓಹ್, ಜನಸಂಖ್ಯ ಸ್ಪೋಟಕ್ಕೆ ಉಪಯೋಗಿಸುವ ಸಾಮಗ್ರಿಗಳ ಬಗ್ಗೆ ತಿಳಿದಿತ್ತು, ವಿಧಾನದ ಬಗ್ಗೆ ತಿಳಿದಿರ್ಲಿಲ್ಲ. ತಿಳಿಸಿದಕ್ಕೆ ದ.ವಾ.

  ಇಂತಿ
  ಭೂತ

  ReplyDelete
 6. ಫ್ಯಾಂಟಮ್ ನೆನಪಿಸುವ ಮಾನ್ಯ ಭೂತಕಾಲವಾದಿಗಳೆ,

  ನೀವು ಕೊಟ್ಟ ದ.ವಾ. ದಿಂದ ಧಗೆ ಹೆಚ್ಚಾಗಿದೆ.
  ತಡೆಯಲಾಗುತ್ತಿಲ್ಲ.

  ನಿಮ್ಮ ಧನ್ಯವಾದಕ್ಕೆ ನಮ್ಮ ಪ್ರತಿ ಧನ್ಯವಾದಗಳು.

  ReplyDelete
 7. ಮಾವಿನ ರಸಾಯನ ಮತ್ತು ಆ-ಸತ್ಯ-ದ್ವೇಷಿ ಒಟ್ಟು ಸೇರಿ ಜನಸಂಖ್ಯಾ ಸ್ಫೋಟದ ಕಾರಣ ಪತ್ತೆ ಮಾಡಲು ಹೋದುದರ ಒಂದು ಅಡ್ಡ ಪರಿಣಾಮ ಇನ್ನು ಒಂಬತ್ತು ತಿಂಗಳ ನಂತರ ತಿಳಿಯಲಿದೆ. ಅದೆಂದರೆ ಭಾರತದ ಜನಸಂಖ್ಯೆ ಒಂದುನೂರ ಇಪ್ಪತ್ತು ಕೋಟಿಯಿಂದ ಒಂದು ನೂರ ಇಪ್ಪತ್ತು ಕೋಟಿ ಎರಡಕ್ಕೆ ಏರಲಿರುವುದು. ಅದಕ್ಕಾಗಿ ಮಾವಿನರಸಾಯನ ಮತ್ತು ಆ-ಸತ್ಯ-ದ್ವೇಷಿ ಈಗಾಗಲೆ ಬೊಗಳೂರಿನ ಇಂಗ್ಲೀಷ್ ಮೀಡಿಯಂ ಪ್ಲೇ ಹೋಂ-ಕಂ-ನರ್ಸರಿ ಸ್ಕೂಲ್‌ಗಳಲ್ಲಿ ಸೀಟುಗಳನ್ನು ಐದು ಲಕ್ಷ ರೂ. ಕೊಟ್ಟು ಮುಂಗಡ ಕಾದಿರಿಸಿರುವುದು ನಮ್ಮ ವರದಿಗಾರರ ಗಮನಕ್ಕೆ ಬಂದಿದೆ.

  -ಪಬ್

  ReplyDelete
 8. ಪಬ್ಬಲ್ಲಿ ಅನಾನಸ್ ರಸ ಕುಡಿದದ್ದೇ ದೊಡ್ಡ ತಪ್ಪಾಯ್ತು. ನಿಮ್ಮ ವರದಿಗಾರರು ಇದನ್ನು ನಿಮ್ಮ ಗಮನಕ್ಕೆ ಮಾತ್ರ ತಂದಿರುವುದರಿಂದ ವಿಷಯವನ್ನು ನಮ್ಮ ನಮ್ಮಲ್ಲೇ ಇತ್ಯರ್ಥ ಮಾಡಿಕೊಳ್ಳೋಣ. ಎಷ್ಟು ಪೆಟ್ಟಿಗೆ ಕಳುಹಿಸಬೇಕು ಎಂದು ತಿಳಿಸಿ, ನಮ್ಮ ಬಂಟ ರಾಜಾ ಚೊತ್ತನ್ ಈಗಲೇ ನಿಮ್ಮ ಮನೆಯ ಮುಂದೆ ಹಾಜರಿರುತ್ತಾನೆ.

  ReplyDelete
 9. ಅನಾನಿಮಸರೇ, ನೀವಿನ್ನೂ ಹೆಸರು ಬದಲಾಯಿಸಿಕೊಳ್ಳದಿದ್ದುದಕ್ಕೆ ಧನ್ಯವಾದಗಳು!

  ಒಂಬತ್ತು ತಿಂಗಳು ಕಾಯಬೇಕು ಅಂತ ಕರಾರುವಾಕ್ಕಾಗಿ ನೀವು ಹೇಳುತ್ತಿರುವುದರಿಂದ ಮತ್ತು ಪಬ್ ನಲ್ಲಿ ಕುಳಿತು ದ್ರಾಕ್ಷಾರಸಾಯನ ಹೀರುತ್ತಿರುವುದು ತಿಳಿದುಬಂದಿದ್ದರಿಂಗ ನಿಮ್ಮ ಮೇಲೆಯೇ ಇಡೀ ಬ್ಯುರೋದ ಏಕೈಕ ಸಿಬ್ಬಂದಿ ಸಂದೋಹಕ್ಕೆ ಭಾರಿ ಶಂಕೆಗಳು ಉಂಟಾಗಿವೆ.

  ReplyDelete
 10. ಮಾವಿನ ರಸಾಯನರೇ,
  ನೀವು ಪಬ್ಬಿಗೆ ಕಳುಹಿಸುವುದು ಮಾವಿನ ರಸಾಯನವೋ ಅಥವಾ ದ್ರಾಕ್ಷಾರಸವೋ ಎಂದು ಖಚಿತವಾಗಿ ಉಲ್ಲೇಖಿಸಬೇಕಾದದ್ದು ಅಗತ್ಯ. ಇಲ್ಲವಾದಲ್ಲಿ ಕಸ್ಟಮ್ಸ್ ತಲೆತಪ್ಪಿಸಿಕೊಂಡು ವ್ಯವಹಾರ ಕುದುರಿಸುತ್ತೀರಿ ಅಂತ ದೂರು ನೀಡಬೇಕಾಗಬಹುದು.

  ನಮ್ಮತ್ತ ಒಂದು ಪೆಟ್ಟಿಗೆ ತಳ್ಳಿದರೆ. ದೂರು.... ಯಾವ ದೂರು... ಅಂತ ನಾವು ಆಶ್ಚರ್ಯದಿಂದ ಕೇಳುವಷ್ಟು ಬದಲಾಗಿಬಿಡುತ್ತೇವೆ.

  ReplyDelete
 11. ಬಿಹಾರದಲ್ಲಿ ಔಷಧಿ (ಡ್ರಗ್ಸ್) ಕೊಂಡವರಿಗೆ ಒಂದು ಪಿಸ್ತೂಲು ಪುಕ್ಕಟೆಯಂತೆ. ನಾವು ತಳ್ಳುವ ಪೆಟ್ಟಿಗೆ ಜೊತೆಗೆ ಒಂದು ಭರಿಸಿದ ತುಪಾಕಿಯನ್ನು ಇರಿಸುತ್ತೇವೆ. ಅದು ಹೇಗೆ ನೀವು ತೆಗೆದುಕೊಳ್ಳುತ್ತೀರೋ ನೋಡೋಣ. ಇದರೊಂದಿಗೆ ಬರುವವನು ರಾಜಾ ಚೊತ್ತನೆ ಎಂಬುದನ್ನೂ ಗಮನಿಸಿರಿ.

  ಅನಾನಸ ರಸ, ಮಾವಿನ ರಸ, ದ್ರಾಕ್ಷಾರಸ ಎಲ್ಲವೂ ಒಂದೇ ರುಚಿಯೆಂಬುದು ನಿಮಗೆ ಗೊತ್ತಿಲ್ಲ ಅನ್ನಿಸುತ್ತಿದೆ. ಎಲ್ಲವೂ ನೊರೆಭರಿತ. ಬೊಗಳೂರಿನ ಅರ್ಕಾವತಿಯಿಂದಲೇ ಸರಬರಾಜು ಮಾಡುವುದು.

  ಅಂದ ಹಾಗೆ ಸಮಯ ಆಗುತ್ತಿದೆ, ಪಬ್ಬಿಗೆ ಹೋಗೋಣ್ವೇ?

  ReplyDelete
 12. ನಿಮ್ಮ ಖೋಟಾ ರಾಜನ ಕೆಲಸ ಎಲ್ಲಾ ನಮ್ ರಾಜಕಾರಣಿಗಳೆದುರು ನಡೆಯೋದೇ ಇಲ್ಲ.

  ದ್ರಾಕ್ಷಿ ಹುಳಿ ಅಂತ ಕೇಳಿದ್ದೇನೆ, ಅದರ ರಸ ಕೂಡ ಹುಳಿಯೇ? ಅದನ್ನು ಪರೀಕ್ಷಿಸಲು ಪಬ್ಬಿಗೆ ದಾಳಿ ಇಡೋಣ.... ಬನ್ನಿ, ಬನ್ನಿ ಟೈಮಾಯ್ತು.....

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post