Subscribe Us

ಜಾಹೀರಾತು
header ads

ಗಂಗೂಲಿ "ಬಾಯಲ್ಲಿ ಕಾಲು" ಚೆಂಡಾಟ

(ಹಾಯ್-ಬೊಗಳೂರು ಬ್ಯುರೋ)
ಬೊಗಳೂರು, ಜೂ.13- ಭಾರತ ಕ್ರಿಕೆಟ್ ತಂಡದ ಎಡಗೈ ಕ್ಯಾಪ್ಟನ್ ಆಗಿದ್ದ ಗೌರವ್ ಸಂಗೂಲಿ ಈಗೇನು ಮಾಡುತ್ತಿದ್ದಾರೆ ಎಂಬ ಕುತೂಹಲ ಬೊಗಳೆ-ರಗಳೆ ಬ್ಯುರೋ ಸಿಬ್ಬಂದಿಗೆ.

ಸರಿ, ಇದು ನೆನಪಾದದ್ದೇ ತಡ, ಬ್ಯುರೋದ ಏಕೈಕ ಸಿಬ್ಬಂದಿಯ ಭರ್ಜರಿ ತಂಡವು ಮೂರ್ನಾಲ್ಕು ಕಾರುಗಳಲ್ಲಿ, ರೈಲುಗಳಲ್ಲಿ, ವಿಮಾನ-ಬಸ್ಸುಗಳಲ್ಲಿ ಕಾಲು-ಕುತ್ತಕ್ಕೆ ಧಾವಿಸಿತು. ಅಲ್ಲಿ ಬ್ಯುಸಿಯಾಗಿದ್ದ ಗೌರವ್ ಸಂಗೂಲಿಯ ಎರಡೂ ಕಾಲುಗಳಿಗೆ ಚಿನ್ನದ ಬೂಟ್ ಇದ್ದವು. ಅದರ ಹಿಂದಿನ ರಹಸ್ಯ ಭೇದಿಸಿದಾಗ ಹಲವು ಅಂಶಗಳು ತಿಳಿದುಬಂದವು.

ಭಾರತ ತಂಡವನ್ನು ಎಡಗೈ ಬ್ಯಾಟ್ಸ್ ಮನ್ ಆಗಿ ಮುನ್ನಡೆಸುತ್ತಿದ್ದ ಸಂದರ್ಭದಲ್ಲಿ ಇತರ ಬ್ಯಾಟ್ಸ್ ಮನ್ ಮತ್ತು ಬೌಲರ್‌ಗಳ ಕಾಲುಗಳನ್ನು ಎಳೆಯುತ್ತಾ ಸುದ್ದಿ ಮಾಡುತ್ತಿದ್ದ ಸಂಗೂಲಿ, ಕೊನೆಗೊಂದು ಬಾರಿ ಹೊಚ್ಚ ಹೊಸ ಕೋಚ ಚಾಪೆಲ್‌ನ ಕಾಲಡಿಯ ಚಾಪೆ ಎಳೆಯಲು ಹೋದಾಗ ಕಾಲೇ ಕೈಕೊಟ್ಟ ಕಾರಣ ಕಾಲು-ಕುತ್ತಕ್ಕೆ ಒಂದೇ ಉಸಿರಿನಲ್ಲಿ ನೆಗೆದಿದ್ದರು.
ಕ್ಯಾಪ್ಟನ್ ಆಗಿದ್ದಾಗಿನಿಂದಲೂ ತಮ್ಮ ಕಾಲುಗಳಿಗೆ ಸಾಕಷ್ಟು ಕೆಲಸ ಕೊಡುತ್ತಾ, ಬಾಯಲ್ಲೇ ಕಾಲು ಇಟ್ಟುಕೊಂಡು ಸುದ್ದಿ ಮಾಡುತ್ತಿದ್ದ ಸಂಗೂಲಿಯ ಈ ಕ್ರಮದ ಹಿನ್ನೆಲೆ ಏನು ಎಂದು ಅರಿವಾದದ್ದು ಸಂಗೂಲಿ ಫುಟ್ಬಾಲ್ ದಿರಿಸಿನಲ್ಲಿ ಕಾಣಿಸಿಕೊಂಡಾಗ ಮತ್ತು ಅವರ ತಂಡವು ಫುಟ್ಬಾಲ್ ಪಂದ್ಯದಲ್ಲಿ ವಿಜಯಿಯಾಗಿದೆ ಎಂದು ತಿಳಿದಾಗ.
"ಓ, ಬನ್ನಿ ಬೊಗಳೆ ಪಂಡಿತರ ಕಡೆಯವರಲ್ವಾ" ಎಂದು ಕಾಲು ಬೀಸಿ ಕರೆದ ಸಂಗೂಲಿಯನ್ನು ಬ್ಯುರೋ ಸಿಬ್ಬಂದಿ ವಿಚಾರಿಸತೊಡಗಿದರು.

ಫುಟ್ಬಾಲ್‌ಗೆ ಯಾವತ್ತಿಗೂ ನನ್ನ ಪ್ರಥಮ ಆದ್ಯತೆ ಎಂದೇ ಮಾತು ಶುರುಹಚ್ಚಿಕೊಂಡ ಸಂಗೂಲಿ, ನನಗೆ ಕಾಲ್ಚೆಂಡಾಟ ಆಡಿ ತುಂಬಾ ಅಭ್ಯಾಸ, ಅನುಭವ ಇದೆ. ಉಳಿದವರಿಗೆಲ್ಲಾ ಕೈಕೊಟ್ಟು ಅನುಭವವಿದ್ದರೆ ನನಗೆ ಕಾಲು ಕೊಟ್ಟೇ ಅಭ್ಯಾಸ. ಕ್ರಿಕೆಟ್ ಆಡುತ್ತಿದ್ದಾಗಲೂ ಚಾಪೆಲ್ ಮುಂತಾದವರ ಕಾಲೆಳೆಯುತ್ತಾ ನನ್ನ ಭವಿಷ್ಯವನ್ನು ಫುಟ್ಬಾಲ್ ಕ್ರೀಡೆಗಾಗಿ ಅಣಿ ಮಾಡಿಕೊಳ್ಳುತ್ತಿದ್ದೆ ಎಂದು ಸ್ಪಷ್ಟಪಡಿಸಿದರು.

ನನಗೆ ಎಡಕೈಯಂತೆಯೇ ಎಡಕಾಲು ಕೂಡ ಬಲವಾಗಿದೆ. ಆ ಕಾರಣಕ್ಕೆ ನನಗೆ ಎರಡೆರಡು ಎಡಕಾಲುಗಳು, ನೀವೇ ನೋಡಿ ಎಂದು ಕಾಲೆತ್ತಿ ರಪ್ಪನೆ ಬಾರಿಸಿದರು.

ಎಲ್ಲಿ ಬಾರಿಸಿದ್ದು ಅಂತ ಬೊಗಳೆ ಬ್ಯುರೋ ಸಿಬ್ಬಂದಿಗೆ ತಿಳಿದಾಗ ತಡವಾಗಿತ್ತು....! ಸ್ವಲ್ಪ ನಿಲ್ಲಿ, ತಪ್ ತಿಳ್ಕೊಂಡಿದೀರಾ... !

ಸಂಗೂಲಿ ಒದ್ದಿದ್ದು, ಅಲ್ಲೇ ಹತಾಶವಾಗಿ ಬಿದ್ದಿದ್ದ ಫುಟ್ಬಾಲ್‌ಗೆ. ಅದು ದೂರದಲ್ಲೆಲ್ಲೋ ಧೊಪ್ಪನೆ ಬಿದ್ದಾಗ, ಬೊಗಳೆ ಬ್ಯುರೋ "ಸದ್ಯ ತಲೆ ಉಳಿಯಿತಲ್ಲಾ" ಎಂದು ಕೊಳ್ಳುತ್ತಾ, ದೂರದಿಂದಲೇ ಸಲಾಂ ಹೊಡೆದರೂ ಸಂಗೂಲಿ ಮಾತ್ರ ಎರಡೂ ಕಾಲೆತ್ತಿ ಟಾಟಾ ಹೇಳಿ ಬೆದರಿಸಿ ಬೀಳ್ಕೊಡುವುದನ್ನು ಬಿಡಲಿಲ್ಲ.

Post a Comment

8 Comments

 1. ಮೂರ್ನಾಲ್ಕು ಕಾರು, ಬಸ್ಸು, ರೈಲು, ವಿಮಾನ ಹತ್ತಿ ಕಾಲುಕುತ್ತಕ್ಕೆ ಹೋಗ್ಬೇಕಾ? ಅಷ್ಟು ದೂರ ಇದೆಯಾ? ನೀವು ಬಿಡೋ ಹಳಿ ಇಲ್ಲದ ರೈಲಿನಲ್ಲೇ ಹೋಗೋಕ್ಕಾಗಲ್ವಾ?

  ಇಲ್ಲಿಯವರೆವಿಗೆ ದೇವನ ಕೈ ಮಿಯಾಗೋ ಡರ್ರಣ್ಣನ ಬಗ್ಗೆ ಗೊತ್ತಿತ್ತು. ದೇವನ ಕಾಲು ನಮ್ಮ ದೇಶದಲ್ಲೇ ಇದೆ ಎಂಬುದು ಗೊತ್ತಿರ್ಲಿಲ್ಲ. ಅದನ್ನು ಹುಡುಕಿ ತಿಳಿಸಿದುದ್ದಕ್ಕೆ ನಿಮಗೆ ಬೋನಲ್ ಪ್ರಶಸ್ತಿ ಖಂಡಿತ ಕೊಡಿಸೋಣ. ಇನ್ನು ದೇವನ ಹೊಟ್ಟೆಯೂ ನಮ್ಮ ದೇಶದಲ್ಲೇ ಇದೆ ಎಂಬುದನ್ನು ಸಾಬೀತು ಪಡಿಸಿದರೆ, ದೇವನ ನಾಡು ಶ್ರೀಗಂಧದ ಬೀಡು ಎಂಬ ಹಾಡು ಸಾರ್ಥಕವಾದೀತು.

  ಸಂಗೊಳ್ಳಿ ರಾಯಣ್ಣನ ಬೂಟು ಚಿನ್ನದ್ದಾ? ಹಾಗಿದ್ರೆ ಅವನು ಚೆಂಡನ್ನು ಒದ್ದಾಗ ಚೆಂಡಿಗೆ ಸ್ವಲ್ಪ ಚಿನ್ನ ಮೆತ್ತಿಕೊಳ್ಳತ್ತಾ? ನಿಮ್ಮ ವರದಿಗಾರನಿಗೂ ಮೆತ್ತಿಕೊಂಡಿದ್ಯಾ?

  ನಿಮ್ಮ ವರದಿಗಾರ ಎಲ್ಲೆಲ್ಲಿಯೋ ಓಡಾಡ್ತಾ ಇರ್ತಾನಲ್ಲ, ಬೊಗಳೂರಿನ ಕೈಲಾಸಪಾಳ್ಯದಲ್ಲಿ ನಡೆಯುವ ವ್ಯವಹಾರದ ಬಗ್ಗೆ ಯಾಕಿನ್ನೂ ವರದಿ ಮಾಡಿಲ್ಲ.

  ReplyDelete
 2. ದಯವಿಟ್ಟು ನಂಬಿ ಮಾವಿನ ಅರಸರೆ,
  ಅಷ್ಟೆಲ್ಲಾ ವಾಹನಗಳು ನಮ್ಮ ಬ್ಯುರೋದ ಹಿಂದೆ ಬರ್ತಿದ್ದವು.

  ಆಮೇಲೆ ನೀವು ಡೀಗೋ ಮರಡೋನಾರನ್ನು ಮಡೋನ್ನಾ ಅಂತೇನಾದರೂ ತಿಳ್ಕಂಡಿದ್ದೀರೋ ಅಂತ ಶಂಕೆ.

  ಚೆಂಡಿಗೆ ಒದ್ದಾಗ ಚಿನ್ನ ಮೆತ್ತಿಕೊಳ್ಳುತ್ತಾ ಅಂತ ಯಾರಾದ್ರೂ ನಿಜ ಹೇಳ್ತಾರೇನ್ರೀ?

  ಬೊಗಳೂರಿನಲ್ಲಿ ಅಸತ್ಯಾನ್ವೇಷಿ ಇರೋವರೆಗೆ ಯಾವುದೇ ಭ್ರಷ್ಟಾಚಾರ ನಡೆಯದು, ನಡೆದರೂ ಅದನ್ನು ಮುಚ್ಚಿಹಾಕಲಾಗುತ್ತೆ ಅನ್ನೋ ಭರವಸೆ ನೀಡಲಾಗಿದೆ.

  ReplyDelete
 3. "ಭಾರತ ತಂಡವನ್ನು ಎಡಗೈ ಬ್ಯಾಟ್ಸ್ ಮನ್ ಆಗಿ ಮುನ್ನಡೆಸುತ್ತಿದ್ದ ಸಂದರ್ಭದಲ್ಲಿ ಇತರ ಬ್ಯಾಟ್ಸ್ ಮನ್ ಮತ್ತು ಬೌಲರ್‌ಗಳ ಕಾಲುಗಳನ್ನು ಎಳೆಯುತ್ತಾ ಸುದ್ದಿ ಮಾಡುತ್ತಿದ್ದ ಸಂಗೂಲಿ"

  "ಬಾಯಲ್ಲೇ ಕಾಲು ಇಟ್ಟುಕೊಂಡು ಸುದ್ದಿ ಮಾಡುತ್ತಿದ್ದ ಸಂಗೂಲಿ"

  "ಕ್ರಿಕೆಟ್ ಆಡುತ್ತಿದ್ದಾಗಲೂ ಚಾಪೆಲ್ ಮುಂತಾದವರ ಕಾಲೆಳೆಯುತ್ತಾ"

  ಸ್ವಾಮಿ ಅನ್ವೇಷಿಗಳೇ,

  ನೀವು "ಅಸತ್ಯ"ವನ್ನರಿಸುತ್ತಾ ಹೋದಷ್ಟೂ, ಮೇಲಿನ ಸಾಲುಗಳನ್ನು ಓದುತ್ತಿದ್ದರೆ, "ಸತ್ಯ" ನಿಮ್ಮ ಕಾಲಿಗೇ ಎಡತಾಕುತ್ತಾ ಇರುವಂತಿದೆಯಲ್ಲಾ?!
  ..
  "ವಿ.ವಿ."

  ReplyDelete
 4. asathyaanveshigale neevu sourav bagge styavanne barediddeeri!
  -jithendra kundeshwara

  ReplyDelete
 5. ವಾರ್ತಾ ವಿದೂಷಕ(ವಿವಿ) ಅವರೆ, ಮತ್ತೆ ಬೊಗಳೆ ಕಣಕ್ಕಿಳಿದ ನಿಮಗೆ ಸ್ವಾಗತ.

  ಅಸತ್ಯಕ್ಕೂ ಸತ್ಯಕ್ಕೂ ಇಷ್ಟೊಂದು ಸಾಮೀಪ್ಯ ಇಲ್ಲದ ಥರಾ ನೋಡಿಕೊಳ್ಳೋದು ಈಗಿನ ಕಾಲದಲ್ಲಿ ಕಷ್ಟವೇ.

  ಮತ್ತೆ ಇದು ಕಾಲು-ಚೆಂಡಾಟದ ಕಥೆಯಾದುದರಿಂದ ಎಡಕಾಲು-ಗೆ ತಗುಲಿದ ಮುಕ್-ಕಾಲು ಪಾಲು ಸತ್ಯವನ್ನು ಬಿಡಲು ಮನಸ್ಸೇ ಬಾರದು.

  ಯಾಕಂದ್ರೆ ಮರ್ಕಟ ಮನಸಲ್ವಾ?
  :)

  ReplyDelete
 6. ಓಹ್.... ಇಂದ್ರಿಯವನ್ನು ಜಯಿಸಿದವರಿಗೆ ನಮಸ್ಕಾರ.

  ಗೌರವ್ ಬಗ್ಗೆ ಸತ್ಯವನ್ನೇ ಬರೆದಿರುವುದಾಗಿ ಹೇಳಿ ನೀವು ನಮ್ಮ ಕಣ್ಮುಚ್ಚಿಸಿದ್ದೀರಿ. ಧನ್ಯವಾದ.

  ನಿಮ್ಮ ಬ್ಲಾಗಿನಲ್ಲಿ ಕನ್ನಡ ಇನ್ನೂ ಕಾಣಿಸ್ತಿಲ್ಲ. font install ಆಗಿಲ್ವಾ?

  ReplyDelete
 7. ಗಂಗೂಲಿಯನ್ನ ಚಾಪೆಲ್ ಚಪ್ಪಲಿ ಕಾಲಿನಿಂದ ಝಾಡಿಸಿ ಕ್ರಿಕೆಟ್ ಮೈದಾನದಿಂದ ಆಚೆ ಕಳಿಸಿದ್ನಲ್ಲ, ಅದಕ್ಕೇ ಕಾಲೆಳೆದುಕೊಂಡು ಕಾಲ್ಚೆಂಡು ಮೈದಾನಕ್ಕೆ ಹೋಗಿರ್ಬೇಕು..ಬೇರೆಯವರ ಕಾಲೆಳೆದು ಬೀಳಿಸುವ ಆಟ ಹೇಗೂ ಅವ್ನಿಗೆ ಇಷ್ಟ ಆಗಿರುತ್ತೆ, ಆದ್ರೆ ಒಂದೇ ಒಂದು silly ಡೌಟ್, ಕ್ರಿಕೆಟ್ಟಲ್ಲಿ ಒಂದು ಗೂಟದಿಂದ ಇನ್ನೊಂದು ಗೂಟಕ್ಕೇ ಕಷ್ಟಪಟ್ಟು ಕಾಲೆಳೆದುಕೊಂಡು ಓಡುತ್ತಿದ್ದೋನು ಮೈದಾನ ತುಂಬಾ ಎಲ್ಲಾ ball ಹಿಂದೆ ಹೇಗೋಡ್ತಾನೋ..

  (ಇದನ್ನ ನನ್ನ ಬೊಗಳೆ ಪುಟದಿಂದ ಇಲ್ಲಿ ತಂದು ಅಂಟಿಸಿದ್ದು)

  ReplyDelete
 8. ಶ್ರೀಲತಾ ಅವರೆ,

  ನಿಮ್ಮ ಸಿಂಪ್ಲಿ ಸಿಲ್ಲಿ ಲಿಟ್ಲ್ ಡೌಟ್ ಸರಿಯಾಗಿದ್ದೇ.
  ನನ್ ಪ್ರಕಾರ, ಗಂಗೂಲಿಗೆ ಫುಟ್ಬಾಲ್ ಮೈದಾನದಲ್ಲಿ ಗೂಟಗಳಿಲ್ಲದಿರುವುದೇ ಪ್ರೇರಣೆಯಂತೆ.

  ಗೋಲ್ ಪಾಯಿಂಟಿನ ಹತ್ತಿರ ಹೋಗದಿದ್ದರಾಯಿತಲ್ಲಾ?

  ReplyDelete

ಏನಾದ್ರೂ ಹೇಳ್ರಪಾ :-D