(ಬೊಗಳೂರು ಕ್ರೀಡಾ ಬ್ಯುರೋ)
ಬೊಗಳೂರು, ಮೇ 29- ಮೀಸಲಾತಿ ಎಂಬೊಂದು ಅಮೂಲ್ಯ ಪರಿಮಳ ದ್ರವ್ಯವು ಕ್ರಿಕೆಟ್ ರಂಗಕ್ಕೂ ತಟ್ಟಿದ ಕಾರಣ ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಕಳೆ ಭರಿತ ಪ್ರದರ್ಶನ ನೀಡಿ ಆತ್ಮೀಯವಾಗಿ ಸೋಲೊಪ್ಪಿಕೊಂಡಿತು ಮತ್ತು ತನ್ನ ದೇಶ ನಂಬಿರುವ "ಹಿಂದುಳಿದವರೂ ಮುಂದೆ ಬರಬೇಕು" ಎಂಬ ಸಿದ್ಧಾಂತವನ್ನು ಪುಷ್ಟೀಕರಿಸಿತು.

ಯಾವಾಗಲೂ ನಾವೇ ಗೆದ್ದರೆ, ಕ್ರಿಕೆಟ್‌ನಲ್ಲಿ ಭಾರತದ ಹೆಸರು ರಾರಾಜಿಸಿದರೆ, ಲೋಕದ ಕೆಟ್ಟ "ದೃಷ್ಟಿ"ಗೆ ಆಹಾರವಾಗಬೇಕಾಗುತ್ತದೆ. ಮತ್ತು ಇಲ್ಲೂ ಪ್ರತಿಭಾವಂತರು ಬ್ಯಾಟಿಂಗ್, ಬೌಲಿಂಗ್‌ನಲ್ಲಿಮೆರೆದಾಡಿದರೆ ಖಂಡಿತವಾಗಿಯೂ ರಾಜಕಾರಣಿಗಳ ದೃಷ್ಟಿ ಬೀಳುತ್ತದೆ. ಹಾಗಾದಾಗ ಇಲ್ಲೂ ಮೀಸಲಾತಿ ಜಾರಿಗೊಳಿಸಿದಲ್ಲಿ ತಮ್ಮ ಸ್ಥಾನಕ್ಕೆ ಕುತ್ತು ಖಂಡಿತ ಎಂಬ ಸತ್ಯದ ಅರಿವಿದ್ದ ಆಟಗಾರರು ಹೊಸ ಯೋಜನೆ ಪ್ರಕಾರ ಆಟವಾಡಿದರು ಎಂದು ಮೂಲಗಳು ತಿಳಿಸಿವೆ.

ಹೆಚ್ಚು ಉತ್ತಮ ಪ್ರದರ್ಶನ ತೋರಿದರೆ, ಇಲ್ಲೂ ಹಿಂದುಳಿದವರನ್ನು ಮುಂದೆ ತರಬೇಕೆಂದು ಯೋಚಿಸುವ ರಾಜಕಾರಣಿಗಳ ಕಾಕದೃಷ್ಟಿ ಪ್ರತಿಭಾನ್ವಿತರ ಮೇಲೆಯೇ ಬೀಳುವುದು ಖಚಿತ. ಈ ಕಾರಣಕ್ಕೆ ವಿಶ್ವಖ್ಯಾತ ಬ್ಯಾಟ್ಸ್ ಮನ್‌ಗಳಾದ ಧೋನಿ, ದ್ರಾವಿಡ್, ರೈನಾ, ಉತ್ತಪ್ಪ ಮುಂತಾದವರು ಬ್ಯಾಟ್ ಬದಲು ಬರೇ ಕೈ ಬೀಸುತ್ತಾ ಪೆವಿಲಿಯನ್‌ಗೆ ಮಾರ್ಚ್ ಫಾಸ್ಟ್ ನಡೆಸಿದ್ದರು.ಆದರೆ ತನ್ನ ಸ್ಥಾನ ಉಳಿಸಿಕೊಳ್ಳಲು ಬ್ಯಾಟನ್ನೇ ಬೀಸುವುದು ಅನಿವಾರ್ಯವಾಗಿತ್ತು ಎಂದು ಸೆಹವಾಗ್‌ ಕೊನೆಗೆ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಮತ್ತು ಸಹ ಆಟಗಾರರ ಬಳಿ ಕ್ಷಮೆ ಯಾಚಿಸಿದ್ದರು ಎಂದು ವರದಿಯಾಗಿದೆ.

ಒಟ್ಟಿನಲ್ಲಿ ಇಡೀ ತಂಡಕ್ಕೆ ಒಂದು ಸಮಾಧಾನವಿದೆ. ತಾವು ಕೆರಿಬಿಯನ್ ದ್ವೀಪಕ್ಕೆ ಬಂದರೂ ಒಂದು ವಿಶ್ವದಾಖಲೆ ಅಳಿಸಿಹಾಕಿದ್ದೇವೆ ಎಂಬುದೇ ಅದಕ್ಕಿರುವ ಹೆಮ್ಮೆ. ಯಾವುದೀ ದಾಖಲೆ ಎಂದು ಶೋಧಿಸಹೊರಟಾಗ ಬೊಗಳೆ ಪಂಡಿತರಿಗೆ ಸಿಕ್ಕ ವಿಷಯ ಇದು: "ಎದುರಾಳಿ ಒಡ್ಡಿದ ಸವಾಲಿನ ಮೊತ್ತವನ್ನು ಚೇಸ್ ಮಾಡಿ ಸತತವಾಗಿ 17 ವಿಜಯ ದಾಖಲಿಸಿದ ತಮ್ಮದೇ ತಂಡದ ವಿಶ್ವದಾಖಲೆಯ ಸರಪಣಿಯನ್ನು ಕಟ್ ಮಾಡಿಕೊಂಡಿದ್ದು!"

ಪರಿಣಾಮ: ಭಾರತ ತಂಡವು ಕ್ರಿಕೆಟ್‌ನ ವಿಜಯವನ್ನು ವೆಸ್ಟ್ ಇಂಡೀಸ್ ತಂಡಕ್ಕೆ ಮೀಸಲಾಗಿರಿಸಿತು!

6 Comments

ಏನಾದ್ರೂ ಹೇಳ್ರಪಾ :-D

 1. ಭಾರತೀಯರ ಕೆಲಸವೆಂದಿಗೂ ಹಾಗೇ. ಜಗತ್ತಿನಲ್ಲಿರುವವರೆಲ್ಲರೂ ಕಲಿಯಬೇಕು. ಆಟದಲ್ಲಿಯೂ ಮೀಸಲಾತಿ ಧೋರಣೆಯನ್ನು ತೋರಿರುವುದು ಶ್ಲಾಘನೀಯ. ಅಂದ ಹಾಗೆ ಮೇ ತಿಂಗಳಿನಲ್ಲೂ ಮಾರ್ಚ್ ಪಾಸ್ಟ್ ಮಾಡಿದ್ದು ಒಂದು ರೆಕಾರ್ಡ್ ಅಲ್ಲವೇ?

  ನಿಮ್ಮ ಸಮಯೋಚಿತ ಲೇಖನ ಜಗತ್ತಿನ ಎಲ್ಲ ಆಟಗಾರರಲ್ಲೂ ಪ್ರಜ್ಞೆ ಮೂಡಿಸಿದರೆ ನಮ್ಮವರಿಗೂ ಒಂದು ದಿನ ಜಯಮಾಲೆ (ಲ ಅಲ್ಲ)ಸಿಗುವುದು ಖಂಡಿತ.

  ಒಂದು ಗುಟ್ಟಿನ ವಿಷಯ ಆಟದ ಸಮಯದಲ್ಲಿ ಊಟದಲ್ಲಿ ನಮ್ಮವರಿಗೆ ಮತ್ತಿನ ಔಷಧಿ ಸೇರಿಸಿದ್ದರಂತೆ. ಅದನ್ನು ದಾಯಾದಿ ದಾವೂದ ಬಿಟ್ಟಿಯಾಗಿ ಕಳುಹಿಸಿಕೊಟ್ಟಿದ್ದನಂತೆ. ಈ ವಿಷಯವನ್ನು ಪಬ್ಲಿಕ್ ಮಾಡಬೇಡಿ.

  ReplyDelete
 2. ಮೇ ತಿಂಗಳಲ್ಲಿ ಮಾರ್ಚ್ ಗೆ ಫಾಸ್ಟಾಗಿ ಹಿಂತೆರಳುವುದು ಕೂಡ ಒಂದು ಸಾಧನೆ ಎಂದು ಸರಕಾರಕ್ಕೆ ತಿಳಿದರೆ, ಔಟ್ ಆಗುವುದಕ್ಕೂ ಮೀಸಲಾತಿ (reservations) ತಂದುಬಿಟ್ಟೀತು.... ಜೋಕೆ!

  ನೀವೇನಾದ್ರೂ ವೆಸ್ಟಿಂಡೀಸ್ ಗೆ ಹೋಗಿದ್ರಾ? ಭಾರತೀಯ ಆಟಗಾರರ ಬಾಯಿ ಸುತ್ತ ಮಾವಿನ ರಸಾಯನವೇ ಕಾಣಿಸುತ್ತಿತ್ತು!
  ಬಹುಶಃ ನಿಮ್ಮ ಕಿತಾಪತಿ ಅಂತ ಆಗಲೇ ಪಂಡಿತರಿಗೆ ಡೌಟು ಬಂದಿದೆ!

  ReplyDelete
 3. "ಮೀಸಲಾತಿ ಎಂಬೊಂದು ಅಮೂಲ್ಯ ಪರಿಮಳ ದ್ರವ್ಯವು ಕ್ರಿಕೆಟ್ ರಂಗಕ್ಕೂ ತಟ್ಟಿದ ಕಾರಣ..."

  ಮೀಸಲಾತಿ ಎಂಬುದೊಂದು ಪರಿಮಳ ದ್ರವ್ಯ ಅತ್ತರು
  ಕ್ರಿಕೆಟಿಗೂ ಮೆತ್ತಿಕೊಂಡು ನಮ್ಮವರು ಸೋತು ಸತ್ತರು
  ಅಭಿಮಾನಿ ಧಮನಿಯಲಿ ಹರಿಯಿತು ರೋಷದ ನೆತ್ತರು
  ಸೋಲಲ್ಲೂ ಗೆಲುವುಕಂಡ ಅನ್ವೇಶಿ ಸಂತಸದಲೇ ಅತ್ತರು!

  ReplyDelete
 4. ನಿಮ್ಮ ಲೇಖನ ನಮ್ಮ ರಾಜಕಾರಿಣಿಗಳಿಗೆ ಸ್ವಲ್ಪನಾದ್ರು ಬೆಳಕು ಚೆಲ್ಲಲಿ .. ನಮ್ಮವರು ಸದಾ ಇತರರಿಗೆ ಅವಕಾಶ ಕೊಡುವಂಥವರು .. ನಾವೇ ಗೆಲ್ತಾ ಇದ್ರೆ ಉಳಿದವರಿಗೆ ಬೋರ್ ಹೊಡಿಯತ್ತಲ್ಲ ಅದಿಕ್ಕೆ.

  ಬಹಳ ಒಳ್ಳೆ ಲೇಖನ..

  ಓಹೊ .. ನಮ್ "pun"ಟ ಅವರ ಚುಟುಕು ಕವನ ಸಹ ಬಹಳ ಸಮಯೋಚಿತವಾಗಿದೆ

  ReplyDelete
 5. ಹೌದು ವಿಚಿತ್ರಾನ್ನಿಗಳೆ,
  ಸ್ವಂತ ನೆಲದಲ್ಲಿ ಹುಲಿಗಳಯ್ಯಾ ನಾವು
  ಬೋನಿನಿಂದ ಹೊರ ಬಿದ್ದರೆ ಕಟ್ಟಿಟ್ಟದ್ದು ಸಾವು
  ದಾಖಲೆಗಳನು ಪುಡಿಗಟ್ಟುವೆವಾದರೂ ನಮಗಿಲ್ಲ ನೋವು
  ಹಣಕೊಡುವ ಜಾಹೀರಾತಿನಂತೆಯೇ ನುಣ್ಣಗೆ ಮಾಡಿಸಿಕೊಳ್ಳುವೆವು ಶೇವು!

  ReplyDelete
 6. ಕಾರ್ತಿಕ್ ಅವರೆ, ಬೊಗಳೆ ತಾಣಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದ ಮತ್ತು ಸ್ವಾಗತ.

  ಬಹಳ ಒಳ್ಳೆಯ ಲೇಖನ ಅಂತ ಹೇಳಿ ನಮ್ಮನ್ನು ನಾಚಿ ನೀರಾಗುವಂತೆ ಮಾಡಿದ್ದೀರಿ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ!

  ಅದೇನೋ punಟ ಅಂದಿರಲ್ಲಾ, ಅದು ಪುಂಡ ಇರಬಹುದೇ?

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post