ಬೊಗಳೆ ರಗಳೆ

header ads


ಮಾರುಕಟ್ಟೆಯಲ್ಲಿ ಮೆಣಸಿನ ಸ್ಪ್ರೇ ದಿಢೀರ್ ಮಾಯ!
(ಬೊಗಳೂರು ಬ್ಯುರೋ ವಿಶೇಷ)
ಬೊಗಳೂರು, ಮೇ 6- ಸ್ವಯಂ ರಕ್ಷಣೆಗೆ "ಒಲಿಯೋ ಜಾಪ್" ಎಂಬ ಮೆಣಸಿನಪುಡಿ ಸ್ಪ್ರೇ ಮಾರುಕಟ್ಟೆಗಿಳಿದಿರುವಂತೆಯೇ ಈ ಸ್ಪ್ರೇ ಪೊಟ್ಟಣಗಳು ಹಳಸಿದ ತಂಪುತಂಪು ಐಸ್‌ಕ್ರೀಮ್‌ನಂತೆ ಮಾರುಕಟ್ಟೆಯಲ್ಲಿ ಖರ್ಚಾಗಿಬಿಟ್ಟಿದ್ದು, ಇದರ ಹಿಂದೆ ದೊಡ್ಡ ಹಗರಣವೇ ನಡೆದಿರುವ ಸಾಧ್ಯತೆಗಳು ದಟ್ಟವಾಗಿ ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ಜೈಲಿನಿಂದ ಹೊರಬಂದ ತಕ್ಷಣವೇ ಕಣಕ್ಕಿಳಿದ ಅಸತ್ಯಾನ್ವೇಷಿ ಕಂಡುಕೊಂಡ ಅನೃತದ ಪ್ರಕಾರ, ಈ ಸ್ಪ್ರೇ ಪೊಟ್ಟಣಗಳು ಮಾರುಕಟ್ಟೆಯಲ್ಲಿ ದಿಢೀರ್ ಗೋಚರಿಸದಂತಾಗಲು ಎರಡು ಕಾರಣಗಳು ಪತ್ತೆಯಾಗಿವೆ.
ಕಾರಣ ಒಂದು: ಎಲ್ಲಾ ಮಹಿಳೆಯರು ಇದನ್ನು ಖರೀದಿಸಿ ತಮಗೆ ಕಾಟ ಕೊಡುವ (ತಮ್ಮ ಮತ್ತು ಇತರರ) ಗಂಡಂದಿರನ್ನು ಅಂಕೆಯಲ್ಲಿಟ್ಟುಕೊಳ್ಳುವ ನಿರ್ಧಾರ ಮಾಡಿದ್ದಾರೆ ಮತ್ತು ಅವರ ಕಾಟಕ್ಕೆ ಅಂತ್ಯ ಹಾಡಲು ಈ ಮೆಣಸಿನ ಪುಡಿಯನ್ನೇ ಸಾರು-ಪಲ್ಯ ಇತ್ಯಾದಿಗಳಿಗೆ ಮನಬಂದಂತೆ ಸುರಿದು ಗಂಡಂದಿರಿಗೆ ಉಣಬಡಿಸಲು ತೀರ್ಮಾನಿಸಿದ್ದಾರೆ.
ಕಾರಣ ಎರಡು: ಅಪಾಪೋಲಿ ಯುವಕರು, ಮುದುಕರು ಇತ್ಯಾದಿ ಈ ಸ್ಪ್ರೇಯನ್ನು ಸಗಟು ಖರೀದಿ ಮಾಡಿ, ಅದು ತರುಣಿಯರ ಮತ್ತು ಮಹಿಳಾಮಣಿಗಳ ಕೈಗೆ ಸಿಗದಂತೆ ಮಾಡಿದ್ದಾರೆ.

ಪೂರ್ವಜರ ನೆನಪು: ಈ ಮಧ್ಯೆ, ಸ್ಪ್ರೇ ಉಪಯೋಗಿಸುವುದಷ್ಟೇ ಅಲ್ಲ, ಮಹಿಳೆಯರು ತಮ್ಮನ್ನು ಕಾಡುವ ಪುಂಡುಪೋಕರಿಗಳ ಪಾಲಿಗೆ ಶೂರ್ಪ'ನಖಿ'ಗಳಾಗಿ ಮುಖಕ್ಕೆ ಎರಡೂ ಕೈಗಳಿಂದ ಪರಚಬೇಕು, ಅದೂ ಸಾಲದಿದ್ರೆ ಕಿರುಚಬೇಕು, ಅರಚಬೇಕು, ಕೊನೆಗೆ ಕಚ್ಚಬೇಕು ಎಂದು ಸಾಂಗ್ಲಿಯಾನ ಹೇಳಿರುವುದಾಗಿ ವರದಿಯಾಗಿದೆ. ಇದು ಜನರಿಗೆ ತಮ್ಮ ತೋಟ ಕಾಯುವ ಪೂರ್ವಜರು, ಮನೆ ಬಾಗಿಲು ರಕ್ಷಿಸುವ ಶ್ವಾನ, ಮನೆಯ ಹಾಲು ರಕ್ಷಿಸುವ ಮಾರ್ಜಾಲ ಮುಂತಾದವನ್ನು ನೆನಪಿಸಿಕೊಟ್ಟಿರುವುದು ಗೊಂದಲ ಮೂಡಿಸಿದೆ.

ಸ್ವಾಗತ: ಇದೂ ಅಲ್ಲದೆ, ಕೊನೆಯ ಅಸ್ತ್ರವಾದ ಕಚ್ಚುವಿಕೆಗೆ ಪುಂಡುಪೋಕರಿಗಳು ತೀವ್ರ ಬೆಂಬಲ ವ್ಯಕ್ತಪಡಿಸಿರುವುದಾಗಿ ಅಸತ್ಯಾನ್ವೇಷಿಯ ಸಂಶೋಧನೆಯಿಂದ ಗೊತ್ತಾಗಿದೆ. ಆದರೆ ಈ ಶಸ್ತ್ರವನ್ನು ಬಲವಾಗಿ ಪ್ರಯೋಗಿಸಬಾರದು ಎಂಬುದು ಅವರ ಒಕ್ಕೊರಳಿನ ಆಗ್ರಹಪೂರ್ವಕ ಅಭಿಪ್ರಾಯ.
---------------------------------
'ಅಧಿ'ಸೂಚನೆ: ಹಿಟ್ ಕೌಂಟರ್ 1000ದ ಗಡಿ ದಾಟಿರುವ ಹಿನ್ನೆಲೆಯಲ್ಲಿ ನಾಳಿನ ಸಂಚಿಕೆಗೆ ರಜೆ ಘೋಷಿಸಲಾಗಿದ್ದು, ಅದೇ ಹಿಟ್ಟಿನಿಂದ ದೋಸೆ ಮಾಡಿ ತಿನ್ನಲಾಗುತ್ತದೆ. ಸರ್ವರ್ ಕೂಡ ಸಹಕರಿಸಬೇಕೆಂದು ಕೋರಿ-ಕೊಲ್ಲುತ್ತೇವೆ.
ನೆಟ್ಟೋದುಗರಿಗೆ ಏಕ ಸದಸ್ಯ ಬೊಗಳೂರು ಬ್ಯುರೋದ
ಮುಖ್ಯಸ್ಥರಲ್ಲೊಬ್ಬರಿಂದ ತಲಾ ಒಂದೊಂದು ಥ್ಯಾಂಕ್ಸ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಮೆಣಸಿನ ಪುಡಿ ಸ್ಪ್ರೇಗೆ ಪ್ರತಿಯಾಗಿ ನಾನೊಂದು ಸ್ಪ್ರೇ ಕಂಡು ಹಿಡಿದಿರುವೆ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಯಾರಾದರೂ ಸ್ಪಾನ್ಸರರ್ ಇದ್ದರೆ ನನ್ನನ್ನು ಸಂಪರ್ಕಿಸಬಹುದು.

  ಓಹ್ ೧ಕೆ ಒದೆತಗಳು ಆಯ್ತಾ? ಸೂಪರ್ ಡೂಪರ್ ಸುಂದರ ಬೊಗಳೆಗೆ ಹಾರ್ದಿಕ ಶುಭಾಶಯಗಳು
  ಸರ್ವರ್ ಬಗ್ಗೆ ಯೋಚಿಸಬೇಡಿ. ನಮ್ಮ ಸೋಮಣ್ಣ ನೋಡಿಕೊಳ್ತಾನೆ.

  ಪ್ರತ್ಯುತ್ತರಅಳಿಸಿ
 2. ಮಾನವಿನಯಸರವರೇ, ನಿಮ್ಮ ಸ್ಪ್ರೇಗೆ ಕಿರಣ್ ಬೇಡಿ ಮೂಲಕ ಸ್ಪಾನ್ಸರ್ ಕೊಡಿಸುವ ಭರವಸೆಯನ್ನು ಬೊಗಳೆ ಪಂಡಿತರು ನನಗೆ ಖಾಸಗಿಯಾಗಿ ತಿಳಿಸಿರುವುದು ಎಲ್ಲೋ ವರದಿಯಾಗಿದೆ. ಆ ವರದಿ ಪತ್ತೆ ಹಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ನೀವು ಅಸತ್ಯಾನ್ವೇಷಿಗಳಲ್ಲಿ ಶಿಫಾರಸ್ಸು ಮಾಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಆದರೆ ಸಾವಿರಾರು ಹೊಡೆತ ತಿಂದಿರುವ ಅನ್ವೇಷಿಗಳು ಆಸ್ಪತ್ರೆಗೆ ದಾಖಲಾಗುವುಷ್ಟು ಸೀರಿಯಸ್ ಆಗಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

  ಪ್ರತ್ಯುತ್ತರಅಳಿಸಿ
 3. ಅ----ಶುಭಾಶಯ ಕೋರಿದ್ದಕ್ಕೆ ತೀವ್ರ ಧನ್ಯವಾದಗಳು ಮಾನಸವಾಗಿ ವಿನಯರೆ,
  ಪೆಪ್ಪರ್ ಪುಡಿ ಸ್ಪ್ರೇಗೆ ಪ್ರತಿಯಾಗಿ ನೀವು ಕಂಡುಹುಡುಕಿದ್ದು ಸಾಲ್ಟ್ ಸ್ಪ್ರೇ ಅಂತ ಗೊತ್ತಾಗಿದೆ. ಅವೆರಡೂ ಮಿಕ್ಸ್ ಮಾಡಿದ್ರೆ ವೆಜ್ ಸಲಾಡ್ ಗೆ ಅತ್ಯುತ್ತಮ. ಅದನ್ನು ಕಳಿಸಿಕೊಡಿ. ಒಂದಕ್ಕೊಂದು ಫ್ರೀ ಕೊಡೋಣ.

  ನಿಮ್ಮೆಲ್ಲರ ಪ್ರೀತಿಯ ಸಾವಿರ ಒದೆತಗಳಿಂದ ನಮ್ಮ ಬ್ಯುರೋದ ಮೈ ಮಣಭಾರವಾಗಿದೆ, ಹೃದಯ ಊದಿಕೊಂಡಿದೆ, ಕಣ್ಗಳು ಕೆಂಪಗಾಗಿವೆ. ಮತ್ತೊಮ್ಮೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 4. ಓಹ್ ಸಾರಥಿಯವರೆ,
  ಅಡಿಗೆ ಬಿದ್ದೋನಿಗೆ ಎಲ್ಲರೂ ಎದ್ದ್ ಬಂದ್ ಒದೆಯೋರೇ... ನೀವೂ ಒದ್ದು ಬಿಟ್ರಾ....? ಅಂತೂ ಸಾವಿರ ದಾಟ್ಸಿದ್ರಿ...!

  ಆದ್ರೆ ಕಿರಣ್ ಬೇಡಿ ಸ್ಪಾನ್ಸರ್ ಮಾಡೋದು ಕ್ಯಾನ್ಸರ್ ಸ್ಪ್ರೇಗೆ ಮಾತ್ರವಂತೆ.

  ನಿಮಗೂ "ಸೀರಿಯಸ್" ಆಗಿ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D