ಬೊಗಳೆ ರಗಳೆ

header ads


ಬೆಂಗಳೂರಲ್ಲಿ ಲೋಹದ ಹಕ್ಕಿ ಜ್ವರ:

ವಿಮಾನಗಳ ಟ್ರಾಫಿಕ್ ಜಾಮ್...!

(ಬೊಗಳೂರು ಬ್ಯುರೋ ವಿಶೇಷ)
ಬೊಗಳೂರು, ಏ.18- ದಿನದಿಂದ ದಿನಕ್ಕೆ ಅಸಹನೀಯವಾಗುತ್ತಿರುವ ಬೆಂಗಳೂರಿನಲ್ಲಿ ವಿಮಾನಗಳ ಸಂಚಾರ ದಟ್ಟಣೆಯಿಂದಾಗಿ ಹಲವು ತಾಸುಗಳ ಕಾಲ ಟ್ರಾಫಿಕ್ ಜಾಮ್ ಆಗಿದ್ದುಇಂಥ ಪ್ರಕರಣಗಳಿಂದಾಗಿ ವಿಮಾನ ಅವಘಡಗಳೂ ಹೆಚ್ಚುತ್ತಿವೆ ಎನ್ನಲಾಗಿದೆ.

ಗಗನಕ್ಕೇರುತ್ತಿರುವ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ವಿಮಾನ ಪ್ರಯಾಣ ದರಗಳು ಗಗನದಿಂದ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಲೋಹದ ಹಕ್ಕಿಗಳ ಸಂಖ್ಯೆ ಕೂಡ 300 ದಾಟಿದೆ ಎಂದು ಪ್ರಜಾವಾಣಿ ಏ.7ರಂದು ಇಲ್ಲಿ ವರದಿ ಮಾಡಿತ್ತು.

ಬೆಂಗಳೂರಿಗೆ ಅಮರಿಕೊಂಡ ಈ "ಲೋಹದ ಹಕ್ಕಿ ಜ್ವರ"ದಿಂದ ಕಂಗಾಲಾಗಿರುವ ಆಡಳಿತವು, ಇದಕ್ಕೆ ಸೂಕ್ತ ಲಸಿಕೆ ಕಂಡು ಹುಡುಕುವ ನಿಟ್ಟಿನಲ್ಲಿ ಭಾರಿ ಸಂಖ್ಯೆಯಲ್ಲಿ ವೈಮಾನಿಕ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಸಂದರ್ಭದಲ್ಲಿ ಈ ಟ್ರಾಫಿಕ್ ಪೊಲೀಸರಿಂದಾಗಿಯೇ ವಿಮಾನಗಳಿಗೆ ಇಳಿಯಲು ಜಾಗ ದೊರೆಯುತ್ತಿಲ್ಲ ಎಂಬ ಅಂಶ ಅಸತ್ಯಾನ್ವೇಷಣೆ ವೇಳೆ ಪತ್ತೆಯಾಗಿದೆ.

ಡಕೋಟ ಏರ್‌ವೇಸ್ ಕೆಂಡಾಮಂಡಲ: ಬೆಂಗಳೂರಿನ ಗಗನದಲ್ಲಿ ಲೋಹ ಹಕ್ಕಿಗಳ ಸಂಚಾರ ಹೆಚ್ಚಾಗಿದ್ದರಿಂದಲೇ ಡೆಕ್ಕನ್ ಏರ್‌ವೇಸ್‌ನ ಡಕೋಟ ಎಕ್ಸ್ ‌ಪ್ರೆಸ್ ವಿಮಾನಗಳು ಆಗಾಗ್ಗೆ ಅಪಘಾತಕ್ಕೀಡಾಗುತ್ತಿವೆ ಎನ್ನಲಾಗಿದೆ.

ವಿಮಾನ ನಿಲ್ದಾಣದಲ್ಲಿ ಸ್ಥಳಾವಕಾಶವಿಲ್ಲದ ಕಾರಣ, ಇಳಿಯಬೇಕಾಗಿದ್ದ ವಿಮಾನವು, ನಿಲ್ದಾಣದಿಂದ ಒಂದು ವಿಮಾನ ಮೇಲೇರುವವರೆಗೆ ಕಾಯಬೇಕಾಗುತ್ತದೆ. ಇದಕ್ಕಾಗಿ ಅದು ಆಕಾಶದಲ್ಲೇ ಗಿರಕಿ ಹೊಡೆಯುತ್ತಿರಬೇಕಾಗುತ್ತದೆ. ಈ ರೀತಿ ಬೆಂಗಳೂರಿನ ಸುತ್ತ ಗಿರಕಿ ಹೊಡೆಯುತ್ತಾ ಗಂಟೆಗಟ್ಟಲೆ ಕಾಯುತ್ತಿರುವಾಗ, ಅದರಲ್ಲಿದ್ದ ಇಂಧನ ಖಾಲಿಯಾಗಿ ಪೈಲಟ್ ಇಳಿಸುವ ಮೊದಲೇ ಸ್ವಯಂಚಾಲಿತವಾಗಿ ಡೆಕ್ಕನ್ ವಿಮಾನಗಳು ಕೆಳಗೆ ಬೀಳುತ್ತಿದ್ದವು.

ಇಂಥ ಮಾಮೂಲಿ ಘಟನೆಗಳಿಗೆ ಪತ್ರಿಕೆಗಳೆಲ್ಲಾ ಬಣ್ಣ ಕಟ್ಟಿ "ರನ್‌ವೇಯಲ್ಲಿ ಜಾರಿದ ವಿಮಾನ, ಪ್ರಯಾಣಿಕರು ಪವಾಡಸದೃಶ ಪಾರು" ಎಂಬಿತ್ಯಾದಿ ತಲೆ(ಸರಿಇಲ್ಲದ) ಬರಹಗಳನ್ನು ಕೊಟ್ಟು ಗುಲ್ಲೆಬ್ಬಿಸುತ್ತಿವೆ ಎಂಬುದು ಡಕೋಟ ಏರ್‌ವೇಸ್ ಮುಖ್ಯಸ್ಥರ ಸ್ಪಷ್ಟನೆ.

ಪೈಲಟ್‌ಗಳಿಗೆ ಅರ್ಧ ಸಂಬಳ: ಈ ಕಾರಣಕ್ಕೆ, ಬೇರೆ ಊರುಗಳಿಂದ ಬೆಂಗಳೂರಿಗೆ ಬರುವ ವಿಮಾನಗಳ ಪೈಲಟ್‌ಗಳಿಗೆ ಅರ್ಧ ಸಂಬಳ ಕೊಡುವುದಾಗಿ ಡಕೋಟ ಏರ್‌ವೇಸ್ ಆಡಳಿತ ತಿಳಿಸಿದೆ. ಇದರ ಹಿನ್ನೆಲೆ ಅರಿಯಲು ಹೋದ ಅಸತ್ಯಾನ್ವೇಷಿಗೆ ತಿಳಿದದ್ದಿಷ್ಟು:

ಇಂಧನ ಖಾಲಿಯಾಗಿ ಆಗಸದಲ್ಲೇ ತಲೆಸುತ್ತು ಬಂದು ವಿಮಾನಗಳು ಕೆಳಗೆ ಬೀಳುವುದರಿಂದ ಪೈಲಟ್‌ಗಳಿಗೆ ವಿಮಾನವನ್ನು ತಾವೇ ಕಷ್ಟಪಟ್ಟು ನಿಲ್ಲಿಸಬೇಕಾದ "ಹೊರೆ" ಇರುವುದಿಲ್ಲ. ವಿಮಾನ ಬೆಂಗಳೂರಿಗೆ ಬರುತ್ತಿರುವಂತೆಯೇ ಅವರಿಗೆ ರಜೆ ಕೊಟ್ಟು ಕಳುಹಿಸುವುದು. ಇದರಿಂದ ಮ್ಯಾನ್‌ಪವರ್ (ಮಾನವ ಶ್ರಮ ಮತ್ತು ಸಂಪನ್ಮೂಲ) ಉಳಿತಾಯವಾದಂತಾಗುತ್ತದೆ ಎಂಬುದು ಕಂಪನಿ ಅಂಬೋಣ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು