ಬೊಗಳೆ ರಗಳೆ

header ads

ಹಾರ್ಟ್ ಆಫ್ ಕಿಲ್ಲಿಂಗ್‌ನಿಂದ ಆರ್ಟ್ ಆಫ್ ಲಿವಿಂಗ್‌ನತ್ತ...
(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.17- ಕಾನೂನು ವ್ಯವಸ್ಥೆಗೇ ಮಂಕು ಬೂದಿ ಎರಚಿ ಹೊಸ ಹೊಸ ಕಾನೂನುಗಳ ರಚನೆಗೆ ಕಾರಣವಾಗುತ್ತಾ, ಜೈಲಿನೊಳಗೆ ಹೋದಷ್ಟೇ ವೇಗವಾಗಿ ಹೊರಬರುತ್ತಾ, ಬಿಹಾರದೆಲ್ಲೆಡೆ ಪ್ರಖ್ಯಾತ "ಬಾಹು"ಬಲಿಯಾಗಿ ಮೆರೆಯುತ್ತಿದ್ದ ಆರ್‌ಜೆಡಿ ಸಂಸದ ಮೊಹಮ್ಮದ್ ಶಹಾಬುದ್ದೀನ್‌ಗೆ ಮಾನವನ ಜೀವನ ಏನು ಎಂಬುದನ್ನು ತಿಳಿದುಕೊಳ್ಳುವ ಆಸೆಯಾಗಿದೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಇದುವರೆಗೆ ಆರ್ಟ್ ಆಫ್ ಕಿಲ್ಲಿಂಗ್‌ಗೆ ಪ್ರಸಿದ್ಧನಾಗಿದ್ದ ಬಿಹಾರದ ಸಿವಾನ್ ಕ್ಷೇತ್ರದ ಈ ಭಯಾನಕ ಸಂಸದ, ಇದೀಗ ಜೈಲಿನಿಂದ ಹೊರಬರಲಾರದೆ ಆರಾಮವಾಗಿರುವ ಜೀವನ ಕಲೆ (ಆರ್ಟ್ ಆಫ್ ಲಿವಿಂಗ್) ಎಂದರೆ ಏನು ಎಂದು ತಿಳಿದುಕೊಳ್ಳಲು ಮುಂದಾಗಿದ್ದಾನೆ.ಇದಲ್ಲದೆ ಮಾನಸಿಕ ಒತ್ತಡ ನಿವಾರಣೆಗೆ ಯೋಗಕ್ಕೂ ಮೊರೆ ಹೋಗಿದ್ದಾನೆಂಬುದನ್ನು ತಿಳಿದುಕೊಂಡ ಬೊಗಳೂರು ಅಸತ್ಯಾನ್ವೇಷಣಾ ತಂಡವು, ಶಹಾಬುದ್ದೀನ್‌ಗೆ ಕೂಡ ಮನುಷ್ಯರಂತೆಯೇ ಮನಸ್ಸು ಎಂಬುದಿದೆ ಮತ್ತು ಅದು ಕೂಡ ಒತ್ತಡಕ್ಕೆ ಒಳಗಾಗುತ್ತದೆ ಎಂಬುದನ್ನು ಪತ್ತೆ ಹಚ್ಚಿ ವಿ'ಭ್ರಮಿಸಿ'ದೆ.

ಇದೇ ರೀತಿಯಲ್ಲಿ, ಕಳೆದ ಬಿಹಾರ ಚುನಾವಣೆಗಳಲ್ಲಿ ಅಡಿಗೆ ಬಿದ್ದು ಅಪ್ಪಚ್ಚಿಯಾದರೂ ಮೂಗು ಮೇಲೆ ಎಂದು ಹೇಳಿಕೊಳ್ಳುತ್ತಲೇ 'ಗಂಭೀರವಾದ ಮಾನಸಿಕ ಒತ್ತಡ' ಪೀಡಿತರಾಗಿದ್ದ ಮೇವು ತಿಂದ ದೊರೆ ಲಾಲು ಪ್ರಸಾದ್ ಯಾದವ್ ಮತ್ತು ಸಗಣಿ ಸಾರಿಸಿಯೇ ಕೋಟ್ಯಂತರ ರೂ. ಆಸ್ತಿ ಸಂಗ್ರಹಿಸಿದ ಪತ್ನಿ ರಾಬ್ಡಿ ದೇವಿ ಅವರು ಕೂಡ ಟಿವಿ ಯೋಗ ಗುರು ಬಾಬಾ ರಾಮದೇವ್ ಅವರ ಮೊರೆ ಹೋಗಿ ತಮಗೂ ಮನುಷ್ಯತ್ವ ಇದೆ ಎಂಬುದನ್ನು ತೋರಿಸಿಕೊಟ್ಟಿರುವುದು ವರದಿಯಾಗಿದೆ.

ಈ ಮಧ್ಯೆ, ಕೊಲೆ, ಸುಲಿಗೆ, ಅಪಹರಣ, ಅತ್ಯಾಚಾರ ಮುಂತಾದ 'ಲೋಕ ಕಲ್ಯಾಣ'ಕಾರಿ ಕಾರ್ಯಗಳಿಗಾಗಿ ಕೇವಲ 40ರಷ್ಟು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಶಹಾಬುದ್ದೀನ್‌ಗೆ ಮಾನಸಿಕ ಒತ್ತಡ ಎಂಬುದು ಬಂದದ್ದೇಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಬಹುಶಃ ಜೈಲಿನೊಳಗೆ ತಮ್ಮ ಲೋಕ ಕಲ್ಯಾಣ ಕಾರ್ಯಗಳನ್ನು ಮುಂದುವರಿಸಲು ಅವಕಾಶ ದೊರೆಯದಿರುವುದೇ ಆತನ ಒತ್ತಡದ ಲಿವಿಂಗ್‌ಗೆ ಕಾರಣ ಎಂದು ತರ್ಕಿಸಲಾಗುತ್ತಿದೆ. ಇದಲ್ಲದೆ ಆರ್ಟ್ ಆಫ್ ಕಿಲ್ಲಿಂಗ್ ಬಗ್ಗೆ ತಮ್ಮ ಗುರು ಲಾಲು ಜತೆ ಚರ್ಚಿಸುತ್ತಿದ್ದ ಶಹಾಬುದ್ದೀನ್, ಈಗ ಗುರುವಿಗೆ ನಮಸ್ಕಾರ ಹಾಕಿ ಬೇರೆ ಗುರು ಅವರ ಮೊರೆ ಹೋಗಿರುವ ಹಿಂದೆ ಕೇಸರಿ ಬಣ್ಣದ ವಿರೋಧ ಪಕ್ಷಗಳ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.
(ಚಿತ್ರ: ಆರ್ಟ್ ಆಫ್ ಕಿಲ್ಲಿಂಗ್ ಬಗ್ಗೆ ತಮ್ಮ ಗುರು ಲಾಲು ಜತೆ ಶಹಾಬುದ್ದೀನ್ ಚರ್ಚಿಸುತ್ತಿದ್ದಾಗಿನ ಚಿತ್ರ)

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಆರ್ಟ್ ಆಫ್ ಕಿಲ್ಲಿಂಗ್ ಗುರು ಶಹಾಬುದ್ದೀನ್ ಅವರ ದೂರವಾಣಿ ಸಹಿತ ವಿಳಾಸ ನೀಡಿದರೆ, ನಮ್ಮ ಬೆಂಗಳೂರಿನ ಕಿಚ್ಚಾಲೊ, ಮಚ್ಚಾಲೊ ಗಳಿಗೆ ಅನುಕೂಲವಾದೀತೇನೋ!

    ಪ್ರತ್ಯುತ್ತರಅಳಿಸಿ
  2. ಶಹಾಬುದ್ದೀನ್ ದೂರವಾಣಿ ಸಂಖ್ಯೆ ಲಾಲು ಜೇಬಿನಲ್ಲೇ ಇರುತ್ತದೆ. ಅದರ ಸ್ಪೆಶಾಲಿಟಿ ಅಂದ್ರೆ, ನೀವು ಲಾಲುಗೆ ಮಾಡುವ ಕರೆ ಮೊದಲು ಹೋಗುವುದೇ ಶಹಾಬುದ್ದೀನ್ ಎಂಬ "ಕಸ್ಟಮರ್ ಕೇರ್"ಗೆ! ಅಲ್ಲಿಂದ ಹೆಚ್ಚಿನ ಮಾಹಿತಿ ದೊರೆಯುವ ಮೊದಲೇ ಮಚ್ಚು-ಕಿಚ್ಚುಗಳು ಲಗ್ಗೆ ಇಟ್ಟು ಮಾಹಿತಿ ಕೇಳಿದವರು ಪೆಚ್ಚಾಗಬೇಕಾಗುತ್ತದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D