ಬೊಗಳೆ ರಗಳೆ

header ads

ಸಿನಿ(ಕ) ನಾಯಕಿಯರ ವಿರುದ್ಧ ಕ್ಯಾಬರೆ ಡ್ಯಾನ್ಸರ್‌ಗಳ 'ಬಿಚ್ರೋಶ'


(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಏ.10- ಪೂರ್ತಿ ಬಿಚ್ಚೋಲೆ ಹೀರೋಯಿನ್‌ಗಳ ವಿರುದ್ಧ ಸಿಡಿದೆದ್ದಿರುವ 'ಅರ್ಧಂಬರ್ಧ ಬಿಚ್ಚೋಲೆ ಗೌರಮ್ಮ ಕ್ಯಾಬರೆ ಡ್ಯಾನ್ಸರ್‌ಗಳ ಸಂಘ'ವು, ಈಗಿನ ಸಿನಿಮಾ ಹೀರೋಯಿನ್‌ಗಳು ತಮ್ಮ ವೃತ್ತಿ ಬದುಕಿಗೇ ಕೊಳ್ಳಿ ಇಕ್ಕಿದ್ದಾರೆ ಎಂದು ತೀವ್ರ ಅಕ್ರೋಶ ವ್ಯಕ್ತಪಡಿಸಿದೆ.

ಈ ಮೊದಲು ಸಿನಿಮಾ ನಿರ್ಮಾಪಕರಿಗೆ ತಮ್ಮ ಚಿತ್ರದ ಹೀರೋಯಿನ್‌ಗಳ ಉಡುಗೆ ತೊಡುಗೆಗಳಿಗಾಗಿ ಭಾರಿ ವೆಚ್ಚ ಮಾಡಬೇಕಾಗಿತ್ತು. ನಿರ್ಮಾಪಕರ ಈ ಸಂಕಷ್ಟಭರಿತ ಅಳಲಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಗರತಿ ಗೌರಮ್ಮರಂತಿದ್ದ ಹೀರೋಯಿನ್‌ಗಳು, ತಾವು ಬಿಚ್ಚೋಲೆ ಹೀರೋಯಿನ್‌ಗಳಾಗುತ್ತೇವೆ ಎಂದು ಪಣ ತೊಟ್ಟಿದ್ದರಲ್ಲದೆ, ಇನ್ನು ಮುಂದೆ ಯಾವುದೇ ಚಲನ ಚಿತ್ರದಲ್ಲಿ ನಮ್ಮ ಉಡುಗೆಗೆ ನೀವು ಹಣ ಖರ್ಚು ಮಾಡಬೇಕಾದ ಪ್ರಮೇಯವೇ ಬರದಂತೆ ನೋಡಿಕೊಳ್ಳುತ್ತೇವೆ ಎಂದು ನಿರ್ಮಾಪಕರ ಸಂಘಕ್ಕೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದರಿಂದಾಗಿ ನಿರ್ಮಾಪಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಿನಿಮಾ ಮಧ್ಯೆ ಜನಾಕರ್ಷಣೆಗಾಗಿಯೇ ಮಾಡಲಾಗುತ್ತಿದ್ದ ಕ್ಯಾಬರೆ ಡ್ಯಾನ್ಸ್ ಗಳ ತುರುಕಿಸುವಿಕೆಯನ್ನೇ ಕೈಬಿಟ್ಟಿದ್ದಾರೆ. ಅಲ್ಲದೆ ಈಗಿನ ಸಿನಿಮಾ ನಟಿಯರ ತುಂಡು-ತುಣುಕು ಉಡುಗೆಯ ಧಾವಂತವನ್ನು ನೋಡಿದ ಬಳಿಕ ಹರ್ಷಚಿತ್ತರಾಗಿರುವ ನಿರ್ಮಾಪಕರು, "ಕ್ಯಾಬರೆ ಡ್ಯಾನ್ಸರ್‌ಗಳಿಗೆ ಇನ್ನು ಕ್ಯಾರೇ ಮಾಡಬೇಕಾಗಿಲ್ಲ" ಎಂದು ಒದರಿದ್ದಾರೆ ಎಂಬುದಾಗಿ ವರದಿಯಾಗಿದೆ.

ಈ ಕಾರಣಕ್ಕೆ ಈ ಬಿಚ್ಚೋಲೆ ಗೌರಮ್ಮ ಕ್ಯಾಬರೆ ನರ್ತಕಿಯರು ತಮ್ಮ ಜೀವಮಾನದಲ್ಲೇ ಮೊದಲ ಬಾರಿಗೆ ಎಂಬಂತೆ ಮೈತುಂಬಾ ಬಟ್ಟೆ ಧರಿಸಿಕೊಂಡು ವಿಧಾನಸೌಧದೆದುರು ಪ್ರತಿಭಟನೆ ನಡೆಸಲಿದ್ದಾರೆ.
ಈ ವರದಿಗೆ ಪ್ರತಿಕ್ರಿಯಿಸಿರುವ ಹೆರಾಯಿನ್‌ನಷ್ಟು ಮಾದಕವಾಗಿರುವ ಹೀರೋಯಿನ್‌ಗಳ ಸಂಘವು, ತಾವು ಕೂಡ, "ಹುಟ್ಟಿದಾಗ ಯಾವ ರೀತಿ ಉಡುಗೆ" ಎಂಬುದಿತ್ತೋ, ಅದೇ ಮಾದರಿಯಲ್ಲಿ, ವಿಧಾನ ಸೌಧದೆದುರು ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದೆ. ಈ ಮಧ್ಯೆ, ನಮ್ಮ ದೇಹವೇ ಒಂದು ಜಾರುಬಂಡಿ ಆಗಿರುವಾಗ ಮೈಮೇಲೆ ಸುತ್ತಿದ ಬಟ್ಟೆ ಕೆಳ ಜಾರಿದರೆ ನಾವೇನೂ ಮಾಡೋಕಾಗುತ್ತೆ ಎನ್ನುವುದು ಬಿಚ್ಚಮ್ಮ ನರ್ತಕಿಯರ ಸಂಘದ ಸಮರ್ಥನೆ. ಹುಟ್ಟುಡುಗೆ ಪ್ರತಿಭಟನಾ ಸಭೆ ಬಗ್ಗೆ ನಟೀ ಮಣಿಯರ ಸಂಘದ ಅಧ್ಯಕ್ಷೆ ಬಿಚ್ಚಶ್ರೀಯವರನ್ನು ಪ್ರಶ್ನಿಸಿದಾಗ, ತಾವು ಈ ರೀತಿ ಪ್ರತಿಭಟನೆ ಮಾಡಿದರೆ, ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಅಭಿಮಾನಿಗಳು ಅಲ್ಲಿ ಸೇರುತ್ತಾರೆ (ತಮ್ಮನ್ನು ನೋಡಲೆಂದು!), ಇದರಿಂದ ನಮ್ಮ ಜನಬಲ ಎಷ್ಟೆಂಬುದನ್ನು "ಬಟಾಬಯಲು" ಮಾಡಿದಂತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು