[ಬೊಗಳೂರು ಗರೀಬೋಂ ಕೋ ಹಠಾವೊ ಬ್ಯುರೋದಿಂದ]
ಬೊಗಳೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತ ಏಳು ದಶಕಗಳಿಂದಲೂ ಕೇಳಿಬರುತ್ತಿದ್ದ 'ಗರೀಬೀ ಹಠಾವೊ' ಎಂಬ ಘೋಷ ವಾಕ್ಯವು ಈ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಪ್ರತಿಧ್ವನಿಸುತ್ತಿದ್ದು, ಈ ಬಾರಿಯಂತೂ ಗರೀಬರನ್ನು ಹಠಾವ್ ಮಾಡುವ ಧಾವಂತದಲ್ಲಿ ಠಕಾ ಠಕ್, ಖಟಾ ಖಟ್ ಎಂಬೆರಡು ಪದಗುಚ್ಛಗಳೂ ಸೇರಿಕೊಂಡಿವೆ ಎಂಬುದನ್ನು ಬೊಗಳೆ ಬ್ಯುರೋ ವರದ್ದಿಗಾರರು ಕಂಡುಕೊಂಡಿದ್ದಾರೆ.
ಈ ಖಟಾ ಖಟ್, ಠಕಾ ಠಕ್ ಸದ್ದು ಎಲ್ಲಿಂದ ಬರುತ್ತಿರುವುದು ಮತ್ತು ಈ ಗರೀಬೋಂ ಕೋ ಹಠಾವೊ ಘೋಷಾ ವಾಕ್ಯ ಎಲ್ಲಿಂದ ಕೇಳಿಬರುತ್ತಲಿದೆ ಎಂದು ದುರ್ಬೀನು ಇಟ್ಟು ನೋಡಲಾಗಿ, ಇವೆಲ್ಲವೂ ಕಪ್ಪು ಘೋಷಾಗಳ ಧಾವಂತದಿಂದಾಗಿಯೇ ಬರುತ್ತಿದೆ ಮತ್ತು ಅದು ಕೂಡ ಉಚಿತಗಳ ನಾಡೇ ಆಗಿಬಿಟ್ಟಿರುವ ಕರ್ನಾಟಕದ ಅಂಚೆ ಕಚೇರಿಗಳಿಂದಲೇ ಬರುತ್ತಿದೆ ಎಂಬುದು ದುರ್ಬೀನು ಕಣ್ಣಿಗೆ ಸಿಕ್ಕ ವಿಚಾರ.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿಯೇ ಸ್ವಾತಂತ್ರ್ಯಾನಂತರದ ಎಲ್ಲ ಸರಕಾರಗಳು ಹಗಲು-ರಾತ್ರಿ ಶ್ರಮಿಸುತ್ತಿದ್ದವು. ಈ ಬಾರಿಯೂ ತಮಗೆ ಹೆಚ್ಚು ಹೆಚ್ಚು ಉಚಿತ ಖಚಿತ ಎಂಬುದೆಲ್ಲ ಮನದಟ್ಟಾದ ಹಿನ್ನೆಲೆಯಲ್ಲಿ ಬೆಳಗಾಗುವುದಕ್ಕೆ ಮೊದಲೇ ಎದ್ದು ಮೊತ್ತ ಮೊದಲು ಸರತಿ ಸಾಲಿನಲ್ಲಿ ನಿಲ್ಲುವುದಕ್ಕೆ ಕಾರಣವೇ, ತಮ್ಮನ್ನು ಇದುವರೆಗೆ ಮುತ್ತಜ್ಜನ ಕಾಲದಿಂದಲೂ ಆಳುತ್ತಿದ್ದ ಹಾರುಲ್ ಗಾಂಧೀಜಿಯವರ ಭರವಸೆ. ನೆಹರು, ಇಂದಿರಾ, ರಾಜೀವ್, ಸೋನಿಯಾ, ರಾಹುಲ್ - ಹೀಗೆ ಇಡೀ ಮನೆತನವೇ ಲಾಗಾಯ್ತಿನಿಂದಲೂ ಗರೀಬೀ ಹಠಾವೋ ಅಂತ ಹೇಳುತ್ತಾ ಬರುತ್ತಿದೆ ಮತ್ತು ಅದನ್ನು ತಮ್ಮದೇ ಪೇಟೆಂಟ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ದಾರಿಹೋಕರು ಬೊಗಳೆ ಸುದ್ದಿ ಬ್ಯುರೋದವರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಬಾರಿ ಉಚಿತ ಕೊಡ್ತೀವಿ ಎಂದಾಕ್ಷಣ, ಎದ್ದೂ ಬಿದ್ದೂ ಆಧಾರ್ ಕಾರ್ಡ್ ಮಾಡಿಸಲು ಹೋಗಿದ್ದವರೆಲ್ಲ ಈ ಬಾರಿ, ಪುನಃ ಆಧಾರ್ ಮಾಡಿಸುವ ತ್ರಾಸವಿಲ್ಲದೆಯೇ ಅಂಚೆ ಕಚೇರಿಗೆ ಬೆಳ್ಳಂಬೆಳಗ್ಗೆ ಸಾಲುಗಟ್ಟಿ ನಿಂತಿದ್ದಾರೆ ಎಂಬುದನ್ನು ಬೊಗಳೆಯ ಪ್ರತಿಸ್ಫರ್ಧಿ ಪತ್ರಿಕೆಗಳೆಲ್ಲವೂ ಸಾಲು ಸಾಲಾಗಿ ಫೋಟೊಗಳ ಸಹಿತವಾಗಿ ಮತ್ತು ಸಾಕ್ಷ್ಯಾಧಾರ ಸಮೇತ ವರದ್ದಿ ಮಾಡಿದ್ದವು.
ಹೀಗಾಗಿ, ಈ ಸಾಲುಗಟ್ಟಿ ನಿಲ್ಲುವುದಕ್ಕೆ ಕಾರಣವೇನೆಂದು ಅಸತ್ಯಾನ್ವೇಷಣೆ ಮಾಡಿದಾಗ, ಎರಡು ವಿಡಿಯೊಗಳು ಅಂತರಜಾಲದಲ್ಲಿ ನೇತಾಡುತ್ತಿದ್ದುದನ್ನು ಬೊಗಳೆ ಬ್ಯುರೋ ಪತ್ತೆ ಮಾಡಿದೆ. ಜನರಿಗೆ ದೊಡ್ಡ ಸಮಸ್ಯೆಯಾಗಿದ್ದೆಂದರೆ, ನಮ್ಮ ಖಾತೆಗೆ ಹಣ ಹೇಗೆ ಬರುತ್ತದೆ? ಖಟಾ ಖಟ್ ಆಗಿಯೋ ಅಥವಾ ಠಕಾ ಠಕ್ ಅಂತ ಸದ್ದು ಮಾಡಿಕೊಂಡು ಬರುತ್ತದೆಯೋ ಎಂಬುದು. ಇದು ಮಿಲಿಯನ್ ಡಾಲರ್ ಪ್ರಶ್ನೆ ಅಥವಾ ಮಿಲಿಯನ್ ರೂಪಾಯಿ ಪ್ರಶ್ನೆ ಎಂದು ಹೇಳಲಾಗುತ್ತಿದೆ.
ರಾಜಸ್ಥಾನದಲ್ಲಿ ಖಟಾ ಖಟ್
ಹಿಮಾಚಲದಲ್ಲಿ ಠಕಾ ಠಕ್
ಆದರೆ, ಹಾರುಲ್ ಗಾಂಧೀಜಿಯವರು ಹೇಳಿದ್ದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ವರ್ಷಕ್ಕೆ ಒಂದು ಲಕ್ಷ, ತಿಂಗಳಿಗೆ ₹8500 ಎಲ್ಲ ಗರೀಬ್ ಮಹಿಳೆಯರಿಗೆ ನೀಡಲಾಗುತ್ತದೆ ಅಂತ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವುದಿಲ್ಲ ಎಂಬ ಗ್ಯಾರಂಟಿಯಿಂದಾಗಿಯೇ ಗಾಂಧೀಜಿಯವರು ಈ ಘೋಷಣೆ ಮಾಡಿದ್ದಾರೆ ಎಂಬುದನ್ನು ವಿರೋಧಪಕ್ಷಗಳು ಹೇಳುತ್ತಿವೆ. ಅದು ಹೇಗೆ ಎಂದು ಅವರನ್ನೇ ಅಸತ್ಯಾನ್ವೇಷಿಯು ಸಂದರ್ಶನ ಮಾಡಿದಾಗ, 'ಹ್ಹೆ ಹ್ಹೆ, ಕಾಂಗ್ರೆಸ್ ಸರ್ಕಾರ ರಚಿಸುವುದು ಹೇಗೆ ಸಾಧ್ಯ? ಅವರೆಲ್ಲರೂ ಈಗ ಇಂಡಿ ಎಂಬ ಒಕ್ಕೂಟ ರಚಿಸಿಕೊಂಡು ಚುನಾವಣೆಗೆ ಸ್ಫರ್ಧಿಸುತ್ತಿದ್ದಾರಲ್ಲ! ಕಾಂಗ್ರೆಸ್ ಬಹುಮತಕ್ಕೆ ಅಗತ್ಯವಿರುವ 272 ಸ್ಥಾನಗಳಲ್ಲಿ ಸ್ಫರ್ಧಿಸಲೇ ಇಲ್ಲ. ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಬರುವುದು ಸಾಧ್ಯವೇ ಇಲ್ಲ, ಬಂದರೂ ಎನ್‌ಡಿ ಅಥವಾ ಇಂಡಿ ಒಕ್ಕೂಟದ ಸರ್ಕಾರ' ಎಂಬ ಒಳಗುಟ್ಟಿನ ಒಳಏಟನ್ನು ಮೂಲಗಳು ವಿವರಿಸಿದವು.
ಬೊಗಳೆಯಲ್ಲಿ ಈ ಸುದ್ದಿಯೇಕಿಲ್ಲ ಎಂದು ಓದುಗರು ಪ್ರಶ್ನಿಸಿದ್ದರಿಂದಾಗಿ, ಈ ವರದ್ದಿಗಳಿಗೆಲ್ಲ ಕಾರಣ ಏನು ಎಂಬುದನ್ನು ಸ್ವತಃ ಏಕಸದಸ್ಯ ಅಸತ್ಯಾನ್ವೇಷಿ ಗುಂಪಿನ ಎಲ್ಲರೂ ಪತ್ತೆ ಮಾಡಿ, ವಿಶೇಷ ಸುದ್ದಿಯನ್ನು ಸ್ಫೋಟಿಸಿದ್ದಾರೆ ಎಂದು ತಿಳಿಸಲು ಬೊಗಳೆ ಬ್ಯುರೋದ ಆಡಳಿತ ಮಂಡಳಿಯು ಸಂತೋಷದಿಂದ ವಿಷಾದಿಸುತ್ತಿದೆ.
1 ಕಾಮೆಂಟ್‌ಗಳು
ಖೋಟಾ ಖಟ್! ಖೋಟಾಖಟ್!! ಖೋಟಾಖಟ್!!!
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D