ಬೊಗಳೆ ರಗಳೆ

header ads

WhatsApp Message Yourself ವೈಶಿಷ್ಟ್ಯದಿಂದ ಯುವಕ ಯುವತಿಯರ ದುಃಖದ ಕಟ್ಟೆ ಧ್ವಂಸ

[ತಂತ್ರ ಯಂತ್ರ ಮಂತ್ರ ಬ್ಯುರೋದಿಂದ]

ಬೊಗಳೂರು: ವಾಟ್ಸ್ಆ್ಯಪ್ ಸಂದೇಶ ವಾಹಕ ಆ್ಯಪ್ ಈಗ ಬಹುತೇಕ ಮೊಬೈಲಲ್ಲೇ ಸ್ಫೋಟಗೊಳ್ಳುವಷ್ಟರ ಮಟ್ಟಿಗೆ ಬಳಕೆದಾರರನ್ನು ಪಡೆದಿದೆ. ವಾಟ್ಸ್ಆ್ಯಪ್ ತೆರೆದ ತಕ್ಷಣವೇ ಕ್ರ್ಯಾಶ್ ಆಗುತ್ತಿರುವ ಹಲವಾರು ಪ್ರಕರಣಗಳು ಅಲ್ಲಲ್ಲಿ ವರದ್ದಿಯಾಗಿವೆ.

ಈ ವರದ್ದಿಗಳ ಬೆನ್ನು ಹತ್ತಿದ ಏಕಸದಸ್ಯ ಅಸತ್ಯಾನ್ವೇಷಿ ಬ್ಯುರೋದ ಸಮಸ್ತ ಸಿಬ್ಬಂದಿ, ದೊಡ್ಡ ಬೆಟ್ಟ ಗುಡ್ಡಗಳನ್ನೇ ಹೊತ್ತು ತಂದಿದ್ದಾರೆ. ಈ ಬೆಟ್ಟ ಗುಡ್ಡಗಳು, ನೋವಿನದ್ದೋ, ಸಮಸ್ಯೆಗಳದ್ದೋ ಎಂಬುದು ತಿಳಿಯದೆ ಏಕಸದಸ್ಯ ಬ್ಯುರೋದ ಸೊಂಪಾದಕರು ತತ್ತರಿಸಿಹೋಗಿರುವುದಾಗಿ ಪ್ರತಿಸ್ಫರ್ಧಿ ಪತ್ರಿಕೆಗಳು ವರದ್ದಿ ಮಾಡಿವೆ.

Follow ಬೊಗಳೆ-ರಗಳೆ On Facebook and Twitterಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

ವಿಷಯ ಇಷ್ಟೇ. ವಾಟ್ಸ್ಆ್ಯಪ್ ಇತ್ತೀಚೆಗೆ ತನಗೆ ತಾನೇ ಸಂದೇಶ ಕಳುಹಿಸುವ ವ್ಯವಸ್ಥೆಯೊಂದನ್ನು ಪರಿಚಯಿಸಿದೆ. ಅದುವೇ ಮೆಸೇಜ್ ಯುವರ್‌ಸೆಲ್ಫ್ (Message Yourself).

ಇದರ ಪರಿಣಾಮವಾಗಿಯೇ ಲೋಕದ ಸಮಸ್ತ ದುಃಖಗಳು, ನೋವುಗಳು ಬೆಟ್ಟ ಗುಡ್ಡಗಳಾಗಿಯೂ ಸಮಸ್ಯೆಗಳ ರಾಶಿಯಾಗಿಯೂ ಪರಿವರ್ತನೆಗೊಂಡಿದ್ದು, ಕರಗಲಾರಂಭಿಸಿ ಪ್ರವಾಹ ಭೀತಿಯೇ ಎದುರಾಗಿದೆ ಎಂಬುದನ್ನು ಅಸತ್ಯಾನ್ವೇಷಿ ಬ್ಯುರೋ ಕಂಡುಕೊಂಡಿದೆ. ಮತ್ತು ಇದರಿಂದಾಗಿ ವಾಟ್ಸ್ಆ್ಯಪ್ ಬಳಕೆಯೂ ಸಿಕ್ಕಾಪಟ್ಟೆ ಏರಿಕೆ ಕಂಡಿದ್ದು, ಸಂದೇಶಗಳು ಕೆಲವೊಮ್ಮೆ ಪೋಸ್ಟ್ ಆಗಲು ತಡವಾಗುತ್ತಿರುವುದು, ಆ್ಯಪ್ ಕ್ರ್ಯಾಶ್ ಆಗುವುದು ಮುಂತಾದ ಹಲವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ಕೆಲವೆಡೆ, ರಾತ್ರಿ ಮೀರಿದರೂ ಸುಖದ ನಶೆಯಲ್ಲಿ ಓಲಾಡುತ್ತಾ, ತೇಲಾಡುತ್ತಾ ಇರುವ ಯುವ ಜನರು, ತಮಗೆ ತಾವೇ ಸಂದೇಶ ಕಳುಹಿಸುತ್ತಾ, ತಮ್ಮ ದುಃಖ ಹೇಳಿಕೊಳ್ಳುತ್ತಿದ್ದರು. ಮಾತ್ರವಲ್ಲ, ತಮಗೆ ತಾವೇ ಸಂದೇಶ ಕಳುಹಿಸಿ ತಮ್ಮನ್ನು ಸಂತೈಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದರು.

ಏನ್ ಮಚ್ಚಾ, ಹೇಗಿದ್ದೀಯೋ? ಅಂತ ಕೇಳಿದ ತಕ್ಷಣ, ನಾನು ಚೆನ್ನಾಗಿದ್ದೀನೋ, ನೀನು ಹೇಗಿದ್ದೀ? ಅಂತ ಮತ್ತೊಂದು ಸಂದೇಶ! ಇದನ್ನು ಓದಿದಾಗ ಅವರ ದುಃಖದ ಕಟ್ಟೆ ಒಡೆಯುತ್ತಿತ್ತು. ನನ್ನನ್ನೂ ಕೇಳುವವರು ಈ ಲೋಕದಲ್ಲಿದ್ದಾರಲ್ಲ ಎಂಬುದೇ ಸಮಾಧಾನ ತಂದಾಗ, ದುಃಖವೆಲ್ಲವನ್ನೂ ತೋಡಿಕೊಳ್ಳಲಾರಂಭಿಸಿದ್ದಾರೆ ಈ ಯುವಜನತೆ.

ಅವಳು ಮಾತಾಡ್ತಿಲ್ಲ ಕಣೋ. ನಾನೇನೂ ಮಾಡಿಲ್ಲ ಅವಳಿಗೆ. ಆದ್ರೆ ಅವ್ಳು ಆ ದುಡ್ಡಿರೋವ್ನು ಕೊಡಿಸಿದ ಒಂದು ಪಿಜ್ಜಾ ಆಸೆಗಾಗಿ ಅವ್ನ ಜೊತೆ ಒಂಟೋದ್ಳು ಎಂದು ಈ ಕಡೆಯಿಂದ ದುಃಖ ತೋಡಿಕೊಳ್ಳುವಿಕೆ. ಅದಕ್ಕೆ ಸಮಾಧಾನ ಹೇಗೆ ಮಾಡೋದು? ಮತ್ತೊಂದು ಮೇಘ ಸಂದೇಶ ಟೈಪಿಂಗು.... 

"ಹೋಗ್ಲಿ ಬಿಡೋ, ಎಷ್ಟೂಂತ ಕೊರಗ್ತೀಯಾ? ನೀನು ಅವಳೆದುರೇ ಇನ್ನೊಬ್ಬಳಿಗೆ ಐಸ್ ಕ್ರೀಂ ಕೊಡ್ಸು. ಅದೂ ಈ ನವೆಂಬರ್ ಚಳಿಯಲ್ಲಿ ಅವಳದನ್ನು ನೋಡಿ ಗಡ ಗಡ ನಡುಗಬೇಕು. ಅದಕ್ಕಾಗಿ ಗಡ್‌ಬಡ್ಡನ್ನೇ ಕೊಡ್ಸು. ದುಡ್ಡು ನಾನ್ ಕೊಡ್ತೀನಿ" ಅಂತ.

ತನ್ನದೇ ಸಂದೇಶ ಬಂದಾಗ ಇವನಿಗೆ ಖುಷಿ. ಇವನ ದುಃಖವೆಲ್ಲ ಕರಗಿ ಹೋಯಿತು.

ಹೀಗೆ, ತಮ್ಮನ್ನು ಸ್ವಲ್ಪವಾದರೂ ಗಮನಿಸುವವರು, ಕಾಳಜಿ ತೋರಿಸುವವರು ಇದ್ದಾರೆ ಎಂಬುದು ಹಲವರ ಖುಷಿಗೆ ಕಾರಣ. ಅದಕ್ಕಿಂತ ಬಲುದೊಡ್ಡ ಖುಷಿ ಎಂದರೆ, ತಾವು ಕಳುಹಿಸಿದ ಸಂದೇಶವನ್ನು ಮತ್ತೊಬ್ಬರು ಓದುತ್ತಾರಲ್ಲಾ ಎಂಬುದು.

ಅದನ್ನೂ ಬೊಗಳೆ ರಗಳೆ ಬ್ಯುರೋ ಪತ್ತೆ ಮಾಡಿತು. ಇದನ್ನು ಪತ್ತೆ ಮಾಡಲು ತೆಗೆದುಕೊಂಡ ಶ್ರಮ ಮಾತ್ರ ಅಷ್ಟಿಷ್ಟಲ್ಲ. ಅದೇನೆಂದರೆ, ತಮಗೆ ತಾವೇ ಕಳುಹಿಸಿದ ಸಂದೇಶವನ್ನು ಬೇರೊಬ್ಬರು ಓದಿದ್ದಾರೆ ಎಂಬುದನ್ನು ಖಚಿತಪಡಿಸುವ ಬ್ಲೂ ಟಿಕ್ ಗುರುತುಗಳು! ಅದೂ ಒಂದಲ್ಲ, ಎರಡು!

ಆದರೆ, ಈ ತಮಗೆ ತಾವೇ ಸಂದೇಶ ಕಳುಹಿಸುವ ಕಾರ್ಯಕ್ರಮ ಮಾತ್ರ ರಾತ್ರಿಪೂರ್ತಿ ಮುಸುಕೆಳೆದುಕೊಂಡ ಬಳಿಕವೂ ಮುಂದುವರಿಯುತ್ತಿರುವುದು ಹೆತ್ತವರ ಗಮನಕ್ಕೆ ಬಂದಿದ್ದು, ಕೆಲವೆಡೆ ಇಂಟರ್ನೆಟ್ ಬಂದ್, ಮೊಬೈಲ್ ಕಟ್ ಮುಂತಾದ ಸದ್ದುಗಳು ಕೇಳಿಬರತೊಡಗಿರುವುದಾಗಿ ಮೂಲಗಳು ವರದ್ದಿ ತಂದು ಸುರಿದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ನಿಮ್ಮ ವರದ್ದಿಯನ್ನು ಓದಿ ನನ್ನ ದುಃಖದ ಕಟ್ಟೆ ಒಡೆಯಿತು. ತಕ್ಷಣ ನಾನೂ ಒಂದು self message ನೂಕಿದೆ. ನನ್ನ ಕಪಾಳಕ್ಕೆ ನಾನೇ ಹೊಡೆದುಕೊಂಡಂತಹ ಅನುಭವವಾಯಿತು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D