ಬೊಗಳೆ ರಗಳೆ

header ads

ಗೃಹಸಚಿವರ ಹೇಳಿಕೆಯಿಂದ ದಿಢೀರ್ ಅಪರಾಧ ಕುಸಿತ! ಕಾರಣ ಗೊತ್ತೇ?


{ಬೊಗಳೂರು ಅಪರಾಧ ಬ್ಯುರೋದಿಂದ]

ಬೊಗಳೂರು: ಬೊಗಳೂರಿನಾದ್ಯಂತ ಇತ್ತೀಚೆಗೆ ಅಪರಾಧ ಪ್ರಕರಣಗಳು ದಿಢೀರನೇ ಕುಸಿತ ಕಂಡಿದೆ.

ಯಾರು ಕೂಡ ಕಳ್ಳರು, ಸುಳ್ಳರು, ಅತ್ಯಾಚಾರಿಗಳನ್ನು ಪೊಲೀಸರು ಬಂಧಿಸುತ್ತಲೂ ಇಲ್ಲ. ಯಾವುದೇ ಅಪರಾಧ ಕೇಸುಗಳನ್ನು ದಾಖಲಿಸುತ್ತಲೂ ಇಲ್ಲ. ಹೀಗಾಗಿ, ನರೇಂದ್ರ ಮೋದಿ ಆಡಳಿತದಲ್ಲಿ ದೇಶವು ರಾಮರಾಜ್ಯದತ್ತ ಸಾಗಿದೆ ಎಂದು ಕೆಲವು ಮಂದಿ ಹೇಳಿಕೊಂಡು ತಿರುಗಾಡುತ್ತಿದ್ದರು.

ಇದರ ಹಿಂದಿನ ಸತ್ಯಾಂಶವೇನೆಂದು ಹುಡುಕಿ ಹೊರಟ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳ ತಂಡಕ್ಕೆ ಅದ್ಭುತವಾದ ವಿಷಯವೊಂದು ಬಾರ್ಕಿಂಗ್ ಮಾಡುವುದಕ್ಕೆ ಎಲ್ಲ ರೀತಿಯ ಅರ್ಹತೆಯಿದೆ ಎಂದು ಮನದಟ್ಟಾಯಿತು.

ಇದಕ್ಕಾಗಿ ಅನ್ವೇಷಿ ನೇತೃತ್ವದ ತಂಡವು ಅನ್ವೇಷಣೆಗೆ ತೊಡಗಿತು. ಬೊಗಳೂರಿನಲ್ಲಿ ಅತ್ಯಂತ "ಹುಲುಸಾಗಿ" ಕೆಲಸ ಕಾರ್ಯಗಳು ನಡೆಯುತ್ತಿದ್ದ ಹುಲುಸೂರು ಠಾಣೆ ಹಾಗೂ ಕುಪ್ಪನ್ ಪಾರ್ಕ್ ಠಾಣೆಗಳಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿತು.

ಜನರು ಠಾಣೆಗೆ ಬರುತ್ತಿದ್ದರು. ಮನೆಯಲ್ಲಿ ದರೋಡೆಯಾಗಿದೆ, ಅತ್ಯಾಚಾರವಾಗಿದೆ ಎಂದು ಸಾಕಷ್ಟು ಮಂದಿ ದೂರು ನೀಡಲು ಬರುತ್ತಿದ್ದರು. ಮಾಸ್ಕ್ ಕದ್ದಿದ್ದಾರೆ ಎಂದು ದೂರು ನೀಡಲು ಬಂದಿದ್ದವರೂ ಅಲ್ಲಿದ್ದರು. ಮತ್ತೆ ಕೆಲವರು, ತಮ್ಮ ಹೃದಯವನ್ನು ಯಾರೋ ಕದ್ದಿದ್ದಾರೆ ಎಂದು ಕೂಡ ದೂರು ನೀಡಲು ತಹತಹಿಸುತ್ತಿದ್ದರು.

Follow ಬೊಗಳೆ-ರಗಳೆ On Facebook and Twitter

ಆದರೆ, ಅಲ್ಲಿನ ಪೊಲೀಸರು ತಲೆಗೆ ಏನನ್ನೂ ಹಚ್ಚಿಕೊಳ್ಳದೆ ಸಾರಾಸಗಟಾಗಿ ವಿರಾಮದಲ್ಲಿದ್ದರು. ಅವರು ಯಾರ ದೂರನ್ನೂ ದಾಖಲಿಸಿಕೊಳ್ಳುತ್ತಿರಲಿಲ್ಲ. ದೂರು ದಾಖಲಾದರಲ್ಲವೇ ಅಪರಾಧ ಪ್ರಕರಣ ನಡೆದಿದೆ ಎಂಬುದು ಜಗಜ್ಜಾಹೀರಾಗುವುದು? ದೂರನ್ನೇ ಬರೆದುಕೊಳ್ಳದಿದ್ದರಾಯಿತು ಎಂಬುದು ಅವರ ವರ್ತನೆಯಿಂದ ತಿಳಿದುಬಂದ ಅಂಶ.

ಈ ಬಗ್ಗೆ, ಆ ರಕ್ಷಕ ನಿ ರೀಕ್ಷಕರೊಬ್ಬರನ್ನು ಕಣ್ಸನ್ನೆ, ಕೈಸನ್ನೆ ಮಾಡಿ ಪಕ್ಕಕ್ಕೆ ಕರೆದು ವಿಚಾರಿಸಲಾಯಿತು. ಆತನಂತೂ ಉರಿದು ಬಿದ್ದು, ನಮ್ಮ ಪ್ರತಿಸ್ಫರ್ಧಿ ಪತ್ರಿಕೆಯ ತುಣುಕೊಂದನ್ನು ನೀಡಿ, ಮತ್ತೆ ನಿದ್ದೆ ಮಾಡಲು ತೆರಳಿದ.

ಅದನ್ನು ನೋಡಿದಾಗ ವಿಷಯ ಮನದಟ್ಟಾಯಿತು. ನಮ್ಮ ಏಕೈಕ ಓದುಗ ಸಂಖ್ಯೆಯಿರುವ ಮಾಧ್ಯಮಕ್ಕೆ ಕೋಟ್ಯಂತರ ಓದುಗರಿರುವ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿರುವುದೇ ಈ ಎಲ್ಲ ಅವಾಂತರಕ್ಕೆ ಕಾರಣವಂತೆ. ಅಪರಾಧ ಪ್ರಕರಣದಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಇಲ್ಲಿ ಹೇಳಿದ್ದರು.

ಅಪರಾಧ ಕೃತ್ಯಗಳನ್ನು ತಾವೂ ಕೈಗೆತ್ತಿಕೊಂಡು, ಅದರ ಪ್ರಕ್ರಿಯೆಯಲ್ಲಿ ಭಾಗಿಯಾದರೆ ನಮ್ಮ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ಆತಂಕ ಮತ್ತು ಸಂತೋಷವೇ ಎಲ್ಲದಕ್ಕೂ ಕಾರಣ ಎಂದು ಅನ್ವೇಷಿ ಬ್ಯುರೋ ಪತ್ತೆ ಮಾಡಿದೆ. ಹೀಗಾಗಿ ಕೇಸು ಮುಟ್ಟದೇ ಇದ್ದರಾಯಿತಲ್ಲ, ಅದರಲ್ಲಿ ಭಾಗಿಯಾದ ಆರೋಪ ತಮಗೂ ತಗುಲುವುದಿಲ್ಲ. ಅಪರಾಧವೂ ಇಲ್ಲದಂತಾಗುತ್ತದೆ. ರಾಮ ರಾಜ್ಯ!

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಹುಲಸೂರು ಠಾಣೆಯ ಪೋಲೀಸರು ತಮ್ಮ ಸರ್ವೀಸಿನಲ್ಲಿ ಒಮ್ಮೆಯೂ ಸುಳ್ಳು ಹೇಳಿಲ್ಲ ಎನ್ನುವ ಅಪ್ರಿಯ ಸತ್ಯವನ್ನು ನಾನು ನಂಬುವುದಿಲ್ಲ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D