
[ನಿರುದ್ಯೋಗ ಬ್ಯುರೋದಿಂದ]
ಬೊಗಳೂರು: ಕೋವಿಡ್ನಿಂದಾಗಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ, ನಿರುದ್ಯೋಗ ಹೆಚ್ಚಾಗಿದೆ ಎಂಬ ಆರೋಪಗಳು ಸುಳ್ಳು ಎಂಬುದನ್ನು ಬೊಗಳೂರಿನ ಏಕಸದಸ್ಯ ಬ್ಯುರೋದ ಅಸತ್ಯಾನ್ವೇಷಿ ನೇತೃತ್ವದ ತಂಡವು ಪತ್ತೆ ಹಚ್ಚಿದೆ.ಈಗಾಗಲೇ ಆಡಳಿತ ಪಕ್ಷವು ಬೀಗ ಹಾಕಿ ಬೀಗ ತೆಗೆಯುವ ಕಾರ್ಯಕ್ರಮ ನಡೆಸುತ್ತಲೇ, ಕೊರೊನಾ ವೈರಸ್ ಹಾವಳಿ ನಿಯಂತ್ರಿಸುವ ಪ್ರಯೋಗಗಳನ್ನು ಕೈಗೊಂಡ ಬಳಿಕ, ಜನರಿಗೆ ಬುದ್ಧಿ ಬರುವುದಿಲ್ಲ ಎಂಬುದನ್ನು ಅರಿತು, ಲಾಕ್ಡೌನ್ ಇಲ್ಲ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಎಂದು ಘೋಷಿಸಿಬಿಟ್ಟಿದೆ. ಆದರೆ, ಲಾಕ್ ಹಾಕಿದರೂ, ತೆಗೆದರೂ ಸದಾ ಟೀಕಿಸುತ್ತಲೇ ಇರುವ ವಿರೋಧ ಪಕ್ಷಗಳು ಕೆಲಸವಿಲ್ಲದವರೆಲ್ಲರಿಗೂ ಕೆಲಸ ನೀಡಲಾರಂಭಿಸಿದೆ ಎಂಬುದು ಬೊಗಳೂರು ನಿರುದ್ಯೋಗ ಬ್ಯುರೋದ ತನಿಖೆಯಿಂದ ಖಚಿತವಾಗಿದೆ.
ಈ ಕುರಿತು ಸಂಚೋದನೆ ನಡೆಸಿರುವ ವರದ್ದಿಗಾರರು, ನಾಡಿನ ಹಾದಿ ಬೀದಿಗಳಲ್ಲಿ ಕೆಲವರು ಕ್ಯಾಲ್ಕುಲೇಟರ್ ಕೈಯಲ್ಲಿ ಹಿಡಿದು, ವಾಟ್ಸಾಪ್ ನೋಡುತ್ತಾ, ಲೆಕ್ಕ ಕೊಡಿ ಲೆಕ್ಕ ಕೊಡಿ ಎಂದು ಕೇಳಲಾರಂಭಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಇವರೆಲ್ಲರೂ ಕೆಲಸವಿಲ್ಲದವರಾಗಿದ್ದು, ಈಗ ಉದ್ಯೋಗ ಸಿಕ್ಕಿದೆ. ಯಾರಿಗೆಲ್ಲಾ ಉದ್ಯೋಗ ಸಿಕ್ತು ಎಂಬುದರ ಲೆಕ್ಕ ಹಾಕುತ್ತಾ ಹೋದರೆ, ಮತ್ತಷ್ಟು ಮಂದಿಗೆ ಅದೇ ಉದ್ಯೋಗವಾಗುವ ನಿರೀಕ್ಷೆಯಿದೆ. ಇದೊಂದು ಚೈನ್ ರಿಯಾಕ್ಷನ್ ಉದ್ಯೋಗ ವ್ಯವಸ್ಥೆ ಎಂದು ಬೊಗಳೆ ಬ್ಯುರೋ ಕಂಡುಕೊಂಡಿದೆ. ಇದರಿಂದಾಗಿ ಬೊಗಳೂರು ದೇಶದಲ್ಲಿ ಶೇ.80ರಷ್ಟು ನಿರುದ್ಯೋಗ ನಿವಾರಣೆಯಾಗಿದೆ ಎಂದು ಬೊಗಳೆ ಆನ್ಲೈನ್ ಆವೃತ್ತಿಯು ವರದ್ದಿ ಮಾಡಿದೆ.
ಹಾಗಿದ್ದರೆ, ಉಳಿದ ಶೇ.20 ಮಂದಿಯದು ಗತಿ ಏನು ಎಂಬುದರ ಕುರಿತಾಗಿಯೂ ಸಂಚೋದನೆ ನಡೆಸಲಾಗಿದೆ. ವಿರೋಧಿ ಪಕ್ಷದವರು ಲೆಕ್ಕ ಕೊಡಿ ಚಳವಳಿ ಮೂಲಕ ಉದ್ಯೋಗ ನೇಮಕಾತಿಗೆ ಒತ್ತು ನೀಡಿದ್ದರೆ, ಆಡಳಿತ ಪಕ್ಷದವರು ಲೆಕ್ಕ ತಗೊಳಿ ಎಂಬ ಚಳುವಳಿಯನ್ನು ಹಮ್ಮಿಕೊಂಡು, ನಿರುದ್ಯೋಗ ನಿವಾರಣೆಗೆ ಪಣ ತೊಟ್ಟಿರುವುದು ಬಟಾ ಬಯಲಾಗಿದೆ. ಇದ್ದ ಬದ್ದ ಫೈಲುಗಳನ್ನೆಲ್ಲಾ ಹುಡುಕಿ, ಜಾಲಾಡಿ, ಲೆಕ್ಕ ತಗೊಳಿ ಎನ್ನುತ್ತಾ, ಪಾಯಿಂಟ್ ಟು ಪಾಯಿಂಟ್ ಲೆಕ್ಕ ಕೊಡುವ ಕಾರ್ಯಕ್ಕೆ ಭಾರೀ ಸಂಖ್ಯೆಯಲ್ಲಿ ನೇಮಕಾತಿ ನಡೆದಿದ್ದು, ಸಾಕಷ್ಟು ಮಂದಿ ಉದ್ಯೋಗಿಗಳಾಗಿ ಸಂಭ್ರಮಿಸಿದ್ದಾರೆ.
ಎರಡೂ ಪಕ್ಷಗಳ ಈ ನೇಮಕಾತಿಯಿಂದಾಗಿ ವಲಸೆ ಕಾರ್ಮಿಕರು ಕೂಡ, ತಮಗೆ ಗೊತ್ತಿಲ್ಲದ ಲೆಕ್ಕವನ್ನೂ ಕೂಡಿಸಿ, ಕಳೆಯಲು ಪಣ ತೊಟ್ಟು, ತೊಟ್ಟು... ಕೊನೆಗೆ ಉದ್ಯೋಗ ಪಡೆದುಕೊಂಡು ಕೊರೊನಾ ಸಂಕಷ್ಟ ಕಾಲದಲ್ಲಿ ಅಚ್ಚರಿ ಮೂಡಿಸಿದ್ದಾರೆ ಎಂದು ಪತ್ತೆಯಾಗಿದೆ.
4 ಕಾಮೆಂಟ್ಗಳು
ನಿಜ ಹೇಳಬೇಕೆಂದರೆ ಈಗ ವಿರೋಧ ಪಕ್ಷಗಳಲ್ಲಿ ಇರುವವರೆಲ್ಲರೂ ಆರ್ಥಿಕವಾಗಿ ಲಾಭದಾಯಕ ಸ್ಥಾನಗಳನ್ನು ಕಳೆದುಕೊಂಡು, ನಿರುದ್ಯೋಗಿಗಳಾಗಿದ್ದಾರೆ.
ಪ್ರತ್ಯುತ್ತರಅಳಿಸಿಅವರು ನಿರುದ್ಯೋಗಿಗಳಾಗಿರೋದ್ರಿಂದಲೇ ಈ ರೀತಿ ಉದ್ಯೋಗ ಜೊತೆಗೆ ಉದ್ವೇಗ ಸೃಷ್ಟಿ ಮಾಡಿದ್ದಾರೇಂತ ತಿಳಿದುಬಂದಿದೆ.
ಅಳಿಸಿಅದೇನೇ ಇರಲಿ, ಕರೋನಾ ಕಾಲದಲ್ಲಿ ಲೆಕ್ಕವಿಲ್ಲದಷ್ಟು ಸಮಯ ಸಿಕ್ಕಿರುವುದರಿಂದ ಅಸತ್ಯ ಅನ್ವೇಶೀ ಏಕಸದಸ್ಯ ಬ್ಯೂರೋದವರು ಲೆಕ್ಕವಿಲ್ಲದಷ್ಟು ಲೇಖನಗಳನ್ನು ಬರೆದು ಬರೆದು ಒಗೆಯುತ್ತಿದ್ದಾರೆಂದು ನಮಗೂ ಎರಡ್ಮೂರು ಲೆಕ್ಕ ಸಿಕ್ಕಿದೆ!!! 😅😅
ಪ್ರತ್ಯುತ್ತರಅಳಿಸಿಎರಡ್ಮೂರ್ಲಿ ಲೆಕ್ಕದಲ್ಲಿ ಲೆಕ್ಕ ತಪ್ಪಿ, ಹಬ್ಬಕ್ಕೆ ಎಷ್ಟು ಚುಕ್ಕಿ ಇಟ್ಟು ಚಿತ್ತಾರ ಬರೆಯಬೇಕೆಂಬುದೇ ತಿಳಿಯದೇ ಕಂಗಾಲಾಗಿದ್ದಾರೇಂತ ಮೂಲಗಳು ವರದ್ದಿ ಮಾಡಿವೆ.
ಅಳಿಸಿಏನಾದ್ರೂ ಹೇಳ್ರಪಾ :-D