ಬೊಗಳೆ ರಗಳೆ

header ads

ಕರ್‌ನಾಟಕಕ್ಕೆ ಮರಳಿದ ಗತವೈಭವ: ಎಲ್ಲೆಲ್ಲೂ ಯೆಂಡ್ಕುಡ್ಕರ ಸಡಗರ

[ಬೊಗಳೂರು ಹೆಂಡ್ಕುಡ್ಕ ಬ್ಯುರೋದಿಂದ]
ಬೊಗಳೂರು: ಕರುನಾಟಕ ಜನತೆ ಮತ್ತೆ ಗತ ವೈಭವಕ್ಕೆ ಮರಳಿದ್ದಾರೆ. ಅದೇನೋ ಕೊರೊನಾ, ಲಾಕ್‌ಡೌನ್ ಅಂತೆಲ್ಲ ಕನವರಿಸುತ್ತಿದ್ದ ಮಂದಿಯೀಗ ದಿಢೀರನೇ ಗುಣಮುಖರಾಗಿ, ಆನಂದ ಭಾಷ್ಪ ಸುರಿಸುತ್ತಿದ್ದಾರೆ, ಕೇಕೆ ಹಾಕುತ್ತಿದ್ದಾರೆ, ಚಪ್ಪಾಳೆ ತಟ್ಟುತ್ತಿದ್ದಾರೆ, ಪಟಾಕಿ ಸಿಡಿಸುತ್ತಿದ್ದಾರೆ, ಓಲಾಡುತ್ತಿದ್ದಾರೆ, ಜೊತೆ ಜೊತೆಗೇ ತೇಲಾಡತೊಡಗಿದ್ದಾರೆ.

ಬೊಗಳೂರು ರಾಜ್ಯದ ಜನತೆ ಹಿಂದೆಂದಿಗೂ ಈ ಪರಿಯಾಗಿ ಸಂಭ್ರಮಿಸಿದ್ದಿಲ್ಲ. ಕೊರೊನಾ ವೈರಸ್ ಏನು, ಅದರಪ್ಪ ಬಂದರೂ ಎದುರಿಸ್ತೀವಿ ಎಂಬ ತಾಕತ್ ಬಂದಿದೆ ಎಂದು ಹೆಂಡದಂಗಡಿ ಓಪನ್ ಆಗಿದೆಯೋ ಅಂತ ಹೊರಗೆ ಕತ್ತು ಉದ್ದ ಮಾಡಿ ನೋಡಿ ನೋಡಿ ದೊಡ್ಡದಾಗಿಯೇ ಹೋಗಿತ್ತು. ಅದರ ಜತೆಗೆ ಈಗ ಕೆಂಪಡರಿದ ಕಣ್ಣಿನೊಂದಿಗೆ ಜನತೆ ಸಂ-ಭ್ರಮಿಸತೊಡಗಿದ್ದಾರೆ. ಮಹಿಳೆಯರಂತೂ ಸಮಾನತೆಗೆ ಯಾವುದೇ ರೀತಿಯ ಹೋರಾಟ ನಡೆಸದೆ, ತಾವೂ ಕಮ್ಮಿ ಇಲ್ಲ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ.

ರೇಷನ್‌ನಲ್ಲಿ ನಮಗೆ ಅಕ್ಕಿ, ಬೇಳೆ ಮುಂತಾದವನ್ನು ಕೊಡದಿದ್ದರೂ ಪರವಾಗಿಲ್ಲ, ಎಣ್ಣೆ ಕೊಡಿ ಎಂಬ ರಾಜ್ಯದ ಪ್ರಜೆಗಳ ದಯನೀಯ, ಹತಾಶ ಮನವಿಯನ್ನು ಕಂಡು ಧುತ್ತನೇ ಕುಳಿತೆದ್ದ ಸರ್ಕಾರವು, ಎಲ್ಲರಿಗೂ ಎಣ್ಣೆ ಪೂರೈಕೆಗೆ ವ್ಯವಸ್ಥೆ ಮಾಡಿದೆ. ಭಾನುವಾರ ಮಧ್ಯ ರಾತ್ರಿಯಿಂದಲೇ ಮದ್ಯದಂಗಡಿಗಳ ಎದುರು ಹಾಕಲಾಗಿದ್ದ ದೈಹಿಕ ಅಂತರ ಕಾಪಾಡಿಕೊಳ್ಳುವ ವೃತ್ತಗಳಲ್ಲಿ ತಮ್ಮ ತಮ್ಮ ಬಾಟಲಿಗಳನ್ನು ಇರಿಸಿ, ಅಂಗಡಿ ಬಾಗಿಲು ಯಾವಾಗ ತೆರೆಯುತ್ತದೆಯೋ, ಕಾಣದಾಗಿದ್ದ ಬಾಟಲಿಗಳನ್ನು ಎಂದು ಕಾಣುವೆವೋ ಎಂದೆಲ್ಲಾ ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕುಳಿತಿದ್ದ ಮಂದಿಗೆ, ಅಂಗಡಿ ಮಾಲೀಕರ ದರ್ಶನವಾದ ತಕ್ಷಣ ತಡೆದುಕೊಳ್ಳಲಾಗಿಲ್ಲ ಎಂದು ನಮ್ಮ ಹೆಂಡ ಬ್ಯುರೋ ವರದ್ದಿಗಾರರು ಒದರಿದ್ದಾರೆ.

ಕೊರೊನಾ ವೈರಸ್‌ನಿಂದ ಬರುವ ಕೋವಿಡ್-19 ರೋಗಕ್ಕೆ ಔಷಧಿಯೇ ಇದು ಎಂದು ಹಲವರು ಹೇಳಿಕೊಂಡು, ಇಂಥ ಸ್ವರ್ಗ ಮರಳುವಂತೆ ಮಾಡಿರುವುದಕ್ಕಾಗಿ ಬೊಗಳೂರಿನ ಮುಖ್ಯಮಂತ್ರಿಗೆ ನಮನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ನಮಗೆ ಯಾವ ರೋಗ ಬಂದರೂ ಪರವಾಗಿಲ್ಲ, ಯಾವುದೇ ಸಾಂಕ್ರಾಮಿಕ ಪಿಡುಗು ಬಂದರೂ ಪರವಾಗಿಲ್ಲ, ನೂರಾರು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಯಾಗಿರಿ ಎಂದು ಹೆಂಡ್ಕುಡ್ಕ ರತ್ನನ್ ಎಂಬವರು ಒದರುತ್ತಲೇ ಹಾರಿಹಾರಿರೈಸಿದ್ದಾರೆ. ಮನೆಗೆ ಬಂದಾಕ್ಷಣ ಎಷ್ಟೊಂದು ಜನರ ಜೀವ ಕಾಯ್ದ ಮುಖ್ಯಮಂತ್ರಿಯವರ ಭಾವಚಿತ್ರಕ್ಕೆ ಹಾರ ಹಾಕಿ ಸಂಭ್ರಮಿಸಿದ್ದಾರೆ ಎಂದು ವರದ್ದಿಯಾಗಿದೆ.

ಇದಕ್ಕೆಲ್ಲ ಕಾರಣವಾಗಿದ್ದು, ಕೊರೊನಾ ವೈರಸ್‌ಗೆ ಕರ್ಕಾಟಕ ರಾಜ್ಯ ಸರ್ಕಾರವು ಕಾರ್ಕೋಟಕ ಸಮಾನವಾದ ಔಷಧಿಯೊಂದನ್ನು ಪತ್ತೆ ಹಚ್ಚಿದ್ದು, ಲಾಕ್‌ಡೌನ್‌ನ ಲಾಕ್ ತೆರೆಯಲಾಗಿದೆ. ಜನರು ಕುಂಟೋಬಿಲ್ಲೆ ಅಂತ ತಿಳಿದು, ಮದಿರೆಯಂಗಡಿಗಳ ಮುಂದೆ ಹಾಕಿದ್ದ ಎಲ್ಲ ವೃತ್ತ, ಚೌಕಗಳನ್ನು ಕುಪ್ಪಳಿಸಿ ಕುಪ್ಪಳಿಸಿಯೇ, ಒಂದೊಂದು ಚೌಕದಲ್ಲಿ ಅತೀ ಹೆಚ್ಚು ಬಾಟಲಿ ಯಾರು ಇರಿಸುತ್ತಾರೆ ಎಂದು ಪಂಥವನ್ನೂ ಕಟ್ಟತೊಡಗಿದ್ದಾರೆ. ಗೆದ್ದವರಿಗೆ ಆ ದಿನ ಸಿಕ್ಕ ಬಾಟಲಿಯ ಕಾಲು ಭಾಗವನ್ನು ಬಹುನಾಮವಾಗಿ ನೀಡಲಾಗುತ್ತದೆ.

ನಾಡಿನ ವಿವಿಧೆಡೆ ಚಿತ್ರಣಗಳನ್ನು ವಿವರಿಸಿರುವ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಬಾತ್ಮೀದಾರರ ಗಡಣವು, ರಸ್ತೆಬದಿ ತೂರಾಡುತ್ತಾ ಹೋಗಿ, ರಸ್ತೆಯ ಮಧ್ಯೆ ಬಿದ್ದವರನ್ನು ಮಾತನಾಡಿಸಿ ಪ್ರತಿಕ್ರಿಯೆ ಕೇಳಿತು. ಅದಕ್ಕೆ ಬಂದ ಉತ್ತರಗಳ ಸಾರಾಂಶ ಇಷ್ಟು: ಅಯ್ಯೋ ಚಾಮೀ, ನಂಗೆ ಊರಿಗ್ ಹ್ವಾಗಾಕೆ ದುಡ್ಡಿಲ್ಯೆ, ಸರ್ಕಾರಾನೂ ಕಳ್ಸಾಕಿಲ್ಲ, ಕೈಲಿ ಕೆಲ್ಸಾನೂ ಇಲ್ಲ, ನಿದ್ದೀನೂ ಮಾಡ್ದೇ ಬರೋಬ್ಬರಿ 40 ದಿನ ದಾಟಿತು. ಇವತ್ತೇನೋ ನಿದ್ದಿ ಬಂದೈತಿ, ಒಂದಿಷ್ಟು ರಸ್ತೀಲೇ ಮಲಗ್ಯಾಕಹತ್ತೀನಿ. ಯೆಂಡ್ತೀ ಮಕ್ಳಿಗೆ ಅಕ್ಕಿ ತರೂಣಾಂತ ಬಂದಿದ್ದೆ, ಅದ್ಯಾರೋ ಅಕ್ಕಿ ಬದ್ಲು ಎಣ್ಣೀನೇ ಕೊಟ್ರಪ್ಪಾ... ಈ ನಿದ್ದೀಗಣ್ಣಲ್ಲಿ, ಎಲ್ಲೆಲ್ಲ ಸುರ್ಕೊಂಡೇಂತಾನೂ ಗೊತ್ತಾಗಿಲ್ಲಪ್ಪ.... ಮೂಗು ಮಟಾ ಬಂದಿದೆ ಈಗ.... Zzzzzz.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು