[ಬೊಗಳೂರು ಶೈ-ಕ್ಷಣಿಕ ಬ್ಯುರೋದಿಂದ]
ಬೊಗಳೂರು: ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ವಿದ್ಯಾರ್ಥಿಗಳು ಯಾರು ಕೂಡ ಅತೀ ಹೆಚ್ಚು ಅಂಕಗಳನ್ನು ಪಡೆಯಬಾರದು ಎಂದು ಸರಕಾರವು ಸುತ್ತೋಲೆ ಹೊರಡಿಸಿರುವುದಾಗಿ ವರದಿಯಾಗಿದೆ.ಶೇ.90ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದಲ್ಲಿ ಅದು ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಬೊಗಳೂರು ಸರಕಾರದ ವಕ್ತಾರರು ಅನ್ವೇಷಿ ನೇತೃತ್ವದ ಏಕಸದಸ್ಯ ಬೊಗಳೆ ರಗಳೆ ಬ್ಯುರೋಗೆ ಸಕಲರಿಗೂ ತಿಳಿಸಿದ್ದಾರೆ.
ಇದು ಹೇಗೆ ಎಂದು ಪ್ರಶ್ನಿಸಲಾಗಿ, ಬೊಗಳೂರು ಪ್ರಧಾನಿ ಮರೇಂದ್ರ ನೋಡಿ ಅವರ ಮೂಲಕ ಒದಗಿಸಲಾದ ಉತ್ತರ ಮತ್ತು ತತ್ತರ ಹೀಗಿದೆ.
ಮಕ್ಕಳು ಜಾಸ್ತಿ ಅಂಕ ಗಳಿಸಿದರೆ, ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸುಲಿಯಲು ಅವಕಾಶ ಸಿಗುವುದಿಲ್ಲ. ಉತ್ತಮ ಅಂಕ ಗಳಿಸಿದವರ ತಥಾಕಥಿತ ಪ್ರವೇಶ ಶುಲ್ಕ, ಬೋಧನಾ ಶುಲ್ಕ, ಟಿವಿ, ಕಂಪ್ಯೂಟರ್ ಶುಲ್ಕ, ಶಾಲೆ ದುರಸ್ತಿ ಶುಲ್ಕ, ಆಟದ ಮೈದಾನ ಇಲ್ಲದಿದ್ದರೂ ಮೈದಾನ ಶುಲ್ಕ, ಪ್ರಯೋಗಾಲಯ ಇಲ್ಲದಿದ್ದರೂ ಪ್ರಯೋಗಾಲಯ ಶುಲ್ಕ, ಲೈಬ್ರರಿ ಇಲ್ಲದಿದ್ದರೂ ಗ್ರಂಥಾಲಯ ಶುಲ್ಕ... ಮಣ್ಣು ಮಸಿ ಇತ್ಯಾದಿತ್ಯಾದಿತ್ಯಾದಿ... ಯಾವುದರಲ್ಲೂ ಹೆಚ್ಚು ಹೆಚ್ಚು ಕೀಳಲು ಬರುವುದಿಲ್ಲ. ಅಂತೆಯೇ, ಯಾವುದೇ ಅಭಿವೃದ್ಧಿಯಾಗದಿದ್ದರೂ, ಕಾಲೇಜು ಅಭಿವೃದ್ಧಿ ಶುಲ್ಕದ ಹೆಸರಲ್ಲಿಯೂ ಬಡಪಾಯಿ ವಿದ್ಯಾರ್ಥಿಗಳ ಪೋಷಕರನ್ನು ಸುಲಿಯಲು ಆಗುವುದಿಲ್ಲ.
ಆದರೆ, ಸ್ವಲ್ಪ ಕಡಿಮೆ ಅಂಕ ಗಳಿಸಿದರೆಂದಾದರೆ, ಈ ಎಲ್ಲ ರೀತಿಯ ಶುಲ್ಕಗಳನ್ನೂ ರಕ್ತ ಹೀರಿದಂತೆ ಹೀರಿದರೆ, ಕಾಲೇಜುಗಳ ಆಡಳಿತ ಮಂಡಳಿಗಳು ಉದ್ಧಾರವಾಗುತ್ತವೆ ಹಾಗೂ ಟ್ರಸ್ಟ್ ಹೆಸರಿನಲ್ಲಿ ಸಮಾಜ ಸೇವೆ ಹೆಸರಿನಲ್ಲಿ ಸಾಕಷ್ಟು ದುಡ್ಡು ಮಾಡಬಹುದು.
"ಉಚಿತ ಶಿಕ್ಷಣ ನೀಡುತ್ತೇವೆ, ಬಡ ಮಕ್ಕಳ ಉದ್ಧಾರವೇ ನಮ್ಮ ಗುರಿ. ಮಕ್ಕಳು ಕಲಿಯಬೇಕು, ಅವರಿಗೆ ಶಿಕ್ಷಣ ದೊರೆಯಬೇಕು, ಮುಕ್ತವಾಗಿ ಜ್ಞಾನ ದೊರೆಯಬೇಕು" ಎಂದೆಲ್ಲಾ ಬೊಗಳೆ ಬಿಡುವ ಜಾಹೀರಾತಿಗಾಗಿ ಖರ್ಚು ಮಾಡಲು ಸಾಕಷ್ಟು ಹಣವನ್ನು ಮಕ್ಕಳಿಂದ ಸಂಪಾದಿಸಬಹುದಾಗಿದೆ.
ಅಂಕ ಕಡಿಮೆ ತೆಗೆದಷ್ಟೂ abcdefg ಶುಲ್ಕಗಳನ್ನು ಹೆಚ್ಚಿಸುತ್ತಾ ಹೋಗಬಹುದು. ಇದರಿಂದ ದೇಶಾದ್ಯಂತ ಶಾಲಾ ಕಾಲೇಜುಗಳು ಸಮೃದ್ಧಿ ಸಂಪತ್ತಿನಿಂದ ತುಂಬಿ ತುಳುಕಾಡುತ್ತವೆ. ಈ ಸಂಪತ್ತನ್ನು ತೋರಿಸಿ, ಭಾರತ ಬಡ ದೇಶವಲ್ಲ ಎಂದು ಸಾರಿ ಸಾರಿ ಹೇಳಬಹುದು ಎಂಬುದು ಶಿಕ್ಷಣ ಸಂಸ್ಥೆಗಳ, ಶಿಕ್ಷಣ ಪ್ರತಿಷ್ಠಾನಗಳ, ಶಿಕ್ಷಣ 'ಸೇವೆ' ನೀಡುವ ಎಲ್ಲರ ಅಭಿಪ್ರಾಯ.
ಈ ಕಾರಣಕ್ಕಾಗಿಯೇ ಎಲ್ಲ ಮಕ್ಕಳೂ ಕಡಿಮೆ ಅಂಕಗಳನ್ನು ತೆಗೆಯಲು ಪ್ರಯತ್ನಿಸಬೇಕು. ಇದರಿಂದ ಹೆಚ್ಚು ಅಂಕ ಬಂದಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ಶಿಕ್ಷಣ ಸಚಿವ ಸುಮ್ಮನೆ ಕಿತ್ನಾಕರ ಅವರು ಸಲಹೆ ನೀಡಿರುವುದಾಗಿ ವರದಿಯಾಗಿರುವುದು ಸತ್ಯವೆಂದು ಇನ್ನೂ ಸಾಬೀತಾಗಿಲ್ಲ.
ಓಹೋ ..ತಮ್ಮ ಏಕೈಕ ಸಕಲ ಮಕ್ಕಳಿಗೂ ಈ ವರ್ಷದ ಶಾಲಾ ಫೀಸ್ ಕಟ್ಟಿ ಆಯ್ತಾ ..? ನಿಮ್ಮನೆಯಲ್ಲಿ ಈಗ ಎಲ್ರೂ ಎಷ್ಟನೆ ಕ್ಲಾಸು ..? !! :) ಕಡಿಮೆ ಅಂಕ ಗಳಿಸಲು ಎಲ್ಲಾದರೂ ಟ್ಯೂಶನ್ ಗೆ ಸೇರಿಸಿ..!!
ReplyDeleteನಮ್ಮ ಮನೆ ನಲ್ಲಿ... ಸಕಲರೂ 'ಅವಿ'ದ್ಯಾವಂತರೇ ಕಣ್ರೀ... ಅಂಗನವಾಡಿಗಿಂತ ಜಾಸ್ತಿ ಓದಿಸಲು ದೇಶದ ಹಣಕಾಸು ಸ್ಥಿತಿಗತಿ ಚೆನ್ನಾಗಿಲ್ಲ.
DeleteGood to see Bogale Ragale being updated. :-)
ReplyDeleteಬೊಗಳೆಗೆ ಗುದ್ದೋಡಿದ ಸುಶ್ರುತರಿಗೆ ಥ್ಯಾಂಕ್ಸ್ :-)
Deleteಗುರುವೇ,
ReplyDeleteನೀವೇ ನಮ್ಮ ಅಶಿಕ್ಷಣ ಮಂತ್ರಿಗಳಾಗಬೇಕೆಂದು ನಾನೀಗಲೇ ಧರಣಿ ಸತ್ಯಾಗ್ರಹ ಪ್ರಾರಂಭಿಸುತ್ತೇನೆ!
ಸುನಾಥರೇ, ಅಂಗನವಾಡಿ ಓದಿದ ನಮಗೆ ಅಶಿಕ್ಷಣ ಪಟ್ಟಕ್ಕೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಹೀಗಾಗಿ ನಾವೇ ಸ್ವಲ್ಪ ತಲೆಮರೆಸಿಕೊಂಡಿರೋದು...
Deleteನಾನೂ ಸಹ ಸುನಾಥ್ ಕಾಕಾ ಜೊತೆ ಧರಣಿ ಮಾಡುತ್ತೇನೆ...ಎಂತಹಾ ಸಂ-ಶೋಧನೆ...ಎಂತಹಾ ವೈ-ಚಾರಿಕ ಮನೋ ಅಭಾವ ! ನೀವೇ ನಮ್ಮ ಮುಂದಿನ ಅಶಿಕ್ಷಣ ಮಂತ್ರಿಗಳು !
ReplyDeleteಲಕ್ಷ್ಮೀಸ್ ಅವರೇ, ನಮ್ಮ ವೈ-ಚಾರಕ ಮನೋ ಅಭಾವವನ್ನು ಬೆಂಬಲಿಸಿ ಧರಣಿ ಕೂರುತ್ತೀರಾದರೆ, ನಾವೂ ಇದ್ದಲ್ಲೇ ಕೂರುತ್ತೀವಿ... ನಮ್ಮದೂ ಬೆಂಬಲವಿದೆ ನಿಮಗೆ...
DeletePost a Comment
ಏನಾದ್ರೂ ಹೇಳ್ರಪಾ :-D