[ಬೊಗಳೂರು ಎಚ್ಚೆತ್ತ ಬ್ಯುರೋದಿಂದ]
ಬೊಗಳೂರು, ಜೂ.1- ಈ ಸುದ್ದಿ ಓದಿದ ಬಳಿಕ ಬರೋಬ್ಬರಿ 2 ತಿಂಗಳಿನಿಂದ ನಿದ್ರಾಪೀಡಿತರಾಗಿದ್ದ ಬೊಗಳೆ ರಗಳೆ ಬ್ಯುರೋದ ಮಂದಿಯ ಕಣ್ಣುಗಳಿಗೇ ನೀರು ಬಿದ್ದ ಕಾರಣ, ದಿಢೀರನೇ ಎಚ್ಚೆತ್ತುಕೊಂಡು ಸಿದ್ಧಪಡಿಸಿದ ವರದ್ದಿಯಿದು.ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೊಗಳೂರಿನಾದ್ಯಂತ ಎಲ್ಲ ಆಫೀಸುಗಳು, ದೊಡ್ಡ ದೊಡ್ಡ ಕಟ್ಟಡಗಳೆಲ್ಲವೂ ನೀರಿನಲ್ಲಿ ಮುಳುಗೇಳುತ್ತಿದ್ದವು. ಈ ಕಾರಣದಿಂದಾಗಿಯೇ ನೀರಿನ ಪ್ರಮಾಣ ಹೆಚ್ಚಾಗಿ ಬೊಗಳೂರು ಸಿಬ್ಬಂದಿಗೆ ಎಚ್ಚೆತ್ತುಕೊಳ್ಳಲು ಸಹಾಯವಾಯಿತು.
ಅಳುವೇ ಪರಮೌಷಧ ಎಂದು ಇಲ್ಲಿ ಪ್ರಕಟವಾಗಿರುವುದರಿಂದಾಗಿಯೇ ಕಚೇರಿಗೆ ನೀರು ನುಗ್ಗಿದು ಎಂಬುದು ಅನುಭವಕ್ಕೆ ಬಂದಿತು. ಹಾಗಾದರೆ ಅಳುವುದು ಒಳ್ಳೆಯದು ಎಂದು ಹೇಳಿರುವುದರಿಂದ, ಬೊಗಳೂರಿನ ಪ್ರತಿಯೊಂದು ಟೀವಿ ಚಾನೆಲ್ಲುಗಳಲ್ಲಿ ಬರುವ ಧಾರಾವಾಹಿಗಳನ್ನು ಮತ್ತಷ್ಟು ಎಳೆದರೆ ಒಳ್ಳೆಯದಲ್ಲವೇ ಎಂಬ ಸಲಹೆಯೂ ಬೊಗಳೂರು ಮಂದಿಯಿಂದ ಕೇಳಿಬಂತು.
ಅತ್ತರೆ ಯಶಸ್ಸು ದೊರೆಯುತ್ತದೆ ಎಂಬುದು ಈ ಸಂಚೋದನೆಯ ಸಾರವಾಗಿರುವುದರಿಂದಲೇ ಪ್ರೇರೇಪಣೆಗೊಂಡು ಕಚೇರಿಯಲ್ಲಿರೋ ಮಹಿಳೆಯರೆಲ್ಲ ಅಳತೊಡಗಿದ್ದರು. ಮತ್ತು ಧಾರಾವಾಹಿ ನಿರ್ದೇಶಕರಿಗೂ ಇದೇ ಪ್ರ-ಚೋದನೆಯಾಗಿತ್ತು ಎಂಬುದನ್ನು ಬೊಗಳೂರು ಅಸತ್ಯಾನ್ವೇಷಿ ಬ್ಯುರೋ ಪತ್ತೆ ಹಚ್ಚಿದೆ.
ಬಹುಶಃ ಅತ್ತುಬಿಟ್ಟರೆ ಸಾಕು, ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಗಾದೆ ಶೀಘ್ರವೇ ಸೃಷ್ಟಿಯಾಗಲಿರುವುದರಿಂದ, ಬೊಗಳೂರು ಬ್ಯುರೋ ಮತ್ತೆ ಮಲಗಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
4 ಕಾಮೆಂಟ್‌ಗಳು
ನನಗೂ ಅಳು ಬರ್ತಾ ಇದೆ, ಅನ್ವೇಷಿಯವರೆ!
ಪ್ರತ್ಯುತ್ತರಅಳಿಸಿಅಳು ಬಂದರೆ ಬಕೀಟು ಹಿಡಿಯಬೇಕೆಂಬ ನಿಯಮವನ್ನು ಎಲ್ಲೂ ಉಲ್ಲೇಖಿಸಿಯೇ ಇಲ್ಲ ಸುನಾಥರೇ!!!!
ಅಳಿಸಿಅಳುವುದನ್ನ ಜಾಸ್ತಿ ಮಾಡಲು ನೀರುಳ್ಳಿ ಬಳಸಬೇಡಿ,
ಪ್ರತ್ಯುತ್ತರಅಳಿಸಿಈಶ್ವರ ಭಟ್ರೇ,
ಅಳಿಸಿನೀರುಳ್ಳಿ ಬಳಸಬೇಕಿಲ್ಲ, ಅದನ್ನು ಕತ್ತರಿಸಿ ಕಣ್ಣಿಗಿಟ್ಟುಕೊಂಡು ತಂಪು ಮಾಡಿಕೊಂಡರೆ ಸಾಕು ಅಂತ ನಮ್ಮ ವರದ್ದಿಗಾರರು ಪ್ರಯೋಗ ಮಾಡಿ ಸೂಚನೆ ನೀಡಿದ್ದಾರೆ.
ಏನಾದ್ರೂ ಹೇಳ್ರಪಾ :-D