ಬೊಗಳೆ ರಗಳೆ

header ads

ಕೊನೆಯುಸಿರಿನವರೆಗೂ ಪಕ್ಷಾಂತರ: ಬಂಬಂಗಾರಿ ಪ್ರತಿಜ್ಞೆ

[ಬೊಗಳೂರು ಪಕ್ಷಾಂತರ ಬ್ಯುರೋದಿಂದ]
ಬೊಗಳೂರು, ಡಿ.16- ಈಗ ಯಾವ ಪಕ್ಷದಲ್ಲಿದ್ದೇವೆ ಮತ್ತು ಯಾವ ಪಕ್ಷಕ್ಕೆ ಸೇರುತ್ತಿದ್ದೇವೆ ಎಂಬುದನ್ನೇ ಮರೆತುಬಿಟ್ಟಂತಿರುವ ಮಾನ್ಯ (ಕುಮಾರಸ್ವಾಮಿಯವರು ಯಡಿಯೂರಪ್ಪರನ್ನು, ರೇಣುಕಾಚಾರ್ಯರನ್ನು, ಈಶ್ವರಪ್ಪರನ್ನು ನಿಂದಿಸುವುದು ಹೇಗೆ!) ಬಂಬಂಗಾರಪ್ಪನವರು, ಪಕ್ಷಗಳಿಂದ ಪಕ್ಷಕ್ಕೆ ಜಿಗಿಯುತ್ತಲೇ ಪ್ರಸಿದ್ಧರಾಗಿದ್ದು, ನಿನ್ನೆ ನಿನ್ನೆಯಷ್ಟೇ ಯಾವುದೋ ಪಕ್ಷದಿಂದ ಮಗದೊಮ್ಮೆ ಹೊರಬಂದು, ಬೇರೆ ಯಾವುದೋ ಪಕ್ಷಕ್ಕೆ ಸೇರಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಮಾಜಿ ನಿಧಾನಿಗಳಾದ ವೇದೇಗೌಡರಿಗೆ ಮತ್ತು ತನಗೆ ಬಹುತೇಕ ಹೆಚ್ಚೂಕಮ್ಮಿ ಒಂದೇ ರೀತಿಯ ವಯಸ್ಸಾಗಿದೆ. ಅವರ ಮಕ್ಕಳೂ ನಮ್ಮ ಮಕ್ಕಳಿಗೆ ಸಮಾನವೇ. ಆದರೆ ಅಲ್ಲಿ ಅಪ್ಪ-ಮಕ್ಕಳು ಒಂದೇ ಪಕ್ಷದಲ್ಲಿದ್ದಾರೆ. ನಾವು ಈಗಷ್ಟೇ ಹೊರಬಂದಿರುವ ಕೈಪಕ್ಷದಲ್ಲಿ ಅಪ್ಪ-ಮಕ್ಕಳು ಬೇರೆ ಬೇರೆಯಾಗಿರಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಅವರು ಬೊಗಳೆ ರಗಳೆ ಕಚೇರಿಯಲ್ಲಿ ನಡೆಸಿದ ರದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಜೀವನದಲ್ಲಿ ಒಮ್ಮೆಯಾದರೂ ಜೆಡಿಎಸ್ ಪಕ್ಷ ಸೇರಬೇಕೆಂಬುದು ತನ್ನ ಮಹದಾಕಾಂಕ್ಷೆಯಾಗಿತ್ತು ಎಂದ ಅವರು, ಇನ್ನು ಉಳಿದ ಜೀವನದಲ್ಲಿ ಒಮ್ಮೆಯಾದರೂ ಕಮ್ಯೂನಿಷ್ಠರೊಂದಿಗೆ ಸೇರುವುದು ನನ್ನ ಕನಸಾಗಿದೆ. ಅದು ಕನಸಾಗಿಯೇ ಉಳಿಯಲು ಬಿಡುವುದಿಲ್ಲ ಎಂದರು.

ತೆನೆ ಹೊತ್ತ ಮಹಿಳೆಯ ಕೈಯನ್ನು ಯಾವಾಗ ಬಿಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಲು ತಡಕಾಡುತ್ತಲೇ ಹರ್ಷ ವ್ಯಕ್ತಪಡಿಸಿದ ಅವರು, ಇವೆಲ್ಲವೂ ತನ್ನ ಕೈಯಲ್ಲಿರುವುದಿಲ್ಲ, 'ದೇವ'ರ ಹಾಗೂ ದೇವೇಗೌಡರ ಕೈಯಲ್ಲಿದೆ ಎಂದೂ ನುಡಿದರು ಅವರು.

ನೀವು ಆವಾಗಾವಾಗ ಮತ್ತು ಆಗಾಗ್ಗೆ, ಪದೇ ಪದೇ ಪಕ್ಷಗಳ ಒಳಗೆ-ಹೊರಗೆ ಹೋಗಿ ಬರುತ್ತಲೇ ಇರುತ್ತೀರಲ್ಲಾ? ಯಾಕೆ? ನಿಮ್ಮನ್ನು ಪಕ್ಷಾಂತರಿ ಅಂತ ಕರೆಯಬಾರದೇಕೆ ಎಂದು ಬೊಗಳೂರಿನ ಅಸತ್ಯಾನ್ವೇಷಿಗಳು ಕೇಳಿದ ಪ್ರಶ್ನೆಗೆ ತಡವರಿಸಗದೆ ಉತ್ತರಿಸಿದ ಅವರು, "ಥೂ ನಿಮ್ಮ... ಏನ್ ಪ್ರಶ್ನೆ ಅಂತ ಕೇಳ್ತೀರಾ... ಅಷ್ಟೂ ಗೊತ್ತಾಗಲ್ವೇ? ನಮ್ಮ ರಾಜ್ಯದಲ್ಲಿ, ಕೇಂದ್ರದಲ್ಲಿ ಆಗಾಗ್ಗೆ ಬೇರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲವೇ? ಅದು ಹೇಗೆ? ನಮ್ಮ ಮತದಾರರು ಪಕ್ಷಾಂತರಿಗಳು ಆಗುವುದರಿಂದಾಗಿ. ಮತದಾರರೇ ಪಕ್ಷ ಬದಲಿಸಿ ಬೇರೆ ಪಕ್ಷಕ್ಕೆ ಹಾರುತ್ತಾರೆ, ಓಟು ಕೊಡುತ್ತಾರೆ ಎಂದಾದರೆ, ಪ್ರಜೆಗಳೇ ಪ್ರಭುಗಳು ಎಂಬ ನಾಣ್ಣುಡಿಗಾದರೂ ಬೆಲೆ ಬೇಡವೇ? ಹೀಗಾಗಿ ಪ್ರಜೆಗಳ ಥರಾನೇ ನಾನೂ ಕೂಡ ಬೇರೆ ಪಕ್ಷಕ್ಕೆ ಸೇರಿಕೊಂಡಿದ್ದೇನೆ" ಎಂದು ತತ್ವಜ್ಞಾನಿಯಂತೆ ತತ್ತರಿಸುತ್ತಾ ಉತ್ತರಿಸಿದರು.

ಇದೇ ವೇಳೆ ಭೀಷ್ಮ ಪ್ರತಿಜ್ಞೆಯೊಂದನ್ನೂ ಮಾಡಲು ನಿರ್ಧರಿಸಿದ ಬಂಬಂಗಾರಪ್ಪ ಅವರು, ಕೊನೆಯುಸಿರಿರುವವರೆಗೂ ಈ ಪಕ್ಷಾಂತರವನ್ನು ಬಿಡುವುದಿಲ್ಲ ಎಂದೂ ಈ ಸಂದರ್ಭದಲ್ಲಿ ಅವರು ಘೋಷಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಬಂ(ಮಂ)ಗಾರಿಯ ಪ(ವೃ)ಕ್ಷಾಂತರ ಜಿಗಿತಗಳನ್ನು ಕಣ್ಣು ಕುರುಡಾಗುವಂತೆ ಚಿತ್ರಿಸಿದ್ದೀರಿ. ನಿಮಗೆ ಎಷ್ಟು ಕೊಟ್ಟರೂ ಸಾಲದು! ಇನ್ನು ಇದರ ಬಾಲ ಹಿಡಿದುಕೊಂಡು ಹಾರಲು ಹೋದಂತಹ ಇದರ ಮರಿಗಳೇ ಮಣ್ಣು ತಿನ್ನುತ್ತಿವೆ ಎನ್ನುವ ಸುಳ್ಳು ಸುದ್ದಿ ಬಂದಿದೆ!ನಿಜವೇ?

  ಪ್ರತ್ಯುತ್ತರಅಳಿಸಿ
 2. ಜಿಗಿಜಿಗಿ ಬಂಬಂ ಪುಕ್ಕಟೆ ಬರೋದಾದ್ರೆ ನಾನೂ ಒಂದು ಪಕ್ಷ ಕಟ್ತೀನಿ !

  ಪ್ರತ್ಯುತ್ತರಅಳಿಸಿ
 3. <<" ನಮ್ಮ ರಾಜ್ಯದಲ್ಲಿ, ಕೇಂದ್ರದಲ್ಲಿ ಆಗಾಗ್ಗೆ ಬೇರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲವೇ? ಅದು ಹೇಗೆ? ನಮ್ಮ ಮತದಾರರು ಪಕ್ಷಾಂತರಿಗಳು ಆಗುವುದರಿಂದಾಗಿ. ಮತದಾರರೇ ಪಕ್ಷ ಬದಲಿಸಿ ಬೇರೆ ಪಕ್ಷಕ್ಕೆ ಹಾರುತ್ತಾರೆ, ಓಟು ಕೊಡುತ್ತಾರೆ ಎಂದಾದರೆ, ಪ್ರಜೆಗಳೇ ಪ್ರಭುಗಳು ಎಂಬ ನಾಣ್ಣುಡಿಗಾದರೂ ಬೆಲೆ ಬೇಡವೇ?">>
  point to be noted......
  good logic. :) :)

  ಪ್ರತ್ಯುತ್ತರಅಳಿಸಿ
 4. ನಂದಿ ಬೆಟ್ಟ ದ ಟಿಪ್ಪು spot ನ ಕೆಳಗೆ ಒಂದು ಪಕ್ಷ ಇದೆ ಅಂತ ತಿಳಿಸಿ.. ಹೋಗಿ ಹಾರಲಿ...

  ಪ್ರತ್ಯುತ್ತರಅಳಿಸಿ
 5. ಅನ್ವೇಷಿಗಳೇ,

  ಬಂ ಅಣ್ಣಾ ಡಿಎಮ್‍ಕೆ ಮತ್ತು ಅಮ್ಮ ಡಿಎಮ್‍ಕ್ ಸೇರುವ ಬಗ್ಗೆ ಏನೂ ಹೇಳಲಿಲ್ಲವೇ ?

  ಪ್ರತ್ಯುತ್ತರಅಳಿಸಿ
 6. ಸುನಾಥರೇ,
  ನೀವು ಹೇಳಿದ್ದು, ನಮಗೆ ಎಷ್ಟು ಸಂಬಳ ಕೊಟ್ಟರೂ ಸಾಲದು ಎಂದರ್ಥವೇ? ಹೌದಾದರೆ ಖಂಡಿತಾ ಒಪ್ಪಿಕೊಳ್ತೀವಿ.

  ಸುಬ್ರಹ್ಮಣ್ಯರೇ,
  ಜಿಗಿಜಿಗಿ ಜಿಗಿಜಿಗಿ ಬಂಬಂಬಂ ಪಂಚರಂಗಿ ಪಂಪಂಪಂ... ನಮ್ಮ ಪಕ್ಷಕ್ಕೂ ಒಂದ್ಸಲ ಬಂದು ಹೋಗಿ...

  ಚುಕ್ಕಿ ಚಿತ್ತಾರಿಗಳೇ,
  ಓಹ್. ತುಂಬಾ ಚೆನ್ನಾಗಿ ಚುಕ್ಕಿಗಳಿಂದ ಚಿತ್ತಾರ ಬಿಡಿಸಿದ್ದೀರಿ... ಯಾವುದಾದರೂ ಪಕ್ಷದ ಚಿಹ್ನೆಯೇ?

  ಉದಯ ಅವರೇ,
  ನೀವು ನೋಟ್ ಮಾಡಿಕೊಂಡ ಪಾಯಿಂಟನ್ನು ಮಾರುವಾಗ ನಮಗೂ ಒಂದಿಷ್ಟು ತಳ್ಳಿ ಬಿಡಿ.
  ಬೊಗಳೂರಿಗೆ ಸುಸ್ವಾಗತ.

  ಶ್ರೀನಿಧಿ ಹಂದೆಯವರೇ,
  ಏನೋ ಹಾರಿಸಬಹುದು, ಆದ್ರೆ ಅಲ್ಲಿವರೆಗೂ ಅವರು ಮೇಲೆ ಏರಬೇಕಲ್ಲ.... ಎಂಬುದೇ ನಮ್ಮ ಚಿಂತೆ...

  ಪಾತರಗಿತ್ತಿಯವರೇ,
  ಅದು ಕೂಡ ಒಂದು ಆಪ್ಷನ್. ಆದ್ರೆ ಅದ್ಕೆ ಮೊದ್ಲು ಒಂದ್ಸಲ ಹೊಟ್ಟೆಪಕ್ಷಕ್ಕೂ, ವಾಟಾಳ್ ಪಕ್ಷಕ್ಕೂ ಹೋಗಿಬರಬೇಕೆಂಬ ಆಸೆಯೂ ದೂರದಲ್ಲಿದೆಯಂತೆ...

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D