(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಬೊಗಳೂರು, ಫೆ.3- ಪೆಪ್ಸಿ ಬಾಟಲಿಯಿಂದ ಸ್ಟ್ರಾ ಇಟ್ಟು ಕೋಲಾ ಹೀರುವಂತೆ ಮಾನವನ ರಕ್ತವನ್ನು ಹೀರುವ, ಕಿವಿ ತಮಟೆ ಒಡೆಯುವಂತೆ ಗುಂಯ್‌ಗುಡುವ ರಕ್ತ-ಪಿಪಾಸು ಸೊಳ್ಳೆಗಳಿಗೆ ಮುಕ್ತಿ ಕಾಣಿಸಲು ಹೊಸ ಸಾಫ್ಟ್ ವೇರ್ ಸಿದ್ಧವಾಗಿದೆ ಎಂಬ ಹಳೆ ವರದಿ ಪ್ರಕಟವಾಗಿರುವಂತೆಯೇ ಎಲ್ಲರ ಕಿವಿಗಳೂ ಒಮ್ಮೆಗೆ ನೆಟ್ಟಗಾಗಿವೆ.

Aunty ಸೊಳ್ಳೆಯಿಂದ ಕಚ್ಚಿಸಿಕೊಂಡು ತಡೆಯಲಾರದೆ ಈ Anti ಸೊಳ್ಳೆ ತಂತ್ರಜ್ಞಾನ ಕಂಡುಹುಡುಕಿದ ವಿಜ್ಞಾನಿಯ (ದೈಹಿಕ ಮತ್ತು ಮಾನಸಿಕ) ಸ್ಥಿತಿ ನೆನಪಿಸಿಕೊಂಡು ಗೊಳ್ಳನೆ ನಕ್ಕ ಅಸತ್ಯಾನ್ವೇಷಿ, ಈ ಬಗ್ಗೆ ತನಿಖೆ ನಡೆಸಿದಾಗ ಹೊಸ ಅಂಶವೊಂದು ಬಯಲಾಗಿದೆ.

ವಾಸ್ತವವಾಗಿ ವಿಜ್ಞಾನಿ ಇದನ್ನು ಕಂಡುಹುಡುಕಿದ್ದು ಸೊಳ್ಳೆಗಳಿಗಾಗಿ ಅಲ್ಲವಂತೆ. "Every new product comes out by an accident" ಎಂಬಂತೆ, ಸೊಳ್ಳೆಗಳಿಗೆ ಈ ಸಾಫ್ಟ್ ವೇರ್ ಮಾರಕವಾದದ್ದು ಕೂಡ ಒಂದು ಆಕ್ಸಿಡೆಂಟ್.

ಈ ಸುರಸುಂದರಾಂಗ ವಿಜ್ಞಾನಿಗೆ ಸುಂದರಿಯರ ವಿಪರೀತ ಕಾಟ. ಒಂಚೂರು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ ಬಿಡಲೊಲ್ಲರು. ಅವರನ್ನು ದೂರ ಮಾಡುವುದು ಹೇಗೆ ಎಂಬ ಸಂಶೋಧನೆಯಲ್ಲಿದ್ದಾಗ ಹೆಣ್ಣು ಸೊಳ್ಳೆಗಳಿಗಷ್ಟೇ ಮಾರಕವಾಗಿರುವ ಈ ಸಾಫ್ಟ್ ವೇರ್ ಉತ್ಪತ್ತಿಯಾಗಿದೆ. ಮೊಬೈಲ್‌ ಫೋನ್‌ಗೂ ಇದು ಲಭ್ಯವೆಂಬುದು ಇತ್ತೀಚಿನ ಸುದ್ದಿ.

ಮಾನವನ ರಕ್ತ ಹೀರುವ ಹೆಣ್ಣು ಸೊಳ್ಳೆಗಳು ಈ ಸಾಫ್ಟ್ ವೇರ್ ಹೊರಡಿಸುವ ಶಬ್ದ ಬಂದತ್ತ ಧಾವಿಸುತ್ತವೆ. ಅದು ಕಂಪ್ಯೂಟರ್‌ನಿಂದ ಬರುವುದರಿಂದ ಅಲ್ಲಿ ಬ್ರೌಸ್ ಮಾಡುತ್ತಾ ಬೊಗಳೆ-ರಗಳೆ ಓದತೊಡಗುತ್ತವೆ. ಅಲ್ಲಿಗೆ ಬೇರೆಯವರ ರಕ್ತ ಹೀರುವ ಮನುಷ್ಯ ಪ್ರಾಣಿಗೆ ಸುಖ ನಿದ್ದೆ.

ಈ ಕುರಿತ ಹೆಚ್ಚಿನ ಮಾಹಿತಿ ನಿಮಗೆ ಇಲ್ಲಿ ಸಿಗಲಾರದು.

ಈ ಸಾಫ್ಟ್ ವೇರ್ ಇಲ್ಲಿ ಡೌನ್ ಲೋಡ್ ಮಾಡಬೇಕಿದ್ದರೆ ಬೊಗಳೆ-ರಗಳೆ ಓದುಗರಿಗೆ ಸಂಪೂರ್ಣ ಉಚಿತ. (ಶರತ್ತುಗಳು ಅನ್ವಯ. ಬೇಕಿದ್ದರೆ ನೀವು ಸೇವಾ ತೆರಿಗೆ, ಹ್ಯಾಂಡ್ಲಿಂಗ್ ಚಾರ್ಜ್, ಸಾಗಾಟ ವೆಚ್ಚ, ಕೂಲಿ ವೆಚ್ಚ, ತಯಾರಿಕಾ ವೆಚ್ಚ, ಊಟದ ಖರ್ಚು, ಮಾಹಿತಿ ಶುಲ್ಕ... ಇನ್ನೂ ಇತ್ಯಾದಿ ಏನೇನೋ ಶುಲ್ಕಗಳನ್ನೆಲ್ಲಾ ಸೇರಿಸಿ ಬೊಗಳೆ-ರಗಳೆ ಬ್ಯುರೋದ ಅಸತ್ಯಾನ್ವೇಷಿಗೆ ಕಳುಹಿಸಬಹುದು.
[ಒಂದಾನೊಂದು ಕಾಲದ ಬೊಗಳೆ ರಗಳೆಯ ವರದಿ]

4 Comments

ಏನಾದ್ರೂ ಹೇಳ್ರಪಾ :-D

 1. ಆಗಬಹುದು ಮಹಾಸ್ವಾಮಿ..! ಡೌನ್ಲೋಡ್ ಮಾಡಿಕೊಳ್ಳೋಣ...ಹ.ಹ್ಹಹ್ಹಹ್ಹ್ಹಹ್ಹ್ಹಹ್ಹ...

  ReplyDelete
 2. ಅನ್ವೇಷಿಯವರೆ,
  ಈ ವಿಜ್ಞಾನಿಯ ಸಂಶೋಧನೆ ಅತ್ಯಂತ ಸ್ತ್ರೀವಿರೋಧಿಯಾಗಿದೆ. ಮಹಿಳಾಆಯೋಗಕ್ಕೆ ದೂರು
  ಕೊಡೋಣ ಅಂತಿದ್ದೀನಿ. ಆಗ ನೋಡೋಣ ಈ ವಿಜ್ಞಾನಿಯ ಧಿಮಾಕು!

  ReplyDelete
 3. ಸುಬ್ರಹ್ಮಣ್ಯರೇ, ನಿಮ್ಮ ಊರಿನಲ್ಲಿ ಭಯಂಕರ ಸದ್ದು ಕೇಳಿಬಂದಿತ್ತು. ಬಹುಶಃ ನೀವು ಆ ಸಾಫ್ಟ್ ವೇರನ್ನು ಡೌನ್ ಲೋಡ್ ಮಾಡಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಸಂಚೋದಿಸಲಾಗಿದೆ.

  ReplyDelete
 4. ಸುನಾಥರೆ,
  ಮಹಿಳಾ ಆಯೋಗಕ್ಕೆ ದೂರು ನೀಡಿದರೂ ಈಗ ನಿಮ್ಮ ಮಾತು ನಡೆಯುವುದಿಲ್ಲ. ಪಬ್ ದಾಳಿ ಘಟನೆಯಲ್ಲಿ ಆಯೋಗ ನೀಡಿದ ವರದಿ ಈಗ ಕಸದ ಬುಟ್ಟಿಯಲ್ಲಿದ್ದು, ಅದಕ್ಕಾಗಿಯೇ ಮತ್ತೊಂದು ಆಯೋಗವನ್ನು ವರದಿ ಹೇಗೆ ಸಿದ್ಧಪಡಿಸಬೇಕು ಎಂದು ಸೂಚನೆಯೊಂದಿಗೇ ಕಳುಹಿಸಿರಲಿಲ್ಲವೇ???

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post