ಬೊಗಳೆ ರಗಳೆ

header ads

ಜಂಟಿ ಹೇಳಿಕೆಯಲ್ಲಿ 'ಬಲೂಚಿ' ಸೇರಿಸಲು ಕಾರಣ!

(ಬೊಗಳೂರು ಸ್ಪಷ್ಟನೆ, ನಿರಾಕರಣೆ, ತಪ್ಪೊಪ್ಪಿಗೆ, ಹೇಳಿಕೆ ಹಿಂತೆಗೆ ಬ್ಯುರೋದಿಂದ)
ಬೊಗಳೂರು, ಜು.30- ಭಾರತ ಮತ್ತು ಪಾತಕಿಸ್ತಾನ ಈಜಿಪ್ಟಿನಲ್ಲಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಬಲೂಚಿಸ್ತಾನದ ಹೆಸರು ಸೇರಿಕೊಂಡಿರುವುದು ಮತ್ತು ಎಲ್ಲ ಸಮಸ್ಯೆಗಳಿಗೆ ಮಾತುಕತೆಯೊಂದೇ ಪರಿಹಾರ ಎಂದು ನಿಧಾನಮಂತ್ರಿಗಳು ಒಪ್ಪಿಕೊಂಡು ಬಂದು ಬ್ಲಂಡರ್ ಮಾಡಿರುವುದು ಜಾಗತಿಕ ತಾಪಮಾನವನ್ನು ಮತ್ತು ಭಾರತದ ಮಾನವನ್ನು ಕಂಗೆಡಿಸುತ್ತಿರುವ ಹಿನ್ನೆಲೆಯಲ್ಲಿ, ನಿಧಾನಮಂತ್ರಿಗಳನ್ನು ಅವಸರವಸರವಾಗಿ ಸಂದರ್ಶನ ನಡೆಸಲಾಯಿತು. ಸಂದೇಶದ ತುಣುಕುಗಳು ಈ ಕೆಳಗೆ ಬಿದ್ದಿವೆ. ಅವುಗಳನ್ನು ಹೆಕ್ಕಿಕೊಂಡು ಓದಲು ಪಾಕಿಸ್ತಾನದ ಅಧ್ಯಕ್ಷ ಆಸಿಫಾಲಿ ಜರ್ದಾ ಒಡೆಯರು ನಿರ್ದೇಶಿಸಿದ್ದಾರೆ.

* ನಮಸ್ಕಾರ ನಿಧಾನಿಗಳೇ, ನೀವೇಕೆ ಬಲೂಚಿಸ್ತಾನವನ್ನು ಜಂಟಿ ಹೇಳಿಕೆಯಲ್ಲಿ ಸೇರಿಸಿದ್ದೀರಿ?
ನಿಧಾನಿ: ಬಲೂಚಿಸ್ತಾನವು ಪಾತಕಿಸ್ತಾನದ ಅತಿದೊಡ್ಡ ಪ್ರಾಂತ್ಯ. ಆದರೆ ಪುಟ್ಟ ಪ್ರಾಂತ್ಯವಾದ ಕಾಶ್ಮೀರ ಭಾಗಕ್ಕೆ ಸಿಗುವಷ್ಟು ಪ್ರಚಾರ ಅದಕ್ಕೆ ಸಿಗುತ್ತಿಲ್ಲ. ಬಲೂಚಿಯಲ್ಲಿ ಕೂಡ ಸಾಕಷ್ಟು ಉಗ್ರಗಾಮಿಗಳಿದ್ದಾರೆ, ಪ್ರತ್ಯೇಕತಾವಾದಿಗಳಿದ್ದಾರೆ. ಈಗ ನಮ್ಮಲ್ಲೇ ಈಶಾನ್ಯ ರಾಜ್ಯಗಳಲ್ಲೂ ಇಂಥವರು ಇಲ್ಲವೇ? ಅವರೆಲ್ಲರೂ ಪ್ರಸಿದ್ಧಿ ಪಡೆದರುವಾಗ, ಬಲೂಚಿಸ್ತಾನ ಮಾತ್ರ ಯಾವುದೇ ಉಲ್ಲೇಖಗಳಿಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೂ ಸದ್ದು ಮಾಡುತ್ತಿರಲಿಲ್ಲ. ಅದಕ್ಕಾಗಿಯೇ ಅದನ್ನು ಸೇರಿಸಿದ್ದು.

* ಹೌದೇ? ಬಲೂಚಿಸ್ತಾನದಲ್ಲಿ ನಿಜವಾಗಿ ನಡೆಯುತ್ತಿರುವುದೇನು?
ಅದು ನಂಗೂ ಗೊತ್ತಿಲ್ಲ, ನನ್ನ ಎದುರಿಗೆ ಕೂತ ಯೂಸುಫ್ ರಾಜಾ ಗಿಲಿಗಿಲಾನಿ ಅವರು ತುಂಬಾ ಸಲ ಬಲೂಚಿಸ್ತಾನ, ಬಲೂಚಿಸ್ತಾನ ಅಂತ ಹೇಳ್ತಾನೇ ಇದ್ದರು. ನಂಗೆ ಅದೇನೂ ಅರ್ಥವಾಗ್ತಾ ಇರ್ಲಿಲ್ಲ. ಬಹುಶಃ ಬಲೂಚಿಸ್ತಾನ ಅಂದ್ರೆ ಅವರಿಗೆ ಪಂಚಪ್ರಾಣ ಇರ್ಬೇಕು, ಅದ್ಕೇ ಅವರು ಹೀಗಾಡ್ತಾರೆ ಅಂದ್ಕೊಂಡು, ಪಾಕಿಸ್ತಾನೀಯರಿಗೆ, ಆ ಮೂಲಕ ಭಾರತದಲ್ಲಿರುವ ಪಾಕಿಸ್ತಾನೀಯರಿಗೆ ಒಂದಷ್ಟು ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಜಂಟಿ ಹೇಳಿಕೆಯಲ್ಲಿ ಅದನ್ನು ಸೇರಿಸಿಬಿಟ್ಟೆ.

* ಮತ್ತೆ, ಮೊನ್ನೆ ಮೊನ್ನೆವರೆಗೂ ಉಗ್ರಗಾಮಿಗಳೊಂದಿಗೆ ಮಾತುಕತೆ ಇಲ್ಲ ಎನ್ನುತ್ತಿದ್ದವರು, ಈಗ ಮಾತುಕತೆಯೊಂದೇ ಪರಿಹಾರ ಎಂದು ಬಂಬಡಾ ಬಜಾಯಿಸುವ ಮೂಲಕ ತಿಪ್ಪರಲಾಗ ಹಾಕಲು ಕಾರಣವೇನು?

ತಿಪ್ಪರಲಾಗ ಹಾಕಿಕೊಟ್ಟಲು ನಮಗೆ ಪಾಕಿಸ್ತಾನವೇ ಹೇಳಿಕೊಟ್ಟದ್ದು. ಅದನ್ನು ನಾವು ಚೆನ್ನಾಗಿಯೇ ಕಲಿತುಕೊಂಡೆವು. ಹೀಗಾಗಿ, ಭಾರತದಲ್ಲಿರುವ ಎಲ್ಲ ಮೊಬೈಲ್ ಕಂಪನಿಗಳು ಕೂಡ, ಹೆಚ್ಚು ಹೆಚ್ಚು ಮಾತನಾಡಿದರೆ ಹೆಚ್ಚು ಉಳಿತಾಯ, ಹೆಚ್ಚು ಲಾಭ ಅಂತೆಲ್ಲಾ ಜಾಹೀರಾತು ಕೊಡುತ್ತಿವೆಯಲ್ಲ. ಅದನ್ನು ಪ್ರಯೋಗ ಮಾಡಿ ನೋಡೋಣ ಎಂದುಕೊಂಡೇ ನಾವು ಭಾರತ-ಪಾಕ್ ನಡುವೆಯೂ ಹೆಚ್ಚು ಹೆಚ್ಚು ಮಾತನಾಡಬೇಕು ಎಂದು ಒಪ್ಪಿಬಿಟ್ಟೆ. ಇದರಿಂದ ಮೊಬೈಲ್ ಕಂಪನಿಗಳಿಗೂ ಲಾಭವಾಗುತ್ತದೆ. ದೇಶದ ಆರ್ಥಿಕತೆ ಸುಧಾರಣೆಯಾಗುತ್ತದೆ.

* ಬೊಗಳೆ ರಗಳೆ ಓದುಗರಿಗಾಗಿ ಈ ಬಗ್ಗೆ ಇನ್ನೂ ಏನಾದರೂ ಹೇಳಬೇಕೆಂದು ನೀವು ಇಚ್ಛಿಸಿದ್ದೀರಾ?
ಹೌದು, ಬೊಗಳೆ ರಗಳೆಯೇ ಮೊದಲು ನಮ್ಮನ್ನು ಈ ಬಗ್ಗೆ ಮಾತನಾಡಿಸಿದ್ದು. ಹೀಗಾಗಿ ಅದರ ಓದುಗರಿಗೆಲ್ಲರೂ ಶ್ರೀಮಂತರಾಗಿರಬೇಕು ಎಂಬ ಉದ್ದೇಶದಿಂದಾಗಿ, ನಾವು ಅಕ್ಕಿ-ಬೇಳೆ-ತರಕಾರಿ ಬೆಲೆಗಳನ್ನು ಗಗನಕ್ಕೇರಿಸಿ, ಅವರು ಹೆಚ್ಚು ಹಣ ಕೊಟ್ಟು ಖರೀದಿಸುವಂತೆ ವ್ಯವಸ್ಥೆ ಮಾಡಿದ್ದೇವೆ. ಹೀಗಾಗಿ, ತರಕಾರಿ-ಅಕ್ಕಿ-ಬೇಳೆ ತಿನ್ನುವವರೆಲ್ಲರೂ ಶ್ರೀಮಂತರು ಎಂದು ನಾವು ತಿಳಿದುಕೊಂಡು, ನಮ್ಮ ದೇಶವೂ ಸಮೃದ್ಧವಾಗಿದೆ ಎಂದು ತಿಳಿದುಕೊಳ್ಳುತ್ತೇವೆ. ಈ ಬಗ್ಗೆ ಶೀಘ್ರವೇ ನಮ್ಮ ಸಾಧನೆಗಳ ಕುರಿತ ಒಂದು ಪುಸ್ತಕ ಹೊರತರಲಿದ್ದೇವೆ. ಧನ್ಯವಾದ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ನಿಧಾನಿ ಸಿಂಗಣ್ಣನವರ ಖಾಸಗಿ ದಿನಚರಿಯಲ್ಲಿ ಬರೆಯಲಾದ ಮಹತ್ವವಿಲ್ಲದ ಭಾಗಗಳನ್ನು ಸ್ಕೂಪ್ ಮಾಡಿ ಬೊಗಳೂರು
  ಸೊಂಪಾದಕರಿಗೆ ಒಪ್ಪಿಸಲಾಗುತ್ತಿದೆ:
  "ಶರಮ್-ಇಲ್ಲದ-ಶೇಖನ ಊರಿನಲ್ಲಿ ಪಾತಕಿಸ್ತಾನದ ನಿಧಾನಿ ಗಿಲಿಗಿಲಿಯಾನಿಯವರಿಗೆ ‘ಬಲೂಚಿಸ್ತಾನದಲ್ಲಿರುವ ಉಗ್ರರನ್ನು ನಾನೇ ಕಳಿಸಿದ್ದೇನೆ’ ಎಂದು ಹೆದರಿಸಿಬಿಟ್ಟೆ. ಇನ್ನು ಮೇಲೆ ಅವರು ತಮ್ಮ ಉಗ್ರರನ್ನು ತಾವೇ ಗುಂಡು ಹೊಡೆದು ಕೊಲ್ಲುತ್ತಾರೆ.
  ನನಗೆ ದಮ್ಮಿಲ್ಲದ ದಮ್ಮಡಿ ಎಂದು ಕೀಟಲೆ ಮಾಡುತ್ತಿದ್ದ ಅಡ್ಡಡ್ಡವಾಣಿ ಈಗ ಬಾಯಿಯನ್ನು ಮುಚ್ಚಿಕೊಂಡು ಕೂತಿರಬೇಕು, ನೋಡು!"
  ಹೇಗಿದೆ ನಾನು ಮಾಡಿದ (ಕು)ತಂತ್ರ!"

  ಪ್ರತ್ಯುತ್ತರಅಳಿಸಿ
 2. ಬಲೂಚಿ ಒಂದು ಬಾಲಂಗೋಚಿ. ಯಾವ ದೇಶದ ಹಿಂದಾದರೂ ಅಂಟಿಕೊಳ್ಳಬಹುದು. ಹಾಗೆ ಅಂಟಿಸಿಕೊಂಡ ದೇಶ ಮಹಾನ್ ದೇಶ ಆಗಿ, ದಡ್ಡ ದೇಶ ಆಗಿ, ಅದರ ನಿಧಾನಿ ಮಹಾನ್ ನಿಧಾನಿ ಆಗ್ತಾನೆ ಅಂತ ಮದ್ದೂರುವಡೆ ಉಷ್ಣ ಅವರು ನಮ್ಮ ನಿಧಾನಿಗಳ ಖಾಲಿ ಮಡೆಯೊಳಗೆ ತುಂಬಿದ್ದಾರೆ. ಅದೇ ತರಹ ಗಿಲ್ ಗಿಲ್ ಗಿಲಕ್ಕು ಕಾಲ ಗೆಜ್ಜೆ ... ಅಂತ ಲಿಗಾನಿ ಖಾಲಿ ಮಂಡೆಯೊಳಗೂ (ಅಯ್ಯೋ ಅವರಿಗೆ ಮಂಡೆ ಇರ್ಬೇಕಲ್ವಾ! ಸ್ಸರಿ, ಇನ್ಯಾವುದೋ ಉಂಡೆ ಒಳಕ್ಕೆ) ಬಾಲಿತಾನುಗಳು ತುಂಬಿದ್ದಾರೆ. ಇದೇ ಈಗಿನ ವಿವಾದಕ್ಕೆ ಕಾರಣ ಎಂಬೋದು ನಮ್ಮ ಬೀರುವಿನ ಸಂಚೋದನೆ. ಇದನ್ನು ನಿಮ್ಮ ಕಡೆಯ ವದರಿ ಅಂತ ಯಾರ ಹತ್ರಾನು ಉದುರಬೇಡಿ, ಉಸ್ಸಾರ್!

  ಪ್ರತ್ಯುತ್ತರಅಳಿಸಿ
 3. ಸುನಾಥರೆ,
  ನೀವು ಅವರ ಡೈರಿಯಿಂದ ಕದ್ದು ಕಳಿಸಿದ ವರದಿಯನ್ನು ಫೂಕರ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇದೊಂದು ದೊಡ್ಡ ಸಂಚೋದನೆಯೇ ಸೈ.

  ಪ್ರತ್ಯುತ್ತರಅಳಿಸಿ
 4. ಶ್ರೀನಿವಾಸರೆ,
  ನಿಮ್ಮ ಬೀರುವಿನಲ್ಲಿರುವ ಎಲ್ಲಾ ಬೀರ್ ಕೇಸ್‌ಗಳನ್ನು ಇತ್ತ ಕಳುಹಿಸಲು ಸೂಚಿಸಲಾಗುತ್ತಿದೆ. ಇಲ್ಲವಾದಲ್ಲಿ, ಈ ವದರಿಯನ್ನು ಘಂಟಾಘೋಷವಾಗಿ ಭಯಂಕರವಾಗಿ ಸಾರಲಾಗುತ್ತದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D