(ಬೊಗಳೂರು ತಮಿಳುಕಾಡು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಜು.22- ಹುಣ್ಣಿಮೆ ಅಮಾವಾಸ್ಯೆ (ಈ ಬಾರಿ ವಿಶೇಷವಾಗಿ ಸೂರ್ಯಗ್ರಹಣ ಹತ್ತಿರವಾಗುತ್ತಿರುವಂತೆಯೇ) ಬರುತ್ತಿರುವಂತೆಯೇ ರಾಮ ಇಲ್ಲ, ರಾಮಾಯಣ ಇಲ್ಲ ಎನ್ನುತ್ತಲೇ, ರಾಮಾಯಣವನ್ನು ಟೀಕಿಸುವುದು ನನ್ನ ಆಜನ್ಮ ಸಿದ್ಧ ಹಕ್ಕು ಎಂದು ನುಡಿದ ತಮಿಳುಕಾಡಿನ ಕಪ್ಪು ಕನ್ನಡಕಧಾರಿ ಮುಖ್ಯಮಂತ್ರಿಗಳನ್ನು ಬೊಗಳೆ ರಗಳೆ ಮಾತನಾಡಿಸುವ ಗೋಜಿಗೆ ಹೋದಾಗ ಕೆಲವೊಂದು ಅಮೂಲ್ಯ ಸಂಗತಿಗಳು ಪತ್ತೆಯಾದವು.

ಇತ್ತೀಚೆಗಷ್ಟೇ ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದು ಎಂದು ಪ್ರಶ್ನಿಸಿ ಅಭಿಮಾನಿಗಳ ವ್ಯಾಕ್‌ಥೂಗಳಿಗೆ ಈಡಾಗಿರುವ ತಮಿಳುಕಾಡಿನೊಡಿನ ಮುಖ್ಯ ಮಂ.ಗಳು, ಈ ಬಗ್ಗೆ ಸ್ಪಷ್ಟನೆ ನೀಡಿದರು.

ವ್ಯಾಕ್‌ಥೂವಲಿ (ಇದು actually ಎಂಬ ಇಂಗ್ಲಿಶ್ ಪದವನ್ನು ತಮಿಳಿನಲ್ಲಿಯೇ ಉಚ್ಚರಿಸಿದ್ದು ಎಂದು ಅವರು ಆ ಬಳಿಕ ಬೊಗಳೆ ರಗಳೆ ಕಿವಿಯಲ್ಲಿ ಪಿಸುಗುಟ್ಟಿದ್ದರು) ನಾನು ಏನು ಹೇಳಿದ್ದೆಂದರೆ, ಭಾರತದಿಂದ ಲಂಕೆಗೆ ಸಮುದ್ರದಲ್ಲಿ ಅಷ್ಟು ದೊಡ್ಡ ಸೇತುವೆ ಕಟ್ಟಿರಬೇಕಿದ್ದರೆ, ಶ್ರೀರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದಿರಬಹುದು? ಎಂದು ನಾನು ಪ್ರಶ್ನಿಸಿದ್ದೆ. ಅದು ಗೊತ್ತಾದರೆ, ಆ ಕಾಲೇಜನ್ನು ತಮ್ಮ ನಾಲ್ಕಾರು ಹೆಂಡಿರ ಮಕ್ಕಳ ವಶಕ್ಕೆ ಕೊಡಿಸಿಬಿಟ್ಟಲ್ಲಿ ಹೋಗುವ ಮೊದಲು ಜನ್ಮ ಸಾರ್ಥಕ ಮಾಡಿಕೊಂಡೇ ಹೋಗುವೆ ಎಂದು ಅವರು ತತ್ತರಿಸುತ್ತಾ ಉತ್ತರಿಸಿದರು.

ಹಾಗಿದ್ದರೆ, ರಾಮಾಯಣವನ್ನು ಟೀಕಿಸುವೆ, ರಾಮನನ್ನು ಟೀಕಿಸುವೆ ಎಂಬ ಹೇಳಿಕೆ ನೀಡಿದ್ದೇಕೆ ಎಂದು ಪ್ರಶ್ನಿಸಿದಾಗ, ನೀವು ಯಾರಿಗೂ ಹೇಳದಿದ್ದರೆ ಮಾತ್ರ ಈ ಸಂಗತಿ ಬಾಯಿ ಬಿಡುತ್ತೇನೆ. ಈಗಾಗಲೇ ಕೆಟ್ಟದ್ದನ್ನು ನೋಡಬಾರದು ಎಂದು ಕಪ್ಪು ಗಾಜು ಧರಿಸಿದ್ದೇನೆ. ಆದರೂ ನೀವು ಅದು ಹೇಗೆ ನಮ್ಮ ಕಣ್ಣಿಗೆ ಕಾಣುತ್ತಿದ್ದೀರಿ ಅಂತಲೇ ಗೊತ್ತಾಗುತ್ತಿಲ್ಲ ಎಂದು ಬೊಗಳೆ ಸದಸ್ಯರೆದುರು (ಕಪ್ಪುಕನ್ನಡಕದ)ಒಳಗಣ್ಣು ಬಿಡುತ್ತಾ ನುಡಿದ ಅವರು, ಮಾತು ಮುಂದುವರಿಸಿ ಚಿದಂಬರ ರಹಸ್ಯವೊಂದನ್ನು ಬಿಚ್ಚಿಟ್ಟರು.

ಅದೆಂದರೆ, ಶ್ರೀರಾಮ ಏಕಪತ್ನೀ ವ್ರತಸ್ಥ. ಅದಕ್ಕೇ ನನಗೆ ಮತ್ತು ಅವನಿಗೆ ಸರಿಹೋಗುವುದಿಲ್ಲ. ನನಗೀಗಾಗಲೇ ಬಹುಪತ್ನಿಯರೂ, ಬಹುಪುತ್ರರೂ ಇದ್ದಾರೆ. ಹೀಗಾಗಿ ರಾಮನನ್ನು ವಿರೋಧಿಸದೆ ವಿಧಿಯಿಲ್ಲ. ರಾಮನ ಆದರ್ಶ ಪಾಲಿಸಲು ಯಾರಾದರೂ ಒತ್ತಡ ಹೇರಿಯಾರೆಂಬ ಆತಂಕ ಇನ್ನೂ ಕಾಡುತ್ತಿದೆ ಎಂದುಸುರಿದರು.

ಯಾರಿಗೂ ಹೇಳಬೇಡಿ ಎಂದು ಬೊಗಳೆ ರಗಳೆಗೆ ಕಪ್ಪೆಚ್ಚರಿಕೆ ನೀಡಿರುವುದರಿಂದ, ನಾವು ಕೂಡ ಇದನ್ನು ಪ್ರಕಟಿಸಲು ಇಚ್ಛಿಸುವುದಿಲ್ಲ ಎಂದು ಈ ಮೂಲಕ ಹೇಳುತ್ತಿದ್ದೇವೆ.

ಹಾಗಿದ್ದರೆ ಅವರು ಸೂರ್ಯಗ್ರಹಣ ಹತ್ತಿರವಾಗುತ್ತಿರುವಾಗ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂದು ಕೇಳಲಾಯಿತು. ಇದಕ್ಕೆ ಪ್ರಧಾನ ಕಾರಣ ಅವರ ಪಕ್ಷದ ಚಿಹ್ನೆ ಉದಯಿಸುವ ಸೂರ್ಯ!

5 Comments

ಏನಾದ್ರೂ ಹೇಳ್ರಪಾ :-D

 1. This comment has been removed by the author.

  ReplyDelete
 2. ಶ್ರೀರಾಮಚಂದ್ರನು ಲಂಕೆಯಲ್ಲಿ ಸಂಹರಿಸಿದ ರಾಕ್ಷಸರೆಲ್ಲಾ ಈಗ
  ತಮಿಳುಕಾಡಿನಲ್ಲಿ ಹುಟ್ಟಿ ಗಲಾಟೆ ಮಾಡುತ್ತಿದ್ದಾರೆ. ಮರಣಾನಿಧಿ ಎನ್ನುವ ರಾಕ್ಷಸನು ಇವರಲ್ಲಿ ಪ್ರಮುಖನು. ನೀವು ಇವರ ಕಣ್ಣಿಗೆ ಬೀಳದಿರುವದೇ ಒಳಿತು!

  July 23, 2009 11:21 PM

  ReplyDelete
 3. ತನಾಮುಮಂ ಅವರಿಗೆಂದಿಗೂ ಗ್ರಹಣ ಹಿಡಿದಿರುತ್ತದೆ. ಹಾಗಾಗಿ ಕಕ ಹಾಕಿರ್ತಾರೆ. ಇದೊಂದು ಚಿದಂಬರ ರಹಸ್ಯ ಅಂತ ಪಿಸಿ ನನಗೆ ಹೇಳಿದ್ರು. ನೀವ್ಯಾರಿಗೂ ಹೇಳ್ಬೇಡಿ. ಪಾಪ! ಮುಮಂ ಅವರಿಗೇ ಗೊತ್ತಿಲ್ವಂತೆ. ಗೊತ್ತಾದ್ರೆ ಎದೆಬಡಿದು ಗೋಳಾಡಿಸ್ತಾರಂತೆ - ಮುಮಂ ಅವರದ್ದೇ ಒಂದು ರಾಮಾಯಣ ಆಗಿರೋದ್ರಿಂದ ಬೇರೆ ರಾಮಾಯಣವನ್ನು ಅವರು ನಂಬೋದಿಲ್ಲ. ಅವರ ಬಾಳಿನಲ್ಲಿ ರಾವಣ ಇಲ್ವಾ? ಕುಂಡೋದರಿ ಸ್ಸಾರಿ ಮಂಡೋದರಿ ಇಲ್ವಾ? ರಾಕ್ಷಸ ಸಂತತಿ ಇಲ್ವಾ? ಕುಂಬುಕರ್ಣ ಇಲ್ವಾ? ಯಾರಿಲ್ಲ ಹೇಳಿ ಅವರೇ ರಾವಣ ಅಲ್ಲಲ್ಲ ರಾಮ ಅಲ್ಲಲ್ಲ ಯಾವುದೋ ಒಂದು ಪಾತ್ರಧಾರಿ ... ಬಿಡಿ ಆ ವಿಷ್ಯ ಈಗ ಇಲ್ಯಾಕೆ, ನಿಮ್ಮೂರಿಗೆ ಬಂದಾಗ ನಿಮ್ಮ ಕಿವಿಯಲ್ಲಿ ಹೇಳ್ತೀನಿ (ಕಚ್ಚೋದಿಲ್ಲಾರೀ)

  ReplyDelete
 4. ಸುನಾಥರೆ,
  ಇಲ್ಲಿ ಕಪಿಸೇನೆ ಕೂಡ ಸಾಕಷ್ಟಿದೆ. ಹೀಗಾಗಿ ನಾವು ಕಪಿಗಳ ಮಧ್ಯೆ ಚೆನ್ನಾಗಿದ್ದೀವಿ.

  ReplyDelete
 5. ಶ್ರೀನಿವಾಸರೆ,
  ಚೆನ್ನಾಗಿ ಹೇಳಿದಿರಿ. ತನಾಮುಮಂ ಯಾವತ್ತೂ ಗ್ರಹಣ ನೋಡ್ತಾ ಇರ್ತಾರೆ. ಅವರು ಅದನ್ನು ಯಾವಾಗ ಎಂದು ಯಾವಾಗಲೂ ಎದುರು ನೋಡ್ತಾನೇ ಇರ್ತಾರೋ ಗೊತ್ತಿಲ್ಲ. ಅದೇ ರೀತಿ, ತಾವೇ ಒಂದು ಕರುಣಾಯಣವನ್ನು ರಚಿಸಬೇಕಾಗಿದೆಯೆಂದು ಅವರು ಇತ್ತೀಚೆಗೆ ನಮ್ಮ ಮೀರಪ್ಪ ವೊಯಿಲಿ ಅವರಲ್ಲಿ ಹೇಳಿದ್ದಾರಂತೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post