ಬೊಗಳೆ ರಗಳೆ

header ads

ತಿರುಪ್ತಿ ತಿಮ್ಮಪ್ಪನಿಗೇ ಟೋಪಿ!

(ಬೊಗಳೂರು ಜನ-ತಾ ಬ್ಯುರೋದಿಂದ)
ಬೊಗಳೂರು, ಜೂ.14- ನನ್ನೆಲ್ಲಾ 'ಸ್ವಕಾರ್ಯ, ಸು-ಕಾರ್ಯ ಮತ್ತು 'ಕು' ಅಲ್ಲದ ಸಲ್ಲದ ಕಾರ್ಯಗಳಿಗೆ ತಿರುಪತಿ ತಿಮ್ಮಪ್ಪನ ಆಶೀರ್ವಾದವೇ ಕಾರಣ. ಅದಕ್ಕಾಗಿ 45 ಕೋಟಿ ರೂಪಾಯಿಯ ಟೋಪಿ ಹಾಕಿದ್ದೇನೆ' ಎಂಬ ಹೇಳಿಕೆ ನೀಡಿರುವ ಬಿಜೆಪಿಗೆ ಜನ-ತಾ ಜನಾರ್ದನ ಗಣಿರೆಡ್ಡಿ ವಿರುದ್ಧ ಬೊಗಳೂರಿನ ಆಸ್ತಿವಂತರೆಲ್ಲರೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಈ ಮೂಲಕ, ಕಮಲನಿಗೆ ಆಪರೇಶನ್ ಮಾಡುವುದಕ್ಕೆಂದು ತೆಗೆದಿಟ್ಟ ಹಣವನ್ನು ವ್ಯಯಿಸಲಾಗಿದೆ. ಇತರ ಪಕ್ಷಗಳ ಗಣಿಯನ್ನು ಬಗೆಬಗೆದು ಅಲ್ಲಿಂದ ನಾಯಕರೆಂಬ ಅದಿರುಗಳನ್ನು ಲಾರಿಗಟ್ಟಲೆ ತಂದು ಬಿಜೆಪಿ ಪಾಳಯದೊಳಗೆ ಸುರಿದದ್ದಕ್ಕೆಲ್ಲಾ ಈ ತಿರುಪ್ತಿ ತಿಮ್ಮಪ್ಪನ ಆಶೀರ್ವಾದ ಇದೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿ, ದೇವರ ಮೇಲೆ ಭಾರದ ಕಲ್ಲು ಹಾಕುವ, ಮರ್ಯಾದೆ ತೆಗೆಯುವ ಪ್ರಯತ್ನದ ವಿರುದ್ಧ ಈ ಆಸ್ತಿವಂತರು ಅಂದರೆ (ಗಣಿವಂತರು ಅಲ್ಲ) ಆಸ್ತಿಕ ಸಮುದಾಯದವರು ಸೆಟೆದು ನಿಂತಿದ್ದಾರೆ ಎಂದು ನಂಬಬಾರದ ಮೂಲಗಳು ತಿಳಿಸಿವೆ.

ಅಷ್ಟು ಮಾತ್ರವೇ ಅಲ್ಲ, ಬಳ್ಳಾರಿಯಲ್ಲಿ ತಮ್ಮ ಮೂಲಕ ನಡೆಯುತ್ತಿರುವ ಎಲ್ಲ ಅಕ್ರಮಗಳಿಗೆ ತಿರುಪ್ತಿ ತಿಮ್ಮಪ್ಪನೇ ಕಾರಣ ಎಂದು ಪರೋಕ್ಷವಾಗಿ ಹೇಳಿಕೆ ನೀಡಿರುವುದು ಈ ಸಂಘದ ಸದಸ್ಯರ ಅಸಮಾಧಾನ ಹೆಚ್ಚಳಕ್ಕೆ ಕಾರಣವಾಗಿದೆ.

ಅವರದ್ದೇ ಗಣಿಕ್ಷೇತ್ರವಾಗಿರುವ ಬಳ್ಳಾರಿಯಲ್ಲಿ ಬಡತನದಿಂದ ನರಳುತ್ತಿರುವ ಪ್ರತಿಯೊಬ್ಬರಿಗೂ ತಲಾ ಹತ್ತತ್ತು ಸಾವಿರ ರೂಪಾಯಿ ಕೊಟ್ಟರೂ ಐದಾರು ಸಾವಿರ ಬಡವರು ಒಂದು ವರ್ಷ ಬದುಕಬಹುದಾಗಿತ್ತು. ಅಥವಾ ಅಲ್ಲಿನ ಅದಿರು ಲಾರಿಗಳಿಂದಾಗಿ ಹಾಳಾದ ರಸ್ತೆ ಅಭಿವೃದ್ಧಿಗೆ ವ್ಯಯಿಸಿದ್ದರೆ ಜನರೇ ಜನಾರ್ದನನಿಗೆ ಹರಸುತ್ತಿದ್ದರು ಎಂಬ ಕ್ಷುಲ್ಲಕ ಜ್ಞಾನವೂ ಇಲ್ಲದೆ ಗಣಿಯ ಹಣವನ್ನು ತಿರುಪತಿಯಲ್ಲಿ ಸುರಿದುಬಂದಿದ್ದು ಎಲ್ಲರ ಕಣ್ಣುಗಳ ಮೇಲಿರುವ ಹುಬ್ಬುಗಳು ಮತ್ತಷ್ಟು ಮೇಲೆ ಮೇಲೆ ಹೋಗಲು ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ತಿಮ್ಮಪ್ಪನು ತನ್ನ ಎತ್ತಿದ ‘ಕೈ’ಯಲ್ಲಿ ‘ಕಮಲ’ವನ್ನು ಹಿಡಿದು ನಿಂತಿಲ್ಲವೆ? ಇದರರ್ಥವೇನು? ದೇವರಿಗೆ ಎಲ್ಲ ಪಕ್ಷಗಳ ಭಕ್ತರೂ ಟೋಪಿಯನ್ನು ಹಾಕಬಹುದು, ತಮ್ಮ ಶಕ್ತ್ಯಾನುಸಾರ ಅಂತ!
    ಗಣಿಧಣಿಗಳು ಬಡವರಿಗೆ ಟೋಪಿ ಹಾಕಿಲ್ಲ ಅಂತ ನಿಮ್ಮ ತಕರಾರೆ? ಮೊದಲು ಬಡವರಿಗೆ ಟೋಪಿ ಹಾಕಿದರೇ ತಾನೆ, ತಿಮ್ಮಪ್ಪನಿಗೆ ಟೋಪಿ ಸಿಗುವದು!

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ಹೌದು, ದೇವರು ಪಕ್ಷಾತೀತರು. ಕರ ಕಮಲಗಳೆಲ್ಲವೂ ದೇವರಿಗೆ ಒಂದೇ. ಇದೇ ನೀತಿಯನ್ನು ಓಟು ಬಂದಾಗ ಜಾರಕಾರಣಿಗಳೂ ಅನುಸರಿಸುತ್ತಾರೆ. ಕೈ-ಬಾಯಿಯೆಲ್ಲಾ ಒಂದೇ, ಕೈಯೂ ಅದೇ ಕಾಲೂ ಅದೇ. ಕೈ ಮುಗಿಯುತ್ತಾರೆ, ಆ ಮೇಲೆ ಕಾಲು ಕೊಡುತ್ತಾರೆ... ಅಂಗಗಳಲ್ಲಿ ಅಸಮಾನತೆ, ಭೇದ ಭಾವ ಇರಬಾರದು ಎಂಬ ನೀತಿಯನ್ನವರು ಚಾಚೂತಪ್ಪದೆ ಪರಿಪಾಲಿಸಿಕೊಂಡು ಬರುತ್ತಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಎಲ್ಲಕಡೆ ಟೋಪಿ ಹಾಕುವವರೇ ಜಾಸ್ತಿ ಅದ್ರು ಅಲ್ಲವ

    ಪ್ರತ್ಯುತ್ತರಅಳಿಸಿ
  4. ೪೫ ಕೋತಿ ಕ್ಷಮಿಸಿ ಕೋಟಿ ರೂಪಾಯಿ ಕೊಟ್ಟು ೪೫೦ ಕೋಟಿ (ಗಣಿ ವ್ಯವಹಾರ) ಬೇಕೆಂದು ಕೇಳಿದ್ದು ಯಾರಿಗೂ ತಿಳಿಯದ ವಿಷಯ
    ಇದನ್ನು ಯಾರ ಹತ್ತಿರವೂ ಬಾಯಿಬಿಡಬೇಡಿ

    ಪ್ರತ್ಯುತ್ತರಅಳಿಸಿ
  5. ಸಾಗರದಾಚೆಯವರೆ,
    ಟೋಪಿ ಹಾಕುವವರು ಹೇಗೂ ಇರುತ್ತಾರೆ. ಆದ್ರೆ ಟೋಪಿ ಹಾಕಿಸಿಕೊಳ್ಳೋರೇ ಹೆಚ್ಚಾಗ್ತಿರೋದು, ಟೋಪಿ ಹಾಕೋರಿಗೆ ವರದಾನ ಆಗ್ತಾ ಇದೆ. ಜನಾ ಎಚ್ಚೆತ್ತು ಕೊಳ್ಬೇಕು.

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ,
    ಯಾರೂ ಬಾಯಿ ಬಿಡದಿದ್ದರೂ, ಅದು ಆಟೋಮ್ಯಾಟಿಕ್ ಆಗಿ ಹಿಂಬಾಗಿಲಿನಿಂದ ಈ ಸುದ್ದಿಯು ಭಾರಿ ಸದ್ದಿನೊಂದಿಗೆ ಲೀಕ್ ಆದರೂ ಆಗಬಹುದು. :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D