(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಜೂ.25- ಬೊಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆಲ್ಲಾ ಬೊಗಳೂರು ಬ್ಯುರೋಗಿಂತಲೂ ಮುಂಚಿತವಾಗಿ ಪರಿಹಾರ ಕಂಡುಹುಡುಕಿದ ವಿಷಯವನ್ನು ಇಲ್ಲಿ ಓದಿ ಬೆಚ್ಚಿ ಬೆದರಿ ಕಂಗಾಲಾದ ಬೊ.ರ. ಬ್ಯುರೋ, ತನ್ನ ಏಕಸದಸ್ಯ ಬ್ಯುರೋದ ಎಲ್ಲ ವರದಿಗಾರರ ತಂಡಗಳನ್ನು ಅತ್ತ ಕಡೆ ಅಟ್ಟಿದ ಪರಿಣಾಮ ಈ ವರದ್ದಿ.

ಕಾರು ತಯಾರಿಕಾ ಕಂಪನಿಯ ಅಂಗಣಕ್ಕೇ ನೇರವಾಗಿ ಬೊಗಳೂರು ಬ್ಯುರೋ ಬಂದು ಬಿದ್ದ ಹಿನ್ನೆಲೆಯಲ್ಲಿ ಈ ಕಾರಿನ ಸಾಧ್ಯಾಸಾಧ್ಯತೆಗಳ ಕುರಿತಾಗಿ ವಿಶ್ಲೇಷಣೆ ನಡೆಸಲಾಯಿತು.

ಅವರಿವರು ಅಚಾನಕ್ ಆಗಿ ಬಾಯಿಬಿಟ್ಟದ್ದನ್ನೇ ವಿಶೇಷ ಸಂದರ್ಶನ ಎಂದು ಪರಿಗಣಿಸಿ, ಅವರ ಮಾತುಗಳನ್ನು ಬರೆದಿಟ್ಟುಕೊಂಡು ಎಕ್ಸ್-loosಇವ್ ಸಂದರ್ಶನ ಎಂದು ಇಲ್ಲಿ ಪ್ರಕಟಿಸಲಾಗಿದೆ.

ಬೆಂಗಳೂರಿನ ಸಂಚಾರವೀರ: ಫುಟ್‌ಪಾತಿನಲ್ಲಿ ನಡೆದುಹೋಗುತ್ತಿದ್ದರೆ ಯಾವುದೇ ನಟಿಯರ ಹೃದಯದಲ್ಲಿ ಸಲ್ಲದೇ ಇರುವ ಸಲ್ಲುಮಾನಖಾನನಂತವರಿಂದ ತಪ್ಪಿಸಿಕೊಳ್ಳಲು ಇದುವರೆಗೆ ಹೆಣಗಾಡುತ್ತಿದ್ದೆವು. ಇನ್ನು ಮುಂದೆ ಮೇಲಿನಿಂದಲೂ ಏನಾದರೂ ಉದುರುತ್ತದೆಯೋ ಎಂದು ಎಚ್ಚರಿಕೆ ವಹಿಸಿ ನಡೆಯಬೇಕು.

ರಸ್ತೆ Cum-ಟ್ರ್ಯಾಕ್ಟರ್ (ರಸ್ತೆಗಳನ್ನು ಟ್ರ್ಯಾಕ್ಟರ್ ಓಡಿಸುವಂತೆ ಮಾತ್ರವೇ ನಿರ್ಮಿಸುವಾತ): ಛೆ ಛೆ, ಇನ್ನು ಮುಂದೆ ಹಾರುವ ಕಾರುಗಳಿಗೆ ರಸ್ತೆ ನಿರ್ಮಿಸುವಂತಿಲ್ಲವಲ್ಲಾ... ನಿರ್ಮಿಸಿದರೂ, ಅದರಲ್ಲಿ ಗುಳಿ-ಗುಂಡಿ ಇರುವಂತೆ ನೋಡಿಕೊಳ್ಳುವಂತಿಲ್ಲವಲ್ಲಾ... ನಮ್ಮ ಜೇಬು ತುಂಬಿಸಿಕೊಳ್ಳಲು ಮಾಡುವುದಾದರೂ ಏನನ್ನು?

ದುರ್‌ವಾಣಿ ಕೇಬಲ್ ಅಗೆತದಾರ: ಅಯ್ಯಯ್ಯೋ, ಇನ್ನು ರಸ್ತೆಯೆಲ್ಲಾ ಅಗೆದು ಹಾಕುವುದು ಎಲ್ಲಿ? ಬಾನೆತ್ತರದಲ್ಲಿ ಅಗೆದರೂ ಜನರಿಗೆ ಬೇಸಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು ತಿನ್ನಿಸುವುದಾದರೂ ಹೇಗೆ? ಅವರ ಮನೆಗಳಿಗೆ ಉಚಿತವಾಗಿ ಕೆಂಬಣ್ಣ ಹಚ್ಚುವುದಾದರೂ ಹೇಗೆ? ಅವರ ಮೂಗು, ಕಿವಿಗಳನ್ನು ಬ್ಲಾಕ್ ಆಗಿಸುವಂತೆ ಮಾಡಿ, ಆಸ್ತಮಾ ಇತ್ಯಾದಿಗಳಿಂದ ನರಳುವಂತೆ ಮಾಡಿ, ನೊಣ ಹೊಡೆಯುತ್ತಿದ್ದ ವೈದ್ಯ ಸಮುದಾಯಕ್ಕೆ ನಾವು ಸಹಕಾರ ನೀಡುತ್ತಿದ್ದೆವು. ಇನ್ನು ಮುಂದೆ ಅವರ ಕೆಲಸ ಖೋತಾ. ಮನೆಯಿಂದ ಹೊರಗೆ ಕಾಲಿಟ್ಟ ತಕ್ಷಣ ಬಟ್ಟೆಗಳು ಬಣ್ಣ ಕಳೆದುಕೊಳ್ಳುವಂತೆ ಮಾಡಿ, ಸಾಬೂನು ಕಂಪನಿಗಳಿಗೆ ಉಪಕಾರ ಮಾಡುತ್ತಿದ್ದೆವು. ಇನ್ನು ನಮ್ಮ ಉಪಕಾರ ಪಡೆದುಕೊಳ್ಳುವವರಾದರೂ ಯಾರು?

ಶಾಕ್ ಅಬ್ಸಾರ್ಬರ್ ಕಂಪನಿಯೊಡೆಯ: ನಮ್ಮೆಲ್ಲಾ ಬ್ಯುಸಿನೆಸ್ ಇನ್ನು ಗೋತಾ. ಹೊಂಡಾ-ಗುಂಡಿ ರಸ್ತೆಗಳಿದ್ದ ಕಾರಣದಿಂದಾಗಿ ಇದುವರೆಗೆ ಪ್ರತಿಯೊಂದು ವಾಹನಿಗರು ವರ್ಷಕ್ಕೆ ಕನಿಷ್ಠ ಒಂದುಬಾರಿಯಾದರೂ ಶಾಕ್ ಅಬ್ಸಾರ್ಬರ್‌ಗಳನ್ನು ಬದಲಿಸುತ್ತಿದ್ದರು. ಇನ್ನು ಮುಂದೆ ಖಂಡಿತಾ ಅವರು ಇತ್ತ ಕಡೆ ತಲೆ ಹಾಕಲಾರರು. ನಮಗಿನ್ನು ರೆಸೆಶನ್ನೇ ಗತಿ.

ಬೊಗಳೂರಿನ ಬೊಗಳೂರಿಗರು: ಈಗ ಲಕ್ಷ ಲಕ್ಷ ಲಕ್ಷ್ಯವೇ ಅಲ್ಲದ ಕಾರಣ, ಕೋಟಿ ಕೋಟಿಗೆ ಮಾತ್ರವೇ ಒಂದೆರಡ್ರೂಪಾಯಿ ಬೆಲೆ ಇರೋದ್ರಿಂದ ಈ ಕಾರೇ ಸೂಕ್ತ. ಇರಲು ಮನೆ ಇಲ್ಲದಿದ್ದರೂ ಕಾರು ಕೊಂಡರೆ, ಅದರಲ್ಲೇ ಓಡಾಡುತ್ತಿರಬಹುದು. ಕಾರಿನಲ್ಲಿ ಓಡಾಡಿ ಓಡಾಡಿ ಸುಸ್ತಾಗುವಾಗ, ಆಕಾಶದಲ್ಲೇ ಕಾರು ನಿಲ್ಲಿಸಿ ಮಲಗಬಹುದು. ಭಾರತದಲ್ಲಿದ್ದುಕೊಂಡೇ, ವಿದೇಶದಲ್ಲಿ ಉದ್ಯೋಗ ಮಾಡುತ್ತಾ, ಬೆಳಗ್ಗೆ ಭಾರತದಿಂದ ಹೊರಟು, ಅಮೆರಿಕಕ್ಕೆ ಉದ್ಯೋಗಕ್ಕೆ ಕಾರಿನಲ್ಲಿ ಪ್ರಯಾಣಿಸಿ ರಾತ್ರಿಯೂಟಕ್ಕೆ ಮರಳಬಹುದು. ವಿದೇಶದಲ್ಲಿರುವವರೆಲ್ಲರೂ ಇನ್ನು ಮುಂದೆ ಎನ್ನಾರೈಗಳು ಎಂದು ಕರೆಸಿಕೊಳ್ಳಬೇಕಿಲ್ಲ. ಮನೆಯಿಲ್ಲದಿದ್ದರೂ, ವಾಹನ ಮಾತ್ರವೇ ಇರುವವರನ್ನು "ನಾನ್ ರೆಸಿಡೆನ್ಸ್ ಇಂಡಿಯನ್ಸ್" ಅಂತ ಕರೆಯಬಹುದು.

6 Comments

ಏನಾದ್ರೂ ಹೇಳ್ರಪಾ :-D

 1. ಈ ಕಾರೇ overfly ಮಾಡೋದಾದರೆ, ಬೊಗಳೂರಿನಲ್ಲಿ
  flyovers ಯಾಕೆ ಬೇಕು, ಗುರು?

  ReplyDelete
 2. ಗಾಳಿಲಿ ನಿಲ್ಲಿಸೋಕೂ ಪಾರ್ಕಿ೦ಗ್ ಚಾರ್ಜ ಹಾಕ್ತಾರೆ

  ReplyDelete
 3. ನಾವೂ ನಿಮ್ಮೊಂದಿಗಿದ್ದೇವೆ - ರಸ್ತೆ ಇಲ್ಲದಿದ್ದರೆ ಗುಂಡಿ ಇಲ್ಲ. ಗುಂಡಿ ಇಲ್ಲದಿದ್ದರೆ ನಿಮ್ಮ ಜೇಬು ತುಂಬೋಲ್ಲ - ನಿಮ್ಮ ಜೇಬು ತುಂಬದಿದ್ದರೆ ನಮ್ಮ ಕೈಗಳಿಗೆ ಕೆಲಸವಿಲ್ಲ
  ಹಾಗಾಗಿ ನೀವು ಹೇಳುತ್ತಿರುವುದೆಲ್ಲವನ್ನೂ ನಾವು ಯಥಾವತ್ತಾಗಿ ಅನುಮೋದಿಸುತ್ತಿದ್ದೇವೆ. ಅದಿರ್ಲಿ, ನಿಮ್ಮ ವದರಿಗಾರ ಕೆಲಸ ಕೇಳ್ಕೊಂಡು ನಮ್ಮ ಹತ್ತಿರ ಬಂದಿದ್ದಾರೆ - ಅವರಿಗೇನು ಕೊಡ್ಬೇಕು?

  ReplyDelete
 4. ಸುನಾಥರೆ,
  ಬೊಗಳೂರಿನಿಂದ Flyover ಗಳನ್ನು ತೆಗೆದು ಹಾಕುವ ಕಾರ್ಯಕ್ಕೆ ಈಗಾಗಲೇ ನಮ್ಮ ಸಲಮಾನಖಾನ ಕಂಪನಿಗೆ ಗುತ್ತಿಗೆ ಕೊಡಲಾಗಿದೆ. ಅವರು ಫ್ಲೈ ಓವರ್ ಇಲ್ಲದೆಯೂ ಫುಟ್ ಪಾತ್ ಮೇಲೆ ಮಲಗಿದವರ ಮೇಲೂ ಕಾರು ಹಾಯಿಸಿ ದಾಖಲೆ ಮಾಡಿರುವುದರಿಂದ ಅವರಿಗೇ ಈ ಗುತ್ತಿಗೆ ಕೊಡಲಾಗಿದೆ. ಆದರೆ, flies ಎಲ್ಲಾ ಬೊಗಳೂರಿನ ಜನತೆಯ ಮೇಲೆ ಆಗಾಗ್ಗೆ ಹಾರುತ್ತಲೇ ಇವೆ ಎಂಬುದಂತೂ ಬದಲಾಯಿಸಲಾಗದ ವಿಚಾರ.

  ReplyDelete
 5. ಶ್ರೀನಿಧಿಯವರೆ,
  ಸದ್ಯಕ್ಕೆ ಗಾಳಿಲಿ ನಿಲ್ಲಿಸೋಕೆ ಶುಲ್ಕ ಇಲ್ಲ. ಆದ್ರೆ ನಿಲ್ಲಿಸಿ ಅಬ್ಬ ಜಾಗ ಸಿಕ್ತಲ್ಲಾ ಅಂತ ನಿಟ್ಟುಸಿರು ಬಿಟ್ಟು ಗಾಳಿ ಮತ್ತೆ ಒಳಸೇವಿಸಿಕೊಂಡರೆ ಮಾತ್ರ ಚಾರ್ಜಾಗುತ್ತದೆ.

  ReplyDelete
 6. ಶ್ರೀನಿವಾಸರೆ,
  ನೀವು ನಮ್ಮೊಂದಿಗೆ ಬಂದು ಇನ್ನೊಂದು ತಾಪತ್ರಯವಾಯ್ತಲ್ಲಾ... ಹೊಂಡಗಳೇ ಇಲ್ಲದಿದ್ದರೆ, ಕುಡಿದು ಬೀಳುವುದಾದರೂ ಎಲ್ಲಿ? ಇದಕ್ಕೆ ಕುಡುಕರ ಸಂಘದ ಆಕ್ಷೇಪ ಇದೆ.

  ನಮ್ಮ ಏಕ ಸದಸ್ಯ ಬ್ಯುರೋದಲ್ಲಿ ಹತ್ತು ಹಲವಾರು ಮಂದಿ ಹೋಗುತ್ತಾರೆ, ಬರುತ್ತಾರೆ. ಹೀಗಿರುವಾಗ ಯಾರು ಎಲ್ಲಿಗೆ ಹೋದರು ಅಂತೆಲ್ಲಾ ಲೆಕ್ಕ ಇಟ್ಟುಕೊಳ್ಳುವುದು ನಮಗೆ ಕಷ್ಟದ ಕೆಲಸ. ಯಾರಾದ್ರೂ ಬಂದ್ರೆ ಅವರಿಗೆ ನಿಮ್ಮಲ್ಲಿರೋ ಗಾಂಧಿ ಚಿತ್ರವಿರುವ ಎಲ್ಲ ನೋಟುಗಳನ್ನು ಕೊಟ್ಟು ಕಳಿಸಿ...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post