ಬೊಗಳೆ ರಗಳೆ

header ads

ದಿಕ್ಕೆಟ್ಟ ಕೊಟೊಮೊಟ್ಟೆ; ಎಲ್ಲೆಲ್ಲೂ shoe-show !

(ಬೊಗಳೂರು ಚುನಾವಣಾ ಬ್ಯುರೋದಿಂದ)
ಚುನಾವಣೆ ಘೋಷಣೆಯಾಗಿ ಅದಾಗಲೇ ಮತದಾನ ಪ್ರಕ್ರಿಯೆ ಆರಂಭವಾದರೂ, ಈ ಬಾರಿ ತಮಗೆ ಯಾವುದೇ ವ್ಯಾಪಾರ ಏಕಿಲ್ಲ ಎಂದು ಚಿಂತೆ ಮಾಡುತ್ತಿದ್ದ ಕೊಟೊಮೊಟ್ಟೆಮಾಸಂ (ಕೊಳೆತ ಟೊಮೆಟೊ ಮೊಟ್ಟೆ ಮಾರಾಟಗಾರರ ಸಂಘ), ಇದಕ್ಕೆ ಕಾರಣವನ್ನೂ ಕೊನೆಗೂ ಕಂಡು ಕೊಂಡಿದೆ.

ಇದಕ್ಕೆಲ್ಲಾ ಕಾರಣ ಜಾಗತಿಕ ಆರ್ಥಿಕ ಹಿಂಸರಿತ ಎಂದೇ ನಾವು ತಿಳಿದುಕೊಂಡಿದ್ದೆವು. ಆದರೆ ಇದೀಗ ಕಾರಣವೇನೆಂಬುದು ಕೊನೆಗೂ ಪತ್ತೆಯಾಗಿಬಿಟ್ಟಿತು ಎಂದು 'ಕೊಟೊಮೊಟ್ಟೆ' ಅಧ್ಯಕ್ಷ ಕಳಿತ ಕುಮಾರ್ ಹೇಳಿದ್ದಾರೆ. ಎಲ್ಲದಕ್ಕೂಕಾರಣ ಹೊಚ್ಚ ಹೊಸ ಚಪ್ಪಲಿ ಎಸೆತ. ಪ್ರಕರಣ. ಆದರೆ ಆ ಚಪ್ಪಲಿ ಹೊಚ್ಚ ಹೊಸತೇ ಅಥವಾ ಕಡಿದು ತುಂಡಾಗುವ ಹಂತ ತಲುಪಿದ್ದೇ ಎಂಬ ಬಗ್ಗೆ ಸಂಚೋದನೆ ನಡೆಯುತ್ತಿದೆ.

ಅದಿರಲಿ, ನಮ್ಮ ವ್ಯಾಪಾರ ತಗ್ಗಲು ಜಾಗತಿಕ ಬಿಕ್ಕಟ್ಟು ಅಲ್ಲ, ದೇಶೀಯ ಇಕ್ಕಟ್ಟೇ ಕಾರಣ. ದೇಶದಲ್ಲಿ ಶೂ-ಚಪ್ಪಲಿಗೆ ಬೇಡಿಕೆ ಹೆಚ್ಚಾಗುವಂತೆ ಈ ರಾಜಕಾರಣಿಗಳೇ ಮಾಡಿದ್ದು. ಇದುವರೆಗೆ ಕೊಳೆತ ಟೊಮೆಟೋ ಅಥವಾ ಕೊಳೆತ ಮೊಟ್ಟೆಗಳಷ್ಟೇ ಜನರಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಲು ಸಾಕಾಗುತ್ತಿತ್ತು. ಇದೀಗ ಅವುಗಳಿಗೆಲ್ಲಾ ಈ ರಾಜಕಾರಣಿಗಳು immunity ಬೆಳೆಸಿಕೊಂಡಿದ್ದಾರೆ ಎಂಬುದನ್ನು ಅರಿತು, ಮತ್ತಷ್ಟು ತೀವ್ರ ಆಕ್ರೋಶದ ಸಂಕೇತವಾಗಿ ಪಾದರಕ್ಷೆಗಳನ್ನು ಬಳಸಲು ಆರಂಭಿಸಿದ್ದಾರೆ ಎಂದು ಕೊಟೊಮೊಟ್ಟೆ ಸಂಘವು ಪತ್ತೇದಾರಿಕೆ ನಡೆಸಿ ಕಂಡುಕೊಂಡಿದೆ.

ಇದರ ಹಿಂದೆ ರಾಜಕಾರಣಿಗಳ ಭರ್ಜರಿ ಕೈವಾಡವಿದೆ. ಅವರು ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತಿಗೆ ಬೆಲೆ ಕೊಡುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ತಮ್ಮ ಗತ ವೈಭವದ ಸಾಧನೆಗಳ ಮೂಲಕ ಮತದಾರರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಚಪ್ಪಲಿ-ಶೂ ಮಾರಾಟ ಹೆಚ್ಚುವಂತೆ ಮಾಡಿದ್ದಾರೆ. ಮಾತ್ರವಲ್ಲ ಇದರಿಂದಾಗಿ ರಾಜಕಾರಣಿಗಳ ಶೂ-ಚಪ್ಪಲಿಗಳ ಸಂಗ್ರಹಣೆಯೂ ಹೆಚ್ಚಾಗಲಿದೆ ಎಂದು ನಾಪತ್ತೇದಾರಿಕೆಯಲ್ಲಿ ಕಂಡುಕೊಳ್ಳಲಾಗಿದೆ.

ಈ ಮಧ್ಯೆ, ಮುಂದಿನ ಜನ್ಮದಲ್ಲಾದರೂ, ಅಲ್ಲಲ್ಲ ಮುಂದಿನ ಚುನಾವಣೆಯಲ್ಲಾದರೂ ಜನತೆ ಕೊಳೆತ ಮೊಟ್ಟೆ, ಕೊಳೆತ ಟೊಮೆಟೋ ಬಳಸಲು ಪ್ರೇರೇಪಣೆ, ಉತ್ತೇಜನ ನೀಡಲಾಗುತ್ತದೆ. ಈ ಬಾರಿಯೂ ಸಾಕಷ್ಟು ಪ್ರಯತ್ನ ಪಡಲಾಗುತ್ತದೆ ಎಂದು ಕಳಿತ್ ಕುಮಾರ್ ಹೇಳಿದ್ದಾರೆ.

ಈ ಮಧ್ಯೆ, ಮೂರ್ನಾಲ್ಕನೇ ರಂಗಕ್ಕೆ ಚುನಾವಣಾ ಚಿಹ್ನೆಯಾಗಿ ಪಾದರಕ್ಷೆ (ಶೂ ಮತ್ತು ಚಪ್ಪಲಿಗಳ ಚಿತ್ರಗಳ ಮಿಶ್ರಣ)ಯ ಭಿಕ್ಷೆ ನೀಡಬೇಕು ಎಂದು ಅದರೊಳಗಿರುವ ಪಕ್ಷಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿರುವ ಪ್ರಧಾನಿ ಅಭ್ಯರ್ಥಿಗಳು ಚುಚ್ಚುವಾನಣಾ ಆಯೋಗಕ್ಕೆ ಕೋರಿಕೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. mundina olympics alli chappli yesetha swpardheyannu koda serisabeku. namage chinnada padaka kanditha.

    ಪ್ರತ್ಯುತ್ತರಅಳಿಸಿ
  2. ಸುರೇಶ್ ಕಲೀನಾ ಅವರೆ,
    ಬೊಗಳೂರಿಗೆ ಸ್ವಾಗತ.
    ನಿಮ್ಮ ಚಪ್ಪಲಿ ಎಸೆತ ಸಲಹೆ ಸ್ವಾಗತಾರ್ಹ. ಆದ್ರೆ, ಒಲಿಂಪಿಕ್ಸ್ ನೋಡಲೆಂದು ಬಂದವರ ಚಪ್ಪಲಿ ಎಸೆಯಬಾರದು, ಅವರವರೇ ಚಪ್ಪಲಿ ತಂದು ಎಸೆಯಬೇಕೆಂಬ ನಮ್ಮ ಸಲಹೆಯನ್ನೂ ಸೇರಿಸಿ ಕಳುಹಿಸಿದ್ದೇವೆ.

    ಪ್ರತ್ಯುತ್ತರಅಳಿಸಿ
  3. ಸಾಗರದಾಚೆಯವರೆ,
    ನೀವೇನೋ ಮೂರು 'ಹ'ಗಳನ್ನು ಇಲ್ಲಿ ಹೇಳಿದಿರಿ. ನಾವು ಅದನ್ನು ನಮ್ಮ ಬೊಗಳೂರಿಗೆ ಕೊಟ್ಟ ಮೂರು 'ಖ' ಪ್ರಶಸ್ತಿ ಅಂತ ತೆಗೆದುಕೊಂಡಿದ್ದೇವೆ.
    ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D