ಬೊಗಳೆ ರಗಳೆ

header ads

Cut: ಕತ್ತರಿಸುವ ಉದ್ಯೋಗಕ್ಕೆ ಹೆಚ್ಚಿದ ಬೇಡಿಕೆ

(ಬೊಗಳೂರು ನಿರುದ್ಯೋಗ ಬ್ಯುರೋದಿಂದ)
ಬೊಗಳೂರು, ಏ.7- ಪ್ರತಿವರ್ಷ ಚುನಾವಣೆಗಳು ಬರಬೇಕು, ಪ್ರತಿ ಕ್ಷಣವೂ ಚುನಾವಣೆಗಳಿದ್ದರಂತೂ ಮತ್ತಷ್ಟು ಚೆನ್ನ ಎಂದು ಬೊಗಳೂರಿನ ಮಂದಿ ಹಾರೈಸತೊಡಗಿದ್ದಾರೆ. ಮದ್ಯದ ಹೊಳೆ, ಉಡುಗೊರೆಗಳ ಪ್ರವಾಹ ಇತ್ಯಾದಿಗಳೆಲ್ಲಾ ಇದ್ದದ್ದೇ. ಇದರೊಂದಿಗೆ ರುಚಿ ರುಚಿಯಾದ ಚಿಕನ್-ಮಟನ್ ಬಿರಿಯಾನಿಗೆ ಸಮನಾದ ಆಹಾರವೂ ಸಿಗುತ್ತದೆ ಎಂಬುದು ಬೊಗಳೂರು ಮತದಾರರ ಈ ಹರ್ಷಕ್ಕೆ ಕಾರಣ.

ಇಷ್ಟು ಮಾತ್ರವೇ ಅಲ್ಲ, ಇದೀಗ ಅಲ್ಲಲ್ಲಿ ಕಸಾಯಿ ಖಾನೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇದರೊಂದಿಗೆ ಮಚ್ಚು, ಕತ್ತಿ ತಯಾರಿಕಾ ಕಾರ್ಖಾನೆಗಳೂ ಹೆಚ್ಚಾಗತೊಡಗಿದ್ದು, ಇಡೀ ಜಗತ್ತೇ ಆರ್ಥಿಕ ಹಿಂಜರಿತದಲ್ಲಿ ತತ್ತರಿಸುತ್ತಿದ್ದರೆ, ಬೊಗಳೂರು ಮಾತ್ರ ಸಖತ್ ಉದ್ಯೋಗ, ಸಖತ್ ಸಂಪಾದನೆ, ಸಖತ್ ಕೈಗಾರಿಕಾ ಪ್ರಗತಿ ಇತ್ಯಾದಿಗಳೊಂದಿಗೆ ಸಮೃದ್ಧವಾಗುವ ಸೂಚನೆಗಳು ಕಾಣಿಸುತ್ತಿವೆ.

ಇದಕ್ಕೆ ಪ್ರಧಾನ ಕಾರಣವೆಂದರೆ ಚುನಾವಣೆ ಘೋಷಣೆಯಾಗತೊಡಗಿದಂತೆಯೇ ಜಾರಕಾರಣಿಗಳು ಕೊಚ್ಚುವ ಉದ್ಯೋಗ ಆರಂಭಿಸಿದ್ದು!

ಹಿಂದೂಗಳ ಮೇಲೆ ಕೈಮಾಡಿದವರ ಕೈ ಕತ್ತರಿಸಲಾಗುತ್ತದೆ ಎಂದು ಗಾಂಧೀ ಕುಟುಂಬದ ಕುಡಿ ತರುಣ ಗಾಂಧಿ ಹೊತ್ತಿಸಿದ ಕಿಡಿಯಿಂದ ಹಿಡಿದು, ಹಿಂದುತ್ವ ಹೇಳುವವರ ಮೇಲೆ ಕೈ ಕತ್ತರಿಸಬೇಕು ಎಂದು ನಮ್ಮ ಕಾಕಾ ಗೋಡು ತಿಮ್ಮಪ್ಪನವರು ಕೂಡ ಧ್ವನಿ ಎತ್ತಿದ್ದಾರೆ. ಆಮೇಲೆ ರೇಣುಕಾರಾಚಾರ್ಯ ಕೂಡ ತಲೆ ಕತ್ತರಿಸಬೇಕು ಎಂದಿದ್ದಾರೆ. ಇದಕ್ಕೆ ಹೊಸಾ ಸೇರ್ಪಡೆ ಆಂಧ್ರಪ್ರದೇಶದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಹೇಳಿಕೆ. ನಾನು ಕೂಡ ಅಲ್ಪಸಂಖ್ಯಾತರನ್ನು ನೋಯಿಸಿದವರ ಕೈ ಕತ್ತರಿಸುವ ಉದ್ಯಮ ಸ್ಥಾಪಿಸುವುದಾಗಿ ಆತನೂ ಹೇಳಿದ್ದಾರೆ.

ಹೀಗೆ ಎಲ್ಲೆಲ್ಲೂ ಕತ್ತರಿಸುವ ಕಾರ್ಯದ ಬಗ್ಗೆ ಮಾತುಗಳೇ ಕೇಳಿಬರುತ್ತಿದೆ. ಇದಕ್ಕೆಲ್ಲಾ ಮೂಲಭೂತ ಕಾರಣ ಕನ್ನಡ ಚಿತ್ರರಂಗದ ಮಚ್ಚು-ಲಾಂಗುಗಳುಳ್ಳ ಸಾಂಗುಗಳೇ ಆಗಿದ್ದು, ಹೊಡಿಮಗ, ಕಡಿಮಗ ಬಡಿಮಗ ಇತ್ಯಾದಿ ಶಬ್ದಗಳು ಕೂಡ ಜಾರಕಾರಣಿಗಳ ಬಾಯಲ್ಲಿ ನಲಿನಲಿದಾಡುತ್ತಲೇ ಇವೆ.

ಇನ್ನೇನಿದ್ದರೂ ಕೊಚ್ಚುವ ಉದ್ಯೋಗಕ್ಕೇ ಹೆಚ್ಚಿನ ಬೆಲೆ ಎಂದು ತಿಳಿದುಕೊಂಡು ಬೊಗಳೂರಿನ ಜನತೆಯೆಲ್ಲಾ ತಮ್ಮ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಯಾರ ಬಾಯಿಂದ ಯಾವಾಗ 'ಕತ್ತರಿಸುತ್ತೇವೆ' ಎಂಬ ಮತ್ತು ಅದಕ್ಕೆ ತೀರಾ ಹತ್ತಿರವಾದ ಕಡಿ, ಬಡಿ, ಕೊಲ್ಲು, ಕೊಚ್ಚು ಇತ್ಯಾದಿ ಶಬ್ದಗಳು ಕೇಳಿ ಬಂದ ತಕ್ಷಣ ಅವರಲ್ಲಿ ಅಪಾಯಿಂಟ್ಮೆಂಟ್ ತಗೊಂಡು ಎಷ್ಟು ಮಚ್ಚು ಎಷ್ಟು ಲಾಂಗು ಎಂಬಿತ್ಯಾದಿ ಆರ್ಡರ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಆದರೆ ಇಷ್ಟೆಲ್ಲದವರ ನಡುವೆ ಮಚ್ಚು-ಲಾಂಗು ತಯಾರಿಕಾ ಕಂಪನಿಗಳಿಗೆ ತೀವ್ರವಾಗಿ ಗೊಂದಲ ಮೂಡಿಸಿದ ಸಂಗತಿಯೆಂದರೆ, ಹೆಚ್ಚಿನವರು ಕೈ ಕತ್ತರಿಸುತ್ತೇನೆ, ತಲೆ ಕತ್ತರಿಸುತ್ತೇನೆ ಎಂದು ಘೋಷಿಸಿದ್ದರೂ, ಬೇರೆ ಯಾವ್ಯಾವುದನ್ನೆಲ್ಲಾ ಕತ್ತರಿಸಲು ಅವರು ಸ್ಕೆಚ್ ಹಾಕಿಕೊಂಡಿದ್ದಾರೆ ಎಂಬುದು ನಿಖರವಾಗದಿರುವುದು. ಮತ್ತು ಕತ್ತರಿ ಪ್ರಯೋಗ ಮಾಡಿ ಸಂಪಾದಿಸಿದ್ದನ್ನು ಏನು ಮಾಡುತ್ತಾರೆ, ಉಪ್ಪಿನಕಾಯಿ ಹಾಕುತ್ತಾರಾ, ಹಾಕಿದ್ರೆ ಯಾರಿಗೆ ಬಡಿಸುತ್ತಾರೆ, ಇತ್ಯಾದಿ... ಹೀಗಾಗಿ ಇವುಗಳ ಸಂಶೋಧನೆಗಾಗಿ ಬೊಗಳೂರು ಓದುಗರ ಸಹಾಯ ಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇಷ್ಟೇ ಆದರೆ, ಬೊಗಳೂರು ಬಡ ದೇಶ ಎಂದುಕೊಳ್ಳಬಹುದಿತ್ತು. ಆದರೆ ಇಷ್ಟೆಲ್ಲಾ ಕೈಗಾರಿಕಾ ಪ್ರಗತಿಯೊಂದಿಗೆ ರಸ್ತೆ ರಿಪೇರಿ ಉದ್ಯೋಗಿಗಳು ಕೂಡ ಹೊಸ ಆಶಾವಾದ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಕಾರಣವೆಂದರೆ ಆಲೂ ಪ್ರಸಾದರು ತರುಣನನ್ನು ಕ್ರಶರ್ ಅಡಿಗೆ ಹಾಕುತ್ತಿದ್ದೆ ಎಂದು ಹೇಳಿರುವುದು. ಹೀಗಾಗಿ ರೋಡ್ ರೋಲರ್‌ಗಳಿಗೆ, ಕ್ರಶರ್‌ಗಳಿಗೆ ಕೂಡ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿದುಬಂದಿದ್ದು, ಇವುಗಳನ್ನು ತಯಾರಿಸುವ ಕಾರ್ಖಾನೆಗಳನ್ನೂ ತೆರೆಯಲಾಗುತ್ತದೆ.

ಹೀಗಾಗಿ ಎಲ್ಲೆಲ್ಲೂ ಉದ್ಯೋಗ, ರೋಲ್ ಕಾಲರ್‌ಗಳೆಲ್ಲಾ ರೋಡ್ ರೋಲರ್ ಉದ್ಯಮಕ್ಕೆ, ಮಚ್ಚು-ಲಾಂಗು ಹಿಡಿದು ತಿರುಗುತ್ತಿರುವವರೆಲ್ಲರೂ ಕಸಾಯಿಖಾನೆ ಉದ್ಯೋಗಕ್ಕೆ, ಅಪಾಪೋಲಿಗಳಂತೆ ಅಡ್ಡಾಡುತ್ತಿರುವವರೆಲ್ಲರೂ ಮಚ್ಚು-ಕತ್ತಿ-ಲಾಂಗು ತಯಾರಿಕಾ ಉದ್ಯೋಗಕ್ಕೆ ಕೈಹಚ್ಚಿದ್ದು, ಇಂಥ ಚುನಾವಣೆಗಳು ಪದೇ ಪದೇ ಬರಲಿ ಎಂದು ಕುಣಿಕುಣಿದಾಡುತ್ತಿದ್ದಾರೆ ಎಂದು ಎಲ್ಲಿಯೂ ಮೂಗು ತೂರಿಸದ ಬೊಗಳೂರು ಬ್ಯುರೋದ ಸಮಸ್ತ ಸಿಬ್ಬಂದಿಗಳಲ್ಲೊಬ್ಬರು ವರದ್ದಿ ತಂದುಹಾಕಿದ್ದಾರೆ.

ಆದರೂ, ಇಷ್ಟೆಲ್ಲಾ ಕತ್ತರಿಸಿದರೆ, ಅದನ್ನು ರಾಶಿ ಹಾಕುವುದೆಲ್ಲಿ ಎಂಬುದು ಕೂಡ ಬೊಗಳೂರು ಮಂದಿಗೆ ಇನ್ನೂ ಅರ್ಥವಾಗದ ಸಂಗತಿ. ಚುನಾವಣೆಗಳ ಬಳಿಕ ಎಲ್ಲೆಲ್ಲೂ ಕೈಗಳು, ಕಾಲುಗಳು, ತಲೆಗಳು, ಕಿವಿಗಳು, ಮೂಗುಗಳು ದೊರೆಯಬಹುದು ಎಂದು ಭವಿಷ್ಯ ನುಡಿಯಲಾಗುತ್ತಿದೆ.

ಚುಚ್ಚುವನಾಣೆ ಆಯೋಗ ಪ್ರತಿಕ್ರಿಯೆ:
ಚುನಾವಣಾ ಭಾಷಣದಲ್ಲಿ ಈ ರೀತಿ ಹೇಳಿರುವುದರಿಂದ ಚುನಾವಣಾ ಆಯೋಗವು ಪ್ರತಿಕ್ರಿಯಿಸಿದ್ದು, ನಾವು ಈ ಬಗ್ಗೆ ಈಗ ಯಾವುದೇ ಕ್ರಮ ಕೈಗೊಳ್ಳುವುದು ಅಸಾಧ್ಯ. ಏನಿದ್ದರೂ ಕತ್ತರಿಸಿ ತಂದು ತೋರಿಸಿ... ನಮಗೆ ಪ್ರೂಫ್ ಬೇಕು ಪ್ರೂಫ್... ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

13 ಕಾಮೆಂಟ್‌ಗಳು

 1. ಅನ್ವೇಷಿ...

  ಸತ್ಯವನ್ನೇ ಹೇಳಿದ್ದೀರಿ...!
  ನಾಚಿಕೆ, ಮಾನ, ಮರ್ಯಾದಿ, ಬಿಟ್ಟವರಿಗೆ...
  ವೋಟು ಹಾಕಿ...
  ನಮ್ಮ ದೇಶವನ್ನು ಕೊಡಬೇಕಲ್ಲ...!

  ಬೇಸರವಾಗುತ್ತದೆ...

  ಪ್ರತ್ಯುತ್ತರಅಳಿಸಿ
 2. ಅನ್ವೇಷಿ,
  ಕೆಲವೊಮ್ಮೆ ದೇಶ ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯಲು ಕಷ್ಟ. ಒಂದೆಡೆ ಅರ್ಥಿಕ ಮುಗ್ಗಟ್ಟಿನಲ್ಲೂ ಪ್ರಬಲ ಆರ್ಥಿಕತೆ ಹೊಂದಿದ ರಾಷ್ಟ್ರವಾಗುವ ಲಕ್ಷಣ, ಇನ್ನ್ನೊಂದೆದೆ ನಮ್ಮ ರಾಜಕಾರಣಿಗಳೇ ನಮ್ಮನ್ನು ತಿನ್ನುತ್ತಿದ್ದಾರೆ.

  ಪ್ರತ್ಯುತ್ತರಅಳಿಸಿ
 3. "ನಾವು ಈ ಬಗ್ಗೆ ಈಗ ಯಾವುದೇ ಕ್ರಮ ಕೈಗೊಳ್ಳುವುದು ಅಸಾಧ್ಯ. ಏನಿದ್ದರೂ ಕತ್ತರಿಸಿ ತಂದು ತೋರಿಸಿ..." :) -ಬೊಗಳೆ ಸಂಪಾದಕರಿಗೂ ಅನ್ವಯಿಸೀತು, ಹುಷಾರಾಗಿರಿ.

  ನಿಮ್ಮ ವರದಿಗಾರರ ಗಮನಕ್ಕೆ ಇನ್ನೊಂದು ನ್ಯೂಸ್ -

  http://prajavani.net/Content/Apr72009/state20090406123310.asp?section=updatenews

  ಪ್ರತ್ಯುತ್ತರಅಳಿಸಿ
 4. edhu yesto vasi,kattari prayoga kevala "kai kalu thale" ge matra simithavagidhe. bangalorerina doctor aminala hage kattari proyaga madidhare kastha

  ಪ್ರತ್ಯುತ್ತರಅಳಿಸಿ
 5. ಯುವಕವಿಗಳೇ ಸ್ವಾಗತ,
  ನಿಮ್ಮ ಯುವ ಕವಿಗಳಿಗೆ ನಾವೂ ಕಿವಿ ಆನಿಸಬಹುದೆ?
  ಬರ್ತಾ ಇರಿ

  ಪ್ರತ್ಯುತ್ತರಅಳಿಸಿ
 6. ಸಿಮೆಂಟು ಮರಳಿನವರೆ,
  'ಸತ್ಯ ಹೇಳಿದ್ದೀರಿ' ಅಂತ ಹೇಳಿ ನಮ್ಮ ಅಸತ್ಯಾನ್ವೇಷಣೆಯಲ್ಲಿರುವ ನಮ್ಮ ಬೊಗಳೂರಿನ ಮಾನ, ಮರ್ಯಾದಿ ಕಳೆಯುವ ಕೆಲಸ ಮಾಡಿದ್ದೀರಿ. ಇದನ್ನು ಖಡಾಖಂಡಿತವಾಗಿ ಕ್ಷಮಿಸಲಾಗುತ್ತದೆ. ನೀವು ದೇಶ ಕೊಡದಿದ್ದರೂ, ನಾವು ಎಳೆದು ತಗೋತೀವಿ!

  ಪ್ರತ್ಯುತ್ತರಅಳಿಸಿ
 7. ಸಾಗರದಾಚೆಯಲ್ಲಿ ಇಂಚರ ನುಡಿಯುವವರೆ,
  ಈಗಾಗ್ಲೇ ಭಾರತೀಯರು ತಿಂಡಿಪೋತರು, ಇದರಿಂದಾಗಿ ಆಹಾರದ ಬಿಕ್ಕಟ್ಟು ಉಂಟಾಗಿದೆ ಅಂದ ಜಾರ್ಜ್ ಬುಷ್ ಹೇಳಿದ್ದರು. ಭವಿಷ್ಯದಲ್ಲಿ ಆಹಾರದ ಕೊರತೆ ಕಾಡಲಿರುವುದರಿಂದ, ರಾಜಕಾರಣಿಗಳು ಈಗಲೇ ಮತದಾರರನ್ನು ಸುಲಿಯಲು, ತಿನ್ನಲು ಅಭ್ಯಾಸ ಮಾಡುತ್ತಿದ್ದಾರೆ.

  ಪ್ರತ್ಯುತ್ತರಅಳಿಸಿ
 8. ಶ್ರೀತ್ರೀ ಅವರೆ,
  ಬೊಗಳೆ ಸಂಪಾದಕರು ಸದ್ಯಕ್ಕೆ ಕಟ್-ಪ್ರೂಫ್ ಏನಾದ್ರೂ ರಕ್ಷಣಾ ಕವಚ ಇದೆಯಾ ಅಂತ ಹುಡುಕಲಾರಂಭಿಸಿದ್ದಾರೆ. ಮತ್ತೊಂದು ವಿಷಯವೆಂದ್ರೆ, ನಮ್ಮ ತಲೆಯಂತೂ ಕಡಿಯೋಕಾಗಲ್ಲ, ಯಾಕಂದ್ರೆ ಇದ್ದರಲ್ಲವೇ ಕತ್ತರಿಸೋದು?

  ನಮ್ಮ ವರದ್ದಿಗಾರರು ಬೇರೆಲ್ಲೋ ಕೆಲಸದಲ್ಲಿ ಮುಳುಗಿದ್ದರಾದ್ರಿಂದ ಸಿಟ್ಟಿ ರವಿಯವರು ತಿಥಿ ಮಾಡುತ್ತೇನೆ, ಊಟ ಹಾಕ್ತೇನೆ ಎಂದಿದ್ದರೂ, ತಿಥಿಯೂಟಕ್ಕೆ ಹೋಗಲು ಪುರುಸೊತ್ತು ದೊರಕಿರಲಿಲ್ಲ.

  ಪ್ರತ್ಯುತ್ತರಅಳಿಸಿ
 9. ಚಿಂತೆಯ ಜನಕರೇ,
  ಸದ್ಯಕ್ಕೆ ಈಗ ಹೊರಗಿನ ಭಾಗಗಳಿಗೆ ಮಾತ್ರ. ಆಮೇಲೆ ಕಿಡ್ನಿಗಳನ್ನು, ಹೃದಯವನ್ನು, ಮತ್ತೆ ಎಲ್ಲಾದರೂ ಇದ್ದರೆ ಮೆದುಳನ್ನು ಕತ್ತರಿಸುವ ಬಗ್ಗೆಯೂ ಯೋಚನೆ ಮಾಡಲಾಗುತ್ತದೆ ಅಂತ ನಮ್ಮ ವರದ್ದಿಗಾರರು ಪತ್ತೆ ಹಚ್ಚಿದ್ದಾರೆ.

  ಪ್ರತ್ಯುತ್ತರಅಳಿಸಿ
 10. ಇದು ಬಿ.ಜೆ.ಪಿ.ಯವರಿಗೆ ಮಾತ್ರ ಅನ್ವಯಿಸುತ್ತದೆ ಮಾರಾಯ್ರೆ. ಯಾಕೆಂದ್ರೆ ಅವರು ಮಾತ್ರ ಹಿಂದುಗಳ ಪರ ದನಿ ಎತ್ತುತ್ತಾರೆ. ಬೇರೆಯವರು ಮುಸ್ಲಿಮರ ಪರ, ಕ್ರಿಶ್ಚಿಯನ್ನರ ಪರ ದನಿ ಎತ್ತುತ್ತಾರೆ. ಖಂಡಿತಾ...ಹಿಂದೂಗಳ ವಿರುದ್ದ ಮಾತನಾಡುವ ಹಿಂದೂಗಳೆನಿಸಿಕೊಂಡಿರುವ ದೇಶದ್ರೋಹಿಗಳ ತಲೆ ಖಂಡಿತಾ ಕತ್ತರಿಸಿ ಅರಬ್ಬೀ ಸಮುದ್ರಕ್ಕೆ ಎಸೆಯಬೇಕು. ವರುಣ್ ಗಾಂಧಿಯ ಹೇಳಿಕೆಗೆ ನನ್ನ ಬೆಂಬಲವಿದೆ. ಯಾವ ರಾಜಕಾರಣಿಗೆ ಈ ಥರಾ ಹೇಳುವಂತಹ ಧೈರ್ಯ ಇದೆ?. ಈ ವರುಣ್ ಗಾಂಧಿ, ನರೇಂದ್ರ ಮೋದಿಗಳಿಂದ ನಮ್ಮ ದೇಶ ಸ್ವಲ್ಪ ನಿಧಾನವಾಗಿ ಉಸಿರಾಡುತ್ತಿದೆ. ಇಲ್ಲದಿದ್ದಲ್ಲಿ ಈ ಅಲ್ಪಸಂಖ್ಯಾತರು (ಕಾಂಗ್ರೆಸಿಗರೂ, ಅಹಿಂದೂಗಳು) ಇವತ್ತು ನಮ್ಮ ದೇಶವನ್ನು ಇನ್ನೊಂದು ಪಾಕಿಸ್ತಾನ ಮಾಡುತ್ತಿದ್ದರು.
  ಈ ಹಿಂದೂಗಳ ವಿರುದ್ದ ಮಾತನಾಡುವ ಎಲ್ಲ ದೇಶದ್ರೋಹಿಗಳ ಕತ್ತು ಕತ್ತರಿಸಿ, ನಾಯಿಗಳಿಗೆ ಹಾಕಬೇಕು.

  ಪ್ರತ್ಯುತ್ತರಅಳಿಸಿ
 11. ಕೈ,ಕಾಲು, ತಲೆ ಇಂಥಾ minor ಅಂಗಗಳನ್ನು ಕತ್ತರಿಸೊ ಬದಲು ಮನುಜನ ಪ್ರಮುಖ ಅಂಗವನ್ನು ಕತ್ತರಿಸಿ,ಅನಂಗನನ್ನಾಗಿ
  ಮಾಡಿದರೆ, ಜನಸಂಖ್ಯಾ ಸ್ಫೋಟವಾದರೂ ತಪ್ಪೀತು!

  ಪ್ರತ್ಯುತ್ತರಅಳಿಸಿ
 12. ಗುರುಗಳೆ,
  ಇಂಥ ಜಾರಕಾರಣಿಗಳ ಕತ್ತು ಕತ್ತರಿಸಿ ಏನೂ ಪ್ರಯೋಜನವಿಲ್ಲ. ಯಾಕೆಂದರೆ ಕತ್ತಿನ ಮೇಲೆ ಏನೂ ಇರುವುದಿಲ್ಲ. ಖಾಲಿ ಖಾಲಿ... ಅದೇ ಹೆಡ್ ಲೆಸ್ ಚಿಕನ್!

  ಪ್ರತ್ಯುತ್ತರಅಳಿಸಿ
 13. ಸುನಾಥರೆ,
  ನಿಮ್ಮ ಸಲಹೆಯನ್ನು ಜಾರಕಾರಣಿಗಳು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಯಾಕೆಂದರೆ ಓಟುಗಳು ಹುಟ್ಟಿಕೊಳ್ಳುವುದೇ ಪ್ರಮುಖ ಅಂಗದಿಂದ. ಅದು ಕೂಡ ಅಲ್ಪಸಂಖ್ಯೆಯಲ್ಲಿರುವವರು ಬೃಹತ್ ಸಂಖ್ಯೆಯಾದರೆ ಮಾತ್ರವೇ ಓಟುಗಳು ಬರುತ್ತವೆ... ಸೋ... rejected...

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D