ಬೊಗಳೆ ರಗಳೆ

header ads

ಅಲ್ಲಲ್ಲಿ ಸ್ಲಮ್, ರಾಷ್ಟ್ರೀಯ ಪ್ರಾಣಿ ಡಾಗ್!

(ಬೊಗಳೂರು ಸ್ಲಮ್ಮು ಶೋಧನಾ ಬ್ಯುರೋದಿಂದ)
ಬೊಗಳೂರು, ಫೆ.25- ಸ್ಲಮ್ಮುಗೋಸ್ಕರ' ಪ್ರಶಸ್ತಿ ಲಭಿಸಿರುವುದರಿಂದ ಉತ್ತೇಜಿತವಾಗಿರುವ ಬೊಗಳೂರು ಸರಕಾರ, ಗಲ್ಲಿ ಗಲ್ಲಿಗಳಲ್ಲಿ ಸ್ಲಮ್ಮುಗಳನ್ನು ಸ್ಥಾಪಿಸಲು ಆದೇಶ ಹೊರಡಿಸಿದೆ. ಆದರೆ, ಯಥಾ ಪ್ರಕಾರ ಗೊಂದಲಪುರದಲ್ಲಿರುವ ಕೇಂದ್ರ ಸಚಿವರು, ಆದರೆ, ಗಲ್ಲಿ ಗಲ್ಲಿಗಳಲ್ಲಿ ಸ್ಲಮ್ಮು ಸ್ಥಾಪಿಸಬೇಕೋ ಅಥವಾ ಸ್ಲಮ್ಮು ಸ್ಲಮ್ಮುಗಳಲ್ಲಿ ಗಲ್ಲಿ ಸ್ಥಾಪಿಸಬೇಕೋ ಎಂಬುದಿನ್ನೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಎಲ್ಲ ಕಡೆಗಳಿಂದಲೂ ಅದು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿರುವುದರಿಂದ ಜಾರಕಾರಣಿಗಳಿಗೆ ಪ್ರೇರಕ ಶಕ್ತಿಯಾಗಿರುವ ಡಾಗನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಬೇಕೆಂಬ ಕೂಗು ಗಟ್ಟಿಯಾಗಿ ಕೇಳಿಬರತೊಡಗಿದೆ ಎಂಬುದನ್ನು ಬೊ.ರ.ಬ್ಯುರೋ ಮಾತ್ರವೇ ಪತ್ತೆ ಹಚ್ಚಿ ಪ್ರಕಟಿಸಿದೆ.

ಇದಲ್ಲದೆ, ಸದ್ಯದಲ್ಲೇ ಚುನಾವಣೆಗಳು ನಡೆಯಲಿರುವುದರಿಂದ ಎಲ್ಲ ಸ್ಲಮ್ಮುಗಳಲ್ಲಿ ಮನುಷ್ಯರ ಜೊತೆಗಿರುವ ಡಾಗುಗಳಿಗೂ ಮತದಾನದ ಹಕ್ಕು ಕೊಡಿಸಲಾಗುತ್ತದೆ. ಡಾಗುಗಳ ಜನಸಂಖ್ಯೆ ವೃದ್ಧಿಗೆ ಉತ್ತೇಜನ ದೊರಕಿಸಲಾಗುತ್ತದೆ. ಅವುಗಳ ಬಾಯಿ ಮುಚ್ಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆಗ ಬಾಲ ಅಲ್ಲಾಡಿಸಲು ಜಾಗವಿಲ್ಲ ಎಂದು ಕೂಗಾಡಿದವರು, ಈಗ ಬಾಲ ಅಲ್ಲಾಡಿಸಲು ಡಾಗು ಇಲ್ಲ ಎಂದು ಹೇಳುವಂತೆ ಮಾಡಿಸುತ್ತೇವೆ ಎಂದು ಸಚಿವರು ಪಣ ತೊಟ್ಟಿದ್ದಾರೆ.

"ಸ್ಲಮ್ಮುಡಾಗು ಸ್ವೀಪ್ಸ್ ಆಸ್ಕರ್" ಎಂದೇ ಹೆಚ್ಚಿನ ತಾಣಗಳು ತಲೆ ಬರಹ ಕೊಟ್ಟಿರುವುದರಿಂದ ಉತ್ತೇಜಿತರಾಗಿರುವ ಸಚಿವರು, ಸ್ಲಮ್ಮು ಡಾಗುಗಳು ಸ್ವೀಪ್ ಮಾಡುವುದರಲ್ಲಿ ಈಗಾಗಲೇ ಪಳಗಿದ ಕೈ ಎಂಬುದನ್ನು ಮನಗಂಡಿದ್ದಾರೆ. ಆಸ್ಕರನ್ನೇ ಸ್ವೀಪ್ ಮಾಡಿರುವ ಅವುಗಳು ಅಲ್ಪ ಸ್ವಲ್ಪ ಕಸವನ್ನು ಸ್ವೀಪ್ ಮಾಡಲಾರವೇ? ಹೀಗಾಗಿ ಪಟ್ಟಣ ಪ್ರದೇಶಗಳಲ್ಲಿ ರಸ್ತೆ, ಬೀದಿ ಸ್ವೀಪ್ ಮಾಡಲು ಸ್ವೀಪರ್‌ಗಳನ್ನೆಲ್ಲಾ ಕಿತ್ತು ಹಾಕಿ, ಸ್ಲಮ್ಮು ಡಾಗುಗಳನ್ನೇ ನೇಮಿಸುವ ಇರಾದೆಯಲ್ಲಿದ್ದಾರೆ.

ಇದಲ್ಲದೆ, PM, President congratulates Slumdog, Everybody is hailing Slumdog, Rejoice/wishes galore for Slumdog ಮುಂತಾದ ತಲೆಬರಹಗಳು ಕಣ್ಣು ಕುಕ್ಕಿದ್ದು ಮತ್ತು ಸ್ವೀಪರ್ ಕೆಲಸಗಳಿಗೆ ಸ್ಲಮ್ಮು ಡಾಗುಗಳ ನೇಮಕಕ್ಕೆ ತೀವ್ರ ಪ್ರತಿರೋಧ ಎದುರಾಗಿದ್ದು ಬೊಗಳೂರಿನ ಸ್ಲಮ್ಮು ಮಂಕಿಗಳಿಂದ. ಇಷ್ಟು ವರ್ಷದಿಂದ ನಾವು ಇಷ್ಟೆಲ್ಲಾ ಹಾರಾಡುತ್ತಾ, ಕೂಗಾಡುತ್ತಾ, ಬೊಗಳಾಡುತ್ತಾ ಇದ್ದರೂ, ನಮ್ಮನ್ನು ಯಾರೂ ಗುರುತಿಸಿಲ್ಲ, ಸ್ಲಮ್ಮು ಡಾಗುಗಳನ್ನು ಮಾತ್ರವೇ ಗುರುತಿಸಲಾಗಿದೆ ಎಂದು ಮಂಕಿ ಸಮುದಾಯ ರೊಚ್ಚಿಗೆದ್ದಿದೆ. ಹೀಗಾಗಿ ನಮಗೂ ಆಸ್ಕರು ದೊರಕಿಸಬೇಕು, ಇಲ್ಲವಾದಲ್ಲಿ ಕನಿಷ್ಠ ಪಕ್ಷ ಕೇಂದ್ರ ಸಚಿವ ಆಸ್ಕರು ಫೆರ್ನಾಂಡಿಸ್ ಕೈಯಲ್ಲಾದರೂ ಪ್ರಶಸ್ತಿ ಕೊಡಿಸಬೇಕು ಎಂದು ದುಂಬಾಲು ಬಿದ್ದು, ಬೊಗಳೂರು ಬೊಗಳೆ ಬ್ಯುರೋದೆದುರು ಪ್ರತಿಭಟನೆ ಮಾಡುತ್ತಾ ಪ್ರದರ್ಶನವನ್ನೂ ಮಾಡತೊಡಗಿವೆ. ಸ್ಲಮ್ಮು ಡಾಂಕಿಗಳು ಕೂಡ ಇದಕ್ಕೆ ತಮ್ಮ ಅಮೂಲ್ಯವಾದ ಗಾರ್ದಭ ಧ್ವನಿಗೂಡಿಸಿವೆ.

ಈ ಮಧ್ಯೆ, ಜೈ ಹೋ ಎಂಬ ಹಾಡನ್ನೇ ರಾಷ್ಟ್ರಗೀತೆಯಾಗಿ ಮಾಡಬೇಕು ಎಂಬ ಕೂಗು ಕೂಡ ಕೇಳಿಬರತೊಡಗಿದೆ. ಇದಕ್ಕೆ ಕಾರಣವೆಂದರೆ, ಶೀಘ್ರದಲ್ಲೇ ಚುನಾವಣೆ ಬರಲಿವೆ. ತಾವು ಐದು ವರ್ಷ ಸಂಸತ್ತಿನಲ್ಲಿ ಗಲಾಟೆ, ಗದ್ದಲ ಮಾಡುತ್ತಾ ತೆರಿಗೆದಾರರ ಹಣವನ್ನು ಆರಾಮವಾಗಿ ನುಂಗುತ್ತಾ ಕಾಲ ಕಳೆದಿರುವುದೆಲ್ಲಾ ಈ ಟಿವಿಗಳ ಹಾವಳಿಯಿಂದ ಜಗಜ್ಜಾಹೀರಾಗಿದೆ, ಮತದಾರರೂ ರೊಚ್ಚಿಗೆದ್ದು ಪಾಠ ಕಲಿಸಲು ಸಿದ್ಧರಾಗುತ್ತಿದ್ದಾರೆ. ಟಿವಿ ಚಾನೆಲ್ಲುಗಳೆಲ್ಲವೂ ತಮ್ಮ ಬಂಡವಾಳ ಬಯಲು ಮಾಡಿವೆ. ಇದರಿಂದಾಗಿ ಚುನಾವಣೆಗೆ ಮುನ್ನ ಜೈ ಹೋ ಜೈ ಹೋ ಎಂದು ಹಾಡುತ್ತಾ ಆರಿಸಿ ಕಳುಹಿಸಿದ ಜನರು ಈ ಬಾರಿ ನಮ್ಮ ನಾಯಕನಿಗೆ... ಜೈಲ್ ಹೋ ಜೈಲ್ ಹೋ ಎಂದು ಹಾಡುವ ಆತಂಕವಿದೆ.

ಈ ಸಂಕಷ್ಟಮಯ ಪರಿಸ್ಥಿತಿಯನ್ನು ಮನಗಂಡು, ಜೈ ಹೋವನ್ನು ರಾಷ್ಟ್ರಗೀತೆಯಾಗಿಸಬಹುದು, ತಪ್ಪು ತಪ್ಪಾಗಿ ಜೈಲ್ ಹೋ ಎಂದರೆ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬಹುದು ಎಂಬುದು ಈ ಜಾರಕಾರಣಿಗಳ ಹುನ್ನಾರ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಅಲ್ಲಲ್ಲಿ ಕೇಳಿ ಬಂದ ಮತ್ತಷ್ಟು ಹೇಳಿಕೆಗಳನ್ನು ಹೆಕ್ಕಿಕೊಳ್ಳಲಾಗಿದ್ದು, ಅವುಗಳನ್ನು ಪಟ್ಟಿ ಇಂತಿದೆ:

* ಮತ್ತೆ ಮತ್ತೆ ಸ್ಲಂ ಫಿಲ್ಮ್ ಮಾಡುತ್ತೇನೆ: ನಿರ್ದೇಶಕ ಡ್ಯಾನಿ boil.

* ಸ್ಲಮ್ಮಿನಲ್ಲಿರುವ Hot dog ಗಳನ್ನು ರಾಷ್ಟ್ರೀಯ ಖಾದ್ಯ ಎಂದು ಘೋಷಿಸಬೇಕು : ಕೂಲ್ ಡಾಗ್

* ನಮಗೂ ಸ್ಲಮ್ಮಿನ ಸ್ಥಾನ-ಮಾನ ನೀಡಬೇಕು: ಸ್ಲಂ ಕ್ಯಾಟ್

* ಸ್ಲಮ್ಮು ಡಾಗನ್ನು ನಮಗೊಪ್ಪಿಸಿ, ನಾವೇ ತನಿಖೆ ಮಾಡುತ್ತೇವೆ: ಪಾತಕಿಸ್ತಾನದ ಗೊಂದಲಭರಿತ ಸರಕಾರ

* ಸ್ಲಂ ಡಾಗ್‌ಗೆ ಆಸ್ಕರ್ ಪ್ರಶಸ್ತಿ ಬಂದಿದ್ದು ಯುಪಿಎ ಸಾಧನೆ: ಚುನಾವಣೆಗೆ ಸಜ್ಜಾದ ರಾಜಕಾರಣಿ

* ಮುಂದಿನ ಚುನಾವಣೆಗೆ ಸ್ಲಂ ಡಾಗನ್ನೇ ಪಕ್ಷದ ಚಿಹ್ನೆಯಾಗಿಸುತ್ತೇವೆ: ಬೂಮ್‌ಗಾರಪ್ಪ.

ಈ ಮಧ್ಯೆ, ಬಡ ಬೊಗಳೇಗೌಡರು ವಿಶೇಷ ಪತ್ರಿಕಾಗೋಷ್ಠಿಯೊಂದನ್ನು ನಡೆಸಲು ದುಡ್ಡಿಲ್ಲದ ಕಾರಣ, ಬೊ.ರ. ಕಚೇರಿಗೆ ಹೊಕ್ಕು ಹೇಳಿಕೆಯೊಂದನ್ನು ನೀಡಿದ್ದಾರೆ. ಅದೆಂದರೆ, ಆಸ್ಕರ್ ಸಿಗಬೇಕಾಗಿರುವುದು ಸ್ಲಂ ಡಾಗಿಗೆ ಅಲ್ಲ, ದೇಶದ ಮೂಲೆ ಮೂಲೆಯನ್ನೂ ಸ್ಲಮ್ ಮಾಡಿರುವ ನಮ್ಮ ಜಾರಕಾರಣಿಗಳಿಗೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

16 ಕಾಮೆಂಟ್‌ಗಳು

 1. ಸರ್,

  ಓದಿ ನಗು ಬಂತು.....ಬಲು ಮಜವಾಗಿದೆ...ಸ್ಲಂ ಡಾಗ್ ಮತ್ತು ಅದಕ್ಕೆ ಸಂಭಂದಿಸಿದವರ ಕತೆ....

  ಆಹಾಂ! ನನ್ನ ಬ್ಲಾಗಿನಲ್ಲಿ ಹೊಸ ಲೇಖನ "ಹಳೇ ಮನೆಯ ನೆನಪುಗಳು...ಹೊಸ ಮನೆಯ ಕನಸುಗಳು " ನೋಡಲು ಬನ್ನಿ....

  ಪ್ರತ್ಯುತ್ತರಅಳಿಸಿ
 2. ಸ್ಲಮ್ ಡಾಗ್ ಗಳು ಈ ಸರ್ತಿ ಚುನಾವಣೆಗೆ ನಿಲ್ಲುವ ಆಲೋಚನೆಯಲ್ಲಿವೆ ಎಂಬುದು ಹಾರಿ ಬಂದ ಇನ್ನೊಂದು ಸುದ್ದಿ.
  ನಿಮ್ಮ ವರದ್ದಿಗಾರರನ್ನು ಬೇಗ ಅಟ್ಟಿ ಸುದ್ದಿ ನಿಜವೋ ಸುಳ್ಳೋ ಅನ್ನುವುದನ್ನು ಬಯಲಿಗೆ ತನ್ನಿ!

  ಪ್ರತ್ಯುತ್ತರಅಳಿಸಿ
 3. ಬೊಗಳೂರಿನಲ್ಲಿ "Slum-dog-University" ಸ್ಥಾಪನೆ.
  ---ಅಮುಖ್ಯ ಮಂತ್ರಿ ಬಡೆಯೂರಪ್ಪನವರ ಘೋಷಣೆ.
  (ಖೂಳಪತಿ ಸ್ಥಾನಕ್ಕಾಗಿ ತೀವ್ರ ಕಚ್ಚಾಟ!
  --ವರದಿ.)
  .......................................

  ಬುರುಡೆದಾಸರಿಂದ ಹೊಸ ಕೀರ್ತನೆ:

  ಡೊಂಕು ಬಾಲದ ಸ್ಲಮ್ ಡಾ^ಗೇ!
  ನೀನೇನೂಟವ ಇಟ್ಟಿರುವೆ?
  Shitಉ, pitಉ, ಎಲ್ಲಾ bitಉ
  Oscarಅನ್ನೇ ಎಟ್ಟಿರುವೆ!

  ಪ್ರತ್ಯುತ್ತರಅಳಿಸಿ
 4. ಸ್ಲಮ್ ಡಾಗ್‍ಗೆ ಪ್ರಶಸ್ತಿ ಬಂದಿರುವುದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಹಚ್ಚಬೇಕು. ಏಕೆಂದರೆ ಅದರಲ್ಲಿ ಹೇಳಿಕೊಳ್ಳುವಂತಹ ವಿಶೇಷ ಏನೂ ಇಲ್ಲ, ಅಲ್ಲದೆ ಜನಕ್ಕೆ ಒಂದು ಸಂದೇಶವೂ ಇಲ್ಲ. ಇಂತಹ ಒಂದು ಮೂರನೇ ವರ್ಗದ ಚಿತ್ರಕ್ಕೆ ಆಸ್ಕರ್ ಬಂದಿರುವುದು ಸಂದೇಹಾಸ್ಪದ. ನಮ್ಮ ಕನ್ನಡ ಚಿತ್ರ ಮುತ್ತಿನ ಹಾರಕ್ಕೆ ನಿಜವಾದ ಆಸ್ಕರ್ ಬರಬೇಕಿತ್ತು.

  ಪ್ರತ್ಯುತ್ತರಅಳಿಸಿ
 5. ನಮಸ್ತೆ.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

  ವಂದೇ,
  - ಶಮ, ನಂದಿಬೆಟ್ಟ

  ಪ್ರತ್ಯುತ್ತರಅಳಿಸಿ
 6. ನಾಯಿ ನ ರಾಷ್ಟ್ರೀಯ ಪ್ರಾಣಿ ಮಾಡಿದರೆ, ವಿರೋಧ ಪ್ರಾಣಿ ಸ್ಥಾನಕ್ಕೆ ಬೆಕ್ಕನ್ನು ಖಾಯಂ ಆಗಿ ಮಾಡಲು ಮಾರ್ಜಾಲ ಮೀಸಲಾತಿ ಪದ್ಧತಿಯನ್ನ ಜಾರಿಗೊಳಿಸಬೇಕು ಎಂದು ವಿರೋಧ ಪಕ್ಷದ ಆಲೋಚನೆ...>already broken into pieces news.

  ಸ್ಲಂ ಗಳಲ್ಲಿ ಬರೀ ನಾಯಿಗೆ ಸಕಲ ಸೇವೆಗಳಾಗುತ್ತಿವೆ, ಬೆಕ್ಕು, ಜಿರಳೆ, ಹಲ್ಲಿ, ಕತ್ತೆ ಇವೆಲ್ಲಾ ಅನಾಥವಾಗಿವೆ ಅಂತ ನಮ್ಮ ಪಕ್ಕದ ಬ್ಯೂರೋ ಇಂದ ರಿಪೋರ್ಟನ್ನು ಕದ್ದು ತಂದು ಇಲ್ಲಿ ವರದ್ದಿ ಮಾಡುತ್ತಿದ್ದೇವೆ.

  ಪ್ರತ್ಯುತ್ತರಅಳಿಸಿ
 7. ಬಿಳಿಮಲೆಯವರೆ,
  ದೇಶದ ರಾಜಧಾನಿಯಲ್ಲಿದ್ದೋರು ಬೊಗಳೆನಾಡಿನ ರಾಜಧಾನಿಗೆ ಬಂದಿದ್ದೀರಿ. ಸ್ವಾಗತ. ಕಾಮೆಂಟಿಸಿದ್ದಕ್ಕೆ ಧನ್ಯವಾದ.

  ಪ್ರತ್ಯುತ್ತರಅಳಿಸಿ
 8. ಶಿವು ಅವರೆ,
  ಓದಿ ನಗುಬಂತು ಮತ್ತು ಮಜವಾಗಿದೆ ಅಂತೆಲ್ಲಾ ಹೇಳಿ ನಮ್ಮನ್ನು ಕಂಗೆಡಿಸಿದ್ದೀರಿ. ಆದರೂ ನಾವು ಧೃತಿಗೆಡುವುದಿಲ್ಲ ಅಂತ ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.

  ಅದಿರಲಿ, ನೀವೇಕೆ ಸ್ಲಮ್ಮು ಸ್ಲಮ್ಮುಗಳಲ್ಲಿರುವ ಡಾಗುಗಳ ಚಿತ್ರ ಅಭಿಯಾನವನ್ನು ಪ್ರಾರಂಭಿಸಬಾರದು?* ಇದು ಉಚಿತ ಸಲಹೆಯಾದರೂ, ಶುಲ್ಕ ತಗುಲುವುದು ಖಚಿತ. ಯಾಕೆಂದರೆ ಅಲ್ಲೊಂದು * ಮಾರ್ಕ್ ಇದೆಯಲ್ಲ... ಶರಾಬುಗಳು ಅನ್ವಯ ಅಂತ...!

  ಪ್ರತ್ಯುತ್ತರಅಳಿಸಿ
 9. ಜ್ಯೋತಿ ಅವರೆ,
  ನೀವು ನೀಡಿದ ಐಡಿಯಾವನ್ನು ಉಚಿತ ಎಂದೇ, ಶುಲ್ಕರಹಿತ ಎಂದೇ ತಿಳಿದುಕೊಂಡು ನಮ್ಮ ರದ್ದಿಗಾರರನ್ನು ಅಟ್ಟಿದ್ದೇವೆ. ಇನ್ನೇನು ಅವರಿಲ್ಲಿ ಬಂದು ರದ್ದಿ ಸುರಿಯಲಿದ್ದಾರೆ...

  ಪ್ರತ್ಯುತ್ತರಅಳಿಸಿ
 10. ಸುನಾಥರೆ,
  ನಿಮ್ಮ university ಸಲಹೆ ಬಗ್ಗೆ ಯೂರಪ್ಪ ಅವರನ್ನು ಕೇಳಿದಾಗ, ಬಜೆಟಿನಲ್ಲಿ ಆಗಲೇ ಘೋಷಿಸಿದ್ದೇವೆ, ಹೇಗಿದ್ದರೂ ಚುನಾವಣೆಗೆ ಮತ್ತು ಅದರಲ್ಲಿ ಆರಿಸಿಬರಲು ಸ್ಲಮ್ಮು ಅಗತ್ಯ, ಅದು default ಆಗಿ ಸೇರ್ಪಡೆಯಾಗಿದೆ ಎಂದಿದ್ದಾರೆ.

  ನಿಮ್ಮ ಕವನದಿಂದ ಸ್ಫೂರ್ತಿಗೊಂಡು, ಜಾರಕಾರಣಿಗಳೆಲ್ಲ ಈಗ ಅದನ್ನೆಲ್ಲಾ (Shitಉ, pitಉ,) ಹೆಕ್ಕಿಕೊಳ್ಳಲು ಓಡುತ್ತಿದ್ದಾರಂತೆ. ಹೇಗಿದ್ದರೂ ಓಟು ಬಂತಲ್ಲ...ಏನು ಸಿಕ್ಕಿದರೂ ಸರಿಯೇ...

  ಪ್ರತ್ಯುತ್ತರಅಳಿಸಿ
 11. ಶಮ ನಂದಿ ಮಿಂಚುಳ್ಳಿಬೆಟ್ಟದವರೆ, ಬೊಗಳೂರಿಗೆ ಸ್ವಾಗತ.

  ಒಳ್ಳೆಯ ಕೆಲಸಕ್ಕೆ ಶುಭವಾಗಲಿ. ಸ್ಲಮ್ಮು ನಿರ್ಮಿಸಿದವರ ಊರಿನಲ್ಲಿಯೂ ಇಂಥ ಕೆಲಸ ಆಗುತ್ತಿದೆಯಲ್ಲ ಎಂಬುದು ಸಂತೋಷ. ಕಾರ್ಯಕ್ರಮ ಯಶಸ್ವಿಯಾಗಲಿ.

  ಪ್ರತ್ಯುತ್ತರಅಳಿಸಿ
 12. ಗುರುಗಳೇ,
  ನೀವು ಹೇಳಿದ್ದು ಖರೆ. ಆದ್ರೆ ಓಟಿಗಾಗಿ ಲಮ್ಮುಗಳನ್ನು ನಿರ್ಮಿಸಿಯೇ, ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವವರು ಮತ್ತು ಅದನ್ನೇ ಬಂಡವಾಳವಾಗಿಟ್ಟುಕೊಂಡ ಬಹುರಾಷ್ಟ್ರೀಯರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಿದರೂ ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಯಾಕಂದ್ರೆ ದೇಶಕ್ಕೆ ಆಸ್ಕರ್ ಮಹಾನ್ ಎಮ್ಮೆ ಅಂತ ಈಗಾಗಲೇ ಎಲ್ಲರೂ ಹೇಳುತ್ತಲೇ ಇರುವುದರಿಂದ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ.

  ಪ್ರತ್ಯುತ್ತರಅಳಿಸಿ
 13. ಲಕ್ಷ್ಮಿ ಅವರೆ,
  ನಿಮ್ಮ ಬ್ರೋಕನ್ ನ್ಯೂಸ್ ಕೇಳಿ ನಮ್ಮಲ್ಲಿದ್ದ ಬೆಕ್ಕು ಕೂಡ ಪರಾರಿಯಾಗಿಬಿಟ್ಟಿದೆ. ಈಗ ಮತ್ತೆ ಅದನ್ನು ಹುಡುಕಿ ತಂದು ಸೇರಿಸಿಕೊಂಡಿದ್ದೇವೆ.

  ಜಿರಳೆ ಹಲ್ಲಿಗಳಿಗೂ ಪಕ್ಕದ ಚೀನಾದಲ್ಲಿ ಒಳ್ಳೆಯ ಬೆಲೆ ಇದೆ ಅಂತ ಕೇಳಿದ್ದೇವೆ. ಹೀಗಾಗಿ ವರದ್ದಿ ಕದ್ದು ತಂದವರಿಗೆ ನೀವಿದನ್ನು ತಿಳಿಸಲು ಅಡ್ಡಿಯಿಲ್ಲ.

  ಪ್ರತ್ಯುತ್ತರಅಳಿಸಿ
 14. u have very good sense of humour and what ever u write is filled with humour, at the same time its witty... keeeeeeeep gooooooooing. (UR blog title itself has some sense and it attracts...)

  ಪ್ರತ್ಯುತ್ತರಅಳಿಸಿ
 15. ಸೈನ್-ಕೆಮಿಸ್ಟರೇ,
  ಬೊಗಳೂರಿಗೆ ಸ್ವಾಗತ.
  ನಿಮ್ಮ ಬ್ಯುರೋದಲ್ಲಿ ದೊರಕುವ ನಗುವಿನ ಅನಿಲದಷ್ಟು ಪರಿಣಾಮಕಾರಿಯಾಗಿಲ್ಲ ಈ ಬ್ಯುರೋ. ಆದರೆ ನಮಗೂ ಸೆನ್ಸ್ ಇದೆ ಅಂತ ಹೇಳಿದ್ದರಿಂದ ಬೆಚ್ಚಿ ಬಿದ್ದಿದ್ದೇವೆ.

  Keep coming ಅಂತ ನಾವೂ ಹಾರೈಸುತ್ತೇವೆ.
  ನಮಸ್ಕಾರ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D