ಬೊಗಳೆ ರಗಳೆ

header ads

ಭಯೋತ್ಪಾದನಾಬಾದ್‌ನಲ್ಲಿ ಬೊಗಳೆ ಬ್ಯುರೋ!

(ಬೊಗಳೂರು ಪರದೇಶ ಪ್ರವಾಸ ಬ್ಯುರೋದಿಂದ)
ಬೊಗಳೂರು, ಡಿ.26- ಪಾತಕಿಸ್ತಾನವು ಉಗ್ರವಾದಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಲ್ಲ ಅವಕಾಶಗಳನ್ನು ಮುಕ್ತವಾಗಿರಿಸುವುದಾಗಿ ಭಾರತ ಸರಕಾರ ಘೋಷಿಸಿರುವುದರಿಂದ ಪಾತಕಿಸ್ತಾನವು ತುಂಬು ಸಂತೋಷಪಟ್ಟಿದೆ. ಪಾತಕಿಸ್ತಾನಿ ಪ್ರಧಾನಿ ಗಿಲಿಗಿಲಾನಿ ಮತ್ತು ಅದಕ್ಷ ಜಬರ್ದಾರಿ ಅವರು ಈ ಕುರಿತು ಬೊಗಳೂರಿಗೆ ವಿಶೇಷ ಸಂದೇಶ ರವಾನಿಸಿ, ತಮ್ಮ ಸಂತಸವನ್ನು ಹಂಚಿಕೊಳ್ಳಲು ಒಂದು ಪೊಟ್ಟಣ ಬಾಂಬ್ ಕಳುಹಿಸಿದೆ.

ಭಾರತವು ಎಲ್ಲ ಅವಕಾಶಗಳು ಮುಕ್ತ ಎಂದು ಕಳೆದ ಒಂದು ತಿಂಗಳಿಂದ ಹೇಳಿಕೊಳ್ಳುತ್ತಿದ್ದರೂ, ಏನೂ ಮಾಡದಿರುವುದರಿಂದ, ಪಾತಕಿಸ್ತಾನಕ್ಕೆ ಯುದ್ಧಕ್ಕೆ ಸನ್ನದ್ಧವಾಗಲು, ಉಗ್ರಗಾಮಿ ಶಿಬಿರಗಳನ್ನು ಅಡಗಿಸಿಡಲು, ಬಂಧಿತ ಉಗ್ರಗಾಮಿಯ ಕುಟುಂಬ ವರ್ಗವನ್ನು ಕತ್ತಲಕೋಣೆಯಲ್ಲಿರಿಸಲು, ತಾಲಿಬಾನ್ ಉಗ್ರರ ಜೊತೆ ಒಪ್ಪಂದ ಮಾಡಿಕೊಳ್ಳಲು... ಹೀಗೆ ಎಲ್ಲ ಅವಕಾಶಗಳನ್ನು ಮುಕ್ತವಾಗಿ ಒದಗಿಸಿದಂತಾಗಿದೆ ಎಂಬುದು ಪಾತಕಿಸ್ತಾನದ ಆಡಳಿತಗಾರರು ಬೊಗಳೂರಿಗೆ ಫೋನ್ ಮಾಡಿ ನೀಡಿದ ಸ್ಪಷ್ಟನೆ.

ಆದರೆ ಪಾತಕಿಸ್ತಾನವೇಕೆ ಉಗ್ರರನ್ನು ದಮನಿಸುತ್ತಿಲ್ಲ ಎಂಬುದು ಅರ್ಥವಾಗದೆ ಬೊಗಳೂರು ಬ್ಯುರೋ ಮಂದಿ ಇಲ್ಲದ ತಲೆಯನ್ನು ಕೆಡಿಸಿಕೊಳ್ಳತೊಡಗಿದ್ದರು. ಕೊನೆಗೆ ಎಲ್ಲ ಅವಕಾಶಗಳು ಮುಕ್ತ ಎಂಬ "ಕೋಳಿ ಕೇಳಿ ಮಸಾಲೆ ಅರೆಯುವ" ದಯನೀಯ ಹೇಳಿಕೆ ಬಗ್ಗೆ ತೀವ್ರ ದುಃಖದಿಂದ, ರೋಷದಿಂದ, ತಾಪದಿಂದ, ಕೋಪದಿಂದ, ದುಗುಡದಿಂದ, ದುಮ್ಮಾನದಿಂದ ಕಾಯುತ್ತಾ, ಕೊಟ್ಟ ಕೊನೆಗೆ ಸಂತಾಪದಿಂದಲೇ ಪಾತಕಿಸ್ತಾನದ ಆಡಳಿತಗಾರರನ್ನು ಸಂದರ್ಶಿಸಲೆಂದು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗಂಟು-ಮೂಟೆ ಕಟ್ಟಿಕೊಂಡು ಯುದ್ಧ ಸನ್ನದ್ಧರಾಗಿಯೇ ಭಯೋತ್ಪಾದನಾಬಾದ್‌ಗೆ ತೆರಳಿದರು.

ಅಲ್ಲಿ ಉಗ್ರದಟ್ಟಣೆಯಿಂದಾಗಿ (ಜನದಟ್ಟಣೆ ಮಾದರಿಯಲ್ಲಿ) ಕಾಲಿಡಲೂ ಜಾಗವಿಲ್ಲದಿದ್ದರೂ, ಕಾಲಿಟ್ಟ ಕೂಡಲೇ ನಮಗೆ ಎದುರಾದದ್ದು ಕೈಯಲ್ಲಿ ಎಳ್ಳುಂಡೆಯಂತೆ ಬಾಂಬುಗಳನ್ನು ಹಿಡಿದುಕೊಂಡು ಆಟವಾಡುತ್ತಿರುವ ಮಕ್ಕಳು. ಈ ಮಕ್ಕಳ ಅಪ್ಪ, ತನಗೆ ಹೀಗೆ ಸಿಕ್ಕಿದ ದುಡ್ಡಿನಲ್ಲಿ ಇವನ್ನೆಲ್ಲಾ ಮಕ್ಕಳಿಗೆ ತರಿಸಿಕೊಟ್ಟಿದ್ದಾನೆ ಎಂಬುದನ್ನು ಅವರೇ ಬಾಯಿ ದೊಡ್ಡದಾಗಿ ಬಿಟ್ಟು ಹೇಳಿದರು. ನೋಡಿದಾಗ ಬಾಯೊಳಗೂ ಒಂದು ಬಾಂಬ್ ಇತ್ತು!

ಅದಕ್ಷ ಜಬರ್ದಾರಿಯನ್ನು ಮತ್ತು ನಿಧನಾನಿ ಗಿಲಾನಿಯನ್ನು ಪ್ರಶ್ನಿಸಲೆಂದು ತೆರಳಿದವರಿಗೆ ಅಲ್ಲಿ ಅಚ್ಚರಿ ಕಾದಿತ್ತು. ಅವರೆಲ್ಲರೂ ತಾಲಿಬಾನ್ ಮುಖ್ಯಸ್ಥರು, ಐಎಸ್ಐ ಕುಖ್ಯಸ್ಥರು, ಲಷ್ಕರ್, ಜೈಷ್, ಅಲ್ ಖೈದಾ, ಜಮಾತ್ ಉದ್ ದಾವಾ ಮತ್ತಿತರ ಸಾವಿರಾರು ಉಗ್ರ ಸಂಘಟನೆಗಳ ನಾಯಿಕರು, ಮತ್ತು ಸೇನೆಯ ಅತಿಕುಖ್ಯಸ್ಥರೊಂದಿಗೆ ಭೋಜನ ಮಾಡುತ್ತಿದ್ದರು. ಬೊಗಳೂರು ಬ್ಯುರೋದ ಮಂದಿ ಬಂದ ಸುದ್ದಿ ಕೇಳಿಯೇ ಅದಕ್ಷ ಜಬರ್ದಾರಿ ನಮ್ಮನ್ನು ಪಕ್ಕಕ್ಕೆ ಕರೆದರು.

ತಕ್ಷಣವೇ ಬೊಗಳೂರು ಬ್ಯುರೋ ಸಿಬ್ಬಂದಿ ಒಂದು ಪ್ರಶ್ನೆ ಎಸೆದರು. "ನೀವೇಕೆ ಪ್ರಾಮಿಸ್ ಮಾಡಿದಂತೆ ಉಗ್ರವಾದಿಗಳನ್ನು ದಮನಿಸುತ್ತಿಲ್ಲ, ಉಗ್ರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ?". ಬೊಗಳೂರು ಬ್ಯುರೋ ಎಸೆದ ಈ ಏಕೈಕ ಪ್ರಶ್ನೆಯನ್ನು ತಕ್ಷಣವೇ ಎತ್ತಿಕೊಂಡ ಜಬರ್ದಾರಿ, ನಡುಗುತ್ತಲೇ... "ಮಹಾಸ್ವಾಮಿ, ನೀವೇ ನಮ್ಮ ಮಾನ ಕಾಪಾಡಬೇಕು. ನಾವು ಉಗ್ರರ ಮೇಲೆ ಕ್ರಮ ಕೈಗೊಳ್ಳಲು ಹೊರಟೆವು. ಇದಕ್ಕಾಗಿ ಕಾರ್ಯಾಚರಣೆ ಆರಂಭಿಸಿದಾಗ, ಇಡೀ ಪಾತಕಿಸ್ತಾನದ ಜನರನ್ನೆಲ್ಲಾ ಬಂಧಿಸಬೇಕಾಯಿತು. ಅವರನ್ನೆಲ್ಲಾ ಇರಿಸಲು ಜೈಲುಗಳಲ್ಲಿ ಸಮಯ ಬೇಕಲ್ಲ... ಇದು ತೀರಾ ತೊಂದರೆಯ ಸಂಗತಿ. ಸೋ... ನಾವೀಗ ಪಾತಕಿಸ್ತಾನವನ್ನೇ ಜೈಲು ಎಂದು ಘೋಷಿಸಿದ್ದೇವೆ. ಉಗ್ರಗಾಮಿಗಳೆಲ್ಲರೂ ಬಂಧನದಲ್ಲಿದ್ದಾರೆ ಎಂದು ನೀವು ತಿಳಿದುಕೊಳ್ಳಿ" ಎಂಬ ಸಮಜಾಯಿಷಿ ನೀಡಿ, ತಕ್ಷಣವೇ ಐಎಸ್ಐ ಕುಖ್ಯಸ್ಥ, ಲಷ್ಕರ್ ಕುಖ್ಯಸ್ಥ, ಅಲ್ ಖೈದಾ ಕುಖ್ಯಸ್ಥ ಮತ್ತಿತರ ಉಗ್ರಗಾಮಿ ಸಂಘಟನೆಗಳ ಕುಖ್ಯಸ್ಥರ ಕೆಂಗಣ್ಣು ನೋಡಿ, ನಿಧಾನವಾಗಿ ಅಲ್ಲಿಂದ ಜಾರಿ ತಮ್ಮ ಸೀಟಿನಲ್ಲಿ ಕುಕ್ಕರಿಸಿದರು.

ಆ ಬಳಿಕ ಬಂದದ್ದು ಪಾತಕಿಸ್ತಾನದ ನಿಧಾನಮಂತ್ರಿ ಗಿಲಿಗಿಲಾನಿ. ಬೊಗಳೂರಿನ ಸಿಬ್ಬಂದಿ ಪ್ರಶ್ನೆ ಕೇಳುವ ಮುನ್ನವೇ ಉತ್ತರಿಸತೊಡಗಿದ ಅವರು, "ಸ್ವಾಮೀ... ಭಾರತ ಹೇಳಿದಂತೆ ಉಗ್ರಗಾಮಿ ಸಂಘಟನೆಗಳಿಗೆ ನಾವು ಕಡಿವಾಣ ಹಾಕುವುದಾದರೂ ಹೇಗೆ? ನಮ್ಮ ಅಸಹಾಯಕತೆಯನ್ನೂ ಒಂಚೂರು ಅರ್ಥ ಮಾಡಿಕೊಳ್ಳಬಾರದೇಕೆ? ನೋಡಿ, ನಾವೀಗ ಉಗ್ರಗಾಮಿ ಸಂಘಟನೆಗಳಿಗೆ ನಿಷೇಧ ವಿಧಿಸಿದರೆ, ಪಾತಕಿಸ್ತಾನವನ್ನು ಆಳುವವರು ಯಾರು? ನೀವೇ ಹೇಳಿ" ಎಂದರು.

"ನೀವಿದ್ದೀರಲ್ಲಾ? ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದವರು?" ಎಂದು ಬೊಗಳಿಗರು ಏನೂ ತಿಳಿಯದಂತೆ, ಪತ್ರಿಕಾವೃತ್ತಿಗೇ ನಾಲಾಯಕ್ಕಾದ ಪ್ರಶ್ನೆ ಕೇಳಿದಾಗ, ಗಿಲಿಗಿಲಿಯಾನಿಯಿಂದ ಬಂದ ಉತ್ತರ : ಏನ್ ಸ್ವಾಮಿ, ತಮಾಷೆ ಮಾಡ್ತಿದೀರಾ? ನನ್ನದು ಕೂಡ ಸ್ವಂತದ್ದಾದ ಭಯೋತ್ಪಾದನಾ ಸಂಘಟನೆ ಇದೆ. ಇಲ್ಲಿ ಪ್ರತಿಯೊಬ್ಬ ಜಾರಕಾರಣಿಗೂ ಇದೇ ರೀತಿಯ ಸ್ವಂತ ಸಂಘಟನೆಗಳಿವೆ. ಪಾತಕಿಸ್ತಾನವನ್ನು ನಾವೆಲ್ಲಾ ಸೇರಿಕೊಂಡೇ ಆಳುತ್ತಿದ್ದೇವೆ. ಹೀಗಾಗಿ ಭಯೋತ್ಪಾದನೆ ಸಂಘಟನೆಗಳನ್ನು ನಿಷೇಧಿಸಿದರೆ, ದೇಶವನ್ನು ಆಳಲು ಯಾರೂ ಇರುವುದಿಲ್ಲ! ಎಲ್ಲರೂ ಜೈಲಿನಲ್ಲಿದ್ದರೆ ಪಾತಕಿಸ್ತಾನದ ಪ್ರಜೆಗಳನ್ನು ನೋಡಿಕೊಳ್ಳುವವರಾದರೂ ಯಾರು? ಎಂದು ಅಲವತ್ತುಕೊಂಡೇ, ಅಲ್ಲಿಂದ ಜಾಗ ಖಾಲಿ ಮಾಡಿದರು.

ಅಲ್ಲಿಂದ ತಲೆಮರೆಸಿಕೊಂಡ ಬೊಗಳೂರು ಸಿಬ್ಬಂದಿ ಈಗಾಗಲೇ ಬೊಗಳೂರಿಗೆ ಬಂದು ಬಿದ್ದು ಚಾ-ತರಿಸಿಕೊಳ್ಳತೊಡಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. "ಮುಕ್ತ ಅವಕಾಶಗಳು" ಎಂದರೆ ಭಯೋತ್ಪಾದಕರಿಗೆ ಮುಕ್ತ ಅವಕಾಶಗಳು ಅಂತಲೂ ಮಣಮೋಹನ ಸಿಂಗಣ್ಣನ ಹೇಳಿಕೆಯ ಅರ್ಥ. ಭಯೋತ್ಪಾದಕರು ಬೇಕಾದ ರೇಲ್ವೆ ಸ್ಟೇಶನ್ ಅಥವಾ ಹೊಟೆಲ್ಲಿನಲ್ಲಿ ಬಾಂಬ್ ಎಸೆಯಬಹುದು ಮತ್ತು ನಮ್ಮ ATS ಸಿಬ್ಬಂದಿಯನ್ನು ಗುಂಡು ಹಾಕಿ ಕೊಲ್ಲಬಹುದು.
  ಈ ಕೃತ್ಯಗಳನ್ನು ಮಾಡಿದವರು ’ಹಿಂದು’ಳಿದ ಭಯೋತ್ಪಾದಕರು ಎಂದು ಮಂತ್ರಿಗಳು ಹೇಳಿಕೆ ನೀಡುತ್ತಾರೆ. ಹುಚ್ಚ ನ್ಯಾಯಾಲಯವು ಮೇಲಕ್ಕೇರಿಸುವ ದಂಡನೆ ಕೊಟ್ಟರೂ, ಜಾರಕಾರಣಿಗಳು ಕೆಳಗಿಳಿಸುತ್ತಾರೆ.
  ಇವೆಲ್ಲ ಅವಕಾಶಗಳು ಪಾ(ತ)ಕಿಸ್ತಾನದ ಭಯೋತ್ಪಾದಕರಿಗೆ ಭಾರತದಲ್ಲಿ ಮುಕ್ತವಾಗಿವೆ ಎನ್ನುವದು ಒಳಗಿನ ಅರ್ಥ.

  ಪ್ರತ್ಯುತ್ತರಅಳಿಸಿ
 2. ಅದ್ಯಾಕೆ ಜಾರಕಾರಣಿಗಳೆಲ್ಲಾ ಸೀತಾರಾಂ ಅವರ ಸಿರಿಯಲ್ ಟೈಟಲ್ ಸಾಂಗ್ 'ಮುಕ್ತ ಮುಕ್ತಾ..' ಹಾಡ್ತಿದಾರೆ ಅಂತ ಕನ್ಫ್ಯೂಸ್ ಆಗ್ತಿತ್ತು. ನಿಮ್ಮ ವಿಶೇಷ ವರದಿಯಿಂದ ಎಲ್ಲಾ ಸ್ಪಷ್ಟವಾಯಿತು.

  ಪ್ರತ್ಯುತ್ತರಅಳಿಸಿ
 3. ಸುನಾಥರೆ,
  ಭಯೋತ್ಪಾದಕರಿಗೆ ಮುಕ್ತ ಅವಕಾಶಗಳು ಮತ್ತು ಬಡ ಭಾರತೀಯರಿಗೆ ಮುಕ್ತಾಯ ಅವಕಾಶಗಳು (ಪದೇ ಪದೇ ಪಾತಕಿಸ್ತಾನಿ ಉಗ್ರರಿಂದ ಅಲ್ಲಲ್ಲಿ ಸ್ಫೋಟ ಆಗೋದು ಮುಂದುವರಿಯುವ ಕಾರಣಕ್ಕೆ) ಅಂತ ಒಣಮೋರೆ ಸಿಂಗ್ ಹೇಳಿದ್ದಾರೆ.

  ಪ್ರತ್ಯುತ್ತರಅಳಿಸಿ
 4. ಮೃಗನಯನಿ ಅವರೆ,
  ಸೀತಾರಾಂ ಅವರು ಧಾರಾವಾಹಿಯನ್ನು ಎಳೆದೂ ಎಳೆದೂ ಎಳೆದೂ ಎಳೆದೂ... ಅದು ಬೊಗಳೆ ಬ್ಯುರೋವರೆಗೂ ತಲುಪುವಷ್ಟು ಉದ್ದವಾಗಿಬಿಟ್ಟಿತ್ತು. ನಮ್ಮ ಬೊಗಳೂರು ಕಚೇರಿ ಹೊರಗೆಲ್ಲಾ ಅಂಟಂಟು ಯಾಕೆ ಆಗ್ತಾ ಇದೆ ಅಂತ ಈಗ ನಿಮ್ಮ ಹೇಳಿಕೆಯಿಂದಾಗಿ ಗೊತ್ತಾಯ್ತು. ಜಗಿದು ಜಗಿದು ಉಗಿದ ಚೂಯಿಂಗ್ ಗಮ್‌ನಿಂದಾಗಿ!!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D