(ಬೊಗಳೂರು ಆಶಾಸ್ತ್ರಿಯ ಬ್ಯುರೋದಿಂದ)
ಬೊಗಳೂರು, ನ.25- ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಎಂಬ ಸ್ಥಾನ-ಮಾನ ಸಿಕ್ಕಿದೆ, ಬೊಗಳೆಯು ಅಶಾಸ್ತ್ರೀಯ ಭಾಷೆ ಬಳಸುತ್ತಿದೆ ಎಂಬ ಕೂಗೆಲ್ಲಾ ಹಳೆಯದಾಗಿದ್ದು, ನವೆಂಬರ್ ಮುಗಿಯುವುದರೊಳಗೆ ಮತ್ತೊಂದು ಕನ್ನಡ ಹೋರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಚೆನ್ನುಡಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಲು ಬೊಗಳೆಯೂ ಸೇರಿದಂತೆ ಹಲವಾರು ಕನ್ನಡ ಓರಾಟಗಾರರು ಕೋಟ್ಯಂತರ ವರ್ಷಗಳಿಂದಲೇ ಹೋರಾಟ ಮಾಡುತ್ತಾ ಬಂದಿದ್ದುದು ಈಗ ಇತಿಹಾಸ... ಅಲ್ಲಲ್ಲ... ಪ್ರಾಚೀನ ಶಾಸನಗಳಲ್ಲಿ ಕಂಡುಬರಬಹುದಾದ ಪುರಾತನ ಇತಿಹಾಸ. ಅಥವಾ ಅದಕ್ಕಿಂತಲೂ ಹಳೆಯದಾಗಿರುವ ಪೌರಾಣಿಕ ಸಂಗತಿಯಾಗಿದ್ದಿರಬಹುದು. ಈ ಬಗ್ಗೆ ಪ್ರತ್ಯೇಕ ಸಂಚೋದನೆಗೆ ಅಜ್ಞರನ್ನು ಅಟ್ಟಲಾಗುತ್ತದೆ.

ಇದೀಗ ವಿಷಯಕ್ಕೆ ಬರೋಣ. ಕನ್ನಡ ಶಾಸ್ತ್ರೀಯ ಭಾಷೆ ಎಂದು ಕರೆದರೆ ಉಳಿದ ಭಾಷೆಗಳು ಅಶಾಸ್ತ್ರೀಯ ಎಂದಾಗಿ ಅವುಗಳ ಮಾನ ಹೋಗುವ ಸಾಧ್ಯತೆಗಳಿವೆ. ಒಂದಷ್ಟು ದೀರ್ಘ ತೆಗೆದು ಬಳಸಿದರೆ, ಅದು ಯಾವ ಶಾಸ್ತ್ರಿಯ ಭಾಷೆ, ರವಿ ಶಾಸ್ತ್ರಿಯದೋ ಅಥವಾ ವಿನಿವಿಂಕ್ ಶಾಸ್ತ್ರಿಯದೋ ಎಂಬ ಸಂದೇಹಗಳು ಏಳುವುದು ಸಹಜ. ಸೋ... ಅದನ್ನು ಅಭಿಜಾತ ಭಾಷೆ ಎಂದು ಕರೆದರೆ ಉತ್ತಮ ಎಂಬೋ ಸಲಹೆಯೂ ಕೇಳಿ ಬರುತ್ತಿದೆ. ಮತ್ತೊಂದು ವಾದ 'ಪಳಮೈ' ಭಾಷೆ ಎಂದು ಕರೆಯಬಹುದು ಅಂತ.

ಶಾಸ್ತ್ರಕ್ಕಷ್ಟೇ ಸೀಮಿತವಾಗಬಹುದಾದ ಶಾಸ್ತ್ರೀಯ ಭಾಷೆಯ ಹೆಸರು ಬದಲಾಯಿಸುವುದೆಂದರೆ, ಎರಡು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ಅಧಿಕೃತವಾಗಿ ಹೆಸರು ಬದಲಾಯಿಸೋವಷ್ಟು ಇದು ಸುಲಭವಲ್ಲ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಯಾರಿಗೂ ಗೊತ್ತಾಗದಂತೆ ಪತ್ತೆ ಹಚ್ಚಿಬಿಟ್ಟಿದೆ. ಅದೇಕೆ ಎಂದು ಶಾಸ್ತ್ರಿಯ ಓದುಗರು ಪ್ರಶ್ನಿಸಬಹುದು. ಅದಕ್ಕೆ ಉತ್ತರವನ್ನು ಕೂಡ ಕಂಡುಕೊಳ್ಳಲಾಗಿದೆ. ಅದೆಂದರೆ:

"ಇದುವರೆಗೆ ಬೊಗಳೆ ರಗಳೆ ಸಹಿತ ಹಲವಾರು ಮಂದಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ದೊರೆಯಬೇಕು ಅಂತ ಕೋಟ್ಯಂತರ, ಲಕ್ಷಾಂತರ ವರ್ಷಗಳಿಂದ ಹೋರಾಟ ಮಾಡಿದ್ದರು. ಇದೀಗ ಅದನ್ನು ಅಭಿಜಾತವೋ, ಪಾರಂಪರಿಕವೋ, ಚೆನ್ನುಡಿಯೋ, ಪಳಮೈ ಭಾಷೆಯೋ.. ಇತ್ಯಾದಿತ್ಯಾದಿಯಾಗಿ ಹೆಸರು ಬದಲಾಯಿಸಬೇಕಿದ್ದರೆ, ಶುರುವಿನಿಂದಲೇ ಹೋರಾಟ ಶುರು ಹಚ್ಚಿಕೊಳ್ಳಬೇಕು. ಈ ಹೆಸರು ಕೊಡಬೇಕಿದ್ದರೆ ನೀವು ಹೋರಾಟ ಆರಂಭಿಸಿ, ಹಲವಾರು ವರ್ಷಗಳ ಬಳಿಕವೇ ನಾವು ಈ ಸ್ಥಾನ-ಮಾನ ನೀಡುತ್ತೇವೆ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಹೀಗಾಗಿ ಇದುವರೆಗೆ ಕೋಟ್ಯಂತರ ವರ್ಷಗಳಿಂದ ನಾವು ಮಾಡಿದ ಹೋರಾಟ ವ್ಯರ್ಥವಾಯಿತು. ಇನ್ಯಾವಾಗ ನಮ್ಮದು ನಿಜಗನ್ನಡವಾಗುವುದು? ಎಂಬ ಚಿಂತೆ ಇಲ್ಲಿ ಆರಂಭವಾಗಿದೆ"!!!

ಈ ನಡುವೆ, ಬೊಗಳೆ ಭಾಷೆಗೆ 'ಅಶಾಸ್ತ್ರಿಯ' ಬದಲಾಗಿ, ಹಳಸಲು ಭಾಷೆ ಅಂತ ಅಚ್ಚಗನ್ನಡದಲ್ಲೇ ಪ್ರಯೋಗಿಸಬಹುದು ಎಂದು ನಮ್ಮ ಶತಕೋಟಿ ಭಾರತೀಯರಲ್ಲೊಬ್ಬ ಓದುಗರು ಸವಿನಯವಾಗಿ ಜಾಡಿಸಿದ್ದಾರೆ.

ಅದು ಒತ್ತಟ್ಟಿಗಿರಲಿ. ನಮ್ಮೆಲ್ಲರ ಓರಾಟಕ್ಕೆ ಶರಣಾಗಿ ಕೇಂದ್ರವು 'ಕ್ಲಾಸಿಕಲ್ ಲ್ಯಾಂಗ್ವೇಜ್' ಅಂತ ಹೇಳಿದ್ದರೂ, ಅದು ಕನ್ನಡಕ್ಕಾಗುವಾಗ ಯಾವ ರೀತಿ ಆಗಬೇಕು, ಸಂಸ್ಕೃತ, ಇಂಗ್ಲಿಷ್ ಹೊರತಾಗಿ ಅಚ್ಚಕನ್ನಡದಲ್ಲೇ ಅದಕ್ಕೊಂದು ಚೆಂದದ ನಾಮವಿಶೇಷಣ ಇಡಬಾರದೇಕೆ ಎಂದು ಬೊಗಳೆ ರಗಳೆ ಬ್ಯುರೋ ಅಪ್ಪಿ ತಪ್ಪಿ ಪ್ರಾಮಾಣಿಕವಾಗಿ ಪ್ರಶ್ನಿಸುತ್ತಿದೆ.

10 Comments

ಏನಾದ್ರೂ ಹೇಳ್ರಪಾ :-D

 1. ನೀವು ಈ ಥರ ಸಡನ್ನಾಗಿ ಪ್ರಾಮಾಣಿಕರಾದರೆ ಕಷ್ಟ. ಆದ್ರೂ... ಏನೋ ಅಪ್ಪಿ ತಪ್ಪಿ ಪ್ರಾಮಾಣಿಕರಾಗಿಬಿಟ್ಟಿದ್ದೀರಲ್ಲಾ ಅಂತ ಸುಮ್ಮನಿದ್ದೇನೆ. ಇಲ್ಲಾಂದಿದ್ದಿದ್ದ್ರೆ...ನಿಮ್ಮದೇ ಬೆಕ್ಕು ಕೈಲಿ ತಿರುಮಂತ್ರ ಹಾಕಿಸ್ತಿದ್ದೆ.

  ನನ್ನ ಪ್ರಕಾರ "ಕ್ಲಾಸಿಕಲ್ ಲಾಂಗ್ವೇಜ್" ನ ಸಮರ್ಥ ತರ್ಜುಮೆ "ಹೊನ್ನುಡಿ". Gold is a classical metal ಅಂತೆ..ನಮ್ ಲ್ಯಾಬ್ ನಲ್ಲಿ ಮಾತಾಡ್ಕೊತಿದ್ವಿ ನಾವು ಒಂದ್ ಕಾಲದಲ್ಲಿ. ನಮ್ಮ ಭಾಷೆ ಚಿನ್ನದಂಥದ್ದು ಅನ್ನೋ ಒಂದೇ ಕಾರಣದಿಂದಲ್ಲ, ಶೇರು ಬಿದ್ದು ಚಿನ್ನದ ರೇಟು ಮುಗಿಲೆತ್ತರಕ್ಕೆ ಹೋಗಿರುವುದು ಕೂಡ ಈ ತರ್ಜುಮೆಗೆ ಕಾರಣ.

  ಆಮೇಲೆ ಇನ್ನೊಂದು - ನೀವು ನಿಮ್ಮ ಅನೇಕ ಏಕಸದಸ್ಯ ಸರ್ವಸದಸ್ಯ ಬ್ಯೂರೋ ನ ಎಲ್ಲ ದಿಕ್ಕುಗಳಿಗೂ ಹೇಗೂ ಅಟ್ಟುತ್ತೀರಲ್ಲ...ಬೆಕ್ಕನ್ನು ಹುಡುಕಿಸಿ ಇಲ್ಲಿ ತರಿಸಿ ಪಾ...

  ReplyDelete
 2. ಲಕ್ಷ್ಮಿ ಅವರೆ,

  ನಂಗೊತ್ತಿತ್ತು ನೀವು ಬೆಕ್ಕಿನ ಕೈಲೇ ಗಂಟೆ ಕಟ್ಟಿಸ್ತೀರೀಂತ... ಅದ್ಕೇ ಅದನ್ನು ಓಡ್ಸಿಬಿಟ್ಟೆ... ಅದಂತೂ ಸಿಕ್ಕಾಪಟ್ಟೆ ವ್ಯವಹಾರ ಮಾಡತೊಡಗಿತು... ಆ ಮೇಲೆ ಸುನಾಥರನ್ನು "ನನ್ನ ಮದ್ವೆಯಾಗ್ತೀರಾ" ಅಂತಾನೂ ಬೆದರಿಸಿಬಿಟ್ತೂಂತ ಈಗಾಗ್ಲೇ ಎಫ್ಐಆರ್ ದಾಖಲಾಗಿದೆ. ಆದುದರಿಂದ ದಯವಿಟ್ಟು ಬೆಕ್ಕಿನ ಬಗ್ಗೆ ಮಾತ್ರ ಕೇಳ್ಬೇಡಿ...

  ನಿಮ್ಮ ಹೊನ್ನುಡಿಗೆ ನನ್ನ ಅರ್ಧ ಸಹಮತವಿದೆ. ಅಂದ್ರೆ ಉಳಿದರ್ಧ ಮತಭೇದ!. ಈಗಿನ ಕಾಲ್ದಲ್ಲಿ ಚಿನ್ನ, ಹೊನ್ನು ಎಲ್ಲವೂ ಮುಗಿಲುಮುಟ್ಟಿದ್ದು, ನಮ್ಮಂಥ ಜನಸಾಮಾನ್ಯರ ಕೈಗೆ ಸಿಗೋದಿಲ್ಲ. ಹೀಗಾಗಿ ಹೊನ್ನುಡಿಯೂ ದೊಡ್ಡ ಸಾಹಿತಿಗಳ, ಬುದ್ಧಿಜೀವಿಗಳ ಸೊತ್ತಾದ್ರೆ ಎಂಬ ಆತಂಕ.

  ಇರ್ಲಿ... ಹೊನ್ನುಡಿಯೂ ಓಕೆ. ಕನ್ನಡಿಗರು ಮಿದುಭಾಷಿಗಳಾಗಿರೋದ್ರಿಂದ ಮೆಲ್ನುಡಿ? ಅಥ್ವಾ... ನಮ್ಮ ನುಡಿಯೇ ಎಲ್ಲಕ್ಕಿಂತ ಮೇಲು ಎಂಬರ್ಥದಲ್ಲಿ ಬೇಕಾದ್ರೆ ಮೇಲ್ನುಡಿ? ನಲ್ನುಡಿ, ಸಿರಿನುಡಿ ಎಲ್ಲ ಸಾಧ್ಯತೆಗಳೂ ಇವೆ... ಎಲ್ಲಾದ್ರೂ ಇಲ್ಲಿಯೂ ಚುನಾವಣೆಗಳು ನಡೆದ್ರೆ ಮಾತ್ರ ನಾನಿಲ್ಲ....

  ReplyDelete
 3. "ಸವಿಗನ್ನಡ"
  "ಚೆನ್ನುಡಿ"
  "ಹೊನ್ನುಡಿ"
  "ಸವಿನುಡಿ"
  ಮುಂತಾದುವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಸೇರಿ ಒಂದು ತೀರ್ಮಾನಕ್ಕೆ ಬಂದು ಒಳ್ಳೆಯ, ಸಮರ್ಥ ಪದ ಹುಡುಕಬೇಕಾಗಿದೆ. ಇಲ್ಲೂ ನಮ್ಮ ಕನ್ನಡಿಗರು ತುಂಬಾ ನಿಧಾನ.....
  http://kannadputhra.blogspot.com

  ReplyDelete
 4. "ಸವಿಗನ್ನಡ"
  "ಚೆನ್ನುಡಿ"
  "ಹೊನ್ನುಡಿ"
  "ಸವಿನುಡಿ"
  ಮುಂತಾದುವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಸೇರಿ ಒಂದು ತೀರ್ಮಾನಕ್ಕೆ ಬಂದು ಒಳ್ಳೆಯ, ಸಮರ್ಥ ಪದ ಹುಡುಕಬೇಕಾಗಿದೆ. ಇಲ್ಲೂ ನಮ್ಮ ಕನ್ನಡಿಗರು ತುಂಬಾ ನಿಧಾನ.....
  http://kannadaputhra.blogspot.com

  ReplyDelete
 5. ಇಷ್ಟು ದಿನ ಬ್ಲಾಗ್ ಲೋಕದಲ್ಲಿ ತಮ್ಮ ಅಸ್ತಿತ್ವದ ಅರಿವೇ ಇಲ್ಲದೆ ಮನಸ್ಸಿಗೆ ಬಂದಾಗ ಬ್ಲಾಗಿಗಳ ಬರವಣಿಗೆಯನ್ನ ಓದುತ್ತಿದ್ದ ನಾನು ಇಂದು ಪೂರ್ವ ಜನ್ಮದ ಪಾಪ ಶೇಶದಿಂದ ನಿಮ್ಮ ಬ್ಲಾಗನ್ನು ನೋಡಲಾಗಿ ನೆಮ್ಮದಿಯನ್ನು ಕಳೆದುಕೊಂಡು ಇನ್ನು ಯಾವಾಗ ಬ್ಲಾಗ್ ಅಪ್ಡೇಟ್ ಮಾಡುತ್ತಿರೋ ಎಂದು ದಿನವು ನಿಮ್ಮ ಬ್ಲಾಗಿಗೆ ಭೇಟಿ ಕೊಡಬೇಕಾದ ಸ್ಥಿತಿಗೆ ತಲುಪುವಂತೆ ಮಾಡಿದ ನಿಮ್ಮ ಬರಹಗಳಿಗೆ(?)ಧಿಕ್ಕಾರ!

  you are wonderfully witty..

  ReplyDelete
 6. ಅಸತ್ಯ ಅನ್ವೇಷಿಯವರ ಶಾಪದಿಂದಾಗಿ ರಾಜಕುಮಾರಿಯೊಬ್ಬಳು ಬೆಕ್ಕಾಗಿ ಇಲ್ಲಿ ಬಂದಿದ್ದಾಳೆ. ಅವಳ ಕೊರಳಿಗೆ ಯಾವದಾದರೂ ಇಲಿಯು (=ಸುನಾಥ ?) ತಾಳಿ ಕಟ್ಟಿದ ತಕ್ಷಣ ಅವಳು ಪುನಃ....?

  ReplyDelete
 7. ಯಾವ ಖನ್ನಡಕ್ಕೆ ಶಾಸ್ತ್ರೀಯ ಬಾಷೆ ಅಂತ ಏಳವ್ರೆ, ಗುರು?
  ಎಫ್.ಎಮ್. ಖನ್ನಡಕ್ಕೊ, ಓರಾಟಗಾರರ ಖನ್ನಡಕ್ಕೊ, ಅದ್ಯಾವದೊ Pump ಕವಿ, Run ಕವಿ ಅನ್ನೋರು ಬರೆದಂಥಾ ಕನ್ನದಕ್ಕೊ?

  ReplyDelete
 8. ಗುರುಗಳೆ,
  "ಬೊಗಳೆ ನುಡಿ" ಆಗಬಹುದೂಂತ ನನ್ನ ಅಭಿಪ್ರಾಯ. ನೀವೇನಂತೀರಿ?

  ReplyDelete
 9. ಹಲೋ ಮೃಗದ ಕಣ್ಣಿನವರೆ, ನಮ್ಮ ಬರೇ ಬೊಗಳೆಗೆ ಸ್ವಾಗತ.
  ನೀವು ಹಿಂದಿನ ಜನ್ಮದಲ್ಲಿಯೂ ನಮ್ಮನ್ನು ಕಾಡಿದ್ದೀರೀಂತ ನಿಮ್ಮ ಈ ಕಾಮೆಂಟು ನೋಡಿದ ಬಳಿಕ ಗೊತ್ತಾತು. ನೀವು ನೆಮ್ಮದಿ ಕಳೆದುಕೊಂಡದ್ದು ಕೇಳಿ ನಮಗೂ

  ಸಂತೋಷವಾಯಿತು. ಬರಹಗಳಿಗೆ ಅದ್ಯಾವುದೋ (?)ಖಾರ ಬೆರಸಿದ್ದು ಕೇಳಿ ಮತ್ತೂ ಸಂತೋಷವಾಯ್ತು. ಮತ್ತೆ ನಮ್ಮನ್ನು ವಂಡರ್ ಭರ್ತಿಯಾಗಿರುವ ಕಿಟ್ಟಿ ಅಂದಿದ್ದು, ನಾವು

  ಈಚೆಗಷ್ಟೇ ಕಳೆದುಕೊಂಡ ಕಿಟ್ಟನ್ ಅನ್ನು ನೆನಪಿಸಿತು.

  ಬರ್ತಾ ಇರಿ, ಝಾಡಿಸ್ತಾ ಇರಿ...

  ReplyDelete
 10. ಸುನಾಥರೇ,
  ನಂಗೊತ್ತು ನಾನು ಬೆಕ್ಕು ತೆಗೆದಾಕ್ಷಣ ನೀವು ನಿದ್ದೆ ಕಳೆದುಕೊಂಡು, ಕನಸಿನಲ್ಲಿ ಏನೇನೋ ಬರುತ್ತೆ ಅಂತ. ಬೆಕ್ಕಿನ ಕೊರಳಿಗೆ ಸುನಾಥರು ಗಂಟೆ ಕಟ್ಟಿದ ತಕ್ಷಣವೇ ಅದು

  ಪ್ರೇತರೂಪದಿಂದ ಬೆಕ್ಕಿನ ರೂಪಕ್ಕೆ ಮರಳಿತು.

  ಮತ್ತೆ ಯಾವ ಸಾಸ್ತ್ರಿಯಾದ್ರೆ ನಂಗೇನು ಗುರೂ. ಕೇಂದ್ರದಿಂದ ಹರಿಹರಿದು ಬರುವ ದುಡ್ಡಿನಲ್ಲಿ ಪಂಪುಗಟ್ಟಲೆ ತಂಪೇರಿಸಿ, ಓಲಾಡುತ್ತಾ ರನ್ನು ಮಾಡೋದೇ ಜಾರಕಾರಣಿಗಳಿಗೆ ದೊರೆತ ಸದವಕಾಶ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post