(ಬೊಗಳೂರು ಕಾಳಸಂತೆ ಬ್ಯುರೋದಿಂದ)
ಬೊಗಳೂರು, ನ.12- ಕಾಳ ಸಂತೆಯಲ್ಲಿ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡುತ್ತಿದ್ದ ಬಗ್ಗೆ ಸುದ್ದಿ ಪ್ರಕಟವಾದ ತಕ್ಷಣ ಅಸತ್ಯಾನ್ವೇಷಣೆಯಲ್ಲಿ ಪಳಗಿರುವ ಬೊ.ರ. ಬ್ಯುರೋಗೆ ಕಾಂguess ಹೈಫೈಕಮಾಂಡ್‌ನಿಂದ ಕರೆ ಬಂದಿದ್ದು, ಇದರ ತನಿಖೆ ನಡೆಸಲಾಯಿತು.

ಹೌದು. ಟಿಕೆಟುಗಳು ಮಾರಾಟವಾಗುತ್ತಿದ್ದುದಂತೂ ಸುಸ್ಪಷ್ಟವಾಗಿಯೇ ಗೋಚರಿಸಿತ್ತು. ರಸ್ತೆ ಬದಿ ಅಲ್ಲಲ್ಲಿ ಟಿಕೆಟುಗಳು ಬಿದ್ದಿದ್ದು, ಯಾರಾದರೂ ಬಿದ್ದವರಿದ್ದರೆ, ಮತ್ತು ಅವರು ಎದ್ದವರಾಗಿದ್ದರೆ ಅವರಿಗೆ ಅದು ಸಿಗುತ್ತಿತ್ತು. ಈ ಕಾರಣಕ್ಕಾಗಿ ಇದು ನನಗೆ 'ಬಿದ್ದು ಸಿಕ್ಕಿದ್ದು' ಎಂದು ಅವರು ಹೇಳಿಕೊಂಡು ಬರುತ್ತಿದ್ದರು.

ಆದರೆ ಎಲ್ಲಿ ಬೀಳಬೇಕು ಎಂದು ಯಾರು ಕೂಡ ಹೇಳದಿದ್ದರೂ, ಬೊ.ರ. ಮಾತ್ರವೇ ಅದನ್ನು ಪತ್ತೆ ಹಚ್ಚಿದೆ. ಬೀಳೋದು ಮೇಲಿನವರ ಕಾಲಿನಡಿ ಎಂಬ ಅಮೂಲ್ಯ ಅಸತ್ಯವೊಂದು ಈ ಸಂದರ್ಭದಲ್ಲಿ ಬಯಲಾಗಿದೆ.

ಈ ಮಧ್ಯೆ, ಮತ್ತಷ್ಟು ತೀವ್ರವಾಗಿ, ತೀಕ್ಷ್ಣವಾಗಿ ತಪಾಸಣೆ ಮಾಡಿ, ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿದ್ಯಮಾನಗಳಿಗೆ ಹೋಲಿಕೆ ಮಾಡಿದಾಗ, ಆಪರೇಶನ್ ಕಮಲ ಎಂಬ ಶಬ್ದವೊಂದು ಎಲ್ಲಿಂದಲೋ ತನಿಖೆಯ ಹಾದಿಯಲ್ಲಿ ಬಂದು ಬಿತ್ತು. ಈ ಆಪರೇಶನ್ ಕಮಲದ ದಳದ ಅಡಿಯಲ್ಲಿ ಅಪ್ಪಚ್ಚಿಯಾದ ಕೈಗಳು, ತಮ್ಮ ಕೈಬೆರಳುಗಳ ನಡುವಿದ್ದ ಟಿಕೆಟನ್ನು ಅಲ್ಲಿಯೇ ಉದುರಿಸಿ ಹೋಗಿದ್ದವು. ಆ ಟಿಕೆಟುಗಳನ್ನೇ ಕಾಳಸಂತೆಕೋರರು ಎತ್ತಿಕೊಂಡು ತಮಗಿಷ್ಟದವರಿಗೆ ಕೊಟ್ಟಿದ್ದರು.

ಮ್ಯಾಗಿ ನೂಡಲ್ಸ್ ತಿನ್ನುತ್ತಾ ಮಾರ್ಗದಲ್ಲಿ ಎಷ್ಟೆಲ್ಲಾ ರೇಟಿಗೆ ಈ ಟಿಕೆಟು ಮಾರಾಟವಾಗುತ್ತಿತ್ತು ಎಂದು ಅಚ್ಚರಿಯಿಂದ ಕೇಳಬೇಕಾಗಿರಲಿಲ್ಲ. ಇದು ಪಕ್ಷದೊಳಗಿದ್ದವರಿಗೆ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ಇದೊಂದು ಹೊಸ ಶೋಧ ಅಥವಾ ಸಂಶೋಧನೆ ಅಥವಾ ಅನ್ವೇಷಣೆಯ ಕಾರ್ಯ ಅಲ್ಲ, ತಮ್ಮ ಬೆನ್ನು ತಟ್ಟಿಕೊಳ್ಳಬೇಕಿಲ್ಲ, ತಾವಾಗಿಯೇ ಪಕ್ಷದಿಂದ ಒದೆಸಿಕೊಳ್ಳಬೇಕಾಗಿರಲಿಲ್ಲ ಎಂದು ಬೊ.ರ. ಬ್ಯುರೋಗೆ ಸೆಡ್ಡುಹೊಡೆಯುತ್ತಾರೆಂಬ ಭೀತಿಯಿಂದಾಗಿಯೇ ಬೊ.ರ. ವರದ್ದಿಗಾರರು ಕಾಂguess ಹೈಕಳಮಾಂಡಿಗೆ ವರದ್ದಿ ಒಪ್ಪಿಸಿದ್ದಾರೆ.

ಆದರೆ ಟಿಕೆಟ್ ಹಂಚೋಣ ಪ್ರಕ್ರಿಯೆಯ ಸಂದರ್ಭದಲ್ಲಿ, ದೇಶದ ಪ್ರತಿಯೊಂದು ಅಂಶದಲ್ಲೂ ವೋಟೇ ಕಾಣಸಿಗುತ್ತಿರುವುದರಿಂದ ಇಲ್ಲಿ ಕಡಿಮೆ ಸಂಖ್ಯಾತರಿಗೆ ಒಂದಿಷ್ಟು ಮೀಸಲು, ತುಳಿತಕ್ಕೊಳಗಾದವರಿಗೆ ಒಂದಷ್ಟು ಮೀಸಲು ಎಂದೆಲ್ಲಾ ರಗಳೆಯನ್ನು ಯಾರೂ ತೆಗೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂಬುದನ್ನು ದುರಾಚಾರ ಸಮಿತಿ ವರದಿಯೊಂದು ನಮ್ಮಿಂದ ಮೊದಲೇ ಕಂಡುಕೊಂಡಿದೆ.

6 Comments

ಏನಾದ್ರೂ ಹೇಳ್ರಪಾ :-D

 1. ಕಾಳ ಸಂತೆಯಲ್ಲಿ ಸಿನೆಮಾ ಟಿಕೆಟ್ ಮಾರಿದವರೇ ಈಗ ಕಾಂguess ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಕೊಂಡರಂತೆ!

  ಅನ್ವೇಷಿಗಳೆ,
  ನಿಮ್ಮ ಬೆಕ್ಕಿನೊಡನೆ ಆಡುವಾಗ, ಬೆಕ್ಕಿನ ಕಣ್ಣಿನ ಸುಂದರಿ ಗಂಟು ಬಿದ್ದಳಲ್ಲ: "ಮದುವೆಯಾಗುತ್ತೀಯಾ?" ಎಂದು!

  ReplyDelete
 2. ಸುನಾಥರೆ,
  ನಮ್ಮ ಬೆಕ್ಕು ಸಿಕ್ಕಾಪಟ್ಟೆ ಉಪದ್ರವ ಕೊಡ್ತಾ ಇದೆ ಎಂಬೋ ಕಾರಣಕ್ಕೆ ಅದರ ಬಾಲಕ್ಕೆ ಬೆಂಕಿ ಹಚ್ಚಿ ಓಡಿಸಿಬಿಟ್ಟಿದ್ದೇವೆ.

  ReplyDelete
 3. ಲಕ್ಷ್ಮಿ ಅವರೆ,
  ನೀವು ಆssssssssಕ್ಷೀzzzzzz ಅಂದ್ಹಾಗೆ ಕಾಣಿಸ್ತಿದೆ....

  ReplyDelete
 4. Idu sampoornavaagi kaam guess virodhi neeti..! :-)

  We suggest that this secret report be published in New York times. :-)

  Ganesh

  ReplyDelete
 5. ಗಣೇಶರೆ,

  ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದ್ದಿ ಹಾಕ್ತಾರೋ ಇಲ್ವೋ ಅಂತ ಇನ್ನೂ ಗೊತ್ತಾಗಿಲ್ಲ ನಮಗೆ. ಆದ್ರೆ, ಅಲ್ಲಿ ಕ.ಬು.ಗಳು ಎಷ್ಟಿವೆ ಎಂಬುದು ತಿಳಿಯದ ಕಾರಣ, ಈ ವರದ್ದಿ ಅಲ್ಲಿ ತುಂಬಲಾರದು ಎಂಬ ಶಂಕೆಯಿಂದಾಗಿ ಅದನ್ನು ಅಲ್ಲಿಗೆ ಕಳುಹಿಸಿಲ್ಲ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post