(ಬೊಗಳೂರು ಕಂಡಲ್ಲಿ ಖಂಡನಾ ಬ್ಯುರೋದಿಂದ)
ಬೊಗಳೂರು, ಜು.28- ದೇಶದ ಭದ್ರತಾ ವ್ಯವಸ್ಥೆಯನ್ನು, ಪೋಟಾ ಕಾಯಿದೆ ರದ್ದುಪಡಿಸಿದ ಸರಕಾರದ ಭಯೋತ್ಪಾದನಾ ವಿರೋಧೀ ಕಾಯಿದೆಯ ಸಾಮರ್ಥ್ಯವನ್ನು ಅಳೆಯುವ ನಿಟ್ಟಿನಲ್ಲಿ ರಣಹೇಡಿ ಉಗ್ರರು ಟಿಫಿನ್, ಸೈಕಲು, ಬಸ್ಸು, ಆಸ್ಪತ್ರೆಗಳಲ್ಲಿ ಬಾಂಬ್ ಸ್ಫೋಟಿಸಿರುವುದಕ್ಕೆ ಜಾರಕಾರಣಿಗಳ ಸಮುದಾಯದಿಂದ ಖಂಡನೆಗಳ ಮಹಾಪೂರವೇ ಹರಿದುಬರುತ್ತಿದೆ.

ಈ ಖಂಡನೆಗಳೇ ಅಲ್ಲಲ್ಲಿ ಪಶ್ಚಾತ್ ಕಂಪನಗಳಂತೆ ಸ್ಫೋಟಿಸುತ್ತಿರುವುದರಿಂದ ಆತಂಕಗೊಂಡಿರುವ ಬೊಗಳೆ ರಗಳೆ ಬ್ಯುರೋ, ತಮ್ಮ ಪತ್ರಿಕೆಯಲ್ಲಿ ಈ ಖಂಡನೆಗಳನ್ನು ಪ್ರಕಟಿಸಲು ಸಾಧ್ಯವಾಗಲಾರದೆ ಚಡಪಡಿಸುತ್ತಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಂಡಿರುವ ಸೊಂಪಾದ-ಕರು, ತೀವ್ರವಾಗಿ ಖಂಡಿಸಿದವರ ಹೇಳಿಕೆಯನ್ನು ಮಾತ್ರ ಪ್ರಕಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕಾರಣಕ್ಕೆ ಖಂಡನೆಯ ತೀವ್ರತೆ ಎಷ್ಟೆಂಬುದನ್ನು ಅಳೆಯಲು ಭೂಗರ್ಭವತಿ ಶಾಸ್ತ್ರಜ್ಞರ ಮೊರೆ ಹೋಗಲಾಗಿದ್ದು, ಅವರು ನೀಡಿದ ಭೂಕಂಪ ಮಾಪನವನ್ನೇ ಈ ಖಂಡನೆಯ ತೀವ್ರತೆ ಅಳೆಯಲೂ ಉಪಯೋಗಿಸಲಾಗುತ್ತದೆ.

ಯಾರೂ ಏನೂ ಹೇಳದೆಯೇ ಮತ್ತು ಕೇಳದೆಯೇ ದೇಶದ ಮನೆ (=ಗೃಹದಲ್ಲಿರುವ) ಮಂತ್ರಿಗಳು, ಬೊಗಳೆಗೆ ಮಾತ್ರ ಪ್ರತಿಕ್ರಿಯೆ ನೀಡಿ, "ದೇಶ ಬಿಕ್ಕಟ್ಟಿನಲ್ಲಿದೆ. ದೇಶದ ಪ್ರಜೆಗಳ ರಕ್ಷಣೆಯು ಕೇಂದ್ರ ಸರಕಾರದ ಮತ್ತು ಗೃಹ ಇಲಾಖೆಯ ಜವಾಬ್ದಾರಿ ಅಂತ ಆ ರಾಜ್ಯಗಳು ನಮ್ಮ ಮೇಲೆ ಗೂಬೆ ಕೂರಿಸುವಂತಿಲ್ಲ. ಆಯಾ ರಾಜ್ಯಗಳೇ ಸೂಕ್ತ ಕ್ರಮ ಕೈಗೊಳ್ಳಲಿವೆ ಎಂಬ ಭರವಸೆ ನಮಗಿದೆ" ಅಂತ ಪ್ರತಿಕ್ರಿಯಿಸಿ, ಎದುರಿಗೇ ಇದ್ದ ಕೊಚ್ಚೆಗೆ ಕಲ್ಲೆಸೆದುಕೊಂಡಿದ್ದಾರೆ.

ಈ ಮಧ್ಯೆ, ಖಂಡನೆಯನ್ನು ತೀವ್ರವಾಗಿಸುವ, ಉಗ್ರವಾಗಿಸುವ, ಅತ್ಯುಗ್ರವಾಗಿಸುವ, ಅತ್ಯಂತ ಕಟುವಾಗಿಸುವ ಭರದಲ್ಲಿ ಜಾರಕಾರಣಿಗಳ ಬಾಯಿಂದ ಉದುರಿದ ಅಣಿಮುತ್ತುಗಳು ಇಂತಿವೆ:

* ದಯವಿಟ್ಟು ನಮಗೆ ರಕ್ಷಣೆ ನೀಡಿ: ಪೊಲೀಸ್ ಪಡೆ

* ನಮಗೆ ಓಟಿಯೂ ಕೊಡಬೇಕು, ಒಟಿನ ಹಕ್ಕೂ ನೀಡಬೇಕು: ಶ್ವಾನದಳ

* ರಕ್ಷಣೆ ನೀಡುವುದು ರಾಜ್ಯ ಸರಕಾರಗಳ ಜವಾಬ್ದಾರಿ, ಅವರು ಕೇಳಿದ್ದನ್ನು ನಾವು ಕೊಡಲು ರೆಡಿ: ಕೇಂದ್ರದ ಘನ ಗೃಹ ಮಂತ್ರಿ

* ಉಗ್ರರನ್ನು ಬಂಧಿಸಿದರೆ ಒಂದು ಸಮುದಾಯಕ್ಕೆ ನೋವಾಗುತ್ತದೆ, ಹೀಗಾಗಿ ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ: ಯುಪಿಎ

* ಭಯೋತ್ಪಾದಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ನಾವು ಸ್ವಾತಂತ್ರ್ಯ ಬಂದಂದಿನಿಂದಲೂ ಹೇಳುತ್ತಾ ಬಂದಿಲ್ಲವೇ? : ಕೇಂದ್ರ ಮಂತ್ರಿ ಪ್ರಶ್ನೆ

* ನಾವು ದಿನಾಲೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ (ಪ್ರತಿದಿನ ಖಂಡನಾ ನಿರ್ಣಯ ಹೊರಡಿಸಿ ಖಂಡಿಸುವ ಮೂಲಕ): ಕೇಂದ್ರ ಮಂತ್ರಿ

* ನಮಗೆ ಜನರ ಜೀವ ಮುಖ್ಯವೇ ಹೊರತು, ಉಗ್ರರಲ್ಲ. ಹೀಗಾಗಿ ಉಗ್ರರನ್ನು ನಾವೇನೂ ಹಿಡಿಯಲು ಹೋಗುವುದಿಲ್ಲ: ಕೇಂದ್ರ ಕಂತ್ರಿ

* ನಾವೂ ಉಗ್ರರನ್ನು ಹಿಡಿಯೋದಿಲ್ಲ, ಅವ್ರು ತಾನಾಗಿಯೇ ಸಿಕ್ಕಿ ಬೀಳ್ತಾರೆ: ನಿದ್ದೆಯಿಂದೆದ್ದ ಕಾನೂನು ಪಾಲಕ

* ನಾವಂತೂ ಭಯೋತ್ಪಾದಕರನ್ನು ಹಿಡಿಯೋದೇ ಇಲ್ಲ, ಯಾಕಂದ್ರೆ ಅವರನ್ನು ಬಿಡಿಸಲು ರಾಜಕಾರಣಿಗಳು ಹೆಣಗಾಡಿ ನಮ್ಮ ಮೇಲೇ ಕೋಮುವಾದ ಎಂಬ ಗೂಬೆ ಕೂರುಸ್ತಾರೆ: ಪೊಲೀಸ್ ಮುಖ್ಯಸ್ಥ

ಆದರೆ, ಪಕ್ಕದಲ್ಲೇ ನಿಂತಿದ್ದ ದೇಶದ ಮಹಾನ್ ಜಾರಕಾರಣಿಯೊಬ್ಬರು ಏನೂ ಮಾತನಾಡದೆ ಸುಮ್ಮನಿದ್ದರು. ಈ ಕುರಿತು ಅವರನ್ನು "ನೀವೇಕೆ ಖಂಡಿಸಿಲ್ಲ?" ಅಂತ ಪ್ರಶ್ನಿಸಲಾಯಿತು.

"ಒಂದು ಸಮುದಾಯದ ಮನಸ್ಸಿಗೆ ತೀವ್ರ ನೋವಾಗಬಹುದು, ಇದರಿಂದ ಅವರ ಓಟುಗಳು ತಮಗೆ ದೊರೆಯಲಾರವು" ಎಂಬ ಉತ್ತರ ದೊರೆಯುವ ಮೂಲಕ ನಮ್ಮ ಪ್ರಶ್ನೆ ಸಾರ್ಥಕವಾಯಿತು ಎಂಬ ಭಾವನೆ ಮೂಡಿಸಿದರು!
----------------
(ಆಸ್ಪತ್ರೆಯ ಮೇಲೂ ದಾಳಿ ನಡೆಸಿ, ಅಮಾಯಕರ ರಕ್ತ ಹೀರಿದ ಈ ದೈವದ್ರೋಹಿಗಳೂ, ಮಾನವದ್ರೋಹಿಗಳೂ, ಧರ್ಮ ದ್ರೋಹಿಗಳೂ, ದೇಶದ್ರೋಹಿಗಳೂ ಆಗಿರುವ ಉಗ್ರರಿಗೆ ಧಿಕ್ಕಾರವಿರಲಿ)

6 Comments

ಏನಾದ್ರೂ ಹೇಳ್ರಪಾ :-D

 1. ಖಂಡನೆಗಳ ಮಂಡನೆಯ ವರದಿ ಚೆನ್ನಾಗಿದೆ. ಈ ಮಧ್ಯೆ ನಮ್ಮನ್ನು ಸಂಪರ್ಕಿಸಿದ ಧರ್ಮ ಗುರುವೊಬ್ಬರು ‘ಸಿಡಿಯುವ ಬಾಂಬಿಗೆ ಧರ್ಮವಿಲ್ಲ. ಅದು ಉಂಟು ಮಾಡುವ ಸಾವಿಗೆ ಧರ್ಮವಿಲ್ಲ. ಹೀಗಾಗಿ ಭಯೋತ್ಪಾದಕನಿಗೆ ಧರ್ಮವಿಲ್ಲ. ಆತ ಬಾಂಬ್ ಸಿಡಿಸಿದ ಮೇಲೆ. ಹಾಗೆಯೇ ಆತ ಮತ್ತೊಂದು ಬಾಂಬ್ ಸಿಡಿಸುವವರೆಗೆ ಮಾತ್ರ ಆತ ನಮ್ಮ ಧರ್ಮದವನಾಗಿರುತ್ತಾನೆ. ಮುಂದಿನ ಬಾಂಬ್ ಸಿಡಿಸುವಾಗ ಆತ ನಮ್ಮ ಧರ್ಮದವನಲ್ಲ. ನಮ್ಮ ಧರ್ಮದವರುಆರೂ ಇಂಥ ಕೃತ್ಯ ಮಾಡಲು ಸಾಧ್ಯವೇ ಇಲ್ಲ. ಎಲ್ಲವೂ ಮಾಧ್ಯಮದವರ ಸೃಷ್ಟಿ’ ಎಂದು ತಮ್ಮ ಖಂಡನೆಯನ್ನು ಮಂಡಿಸಿದ್ದಾರೆ.

  ReplyDelete
 2. ನೀವು ಪ್ರಕಟಿಸಿದ ಖಂಡನೆಗಳು (+ಸುಪ್ರೀತರ ಖಂಡನೆ)ಚೆನ್ನಾಗಿವೆ. Quotable Quotes ತರಹ ಈ ಖಂಡನೆಗಳ
  coat ಒಂದನ್ನು ಎಲ್ಲಾ ಜಾರಿಗರು ತಮ್ಮ ಹತ್ರ ಇಟ್ಕೊಂಡು
  ಸಕಾಲದಲ್ಲಿ, ಅಕಾಲದಲ್ಲಿ ಉಪಯೋಗಿಸಬಹುದು.

  ReplyDelete
 3. ಒಬ್ಬ ಕೇಂದ್ರ ಮಂತ್ರಿಯಂತೂ (ಮಹಾಭಾರತದಲ್ಲಿ ಕೃಷ್ಣನನ್ನೇ ಸಾರಥಿಯನ್ನಾಗಿ ಮಾಡಿಕೊಂಡವನ ಹೆಸರಿನ ಇಂದಿನ ಮಂಗ) ಖಂಡಿಸಿ ಖಂಡಿಸಿ ಸುಸ್ತಾಗಿ...ಮೂಗಿನವರೆಗೆ ಎಣ್ಣೆ ಹೊಡೆದು ...ಪುಟಗೋಸಿಯನ್ನೇ ರುಮಾಲಾಗಿ ಸುತ್ತಿಕೊಂಡು ಬೀದಿಬಸವನ ಥರಾ ಚರಂಡಿಯಲ್ಲಿ ಬಿದ್ದು ಒದ್ದಾಡಿ...ಕೊನೆಗೆ ಯಾವುದೋ ದರ್ಗಾದಲ್ಲಿ ರಣಹೇಡಿಯ ಥರ ಆಶ್ರಯ ಪಡೆದಿದ್ದಾನೆ.

  ReplyDelete
 4. ಸುಪ್ರೀತರೆ,
  ಓಹ್... ನಿಮ್ಮ ಗುಪ್ತ ಸಂಪರ್ಕದ ವರದ್ದಿ ಚೆನ್ನಾಗಿದೆ. ನಮ್ಮ ಧರ್ಮದವರು ಆ ರೀತಿ ಮಾಡಲ್ಲ, ಅವರು ಭಯೋತ್ಪಾದಕರಲ್ಲ, ಅದೆಲ್ಲ ಜಿಹಾದ್ ಅಂತಲೂ ಸ್ಪಷ್ಟಪಡಿಸಿದ್ದಾರೆಯೇ? ಅಥವಾ ಮಾಧ್ಯಮದವರೇ ಬಾಂಬ್ ಸೃಷ್ಟಿ ಮಾಡಿ ಸಿಡಿಸಿದ್ದು ಅಂತಲೂ ಹೇಳಿರಬಹುದೇ?

  ReplyDelete
 5. ಸುನಾಥರೆ,
  ನಮ್ಮ ಬ್ಯುರೋ ಆಪತ್ತಿಗಾಗುವ ಆಪ್ತ ಸಲಹೆಗಳನ್ನೇ ನೀಡುತ್ತಿರುವುದರಿಂದಾಗಿ ಜಾರಿಗರಲ್ಲಿ ನಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದೇವೆ.

  ReplyDelete
 6. ಅಣಿಮಾ, ಮಹಿಮಾ, ಗರಿಮಾಮಸ್ ಅವರೆ,
  ನೋಡಿ... ಅವರು ಅಂಥ ರಾಜಕೀಯ ಮಾಡಿ ಕೊನೆಗಾಲದಲ್ಲಾದರೂ ಒಳ್ಳೇ ಕಡೆ ಆಶ್ರಯ ಪಡೆದುಕೊಳ್ಳುತ್ತಾರಲ್ಲ... ಹೆಮ್ಮೆ ಪಡಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post