ಬೊಗಳೆ ರಗಳೆ ಸ್ಥಬ್ದವಾಗಿದೆ ಎಂಬ ಆರೋಪಗಳನ್ನು ತಪ್ಪಿಸಲೋಸುಗ ಬೇರೆಯವರ ಭವಿಷ್ಯವನ್ನು ನಮ್ಮ ಕೈಯಲ್ಲಿ ಹಿಡಿದುಕೊಳ್ಳುವ ನಿಟ್ಟಿನಲ್ಲಿ ರಾಶಿ ರಾಶಿಗಳ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಬೊಗಳೆ ಭವಿಷ್ಯವು ಅತ್ಯಂತ ಸುಲಭವೂ, ಅತ್ಯಂತ ಸರಳವೂ ಆಗಿದ್ದು, ಓದುಗರು ಯಾವುದೇ ರಾಶಿಯನ್ನು ಬೇಕಿದ್ದರೂ ಆರಿಸಿಕೊಂಡು, ಇದು ತಮ್ಮದೇ ಅಂತ ತಿಳಿದುಕೊಳ್ಳಬಹುದು. ಇದೇ ನಮ್ಮ ಈ ಸೇವೆಯ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಈ ಭವಿಷ್ಯ ವಾಣಿಗಳನ್ನು ಹೆಚ್ಚು ಹೆಚ್ಚು ಖರೀದಿಸಿ ಪ್ರೋತ್ಸಾಹಿಸಲು ಬೋರಲಾಗಿದೆ.
ಮೇಷ
ವೃಷಭ
ಜ್ವರ ಬಂದರೆ ವೈದ್ಯರ ಬಳಿಗೆ ಹೋಗುವ ಇಚ್ಛೆ ನಿಮಗೆ ಬರಲಾರದು. ಬೇರೇನಾದರೂ ಕಾಯಿಲೆ ಬಂದರೆ ಮಾತ್ರ ಡಾಕ್ಟರ್ ಶಾಪ್ ಎಲ್ಲಿದೆ ಅಂತ ಹುಡುಕುವಿರಿ. ಬೇರೆಯವರ ಸ್ವಭಾವ ಗೊತ್ತಿದ್ದೂ ಅವರಿಗೆ ಜವಾಬ್ದಾರಿ ವಹಿಸಿದರೆ ಮೋಸ ಹೋಗುವ ಸರದಿ ನಿಮ್ಮದೇ. ಕಚೇರಿಯಲ್ಲಿ ಎಲ್ಲರೊಂದಿಗೂ ಕೂಗಾಡುತ್ತಿದ್ದರೆ ನಿಮ್ಮ ಮೇಲಧಿಕಾರಿಗಳ, ಕೆಳಅಧಿಕಾರಿಗಳ ಆಕ್ರೋಶಕ್ಕೆ ಗುರಿಯಾಗುವಿರಿ. ಕ್ರೆಡಿಟ್ ಕಾರ್ಡ್ ಆಗಾಗ್ಗೆ ಬಳಸುವುದರಿಂದ ನೀವು ಸಾಲವಂತರಾಗುತ್ತೀರಿ.
ಮಿಥುನ
ನೀವು ಎಲ್ಲರೊಂದಿಗೂ ನಿಷ್ಠುರರಾಗಿ ಮಾತನಾಡುವುದರಿಂದ ಅವರೆಲ್ಲರಿಗೂ ನಿಷ್ಠುರ ವ್ಯಕ್ತಿ ಅನಿಸಿಕೊಳ್ಳುತ್ತೀರಿ. ನಿಮ್ಮ ತೋಟಕ್ಕೆ ಮಂಗಗಳ ಕಾಟ ಹೆಚ್ಚಾದಲ್ಲಿ ಮನೆಯಲ್ಲಿ ಮಂಗಗಳ ಕಾರ್ಯ ನೆರವೇರುವ ಸಾಧ್ಯತೆಗಳು ಬಹುತೇಕ ಖಚಿತ. ಹೊಸ ಬಟ್ಟೆ, ಹೊಸ ಆಭರಣ ತೊಟ್ಟರೆ ಎಲ್ಲರೂ ನಿಮ್ಮತ್ತ ನೋಡುವರು. ಬಟ್ಟೆ ಧರಿಸದಿದ್ದರೆ ನೋಡುವವರ ಸಂಖ್ಯೆ ಹೆಚ್ಚಾಗಲಿದೆ.
ಕರ್ಕಾಟಕ
ನೀವು ಎಲ್ಲರನ್ನೂ ನಂಬುವುದರಿಂದ ಎಲ್ಲರೂ ನಿಮಗೆ ಮೋಸ ಮಾಡುವುದು ಸುಲಭ. ಇದು ಬೊಗಳೆ ರಗಳೆ ಬ್ಯುರೋಗೆ ತಿಳಿಯದಂತೆ ಎಚ್ಚರ ವಹಿಸುವುದು ಸೂಕ್ತ. ವಿವಾದ ಇತ್ಯರ್ಥಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರೆ ಹತ್ತಾರು ವರ್ಷಗಳ ಬಳಿಕ ನಿಮಗೆ, ಅಲ್ಲದಿದ್ದರೆ ಎದುರಾಳಿ ಪಾರ್ಟಿಗಳಿಗೆ ನ್ಯಾಯ ದೊರೆಯುವುದು ಖಚಿತ. ಅಷ್ಟು ವರ್ಷಗಳ ಕಾಲ ಕರಿ"ಕೋಟಿ"ಗರು ನಿಮ್ಮಿಂದ ಕೋಟಿ ಕೋಟಿ ಪೀಕಿಸಬಹುದು.
ಸಿಂಹ
ಸಂಪಾದನೆಗಿಂತ ನೀವು ಹೆಚ್ಚು ಖರ್ಚು ಮಾಡಿದರೆ ಆ ತಿಂಗಳ ಮಟ್ಟಿಗೆ ದಿವಾಳಿಯಾಗುತ್ತೀರಿ. ಇಲ್ಲವಾದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಕರಗಿಸಬೇಕಾಗಿಬಂದೀತು. ಶಾಂತಿ ಎಂಬ ನಿಮ್ಮ ಕಾಲೇಜು ಗೆಳತಿ ಮನೆಗೆ ದಿಢೀರ್ ಬಂದರೆ ಗೃಹದಲ್ಲಿ ಅಶಾಂತಿ ಉಂಟಾದೀತು. ಯಾವುದೇ ಅಶುಭ ಫಲಗಳು ಸಂಭವಿಸದಿದ್ದರೆ ಆ ದಿನ ನಿಮಗೆ ಶುಭದಾಯಕವಾಗಲಿದೆ.
ಕನ್ಯಾ
ಕಲೆ, ಸಂಗೀತ, ಸಾಹಿತ್ಯ ಇತ್ಯಾದಿಗಳ ಅಕಾಡೆಮಿಗಳಿಗೆ ಅರ್ಜಿ ಸಲ್ಲಿಸಿಯೂ ನೀವು, ಕೆಲಸವಾಗಬೇಕಿದ್ದರೆ ಕತ್ತೆ ಕಾಲು ಹಿಡಿ ಎಂಬ ಉಕ್ತಿಯ ಅನುಸಾರ ರಾಜಕಾರಣಿಗಳ ಕಾಲು ಹಿಡಿಯದಿದ್ದರೆ, ಖಂಡಿತಾ ನಿಮಗೆ ಅರ್ಹತೆಯಿದ್ದರೂ ಪ್ರಶಸ್ತಿ, ಪುರಸ್ಕಾರ ಲಭಿಸುವುದಿಲ್ಲ. ರಾಜಕಾರಣಿಗಳೆಲ್ಲಾ ವಿಧಾನಸೌಧದಲ್ಲಿ ಹೊಡೆದಾಡುತ್ತಿರುವುದರಿಂದ ನಿಮ್ಮೂರಲ್ಲಿ ಅಭಿವೃದ್ಧಿ ಕಾರ್ಯಗಳಾಗಿ ಶಾಂತಿ ನೆಲಸಬಹುದು.
ತುಲಾ
ಅಪರಿಚಿತರೊಂದಿಗೆ ಸಹ-ವಾಸ ದೋಷದಿಂದ ಎಚ್ಐವಿ ಎಂಬ ಮಾನವಕುಲಕ್ಕೆ ಇದೀಗ ಅಮೂಲ್ಯವಾಗಿಬಿಟ್ಟಿರುವ (ಅದರ ಚಿಕಿತ್ಸೆಗೆ ಸಾಕಷ್ಟು ವ್ಯಯ ಮಾಡಬೇಕಾಗಿರುವುದರಿಂದ ಅದು ಅ-ಮೂಲ್ಯ) ವೈರಸ್ ನಿಮ್ಮನ್ನು ಪ್ರೀತಿಸುವ ಸಾಧ್ಯತೆಯಿದ್ದು, ಡ್ಯುಯೆಟ್ ಸಾಂಗ್ ಹಾಡಬಹುದು. ಶನಿಕಾಟವಿದ್ದರೆ ಶನಿಶಾಂತಿಯನ್ನೂ, ಗುರುಕಾಟವಿದ್ದರೆ ಗುರುಶಾಂತಿಯನ್ನೂ, ಅದೇ ರೀತಿ ಇತರ ನವಗ್ರಹಗಳ ಕಾಟವಿದ್ದರೆ ಆಯಾ ಶಾಂತಿಯನ್ನು ಮಾಡಿಸಿಕೊಳ್ಳುವುದು ಉತ್ತಮ.
ವೃಶ್ಚಿಕ
ಕರೆಂಟ್ ಬಿಲ್ ಕಟ್ಟದಿದ್ದರೆ ಬಿಲ್ ಸರಿಯಾಗಿ ಕಟ್ಟಿದವರಿಗೆ ದೊರೆಯುವ ಪವರ್ ಕಟ್ ಸೌಲಭ್ಯ ನಿಮಗೂ ಅಚಾನಕ್ ಆಗಿ ದೊರೆಯಬಹುದು. ವಿದ್ಯುತ್ ಸೌಲಭ್ಯ ಇಲ್ಲದಿದ್ದರೂ ಶಾಕ್ ಹೊಡೆಯುವ ಅನುಭವವು ವಿದ್ಯುತ್ ಇಲಾಖೆಯ ಈ ಬಿಲ್-ವಿದ್ಯೆಯಿಂದಾಗಿ ನಿಮಗೆ ಆಗಲಿದೆ. ಮನೆ ಬಾಡಿಗೆ ಬಾಕಿ ಇರಿಸಿಕೊಂಡಿದ್ದರೆ, ನೀವು ಕಚೇರಿಯಿಂದ ಸಂಜೆ ಮರಳಿದಾಗ ಮನೆಯೊಳಗಿನ ವಸ್ತುಗಳೆಲ್ಲಾ ಹೊರಗಿರುವ ಸಾಧ್ಯತೆ ಇರುವುದರಿಂದ ಮತ್ತು ಮನೆಯೊಡೆಯ ಕಣ್ಣು ದೊಡ್ಡದು ಮಾಡುತ್ತಾ ದೊಣ್ಣೆ ಹಿಡಿದು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿರುವುದರಿಂದ ಎಚ್ಚರಿಕೆ ವಹಿಸಿ.
ಧನು
ನೀವು ರಾಜಕೀಯಕ್ಕೆ ಸೇರಿದ್ದರೆ ಓಟು ಪಡೆಯುವುದಕ್ಕಾಗಿ ಅಸತ್ಯ ನುಡಿಯಬೇಕಾಗುತ್ತದೆ. ಪ್ರಜೆಗಳು ಏನೇ ಮನವಿ ಸಲ್ಲಿಸಿದರೂ, "ಶೀಘ್ರದಲ್ಲೇ ಅದನ್ನು ಪರಿಹರಿಸುತ್ತೇವೆ, ನಾಳೆಯೇ ಅದನ್ನು ರಿಪೇರಿ ಮಾಡಿಸುವೆ, ಇನ್ನೊಂದೆರಡು ವಾರ ಕೊಟ್ಟು ನೋಡಿ, ಹೇಗೆ ಊರನ್ನೇ ಬದಲಿಸುತ್ತೇನೆ" ಎಂಬಿತ್ಯಾದಿ ಸಾಮಾನ್ಯ ಧ್ಯೇಯವಾಕ್ಯಗಳನ್ನು ಬರೆದಿಟ್ಟುಕೊಳ್ಳಿ. ಆಗಾಗ್ಗೆ ಈ ವಾಕ್ಯಗಳನ್ನು ಬಾಯಿಯಿಂದ ಉದುರಿಸಬೇಕಾಗಬಹುದು. ಆದರೆ ಇದನ್ನು "ಬೊಗಳೆ" ಎಂದು ಕರೆದು ನಮ್ಮ ಬ್ಯುರೋಗೆ ಅಪಮಾನ ಮಾಡದಿರಲು ಕೋರಲಾಗಿದೆ.
ಮಕರ
ರಾಜ್ಯದಲ್ಲೇನಾದರೂ ಅಹಿತಕರ ಘಟನೆ ನಡೆದಲ್ಲಿ, ನೀವು ಆಡಳಿತ ಪಕ್ಷದವರಾಗಿದ್ದರೆ, "ತನಿಖೆ ನಡೆಸಲಾಗುತ್ತದೆ, ದುಷ್ಕರ್ಮಿಗಳನ್ನು ಮಟ್ಟ ಹಾಕುತ್ತೇವೆ" ಎಂದೂ, ವಿರೋಧ ಪಕ್ಷದಲ್ಲಿದ್ದರೆ "ಸಿಬಿಐ ತನಿಖೆಯಾಗಲಿ, ಇದರಲ್ಲಿನ ಮಂತ್ರಿ ಕೈವಾಡದ ಬಗ್ಗೆ ತನಿಖೆಯಾಗಲಿ" ಎಂದೂ ವಿಧಾನಸೌಧದಲ್ಲಿ ಕೂಗಾಡಿದರೆ ನಿಮಗೆ ಆ ದಿನದ ವೇತನ ಗ್ಯಾರಂಟಿ. ರಾತ್ರಿ ಆಡಳಿತ-ವಿರೋಧ ಪಕ್ಷದವರಿಬ್ಬರೂ ಕುಳಿತುಕೊಂಡು ಸಾಮರಸ್ಯಕ್ಕಾಗಿ ಪಬ್‌ಗಳೂರಲ್ಲಿ ಸೋಮ-ರಸ ಹೀರುತ್ತಾ ಕುಳಿತಿರಬಹುದು.
ಕುಂಭ
ನೀವು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲಿ ಜಯ ಲಭಿಸದಿದ್ದರೆ ಅಪಜಯ ಎದುರಾಗುವುದು ಖಚಿತ. ಗೃಹ ನಿರ್ಮಾಣ ಕಾರ್ಯಕ್ಕಾಗಿ ನೀವು ಪಂಚಾಂಗ ಹಾಕದಿದ್ದರೆ, ಮನೆಯು ಮೇಲೆದ್ದು ನಿಲ್ಲುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಅಧಿಕಾರಿಗಳ ಕೈಬಿಸಿಯಾಗದಿದ್ದರೆ ಪರವಾನಗಿ ಪತ್ರದ ಬೆಣ್ಣೆ ಕರಗುವುದಿಲ್ಲ.
ಮೀನ
ನೀವು ಸ್ನಾನ ಮಾಡದಿದ್ದರೆ ಸಮಾಜದಲ್ಲಿ ಉತ್ತಮ ಸ್ನಾನ-ಮಾನ ಲಭಿಸುವ ಸಾಧ್ಯತೆಗಳು ಕಡಿಮೆ. ನೀವು ಬೆಂಗಳೂರಿನಲ್ಲಿದ್ದರೆ ಶುನಕ ಕಾಟವೂ, ಶುನಕ ಕಾಟವಿಲ್ಲದಿದ್ದರೆ ಬೀದಿ ಶುನಕ ಕಾಟವೂ, ಯಾವುದೂ ಇಲ್ಲದಿದ್ದರೆ ಕೈಯೊಡ್ಡುವ ಪೊಲೀಸರ ಕಾಟವೂ ದೊರೆಯಲಿದೆ. ಮದುವೆಯಾಗದಿದ್ದರೆ ಮತ್ತು ಸರಿಯಾದ ವಧು-ವರರನ್ನು ನೋಡಿಟ್ಟಿದ್ದರೆ, ಕೊನೆಯದಾಗಿ ವಿವಾಹ ನಿಶ್ಚಿತಾರ್ಥವಾಗಿದ್ದರೆ ಮತ್ತು ವಿವಾಹವಾಗುವುದು ಖಚಿತವಾಗಿದ್ದರೆ ವಿವಾಹಯೋಗವಿದೆ.
ನನ್ನ ರಾಶಿಯದು ಬೇರೆ ಯಾರಿಗೋ ಹೋಗಿದ್ದರಿಂದ ಅದೇ ಓದಿಕೊಂಡೆ. ಇದೇನು ಮಧ್ಯಾಂತರದ ವರ್ಷ ಭವಿಷ್ಯನಾ?
ReplyDeleteಅದ್ಸರಿ ನಿಮ್ಗೆ ಹೇಗೆ ಗೊತ್ತಾಯ್ತು ನಮ್ಮ ಭವಿಷ್ಯ???
ಎಲ್ಲ ರಾಶಿಗಳ ಬಗ್ಗೆ ರಾಶಿ ರಾಶಿ ಭವಿಷ್ಯ ಬರ್ದಿದೀರ. ಆದ್ರೆ, ಬೊ.ರ ಯಾವ ರಾಶಿ ಎಂದು ಹೇಳಿದ್ದರೆ ಚೆನ್ನಾಗಿರ್ತಿತ್ತು. ಇಲ್ಲ ಅಂದ್ರೆ, ಬೊ.ರ ಗೆ "ಭವಿಷ್ಯವಿಲ್ಲ" ಅಂದುಕೊಂಡಾರು...!
ReplyDeleteಹಾಸ್ಯಕ್ಕಾಗಿ ಒಂದು ಬ್ಲಾಗಿದೆ. ನಿಮ್ಮ ಪಟ್ಟಿಯಲ್ಲಿ ಸೇರಿಕೊಂಡರೆ ಧನ್ಯ.
http://haasya.wordpress.com/
ಗಣೇಶ್.ಕೆ
ಗುರು,
ReplyDeleteಖೋಡೀಹಳ್ಳಿ ಪಂಡಿತರ ಹಾಗೆ ಭವಿಷ್ಯ ಹೇಳಿದ್ದೀರಿ. ನಿಮ್ಮಿಂದ ಭವಿಷ್ಯ ಕೇಳಿದ್ದಕ್ಕೆ,ಬಹುಶಃ ವೇದೇಗೌಡ, ಗುದ್ದುರಾಮಯ್ಯ ಎಲ್ಲರೂ ಒದ್ದಾಡುತ್ತಿರಬಹುದು.
ಇರಲಿ,ನನ್ನ ಭವಿಷ್ಯ ನೀಲಗಿರಿಯವರಿಗೆ ಹೋಗಿದ್ದಕ್ಕೆ ನಾನು ಅವರ ಭವಿಷ್ಯ ನೊಡಿಕೊಂಡು ವಸಿ ಅಡ್ಜಸ್ಟ್ ಮಾಡಿಕೊಂಡೆ.
ಶಾಂತಿ-ವಾಂತಿ ಏನಾದರೂ ಮಾಡಿಸೋಣ್ವಾ ಅಂತ?
This bhavishya is only for politicians...why to worry?...this ba*d politicians future nobody can tell...but somehow it matches...
ReplyDeleteBut this is not full
ನೀಲಗಿರಿಯವರೆ,
ReplyDeleteನಿಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇರೋದ್ರಿಂದಾಗಿ ನಮಗೆ ಗೊತ್ತಾಗದಿದ್ದರೂ ನಿಮ್ಮ ಭವಿಷ್ಯ ನಮಗೆ ಗೊತ್ತಿದೆ ಎಂತ ಹೇಳಿಕೊಳ್ಳಲು ಇಷ್ಟಪಡದಿದ್ದರೂ ಇಷ್ಟಪಡುತ್ತೇವೆ.
ಗಣೇಶ್ ಅವರೆ,
ReplyDeleteಬೊ.ರ. ಯಾವತ್ತಿದ್ದರೂ ಕಸದ ರಾಶಿಯ ಮಧ್ಯೆಯೇ ಸಿಗುತ್ತದೆಯಾದುದರಿಂದ ಅದುವೇ ಅದರ ರಾಶಿಯಾಗಿರುತ್ತದೆ. ಹೀಗಾಗಿ ಭವಿಷ್ಯ ಇಲ್ಲದಿದ್ದರೂ ಭವಿಷ್ಯದಲ್ಲಿ ಏನಾದರೂ ಪ್ರಯೋಜನಕ್ಕೆ ಸಿಗುತ್ತದೆ ಅಂತ ಕಸಎತ್ತುವವರು ಹೇಳಿಕೊಳ್ಳುವುದು ಕೇಳಿ ಮನಸ್ಸಿಗೆ ಹಿತವಾಗಿದೆ.
ನಿಮ್ಮ ಹಾಸ್ಯ ಬ್ಲಾಗು ಒಂದೇ ಪೋಸ್ಟಿಗೆ ನಿಂತಿದೆ. ಅದರಲ್ಲಿ ಮತ್ತೆ ಮತ್ತೆ ತುಂಬಿಸ್ತಾ ಇರಿ. ಬರೆಯಿರಿ ಇಲ್ಲವಾದರೆ ಬರಿದಾದೀತು!!!
ಸುನಾಥರೆ,
ReplyDeleteನಮ್ಮದೂ ಖೋಟಾಹಳ್ಳಿ ಮಠದ ಭವಿಷ್ಯವೇ.
ನೀಲಗಿರಿಯವವರ ಭವಿಷ್ಯ ಕದ್ದು ನೀವು ಕೂಡ ಕಿವೀಸ್ ನಾಡಿಗೆ ಹೋಗಿ ಕಿವಿ ಹಿಡಿಸಿಕೊಳ್ಳದಿದ್ದರಾಯಿತು. ;) ಅಲ್ಲಿ ವಾಂತಿ ಮಾಡಿಕೊಂಡರೂ ದಂಡ ಹಾಕ್ತಾರಂತೆ. ಶಾಂತಿ.... ಪರವಾಗಿಲ್ಲ...
ಅನಾನಿಮಸರೆ,
ReplyDeleteಈ ಜಾರಿದ ಜಾರಕಾರಣಿಗಳಿಗೇ ಭವಿಷ್ಯ ಇರೋದು. ಹೀಗಾಗಿ ಹೆಚ್ಚು ಹೆಚ್ಚು ಅವಿದ್ಯಾವಂತರು ರಾಜಕಾರಣದತ್ತ ವಾಲುತ್ತಿದ್ದಾರೆ. ಆದರೆ ನಮ್ಮ ಬೊಗಳೆ ಬ್ಯುರೋಗಂತೂ ಜಾರಕಾರಣಿಗಳು ಏನೂ ಮಾಡಬಲ್ಲರು ಎಂಬುದು ಗೊತ್ತಾಗಿಹೋಗಿರುವುದರಿಂದ ಏನು ಬರೆದರೂ ಅದು ಸರಿಯಾಗಿ ಪರಿಣಮಿಸುತ್ತದೆ.
Post a Comment
ಏನಾದ್ರೂ ಹೇಳ್ರಪಾ :-D