ಬೊಗಳೆ ರಗಳೆ

header ads

ಭಯೋತ್ಪಾದನೆ ನಿಷೇಧ ಇಲ್ಲ: ಮಾನ್ಯ ನಿಧಾನಮಂತ್ರಿ

(ಬೊಗಳೂರು ನಿರುದ್ಯೋಗ ನಿವಾರಣಾ ಬ್ಯುರೋದಿಂದ)
ಬೊಗಳೂರು, ಮೇ 17- ಒಂದು ಕಡೆಯಿಂದ ಕಳ್ಳಭಟ್ಟಿ ದುರಂತ, ಮತ್ತೊಂದು ಕಡೆಯಿಂದ ಭಯೋತ್ಪಾದಕರ ಹಾವಳಿ..., ಇವೆಲ್ಲಕ್ಕಿಂತ ಮೇಲೆ ಏರುತ್ತಿರುವ ಬೆಲೆಗಳು ಜನಸಾಮಾನ್ಯರ ಜೀವನವನ್ನು ನರಕ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ Unprecedented Price Agenda (UPA) ಸರಕಾರವು ಭಯೋತ್ಪಾದನೆಯನ್ನು ನಿಷೇಧಿಸುವುದೇ ಇಲ್ಲ ಎಂದು ಕಟ್ಟಖಂಡಿತವಾಗಿ ಹೇಳಿದೆ.

ಇದಕ್ಕೆ ಕಾರಣ ಪಟ್ಟಿ ಮಾಡಿ ಬೊಗಳೆ ಬ್ಯುರೋಗೆ ಕಳುಹಿಸಿರುವ, (ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ) ನಿಧಾನಿ ಮನಮೋಹಕ ಸಿಂಗರು, ಭಯೋತ್ಪಾದನೆಯನ್ನು ನಿಷೇಧಿಸಿದರೆ ಹಲವರಿಗೆ ಉದ್ಯೋಗ ನಷ್ಟವಾಗುತ್ತದೆ, ನಮ್ಮ ಓಟಿನ ಬ್ಯಾಂಕು ಕೂಡ ನಷ್ಟಕ್ಕೀಡಾಗಿ ದಿವಾಳಿ ಆಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಯೋತ್ಪಾದಕರನ್ನು ನಿಷೇಧಿಸಿದರೆ ನಮ್ಮ ಓಟಿನ ಬ್ಯಾಂಕು ದಿವಾಳಿಯಾಗುತ್ತದೆ. ಈ ಕಾರಣಕ್ಕೆ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್, ಕಂಡಿರಾ ಗಾಂಧಿ ಆವಾಸ್ ಯೋಜನೆಯ ಮನೆ ಎಲ್ಲವನ್ನೂ ಒದಗಿಸುತ್ತೇವೆ ಎಂದಿರುವ ನಿಧಾನಮಂತ್ರಿ ಅವರು, ಭಯೋತ್ಪಾದಕರಿಲ್ಲದೇ ಇದ್ದರೆ ನಮ್ಮ ಪೊಲೀಸರಿಗೇನು ಕೆಲಸವಿರುತ್ತದೆ? ಅವರು ಸುಮ್ಮನೆ ಕೈಕಟ್ಟಿ ಕೂರಬೇಕಾಗುತ್ತದಲ್ಲ? ನಮ್ಮ ಗುಪ್ತಚರ ವಿಭಾಗಕ್ಕೂ ಕೆಲಸವಿರುವುದಿಲ್ಲ. ಅವರೆಲ್ಲಾ ಉದ್ಯೋಗಹೀನರಾಗುವರು ಎಂದು ಕಳವಳ ವ್ಯಕ್ತಪಡಿಸಿದರು.

ಈಗ ಕೆಲಸವಿಲ್ಲದ ಪೊಲೀಸರಿಗೆ ಕನಿಷ್ಠ ಪಕ್ಷ ಭಯೋತ್ಪಾದಕರನ್ನು ಹುಡುಕುತ್ತಲಾದರೂ ಕಾಲ ಕಳೆಯಬಹುದಲ್ಲವೇ ಎಂಬ ಲಾಜಿಕ್ಕನ್ನು ಮಾನ್ಯ ನಿಧಾನಿಯವರು ಬೊಗಳೆ ಮುಂದಿಟ್ಟಾಗ ಬೆಚ್ಚಿದ ಬೊಗಳೆಯೆದುರು, ಹೇಳಲೋ ಬೇಡವೋ ಅಂತ ತಿಣುಕಾಡುತ್ತಿದ್ದುದು ಕಂಡುಬಂತು. ಹೇಳಿ ಹೇಳಿ ಅಂತ ಧೈರ್ಯ ತುಂಬಿದಾಗ.... ಭಯೋತ್ಪಾದನೆಯೇ ನಡಿಯದೆ ಇದ್ದರೆ, ದೇಶದಲ್ಲಿ ವಿರೋಧ ಪಕ್ಷಗಳನ್ನು ಟೀಕಿಸೋದು, ಅವರು ನಮ್ಮನ್ನು ಟೀಕಿಸೋದಾದರೂ ಹೇಗೆ? ನಮ್ಮ ಹೆಸರು ಕೂಡ ಮುಂದಿನ ಚುನಾವಣೆವರೆಗೆ ಚಾಲ್ತಿಯಲ್ಲಿರಬೇಕಲ್ಲ... ಮತ್ತು ಈ ಮೂಲಕ ನಾವು ಇದ್ದೇವೆ ಎಂಬುದು ಮತದಾರರಿಗೆ ತಿಳಿಯಬೇಕಲ್ಲ ಎಂದು ಕೇಳಿದರು.

ಹಾಗಿದ್ದರೆ ನೀವೇಕೆ ಭಯೋತ್ಪಾದನೆಯನ್ನು ನಿಷೇಧಿಸುವುದಿಲ್ಲ ಎಂದು ಈ ಮೊದಲೇ ಕೇಳಿದ ಪ್ರಶ್ನೆಗೆ ನಿಧಾನಿಯವರು ಪಟ್ಟಿ ನೀಡಿದರು.

ನೋಡಿ ದೇಶದಲ್ಲಿ ಗುಟ್ಕಾ, ತಂಬಾಕು, ಸಿಗರೇಟು ನಿಷೇಧ ಮಾಡಿದರೆ ಅಡಕೆ ಬೆಳೆಗಾರರಿಗೆ, ತಂಬಾಕು ಬೆಳೆಗಾರರಿಗೆ ನಷ್ಟವಾಗುತ್ತದೆ. ಬೀಡಿ ನಿಷೇಧಿಸಿದರೆ ಬೀಡಿ ಕಟ್ಟುವವರು ಎಲ್ಲಿಗೆ ಹೋಗಬೇಕು? ಸಾರಾಯಿ ನಿಷೇಧಿಸಿದರೆ ಸಾರಾಯಿ ದಂಧೆಕೋರರು ಎಲ್ಲಿಗೆ ಹೋಗಬೇಕು? ರಮ್, ವಿಸ್ಕಿ ಎಲ್ಲಾ ನಿಷೇಧಿಸಿಬಿಟ್ಟರೆ ದೊಡ್ಡ ದೊಡ್ಡ ಮದ್ಯದ ದೊರೆಗಳು ಎಲ್ಲಿಗೆ ಹೋಗಬೇಕು? ಐಪಿಎಲ್‌ನಂತಹ ಕ್ರೀಡೆಯನ್ನು ನಡೆಸುವುದಾದರೂ ಹೇಗೆ? ವೇಶ್ಯಾವಾಟಿಕೆ ನಿಷೇಧಿಸಿದರೆ ರಾಜಕಾರಣಿಗಳು, ರೌಡಿಗಳು ಏನು ಮಾಡಬೇಕು?

ಕೊನೆಯದಾಗಿ, ಪ್ಲಾಸ್ಟಿಕ್ ನಿಷೇಧ ಮಾಡಿದರೆ, ಏರುತ್ತಿರುವ ಬೆಲೆಗಳ ಈ ಯುಗದಲ್ಲಿ ಜನ ತಿನ್ನೋದನ್ನಾದರೂ ಏನನ್ನು? ಹೀಗಾಗಿ ಏನೇ ನಿಷೇಧ ಮಾಡಿದರೂ ದೇಶದಲ್ಲಿ ಭೀಕರ ನಿರುದ್ಯೋಗ ಸಮಸ್ಯೆ ತಲೆದೋರುತ್ತದೆ ಎಂದು ವಿವರ ಬಿಡಿಸಿಟ್ಟಾಗ ಬೊಗಳೆ ರಗಳೆ ಬ್ಯುರೋ ಅಲ್ಲಿಂದ ಒಂದೇ ಓಟಕ್ಕೆ ಪರಾರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಎಲಾ ಸರದಾರಜಿ! ಈತನ ಟರ್ಬನ್ನದ ಬುಡಕ ಎಂತೆಂಥಾ ಭಯೋತ್ಪಾದಕ ಹೇನುಗಳು ಹರದಾಡ್ತಾವಲ್ರೀ!

  ಪ್ರತ್ಯುತ್ತರಅಳಿಸಿ
 2. Kick that Bastard Sardarji out of this country.....

  ಪ್ರತ್ಯುತ್ತರಅಳಿಸಿ
 3. ಶ್ರೀನಿಧಿಯವರೆ,
  ನೀವು ಕೂಡ ನಮ್ಮ ನಿಧಾನಿಗಳ ಪಾಡು ನೋಡಿ ನಗುವುದೇ?

  ಪ್ರತ್ಯುತ್ತರಅಳಿಸಿ
 4. ಸುನಾಥರೆ,
  ಓಟಿನ ಹೇನಂತೂ ಜೋರಾಗಿಯೇ ಕೆಲ್ಸ ಮಾಡ್ತಾ ಇದೆ...

  ಪ್ರತ್ಯುತ್ತರಅಳಿಸಿ
 5. ಅನಾನಿಮಸರೆ,
  beard Sardarji ಅನ್ನೋದು ಅಕ್ಷರ ತಪ್ಪಾಗಿರುವಂತಿದೆಯಲ್ಲಾ...

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D