(ಬೊಗಳೂರು ಗಾಳ ಹಾಕೋ ಬ್ಯುರೋದಿಂದ)
ಬೊಗಳೂರು, ಮೇ 6- ಅಮೆರಿಕದ (ಅತ್ಯಂತ) ಅದಕ್ಷ ಲಾರ್ಜ್ ಬುಷ್ ಅವರನ್ನು ಬೊಗಳೆ ರಗಳೆ ಬ್ಯುರೋಗೆ ಸೇರಿಸಿಕೊಳ್ಳಲು ಗಾಳ ಹಾಕಲಾಗುತ್ತಿದೆ.

ಇದಕ್ಕೆ ಪ್ರಧಾನ ಕಾರಣವೆಂದರೆ, ಭಾರತೀಯರ ತಿಂಡಿಪೋತತನದಿಂದಾಗಿಯೇ ಜಾಗತಿಕವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ಲಾರ್ಜ್ ಬುಷ್ ಹೇಳಿಕೆ ನೀಡಿದ್ದು. ಬೊಗಳೆಗೇ ಸೆಡ್ಡು ಹೊಡೆಯುವ ಮಾದರಿಯಲ್ಲಿ ಲಾರ್ಜ್ ಬುಷ್ ಈ ಹೇಳಿಕೆ ನೀಡಿದ್ದು ಎಲ್ಲಿ ಎಂಬುದನ್ನು ಪತ್ತೆ ಮಾಡಲು ಹೊರಟಾಗ ತಿಳಿದು ಬಂದ ವಿಷಯವೆಂದರೆ, ಅವರು ಈ ಹೇಳಿಕೆ ನೀಡಿದ್ದು ಅಪ್ಪಟ ಭಾರತೀಯ ಮದ್ಯ ಒದಗಿಸುತ್ತಿರುವ 'ಮಜ'ಯ ಮಲ್ಯರ ಆತ್ಮೀಯ ಅಡಗುದಾಣದಿಂದ.

ಬೆಲೆ ಏರಿಕೆಗೆ ಮಧ್ಯಮ ವರ್ಗ ಕಾರಣ ಅಂತ ಲಾರ್ಜ್ ಬುಷ್ ಹೇಳಿದ್ದರೂ, ಅವರ ಹೇಳಿಕೆಯನ್ನು ಮತ್ತೊಮ್ಮೆ ಸರಿಯಾಗಿ ರಿವೈಂಡ್ ಮಾಡಿ ಕೇಳಿದಾಗ, ನಿಜಕ್ಕೂ ಅವರು ಹೇಳಿದ್ದು 'ಮದ್ಯ'ಮ ವರ್ಗದಿಂದಾಗಿ ಅಂತ ಎಂಬುದು ಖಚಿತವಾಯಿತು. ಯಾಕೆಂದರೆ ಅವರು ಕೂಡ 'ಮದ್ಯ'ವರ್ತಿತನ ಮಾಡಿಕೊಂಡೇ ಅಪಮೌಲ್ಯವರ್ಧಿಸಿಕೊಳ್ಳುತ್ತಿದ್ದರು ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ.

ಭಾರತೀಯರ ತಿಂಡಿಪೋತತನದಿಂದಾಗಿಯೇ ಜಾಗತಿಕ ಮೌಲ್ಯ ಹೆಚ್ಚಾಗಿದೆ, ಡೌಲರ್ ಮೌಲ್ಯ ಕುಸಿಯುತ್ತಿದೆ ಎಂದೆಲ್ಲಾ ಅಷ್ಟು ನಿಖರವಾಗಿ ಬೊಗಳೆ ಬಿಡಬಲ್ಲ ಲಾರ್ಜ್ ಬುಷ್‌ರಂತವರು ನಮ್ಮ ಏಕ ಸದಸ್ಯ ಬ್ಯುರೋದಲ್ಲಿದ್ದರೆ ಎಂಥೆಂಥಾ ಬೆಲೆಗಳನ್ನೇ ಇಳಿಸಬಹುದಲ್ಲ ಎಂದು ಯೋಚಿಸಿರುವ ಬೊ.ರ. ಸೊಂಪಾದ-ಕರುಗಳು, ಈ ನಿರ್ಧಾರ ಕೈಗೊಂಡಿದ್ದು, ಗಾಳ ಹಾಕುವ ತಿಮಿಂಗಿಲವು ದೊಡ್ಡದಾಗಿರುವುದರಿಂದ ಗಾಳದಲ್ಲಿ ಒಪ್ಪಂದ ಚಾಲ್ತಿಯಲ್ಲಿರುವ ಅಣ್ವಸ್ತ್ರವನ್ನೇ ಸಿಕ್ಕಿಸಲಾಗಿದೆ ಎಂದು ಬಲ್ಲ ಮೂಲಗಳು ಹೇಳಿವೆ.

ವಿಶ್ವಕ್ಕೇ ಹಿರಿಯಣ್ಣ ಅಂತ ಕರೆಸಿಕೊಳ್ಳುವವರು ಭಾರತದಂತಹ ರಾಷ್ಟ್ರಕ್ಕೆ ಗೂಬೆಯೊಂದನ್ನು ತಂದು ಅದರ ತಲೆ ಮೇಲೆ ಕೂರಿಸಲು ಎಷ್ಟು ಚೆನ್ನಾಗಿ ಪೊಗರು ಬೆಳೆಸಿಕೊಂಡಿರಬೇಕು ಎಂಬುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸೊಂಪಾದಕರು, ಭಾರತದಲ್ಲಿ ಹಣವನ್ನೇ ನುಂಗುವಂಥವರಿದ್ದಾರೆ ಎಂಬುದು ವರದಿಯಾಗಿರುವುದರಿಂದಾಗಿಯೇ ಲಾರ್ಜೆಸ್ಟ್ ಬುಷ್ ಈ ರೀತಿ ಆರೋಪ ಮಾಡಿರಬೇಕು ಎಂಬುದಾಗಿ ಆಮಶಂಕಿಸಲಾಗಿದೆ.

ಇದಲ್ಲದೆ, ಭಾರತೀಯರಿಗೆ ರುಚಿಕಟ್ಟಾದ ತಿಂಡಿ ಬೇಕು, ಅವರೆಲ್ಲಾ ನಮ್ಮ ಹಾಳು-ಮೂಳು ಜಂಕ್ ಫುಡ್ ಸೇವಿಸೋದು ಕಡಿಮೆ. ಇದರಿಂದಾಗಿ ಅಮೆರಿಕನ್ ಜಂಕ್ ಫುಡ್ ಕಂಪನಿಗಳಿಗೆ ಅಲ್ಲಿ ಸರಿಯಾಗಿ ವ್ಯಾಪಾರವಾಗುತ್ತಿಲ್ಲ ಎಂಬುದು ಲಾರ್ಜ್ ಬುಷ್ ಅರಿವಿಗೆ ಬಂದಿದೆ. ಇದೇ ಕಾರಣಕ್ಕೆ 'ಭಾರತೀಯರು ಹಾಳು ಮೂಳು ತಿನ್ನುವ ಬದಲು, ಪ್ರಕೃತಿದತ್ತ ಆಹಾರವನ್ನೇ ತಿಂದು ಪ್ರಕೃತಿಯನ್ನು ಸರ್ವ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ' ಅಂತ ಆರೋಪಿಸಿರುವುದನ್ನೂ ಕೂಡ ಈ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದೆ.

6 Comments

ಏನಾದ್ರೂ ಹೇಳ್ರಪಾ :-D

 1. ಹಾಳ್ ಮಾಡ್ದೇ ಹಾಗೇ ವಾಪಾಸ್ ಕೊಡ್ತೀನಿ ಅಂತ ಗ್ಯಾರೆಂಟಿ ಕೊಟ್ರೆ ನನ್ ಗಾಳ ಬೇಕಾದ್ರೆ ಒಂದೆರಡು ದಿನಕ್ಕೆ ಬಾಡಿಗೆಗೆ ಕೊಡ್ತೀನಿ ನೋಡಿ. ಬುಷ್ಷಪ್ಪ ಏನಾದ್ರೂ ಸಿಕ್ರೆ ನಂಗೆ ತಿಂಡಿ ಕೊಡಿಸ್ಬೇಕಾಗತ್ತೆ ನೀವು ಅಷ್ಟೇ..

  ReplyDelete
 2. ಅಮೆರಿಕನ್ ಅದಕ್ಷರಿಗೆ ignoble prize ಕೊಡುವ ಪದ್ಧತಿಯೇ ಇದೆ. ಅವರ ಕೆಲವು ಸಂಶೋಧನೆಗಳು:
  ೧)ಮಹಾತ್ಮಾ ಗಾಂಧಿಯವರು ಅಣ್ವಸ್ತ್ರದ ಜನಕರು.
  ೨)ಪಾಕಿಸ್ತಾನವು ಶಾಂತಿಪ್ರಿಯ ರಾಷ್ಟ್ರ.
  ೩)ಇರಾಕದ ಮುದ್ದು ಹುಸೇನಿಯು ಅಮೆರಿಕದ ಮೇಲೆ ಯುದ್ಧ ಪ್ರಾರಂಭ ಮಾಡಿದನು.
  ೪) ಭಾರತೀಯರು ತಿಂಡಿಪೋತರು. ಇದು ಜಾಗತಿಕ ಆಹಾರ ಅಭಾವಕ್ಕೆ ಕಾರಣವಾಗಿದ್ದರಿಂದ ಅಮೆರಿಕನ್ನರು ಉಪವಾಸ ಬೀಳತೊಡಗಿದ್ದಾರೆ.

  ReplyDelete
 3. ಲಾರ್ಜ್ ಬುಶ್ ಏನಾದರು ನೀವು ಊಟ ಮಾಡೋದನ್ನು ನೋಡಿರಬಹುದಾ ಅಂತ?

  ReplyDelete
 4. ಸುಶ್ರುತರೆ,

  ನಂಗೊತ್ತು... ನಿಮ್ ಗಾಳದಲ್ಲಿ ಸಿಕ್ಕಾಪಟ್ಟೆ ಮೀನುಗಳು ಸಿಕ್ಕಿ ವಿಲವಿಲಾಂತ ಒದ್ದಾಡ್ತಾ ಇವೆ ಅಂತ...

  ಮೀನುಗಳನ್ನೂ ತಿಂದು ತೇಗಿದ್ದು ಬುಷ್ಷಪ್ಪನಿಗೆ ಗೊತ್ತಾದ್ರೆ... ಮತ್ತಷ್ಟು ಬೆಲೆ ಮೇಲೇರಿತು ಅಂತ ಕೂಗಾಡ್ತಾನೆ...

  ಇರ್ಲಿ... ನೀವು ಹೇಳ್ತಿದೀರಿ ಅಂತ ಮತ್ತು ಯಾವುದಕ್ಕೂ ಬೇಕಾದೀತು ಅಂತ ಗಾಳ ತೆಗೆದಿಡ್ತೀನಿ...

  ReplyDelete
 5. ಸುನಾಥರೆ,

  ಅಮೆರಿಕದ ಅದಕ್ಷ ಬೆಕ್ಕಿಗೆ ಬಿಗ್-ನೋ ಎಂಬ ಬೆಲ್ ಕಟ್ಟಬೇಕಾಗಿದೆ. ಇಷ್ಟೆಲ್ಲಾ ಹೇಳಿದ್ಮೇಲೆ, ಬೊಗಳೆ ಜನಕ ಅಂತ ನಮಗೂ ಹೆಸರಿಟ್ಟಾರು... ಹುಷಾರ್...

  ReplyDelete
 6. ಶ್ರೀತ್ರೀ ಅವರೆ,

  ನಂಗೊತ್ತಿತ್ತು... ನೀವೇ ಅಲ್ಲಿ ಕೂತು ಬುಷ್ಷ್ ಕಿವಿಗೆ ಕಡ್ಡಿ ಹಾಕ್ತಿರೋದು ಅಂತ... ನಾವೇನಿದ್ರೂ ಇಲ್ಲಿ ಉಗುಳು ಮಾತ್ರ ನುಂಗೋದು... ನಿಮ್ಮೂರಿನ ಬುಷ್ಷೇ ಅಗಳು ಅಗಳು ಬಗೆಬಗೆದು ನುಂಗೋದು...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post