Subscribe Us

ಜಾಹೀರಾತು
header ads

ಬೊಗಳೆಗೆ 50 ಸಾವಿರದ ಹಿಟ್ಟು

(ಬೊಗಳೂರು ಸೊಂಪಾದkeyಯ ಬ್ಯುರೋದಿಂದ)
ಬೊಗಳೆ ಸ್ಫೋಟಗೊಂಡು 50 ಕಿಲೋ ಚಪಾತಿ ಹಿಟ್ಟುಗಳು ಛಿದ್ರಛಿದ್ರವಾಗಿದ್ದು, ಮತಯಾಚನೆ ಮತ್ತು ಮತಪೆಟ್ಟಿಗೆ ಅಪಹರಣ ಇತ್ಯಾದಿಗಳಲ್ಲಿ ನಿರತವಾಗಿದ್ದ ಬೊಗಳೆ ರಗಳೆ ಬ್ಯುರೋದ ಅರಿವಿಗೇ ಬಂದಿರಲಿಲ್ಲ. ಹೀಗಾಗಿ ಇದನ್ನು ನಮ್ಮ ವಿರೋಧೀ ಪತ್ರಿಕೆಗಳು ಬ್ರೇಕಿಂಗ್ ಸುದ್ದಿಯಾಗಿ ಪ್ರಕಟಿಸುವ ಮೊದಲೇ ಪ್ರಕಟಿಸಲು ನಾವಿಲ್ಲಿ ನಿರ್ಧರಿಸಿದ್ದೇವೆ.

ಇದಂತೂ ಹಾರ್ಟ್ ಬ್ರೇಕಿಂಗ್ ಸುದ್ದಿಯೋ ಅಥವಾ ಬ್ಲಾಗರ್ ಡಾಟ್ ಕಾಂ ಅವರ ಜಾಗ (ಸರ್ವರಿನ ಡಿಸ್ಕ್ ಸ್ಪೇಸ್) ಬ್ರೇಕ್ ಮಾಡುವ ಸುದ್ದಿಯೋ, ಅಂತೂ ಈ ಬೊಗಳೆ ಬ್ಲಾಗು 50 ಸಾವಿರ ಮೆಟ್ಟಿಲೇರಿ ಬಂದು ನಿಂತಿರುವುದು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ. ಆದರೆ ಕೇವಲ ಒಬ್ಬನೇ ಒಬ್ಬ ಲೇಖಕ, ಪ್ರಕಾಶಕ,ಸಂಪಾದಕ, ಕರಡಚ್ಚು ತಿದ್ದುಗ ಮತ್ತು ಎಲ್ಲಕ್ಕೂ ಮೊದಲು.... ಒಬ್ಬನೇ ಒಬ್ಬ ಓದುಗನೊಂದಿಗೆ ಈ blog ನ ಕನ್ನಡೀಕೃತ ರೂಪವಾದ 'ಬೊಗಳೆ' ಹುಟ್ಟಿದಾಗಲೇ ಎಲ್ಲರೂ ತಡವಾಗಿ ಹುಟ್ಟಿದ್ದೇಕೆ ಅಂತ ಗುಲ್ಲೆಬ್ಬಿಸಿದ್ದರು.

ಈ ಬಗ್ಗೆ ಅನ್ವೇಷಣೆ ಕೈಗೊಂಡಾಗಲೇ ಗೊತ್ತಾದದ್ದು ಅಸಲು ವಿಷಯ ಏನೂಂತ. ಯಾಕೆಂದರೆ ಬೊಗಳೆ ಹುಟ್ಟಿದ್ದು 2006ರ ಏಪ್ರಿಲ್ 4ರಂದು. ಮೂರು ದಿನ ತಡವಾಗಿ ಹುಟ್ಟಿದ್ದೇಕೆ ಅಂತಲೇ ಅವರು ನಿಜವಾಗಿ ಕೇಳಿದ್ದು! ಆದರೂ ಬೊಗಳೆ ಜನ್ಮದಿನ ಏಪ್ರಿಲ್ ಒಂದರಂದೇ ಎಲ್ಲೆಡೆ ಆಚರಿಸುವ ಪರಿಪಾಠವಿದೆ, ಈಗಲೂ ಈ ಬಗ್ಗೆ ಗಹನವಾದ ಚರ್ಚೆಯೂ ಮುಂದುವರಿಯುತ್ತಲೇ ಇದೆ. ಆದರೆ ಇದರಲ್ಲಿ ಬೊಗಳೆಯ ಅನ್ವೇಷಿಯ ಪಾತ್ರ ಏನೂ ಇಲ್ಲ ಎಂದು ನಮ್ಮ ಸೊಂಪಾದ-ಕರುಗಳು ಸ್ಪಷ್ಟಪಡಿಸಿದ್ದಾರೆ.

415ನೇ ಪೋಸ್ಟಿನ ವೇಳೆಗೆ 50 ಸಾವಿರಕ್ಕೂ ಹೆಚ್ಚು ಬಾರಿ ಓಡುಗರಿಂದ ಹಿಟ್ಟಿಸಿಕೊಂಡರೂ 'ಭ್ರಷ್ಟಾಚಾರದ ಬೀಜ ನೂರ್ಕಾಲ ಬಾಳುತ್ತದೆ' ಅಂತ ನಾವು ಈ ಹಿಂದೆ ಬಿಟ್ಟಿದ್ದ ಬೊಗಳೆಯ ಅನುಸಾರವಾಗಿ, ಬೊಗಳೆಯೂ ಈ ತಂತ್ರಜ್ಞಾನದ ಮೊರೆ ಹೋಗಿದೆಯೋ ಎಂಬ ಬಗ್ಗೆ ಯಾರು ಕೂಡ ಸಂದೇಹ ಪಡಬೇಕಾದ್ದಿಲ್ಲ ಅಂತ ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

10 ಸಾವಿರ ಹಿಟ್ಟುಗಳು ಬಿದ್ದಾಗಲೇ ಮಾಡಿದ ಆವಾಂತರವಿನ್ನೂ ನೆನಪಿದೆ. ಅಂದು ಬಂದು ಹಾರೈಸಿದ ಬೊಗಳೋದುಗರು ಇಂದೂ ಭೇಟಿ ನೀಡುತ್ತಿದ್ದಾರೆ ಎಂಬುದು ನೆಮ್ಮದಿ! ಆದರೂ ನಾವು ಈ ಸಂದರ್ಭದಲ್ಲಿ ಕೊಟ್ಟ ಕೊನೆಗೆ ನಾವು ಬೊಗಳೆ ಬಿಡದಿರಲು ನಿರ್ಧರಿಸಿದ್ದೇವೆ. ಅಂದ್ರೆ ಬೆಚ್ಚಿ ಬೀಳದಿರಿ, ಓ'ಡು'ಗರಾಗಬೇಡಿರಿ... ಈ ಕೆಳಗಿನ ಒಂದು ವಾಕ್ಯ ಮಾತ್ರ ಬೊಗಳೆ ಬಿಡಲು ಆಗುತ್ತಿಲ್ಲ. ಅಥವಾ ಬಿಟ್ಟದ್ದು ಬೊಗಳೆಯಾಗುವುದೂ ಸಾಧ್ಯವಿಲ್ಲ.

"ಓದುಗರು, ಓದಿದ ತಕ್ಷಣ ಬಿಟ್ಟೋಡುಗರು, ಕಾಮೆಂಟಿಗರು, ಪ್ರೋತ್ಸಾಹಿಗರು, ಮೆಚ್ಚುಗರು, ಬೆಚ್ಚುಗರು, ಟೀಕಿಗರು, ಟೆಕ್ಕಿಗರು, ಲೆಕ್ಕಿಗರು... ಆಗಿರುವವರಿಗೆಲ್ಲಾ ಕೃತಜ್ಞತೆಗಳು ಇಲ್ಲಿ ತುಂಬಿ ತುಳುಕಾಡುತ್ತಿವೆ"

Post a Comment

17 Comments

 1. ಅರ್ಧಶತಸಹಸ್ರ ಒದೆಗಳನ್ನು ಸ್ವೀಕರಿಸಿದ್ದಕ್ಕಾಗಿ ಅಭಿ-ನಮ್-ದನ

  -ಪಬ್

  ReplyDelete
 2. ಅಭಿನಂದನೆಗಳು :)

  ReplyDelete
 3. ಅಭಿನಂದನೆಗಳು.

  ವಿಶ್ವದಲ್ಲೆಲ್ಲಾ ಬೊಗಳೆ
  ರುಚಿಗೆ ತಕ್ಕಷ್ಟು ತರ್ಕದ ರಗಳೆ
  ಎಲ್ಲರಿಗೂ ತೋರುವುದು ಎಲ್ಲಿಹದು ಇಳೆ
  ಬೊಗಳೆಯ ವಿರುದ್ಧ ಸಲ್ಲದ ರಗಳೆ

  ಇದರಲ್ಲಿ ನನ್ನ ಒದೆಗಳೆಷ್ಟು ಹೇಳಬಲ್ಲಿರಾ, ಅನ್ವೇಷಿಗಳೇ!

  ReplyDelete
 4. ಗುರುಗಳೇ,
  50 ಸಾವಿರ ಹಿಟ್ಟು ತಿಂದ ನಿಮಗೆ ನಮ್ಮ ಅಭಿದಮನೆಗಳು! ಶೀಘ್ರವೇ ಲಕ್ಷ ಹಿಟ್ಟು ತಿನ್ನುವತ್ತ ನಿಮ್ಮ ಲಕ್ಷ್ಯ ಹರಿಯಲಿ.
  ಇಂತೀ ತಮ್ಮ ವಿಧೇಯ ಶಿಷ್ಯೆ,
  -ಶಾನಿ

  ReplyDelete
 5. ಓಹೋ, ಇಷ್ಟೆಲ್ಲಾ ಪೆಟ್ಟು ತಿಂದು ಇನ್ನೂ ಉಸರಾಡುತ್ತಿದ್ದೀರಿ.
  ಇದರರ್ಥ: ಅಸತ್ಯಮೇವ ಜಯತೆ!
  Carry on ಅನ್ವೇಷಿ!
  ಗಜ್ಜು ಕೊಡಲು ನಾವು ಸಜ್ಜಾಗಿಯೇ ನಿಂತಿದ್ದೇವೆ!

  ReplyDelete
 6. ಹಿಪ್ ಹಿಪ್ ಹುರ್ರೇ!!!!!!!!!!!! ಅಂತೂ ೫೦ಸಾವಿರ ಒದೆಗಳನ್ನು ತಿಂದೂ ಬದುಕಿದ್ದೀರೆಂದರೆ, ಅದ್ಭುತ...ಅದರಲ್ಲಿ ನಿಮ್ಮ ಸ್ವಂತ ಒದೆಗಳೆಷ್ಟು?......ನನ್ನ http://kannadaputhra.blogspot.com ನಲ್ಲಿ ನಾನೇ ನನಗೆ ಸಾವಿರ ಸಲ ಒದ್ದುಕೊಂಡಿದ್ದೇನೆ...ಅದಕ್ಕೆ ಕೇಳಿದೆ...ತಪ್ಪು ತಿಳ್ಕೋಬೇಡಿ ಸ್ವಾಮಿ....ನಂದಿನ್ನೂ ಇನ್ನೂರೈವತ್ತು....ಅದರಲ್ಲಿ ಇನ್ನೂರು ಸಲ ನನಗೆ ನಾನೇ ಒದ್ದುಕೊಂಡಿದ್ದೇನೆ.

  ReplyDelete
 7. ಅಲ್ರಿ ಅಸತ್ಯಾನ್ವೇಷಿಗಳೆ, ಐವತ್ತು ಸಹಸ್ರ ಹಿಟ್ಟು(ಒದೆ)ಗಳು ಅಂತ ಬರೆದಿದ್ದೀರಲ್ಲಾ, ಈಗ್ಲಾದ್ರೂ ಸ್ವಲ್ಪ ಜ್ಞಾನೋದಯವಾಯಿತೇನ್ರಿ ನಿಮಗೆ.
  ನನ್ನದೋ ಇಲ್ಲಾ ಇನ್ಯಾವುದೇ ಬ್ಲಾಗಿಗೆ ಇಷ್ಟೊಂದು ಒದೆಗಳೇಕಿಲ್ಲ?
  ಸ್ವಾಮಿ ಇದು ಸುಳ್ಳಿಗೆ ಬಿದ್ದ ಒದೆಗಳು ತಿಳಿಯಿತೋ. ಸುನಾಥರೆ "ಅಸತ್ಯಮೇವ ಜಯತೆ" ಅಲ್ಲ, ಇದು "ಸತ್ಯಮೇವ ಜಯತೆ"ಯೇ.
  ಏನಂತೀರಾ?
  ಗಜ್ಜು ಕೊಡಲು ನಾನೂ ರೆಡಿ. ಆಗಲೆ ಒಂದು ಗಜ್ಜು ಕೊಟ್ಟೆ ಮಾತಾಡ್ತಾ ಇದೀನಿ :-)

  ReplyDelete
 8. ಅಸತ್ಯ ಅನ್ವೇಷಿ ಯವರೇ,
  ಶೀಘ್ರದಲ್ಲಿ ನಿಮಗೆ ಲಕ್ಷ ಒದೆಗಳು ಸಿಗಲೆ೦ದು ಆಶಿಸುತ್ತೇನೆ.:D

  - ರವೀಶ

  ReplyDelete
 9. ಪಬ್ಬಿಗರೆ,
  ನಿಂ-ದನಗಳಿಗೆ ಧನ್ಯವಾದ... ನಿಮ್ಮ ಪಬ್ಬಿನಲ್ಲೇ ಪಾರ್ಟಿ ಏರ್ಪಡಿಸಿಬಿಡಿ. ಬಹುಶಃ ಇದನ್ನು ಹೇಳಲೇಬೇಕಾಗಿಲ್ಲ, ನೀವೀಗಾಗಲೇ ಪಾರ್ಟಿ ಮಾಡುತ್ತಿದ್ದಿರಬಹುದು ;)

  ReplyDelete
 10. ನೀಲಗಿರಿಯವರೆ,
  ಇಲ್ಲಿಗೆ ನಿಮ್ಮ ಗೆಳೆಯ-ಗೆಳತಿಯರ ಬಳಗದ ಹಿಟ್ಟುಗಳನ್ನು ಲೆಕ್ಕ ಇಟ್ಟುಕೊಂಡಿದ್ದೀರಾ? :) ಲೆಕ್ಕಕ್ಕೇ ಸಿಗುತ್ತಿಲ್ಲ!!!

  ಧನ್ಯವಾದ

  ReplyDelete
 11. ಶ್ರೀನಿವಾಸರೆ,

  49999 ಹಿಟ್ಟುಗಳು ನಿಮ್ಮವಲ್ಲ, ಉಳಿದೆಲ್ಲವೂ ನಮ್ಮವು!

  ನೀವು ನಮ್ಮ ಖಾಯಂ ಓದುಗರು... ಅಲ್ಲಲ್ಲ... ಹೌದೌದು... ಅಲ್ಲಲ್ಲ... ಹೌದೌದು ಪ್ರೋತ್ಸಾಹಕರೂ ಆಗಿರುವುದರಿಂದ ಹಿಟ್ಟುಗಳು ಲೆಕ್ಕಕ್ಕೆ ಸಿಗುತ್ತಿಲ್ಲ.

  ReplyDelete
 12. ಗುರುವಿಗೇ ತಿರುಮಂತ್ರ ಹಾಕಿ ಬೆಳೆಯುತ್ತಿರುವ ಶಾನಿಯವರೆ,

  ನಿಮ್ಮ ಅವಿಧೇಯತೆಗೆ ನಾವು ಋಣಿಗಳು. ಹಿಟ್ಟಿಸ್ತಾ ಇರಿ, ನಿಮ್ಮಲ್ಲೂ ಕುಟ್ಟುತ್ತಾ ಇರಿ...

  ReplyDelete
 13. ಸುನಾಥರೆ,

  ಅಸತ್ಯಮೇವ ಜಯತೆ ಎಂಬ ಹಾರೈಕೆಗೆ ಧನ್ಯವಾದ. ಕ್ಯಾರಿ ಆನ್ ಅಂತ ಹೇಳಿದ್ದೀರಿ... ಕ್ಯಾರಿಯರ್ ಕಳಿಸಿಕೊಡಿ... ಅದರಲ್ಲೇ ಗಜ್ಜುವಿನ ಗೊಜ್ಜು ಕೂಡ...!!!

  ನಿಮ್ಮ ಸಾಧನಕೇರಿಯಲ್ಲೇ ಬಜ್ಜಿ ಮಾಡೋಣ ಬಿಡಿ.

  ReplyDelete
 14. @ ಕನ್ನಡಪುತ್ರರೇ,

  ಐವತ್ತು ಸಾವಿರದಲ್ಲಿ 49999 ಸಾವಿರವೂ ನಮ್ಮದೇ (ಅಂದ್ರೆ ನಮ್ಮವರದೇ) ಅಂತ ನಿಮಗೆ ಮಾತ್ರ ಹೇಳ್ತಾ ಇದ್ದೇನೆ... ಬೇರೆ ಯಾರೇ ಕೇಳಿದ್ರೂ ಹೇಳಬೇಡಿ...
  ಒದೀತಾ ಇರಿ...

  ReplyDelete
 15. ಎಂಡಿಯವರೆ,

  ನಿಮ್ಮ ಗಜ್ಜುಗಳು ಬಂದು ತಲುಪಿವೆ. ಧನ್ಯವಾದ. ಸುಳ್ಳೆಂದರೆ ಸರ್ವವ್ಯಾಪಿ, ಸುಳ್ಳಿಂದಲೇ ಜೀವನ, ಸುಳ್ಳೇ ಬದುಕು, ಸುಳ್ಳಿಂದಲೇ ಈ ಜಗ ಅಂತೆಲ್ಲಾ ನಮ್ಮ ಮುತ್ತಾತ-ತಾತರು ಹಾಡಿದ್ದು ಸುಳ್ಳಾ ಮತ್ತೆ????

  ನೀವಂತೂ ಸುನಾಥರಿಗೂ ಹೇಳಿ ಹೇಳಿ, ಅವರಿಂದ ನಮಗೆ ದೊರೆಯುವ ಗಜ್ಜು ತಪ್ಪಿಸುವ ಹುನ್ನಾರ ಮಾಡ್ತಾ ಇದೀರಿ... ನಿಮ್ಮ ಗಜ್ಜುಗಳನ್ನು ಸಪರೇಟ್ ಆಗಿ ಕಳಿಸಿ...

  ಧನ್ಯವಾದಗಳು

  ReplyDelete
 16. ರವೀಶ್ ಅವರೆ,

  ಬೊಗಳೆಗೆ ಒದ್ದದ್ದಕ್ಕಾಗಿ ಧನ್ಯವಾದ. ನಿಮ್ಮ ಆರೈಕೆಯ ಹಾರೈಕೆಗೆ ನಮ್ಮದು ಅಕ್ಷರಗಳ ಪೂರೈಕೆಯಷ್ಟೇ...

  ಬರ್ತಾ ಇರಿ, ಧನ್ಯವಾದ

  ReplyDelete

ಏನಾದ್ರೂ ಹೇಳ್ರಪಾ :-D