(ಬೊಗಳೂರು ಜಡೆಕಿತ್ತಾಟ ಬ್ಯುರೋದಿಂದ)
ಬೊಗಳೂರು, ಏ.10- ಹೈಕೋರ್ಟು ತೀರ್ಪಿನಿಂದಾಗಿ ಬೊಗಳೂರಿನ ಮಹಿಳಾ ಮಂಡಲದ ಮಹಿಳೆಯರು ಹೈಸ್ಪಿರಿಟ್‌ನಿಂದ ಕುಣಿದಾಡಿದ ಪ್ರಸಂಗವೊಂದನ್ನು ಇಲ್ಲಿ ಬೊಗಳೆ ರಗಳೆ ಬ್ಯುರೋ ವರದಿ ಮಾಡುತ್ತಿಲ್ಲ ಅಂತ ಮೊದಲೇ ಹೇಳಿಬಿಡುತ್ತದೆ.

'ಅವ್ಳು ಮಹಿಳಾ ಮಂಡಲ ಮೀಟಿಂಗಿಗೆ ಮೈತುಂಬಾ ಚಿನ್ನ ಹಾಕ್ಕೊಂಡು ಬರ್ತಿದ್ದಾಳೆ ನೋಡು... ಅಬ್ಬಾ... ಅವ್ಳು ಹಾಕೋ ಸೆಂಟು ವಿದೇಶದ್ದಂತೆ. ಈ ಬಾರಿ ಮಹಿಳಾ ಮಂಡಲ ಎಲೆಕ್ಷನ್‌ಗೆ ಅವಳೇ ನಿಲ್ತಾಳೆ, ಗೆಲ್ಲೋದು ಕೂಡ ಗ್ಯಾರಂಟಿ...' ಅಂತ ಮೊನ್ನೆ ಮೊನ್ನೆ ಮತ್ಸರದಿಂದ ಹಲುಬುತ್ತಿದ್ದವರೆಲ್ಲರೂ ಇದೀಗ ಆ 'ಗಟ್ಟಿ ಕುಳ'ದತ್ತ ವಾರೆನೋಟದಲ್ಲಿ ನಗುವಿನ ಮಿಂಚು ಹರಿಸತೊಡಗಿದ್ದಾರೆ.

ಇದಕ್ಕೆ ಕಾರಣವೆಂದರೆ ಇಲ್ಲಿ ಪ್ರಕಟವಾಗಿರೋ ವರದಿ. ಭ್ರಷ್ಟನ ಪತ್ನಿಯರೂ ಶಿಕ್ಷಾರ್ಹರು ಅಂತ ಹೇಳಿರುವುದರಿಂದ, ಅವರೆಲ್ಲರೂ ಈ 'ಗಟ್ಟಿ ಕುಳ'ದ ಗಂಡನನ್ನು ಯಾವುದಾದರೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗದಿದ್ದರೂ, ನಮ್ಮ ಬ್ಯುರೋ ವರದಿ ಮಾಡುತ್ತಿದೆ.

'ಹಾಂ.... ಅವ್ಳಿಗೆಷ್ಟು ದರ್ಪ... ತಾನು ಹೇಳಿದ್ದೇ ಆಗ್ಬೇಕು ಅಂತಿದ್ದಾಳೆ. ಮೊದ್ಲು ಅವ್ಳ ಗಂಡನ್ನ ಒಂದು ಕೈ ನೋಡ್ಕೊಳೋಣ, ಆಮೇಲೆ ಎಲ್ಲಾ ಸರಿಹೋಗುತ್ತೆ' ಎಂಬಲ್ಲಿಂದ, ಅವಿವಾಹಿತ ತರುಣಿಯರಿದ್ದರೆ, 'ಇವ್ಳಿಗೆ ಮೊನ್ನೆ ಮೊನ್ನೆ ಕೋಟಿ ಕೋಟಿ ನುಂಗಿ ದಿಢೀರ್ ಶ್ರೀಮಂತನಾದ್ನಲ್ಲ, ಅವನನ್ನೇ ಕಟ್ಟಿ ಬಿಡೋಣ. ಆಗ ಅವಳ ದರ್ಪ ಎಲ್ಲಾ ಇಳಿಯುತ್ತೆ' ಎಂಬಲ್ಲಿವರೆಗೆ ಬೊಗಳೂರಿನ ಈ ಮಹಿಳಾ ಮಂಡಲದಲ್ಲಿ ಚರ್ಚೆಗಳು ನಡೆದಿರುವುದಾಗಿ, ಯಾರಲ್ಲೂ ಹೇಳದಂತೆ ನಮ್ಮಲ್ಲಿ ಮಾತ್ರವೇ ಜೋರಾಗಿ ಮೈಕಿನಲ್ಲಿ ಕೂಗಿ ಹೇಳಿರುವ ಈ ಸಂಘದ ಮೂಲಗಳು ತಿಳಿಸಿವೆ.

ಈ ತೀರ್ಪಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲು ಬೊಗಳೂರು ಮಹಿಳಾ ಮಂಡಲದ ತುರ್ತುಪರಿಸ್ಥಿತಿಯ ಸಭೆ ಕರೆಯಲಾಗಿದೆ.

2 Comments

ಏನಾದ್ರೂ ಹೇಳ್ರಪಾ :-D

  1. ಬೊಗಳೂರಿನಲ್ಲಿ ಮಹಿಳಾಮಂಡಲಿಯೂ ಇರುವುದನ್ನು ತಿಳಿದು ಸಂತಸವಾಯಿತು. ಪುರುಷ ಪ್ರಧಾನ ವರದಿಗಳನ್ನೇ ಹೆಚ್ಚಾಗಿ ಪ್ರಕಟಿಸುವ ಅನ್ವೇಶಿಗಳ ವಿರುದ್ಧ ಹೋರಾಡುವ ಬಗ್ಗೆ ಮುಂದಿನ ಮಂಡಲಿ ಸಭೆಯಲ್ಲಿ ಚರ್ಚಿಸಲು ಮಹಿಳಾ ಮಂಡಲಿ ಸಭೆಗೆ ತೆರಳುವ ಏಕೈಕ ವರದಿಗಾರರಾಗಿರುವ ಅನ್ವೇಶಿಗಳು ಆಗ್ರಹಿಸಬೇಕು. ಮಹಿಳಾ ವರದಿಗಳಿಗೂ ೩೩% ಮೀಸಲಾತಿ ನೀಡ್ದಿದ್ದರೆ ಉಗ್ರ ಹೋರಾಟ ನಡೆಸಲು ಆಗ್ರಹಿಸಬೇಕಾಗಿ ವಿನಂತಿ

    ReplyDelete
  2. ನಾರದರೆ,
    ನಮ್ಮ ಬೆನ್ನು ಮೂಳೆ ಮುರಿಯುವ ನಿಮ್ಮ ಪ್ರಯತ್ನ ಶ್ಲಾಘನಾರ್ಹ. ಅದೇ ರೀತಿಯಾಗಿ ಒಂದಷ್ಟು ಅಡಿಕೆ ಮರದ ಹಾಳೆಗಳನ್ನು ಕಳುಹಿಸಿಕೊಟ್ಟಲ್ಲಿ, "ಏಟು ಪ್ರೂಫ್" ಆಗಿ ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತೇವೆ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post