ಬೊಗಳೆ ರಗಳೆ

header ads

ಮದುವೆಗೂ ಮೀಸಲಾತಿ: ಏಬೀವೀಫೋ ಹಕ್ಕೊತ್ತಾಯ

(ಬೊಗಳೂರು ಮೀಸಲು ಬ್ಯುರೋದಿಂದ)
ಬೊಗಳೂರು, ಫೆ.20- ಶಾಲಾ ಕಾಲೇಜು ಪ್ರವೇಶದಲ್ಲಿ, ಉದ್ಯೋಗದಲ್ಲಿ, ಬಡ್ತಿಯಲ್ಲಿ ಮೀಸಲಾತಿ ಆಯ್ತು. ಇನ್ನು ಮುಂದೆ ಅತ್ಯಂತ ಪ್ರಧಾನವಾಗಿ ಬಾಕಿ ಉಳಿದಿರುವ ವಿವಾಹದಲ್ಲೂ ಮೀಸಲಾತಿ ಘೋಷಿಸಬೇಕು ಎಂದು ತೀರಾ ಹಿಂದೆ ಉಳಿದಿರುವ ಮತ್ತು ಓಟುಗಳ ಸಂಖ್ಯೆಯಲ್ಲಿ ಹೆಚ್ಚಿದ್ದರೂ ಅಲ್ಪ ಸಂಖ್ಯೆಯಲ್ಲಿರುವವರನ್ನು ಒಳಗೊಂಡ ಅಖಿಲ ಬೊಗಳೂರು ವಿವಾಹ ಫೋರಂ (ಏಬೀವೀಫೋ) ಆಗ್ರಹಿಸಿದೆ.

"ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ, ಆದರೆ ಮದುವೆಯ ಮೀಸಲಾತಿ ಭಾರತದಲ್ಲಿ ಮಾತ್ರವೇ ನಡೆಯುತ್ತದೆ" (Marriages are made in heaven, but Marriage reservations are made in India!) ಎಂಬ ಘೋಷಾವಾಕ್ಯದೊಂದಿಗೆ ಏಬೀವೀಫೋ ಸಂಘಟನೆ ಇತ್ತೀಚೆಗೆ ಆರಂಭವಾಗಿದ್ದು ಎಲ್ಲರ ಗಮನ ತನ್ನತ್ತ ಸೆಳೆಯಲು ಆರಂಭಿಸಿದೆ.

ಒಳ್ಳೆಯ ರೀತಿಯಲ್ಲಿ ಮದುವೆ ಆಗಲು ಅಶಕ್ತರಾಗಿರುವ ಈ ಸಂಘದ ಸದಸ್ಯರಲ್ಲಿ ಹೆಚ್ಚಿನವರ ಮೇಲೆ ಅಪಹರಣ, ಅತ್ಯಾಚಾರ ಮುಂತಾದ ಆರೋಪಗಳಿವೆ. ಈ ಪ್ರಕರಣಗಳಿಗೆ ಸಂಬಂಧಿಸಿ ಅವರು, ಸರಿಯಾಗಿ ಮದುವೆಯಾಗಲು ನಮ್ಮಲ್ಲಿ ಹಣವಿಲ್ಲ ಎಂಬ ಸಮರ್ಥನೆ ನೀಡಿದ್ದರು ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ.

ಈ ವರದಿಯಿಂದ ಮುಖ ಅರಳಿಸಿರುವ ಕೆಲವೊಂದು ಅಭಿಮಾನಿನಿಯರು, ಗಣೇಶನ ಮದುವೆಯಲ್ಲೂ ಮೀಸಲಾತಿ ಇದ್ದಿದ್ದರೆ... ಎಂಬ ಗಂಭೀರ ಯೋಚನೆಯಲ್ಲಿ ತೊಡಗಿದ್ದಾರೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಮೀಸಲಾತಿ ಬಂದರೆ, ತಮಗೆ ಬೇಕಾದ ವರಗಳನ್ನು ಮತ್ತು ವಧುಗಳನ್ನು ದಕ್ಕಿಸಿಕೊಳ್ಳಬಹುದು. ರೂಪ ಮತ್ತು ಗುಣಕ್ಕಿಂತಲೂ ಇಲ್ಲಿ ಜಾತಿಗೇ ಹೆಚ್ಚು ಪ್ರಾಧಾನ್ಯತೆ ಇರುವುದರಿಂದ ಸುಲಭವಾಗಿ ಮದುವೆಯಾಗಿಬಿಡಬಹುದು ಎಂಬುದು ಈ ಸಂಘದ ಹಕ್ಕೊತ್ತಾಯ.

ಈ ನಡುವೆ, ಕೇವಲ ಒಂದು ವರ್ಗದ ಉದ್ಧಾರಕ್ಕೆ ಮಾತ್ರವೇ ಕಟಿಬದ್ಧವಾಗಿರುವ ಪಕ್ಷವು, ಅವರು ಕೇಳದಿದ್ದರೂ ಬಾಚಿ ಬಾಚಿ ಬಾಚುತ್ತಾ ವಿದೇಶದಲ್ಲಿರುವ ಧಾರ್ಮಿಕ ಸ್ಥಳಗಳ ಸಂದರ್ಶನಕ್ಕೆ ಕೋಟಿ ಕೋಟಿ ಕೊಡುತ್ತಿರುವ ಪ್ರಕರಣದಿಂದ ಉಲ್ಲಸಿತರಾಗಿರುವ ಏಬೀವೀಫೋ ಸದಸ್ಯರು, ನಮ್ಮ ಓಟುಗಳಲ್ಲಿ ಇರುವುದಕ್ಕಿಂತಲೂ ಹೆಚ್ಚು ಓಟುಗಳನ್ನು ನಿಮಗೆ ನೀಡುತ್ತೇವೆ, ನಮಗೂ ಇದೇ ರೀತಿ ಕೋಟಿ ಕೋಟಿ ಕೊಡಿ ಎಂದು ಕೇಳಿರುವುದಾಗಿ ವರದಿಯಾಗಿದೆ.

ಈ ಮನವಿ ಬಗ್ಗೆ ಕಾಂಗ್ರೆಸ್ ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಬಾಚಿ ಬಾಚಿ ಧನವಿನಿಯೋಗಕ್ಕೆ ಸಕಲ ರೀತಿಯಲ್ಲೂ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಅನೇಕ ಬಗೆಯ ವಿವಾಹಗಳು ಇವೆ ಎಂದು ಬೊಗಳೂರಿನ ವಿವಾಹ ತಜ್ಞರೊಬ್ಬರು ಹೇಳುತ್ತಿದ್ದಾರೆ. ಉದಾ: ಗಾಂಧರ್ವ ವಿವಾಹ, ರಾಕ್ಷಸ ವಿವಾಹ ಇತ್ಯಾದಿ. ಯಾವ ಯಾವ ವಿವಾಹಗಳಲ್ಲಿ ಎಷ್ಟೆಷ್ಟು ಮೀಸಲಾತಿ ಇಡಬೇಕೆಂದು ಸ್ವಲ್ಪ ಅರಿವಳಿಕೆ ಕೊಡುವಿರಾ?

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ಈ ಬಗ್ಗೆ ತನಿಖೆಗೆ ತೆಗಳಿದ ನಮ್ಮ ಬ್ಯುರೋದ ಮಂದಿಗೇ ಸಾಕಷ್ಟು ಅರಿವಳಿಕೆ ಕೊಟ್ಟಿರುವುದರಿಂದ ಅವರಿನ್ನೂ ಎಚ್ಚೆತ್ತುಕೊಂಡಿಲ್ಲ. ಇದರ ನಡುವೆಯೂ ಇಂಟರ್ನೆಟ್ ವಿವಾಹ ಮತ್ತು ಟೆಲಿಫೋನ್ ವಿವಾಹಗಳಲ್ಲಿ ಮೀಸಲಾತಿಯ ಪ್ರಮಾಣ ಹೆಚ್ಚು ಹೆಚ್ಚು ಅನ್ನೋದನ್ನು ಪತ್ತೆ ಹಚ್ಚಲಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D