(ಬೊಗಳೂರು ಪಶ್ಚಾತ್ತಾಪ ಬ್ಯುರೋದಿಂದ)
ಬೊಗಳೂರು, ಜ. 23- ಭಾರ-ತಾ ರತ್ನ ಎಂದು ಆದೇಶಿಸುತ್ತಾ, ಚುನಾವಣೆಯೆಂಬ ಮಹಾಭಾರತ ಯುದ್ಧ ಆರಂಭವಾಗುವ ಹೊತ್ತಿಗೆ ತಮ್ಮವರನ್ನೆಲ್ಲಾ ಕಳೆದುಕೊಂಡ ಸುಯೋಧನನಂತೆ ಪರಿತಪಿಸತೊಡಗಿರುವ ಒದಿಯೋಗೌಡ್ರ "ಕನ್ನಡನಾಡಲ್ಲಿ ಹುಟ್ಬಾರ್ದಿತ್ತು' ಅನ್ನೋ ಹೇಳಿಕೆಗೆ ವ್ಯಾಪಕ ಶ್ಲಾಘನೆ, ಕೇಕೆ, ಪೀಪಿ, ಹುರ್ರಾ, ಸ್ವಾಗತ, ವಾಹ್ ವಾಹ್‌ಗಳು ಕೇಳಿಬರತೊಡಗಿವೆ.ಈ ರಾಜ್ಯದಲ್ಲಿ ಹೋದಲ್ಲೆಲ್ಲಾ ತಮಗೆ ಅತ್ಯುಚ್ಚ "ಗೌರವ" ದೊರೆಯುತ್ತಿದೆ ಎಂಬ ಅರಿವುಳ್ಳ ಅವರು ಈ ಮಾತು ಹೇಳಿದ್ದಾರೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.
ಈ ರಾಜ್ಯದಲ್ಲಿ ಹುಟ್ಟಿ ಏನೂ ಪ್ರಯೋಜನವಾಗಲಿಲ್ಲ. ತಮ್ಮ ಎರಡನೇ ಮಗನನ್ನು ಮುಖ್ಯಮಂತ್ರಿ ಮಾಡಲಾಗಲಿಲ್ಲ, ನಾನು ಮತ್ತೊಮ್ಮೆ ನಿಧಾನಿಯಾಗಲಿಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು "ಸಾಧ್ಯ" ಆಗಲಿಲ್ಲ, ಒಂದು ವಿಧಾನಸಭಾ ಅವಧಿಯಲ್ಲಿ ತಮ್ಮ ಪಕ್ಷವು ಕೇವಲ ಎರಡೇ ಬಾರಿ ರಾಜ್ಯದಲ್ಲಿ ಅಧಿಕಾರ ಚಲಾಯಿಸಲು ಸಾಧ್ಯವಾಗಿದ್ದು, ಅದಕ್ಕಿಂತ ಹೆಚ್ಚು ಸಲ ಆಳ್ವಿಕೆ ಮಾಡಲಾಗಲಿಲ್ಲ ಎಂಬಿತ್ಯಾದಿ ಪರಿತಾಪಗಳೊಂದಿಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದ್ದು, ರಾಜ್ಯದ ಜನತೆ ಕೂಡ ಇದನ್ನು ಬೆಂಬಲಿಸುತ್ತಿದ್ದಾರೆ.
ಹೌದು. ಅವರು ಹೇಳಿದ್ದು ಸರಿ. ಅವರು ಕನ್ನಡ ಮಣ್ಣಿನಲ್ಲಿ ಹುಟ್ಟಬಾರದಿತ್ತು, ಇದು ನಮ್ಮ ಕರ್ಮ ಅಂತ ಬೊಗಳೂರಿನ ಮಂದಿ ಆಡಿಕೊಳ್ಳುತ್ತಿದ್ದಾರಾದರೂ, ಅವರು ನೇರವಾಗಿ ಅದನ್ನು ಹೇಳದಂತೆ, ಅವರ ಬಾಯಿಗೆ ರೈತಮಹಿಳೆಯ ತಲೆ ಮೇಲಿದ್ದ ಹುಲ್ಲಿನ ಹೊರೆಯನ್ನು ತುರುಕಲಾಗುತ್ತಿದೆ.
ಇದರಿಂದ ಆಕ್ರೋಶಗೊಂಡಿರುವ ಬೊಗಳೂರು ಜನತೆ, ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಚಾರ ಮಾಡಲಾಗುತ್ತಿದೆ ಎಂದು ಹೊಯ್ದಾಡುತ್ತಿದ್ದು, ಬೇರೆಯದೇ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಹಾಗಿದ್ರೆ, ನಾವೇ ಇಲ್ಲಿ ಹುಟ್ಬಾರ್ದಿತ್ತು. ಇಂಥವ್ರು ಹುಟ್ಟಿದಲ್ಲಿ ನಾವು ಹುಟ್ಟಿರೋದು ನಮ್ ಕರ್ಮ. ಇಂಥವ್ರಿಗೆ ಓಟು ಹಾಕೋದು ನಮ್ಮ ಪೂರ್ವಜನ್ಮದ ಪಾಪದ ಫಲ. ಭೂಮಿಗೆ ಭಾರವಾದವರಿಗೆ ಭಾರ-ತಾ ರತ್ನ ಪ್ರಶಸ್ತಿ ಘೋಷಿಸಲೇಬೇಕು ಎಂದು ಕೆಲವರು ಆಗ್ರಹಿಸತೊಡಗಿದ್ದಾರೆ.
ಕೊನೆಗಾದರೂ ಈ ಸತ್ಯವು ಅವರ ಅರಿವಿಗೆ ಬಂದಿದ್ದು ನಮ್ಮ ಪುಣ್ಯವೂ ಹೌದು. ಅವರ ಹೇಳಿಕೆಯನ್ನು ನಾವು ಹೃದಯತುಂಬಿ ಸ್ವಾಗತಿಸುತ್ತೇವೆ. ಕನ್ನಡಿಗ ಆಗಿರುವುದಕ್ಕೆ ನಾಚಿಕೆಯಾಗುತ್ತಿದೆ ಅಂದುಕೊಂಡಿದ್ದಾರಂತೆ. ಅವರು ರಾಜ್ಯ ರಾಜಕೀಯವನ್ನು ವಿಶ್ವಮಟ್ಟದಲ್ಲಿ ಸುದ್ದಿಯಾಗುವಂತೆ ಇತ್ತೀಚೆಗೆ ಮಾಡಿದ್ದಾಗ, ನಾವೆಷ್ಟು ನಾಚಿಕೆಪಟ್ಟುಕೊಂಡಿಲ್ಲ? ಕನ್ನಡಿಗರೆಷ್ಟು ಆಳಕ್ಕೆ ತಲೆಯನ್ನು ತಗ್ಗಿಸಿರಲಿಲ್ಲ? ಎಂದು ಬೊಗಳೂರು ಜನತೆ ಪ್ರಶ್ನಿಸಿದ್ದಾರೆ.
ಹೀಗಾಗಿ ಅವರು ಮಾಡಿದ್ದು ಸರಿ. ತಾವು ಇದುವರೆಗೆ ಮಾಡಿದ ಪಾಪಕ್ಕೆಲ್ಲಾ ಪಶ್ಚಾತ್ತಾಪ ಪಟ್ಟುಕೊಂಡರೆ ಪ್ರಾಯಶ್ಚಿತ್ತ ಮಾಡಿಕೊಂಡಂತೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಪಶ್ಚಾತ್ತಾಪ ಪಟ್ಟುಕೊಳ್ಳುತ್ತಾ ಇರುತ್ತಾರೆ ಬಿಡಿ. ಶೀಘ್ರದಲ್ಲೇ ಪರಿತಪಿಸಿ, ಪಾಪಗಳಿಂದ ಮುಕ್ತರಾಗುತ್ತಾರೆ ಮತ್ತು ರಾಜ್ಯದ ಜನತೆ ಇನ್ನು ಮುಂದೆ ಪಾಪ ಮಾಡದಂತಹ ಮಟ್ಟಕ್ಕೆ ಅವರನ್ನು ಏರಿಸಲಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
9 ಕಾಮೆಂಟ್‌ಗಳು
ನಾವೆಲ್ಲರೂ ಹುಚ್ಚುಮಾನವರು ಅಯ್ಯೋ ವಿಶ್ವಮಾನವರು ಅಂತ ಒದಿಯೋಗೌಡ್ರೇ ಹೇಳ್ತಿದ್ದಾರಂತೆ - ಅಂದ್ಮೇಲೆ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು, ತಿಂದು ತೇಗಿ, ನಾಡನ್ನು ಬರಿದು ಮಾಡೋ ಬದಲು, ಪಕ್ಕದ ನಾಡಿನಲ್ಲಿ ಹುಟ್ಟಿ, ತಿಂದು ತೇಗಿ, ಕನ್ನಡನಾಡಿಗೆ ಬಂದು ಬೆವರು ಸುರಿಸಿ ದುಡಿದು, ನಾಡನ್ನು ಶ್ರೀಮಂತಗೊಳಿಸಬೇಕು ಅನ್ನೋದು ಒದಿಯೋಗೌಡ್ರ ದುರುದ್ದೇಶ ಅಯ್ಯೋ ದೂರದ ಉದ್ದೇಶ. ಇಂತಹ ಮಾ ಆತ್ಮರಿಗೆ ರತ್ನ ಕೊಡ್ಬೇಕಲ್ವಾ?
ಪ್ರತ್ಯುತ್ತರಅಳಿಸಿಅಂದ ಹಾಗೆ, ತಲೆಬರಹ ಯಾಕೋ ಸರಿ ಇಲ್ಲ ಅನ್ನಿಸ್ತಿದೆ, ಅವ್ನೇಷಿಗಳೇ - ಹೀಗಿದ್ರೆ ಹೇಗೆ
ಪ್ರಾಯಶ್ಚಿತ್ತಕ್ಕೆ ಪಾಪವೇ ಪಶ್ಚಾತ್ತಾಪ
ಮುದ್ದಿ ತಿಂದ ತಟ್ಟಿ ಒಳಗ ಲದ್ದಿ ಹಾಕಬ್ಯಾಡಲೇ,ಗೌಡಾ!
ಪ್ರತ್ಯುತ್ತರಅಳಿಸಿOMDa mane gaLa hiriyuva vadiyogodrana vaddu gaDipaaru mADabeku ,adu kuDa heMdti makkaLa sametha aMta kannadigara manavi..
ಪ್ರತ್ಯುತ್ತರಅಳಿಸಿiShtella adru saha nidde goudru innu niddeyalli iddavara tara adta idare...
ಕೊನೆಗೂ ನಮ್ಮ ಬ್ಯೂರೋ ‘ಭಾರ’ತಾ ರತುನ ಎಂದು ಆರಿಸಿದ ಘನ ವ್ಯಕ್ತಿಯನ್ನೇ ಬೊಗಳೂರು ಅನುಮೋದಿಸಿರುವುದು ನಮಗೆ ಸಂದ ದಿಗ್ವಿಜಯ ಎಂಬುದನ್ನು ವಿನಯ ಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ...
ಪ್ರತ್ಯುತ್ತರಅಳಿಸಿ“ಮಣ್ಣು ಎಂದರೆ ಕಪ್ಪು. ಕಪ್ಪು ಎಂದರೆ ಕರಿ. ಕರಿ ಎಂದರೆ ಆನೆ. ಆನೆ ಎಂದರೆ ವೀರಪ್ಪನ್. ವೀರಪ್ಪನ್ ಎಂದರೆ ಗಂಧದ ಮರ. ಗಂಧದ ಮರ ಎಂದರೆ ಗಂಧದ ಗುಡಿ. ಗಂಧದ ಗುಡಿ ಎಂದರೆ ಕರುನಾಡು. ಕರುನಾಡು ಎಂದರೆ ಕರ್ನಾಟಕ. ತಾವು ಮಣ್ಣಿನ ಮಗನಾಗಿರುವುದಕ್ಕೆ ತಮ್ಮ ಘನತೆ, ಮರ್ಯಾದೆ, ಸಾಧನೆ, ವೇದನೆ, ಸಂವೇದನೆ ಎಲ್ಲವೂ ಮಣ್ಣುಪಾಲು ಆಗುತ್ತಿವೆ. ಅದೇ ಕಾರಣಕ್ಕೆ ಅವರು ಮಣ್ಣಿನ ಮಕ್ಕಳಾದ ರೈತರು ತಮ್ಮ ಶಕ್ತಾನುಸಾರ ನೇಣು ಹಾಕಿಕೊಳ್ಳಬೇಕು ಎಂಬ ವಿದ್ವತ್ ಪೂರ್ಣ ಸಲಹೆ ನೀಡಿದ್ದು. ಅದೇ ಕಾರಣಕ್ಕಾಗಿ ಇಂದು ವೇದೇ ಗೌಡರು ಕರುನಾಡಿನಲ್ಲಿ ಹುಟ್ಟಿ ತಪ್ಪು ಮಾಡಿದೆ ಎಂದಿರುವುದು. ಇದಕ್ಕೆ ಮಾಧ್ಯಮದವರು ಅತಿಯಾದ ಅಪಪ್ರಚಾರ ನೀಡುತ್ತಿದ್ದಾರೆ.” ಎಂದು ಜೇಡಿ ಮಣ್ಣಿನ ಪಕ್ಷದ ಏಕೈಕ ಬುದ್ಧಿಜೀವಿ ವೈಯಸ್ ವಿಯಸ್ ದತ್ತರವರು ನಮ್ಮ ಬ್ಯೂರೊಗೆ ನೀಡಿದ ಗುಪ್ತ ಸಂದರ್ಶನದಲ್ಲಿ ತಮ್ಮ ಪಾಂಡಿತ್ಯವನ್ನು ವಿಸರ್ಜಿಸಿದ್ದಾರೆ.
ಕರ್ನಾಟಕವು ಭೋಳೆ ಜನರ ನಾಡು; ತನ್ನಂತಹ ಶಕುನಿಗೆ ಯೋಗ್ಯವಾದ ನಾಡಲ್ಲ; ತಾನು ಅಧಮಾಧಮ ರಸಾತಳ ಪಾತಾಳದಲ್ಲಿ ಹುಟ್ಟಿದ್ದರೆ ತನ್ನ ಅಯೋಗ್ಯತೆಗೆ ತಕ್ಕ ರಂಗಮಂಚ ಸಿಕ್ಕುತ್ತಿತ್ತು ಎನ್ನುವದು ನಮ್ಮ ಒದಿಯೊಗೌಡರ ಅಭಿಪ್ರಾಯ. ಅವರ ಮರ್ಯಾದೆಗೇಡಿ ಮಾತಿಗೆ ಸುಸ್ವಾಗತ!
ಪ್ರತ್ಯುತ್ತರಅಳಿಸಿಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಅವರೀಗ ಪಶ್ಚಾತ್ತಾಪಕ್ಕೇ ಪ್ರಾಯಶ್ಚಿತ್ತ ಮಾಡ್ಕೋಬೇಕಲ್ಲಾ...
ಸುನಾಥರೆ,
ಪ್ರತ್ಯುತ್ತರಅಳಿಸಿಮುದ್ದಿ ತಿಂದಿದ್ದೋ ಲದ್ದಿ ತಿಂದಿದ್ದೋ ಅಂತ ನಿಧಾನವಾಗಿ ಗೊತ್ತಾಗ್ತಾ ಇದೆ. ಅಧಮಾಧಮ ಪ್ರದೇಶದಲ್ಲಿ ಹುಟ್ಟಿದ್ದಿದ್ದರೆ ಅವರ ಗತಿ ಏನಾಗ್ತಿತ್ತು ಅಂತ ಯೋಚಿಸೋದಕ್ಕೂ ಭಯ ಆಗ್ತಿದೆ.
ಮಹಾಂತೇಶರೆ,
ಪ್ರತ್ಯುತ್ತರಅಳಿಸಿಬಹುಶಃ ಮಲಗೋಕ್ಕೂ ಬಿಡಲ್ಲ ಈ ಮಾಧ್ಯಮದ ಮಂದಿ ಅಂತ ನಿದ್ದೇಲೇ ಗೊಣಗಿರ್ಬೇಕು ಈ ನಿದ್ದೇಗೌಡ್ರು....
ಸುಪ್ರೀತರೆ,
ಪ್ರತ್ಯುತ್ತರಅಳಿಸಿಅವ್ರು ಮಣ್ಣಿನ ಮಗ ಯಾಕೆ ಅಂತ ಈಗ ಗೊತ್ತಾತು ನೋಡ್ರಿ... ಘನತೆ, ಮರ್ಯಾದೆ, ಸಾಧನೆ, ವೇದನೆ, ಸಂವೇದನೆ ಎಲ್ಲವೂ ಮಣ್ಣುಪಾಲಾಗುತ್ತಿದೆ, ಅದೇ ಮಣ್ಣಿನಲ್ಲಿ ಹೊರಳಾಡುತ್ತಿದ್ದರೆ ತಾವೆಂದೆಂದಿಗೂ ಮಣ್ಣಿನ ಮಕ್ಕಳೇ ಎಂದು ನಿದ್ರೇಗೌಡ್ರ ಕಡೆಯವರ ಉವಾಚ.
ಏನಾದ್ರೂ ಹೇಳ್ರಪಾ :-D