ಬೊಗಳೆ ರಗಳೆ

header ads

ಫ್ಯಾಶನ್ ಶೋ: ದಿಲ್ಲಿಯಲ್ಲಿ ಶಾಸಕರ ಪೆರೇಡ್!

(ಬೊಗಳೂರು ಫ್ಯಾಶನ್ ಶೋ ಬ್ಯುರೋದಿಂದ)
ಬೊಗಳೂರು, ನ.6- ಕರುನಾಡಿನಲ್ಲಿ ನಡೆಯುತ್ತಿರುವ ನಾಟಕಕ್ಕೆ ವಿಶ್ವಾದ್ಯಂತ ಪ್ರಶಂಸೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಇದರ ಮುಂದಿನ ಭಾಗವಾಗಿ ದೇಶದ ರಾಜಧಾನಿಯಲ್ಲಿ ಶಾಸಕರ ಫ್ಯಾಶನ್ ಪೆರೇಡ್ ಅದ್ದೂರಿಯಾಗಿ ಜರುಗಿತು.

ನಾವು ಪೆರೇಡ್ ಮಾಡುತ್ತೇವೆ, ನೀವೂ ಬನ್ನಿ ಎಂದು ಶಾಸಕರೆಲ್ಲಾ ಬೊಗಳೆ ರಗಳೆ ಬ್ಯುರೋಗೆ ದುಂಬಾಲು ಬಿದ್ದ ಕಾರಣ, ಅವರ ಹಿಂದೆಯೇ ಹಿಂ-ಬಾಲಿಸಲಾಯಿತಾದರೂ, ಅವರ ಜತೆ ಡಾಗ್-ವಾಕ್ ಮಾಡಲು ಬ್ಯುರೋ ಸಂಪಾದಕರು ನಿರಾಕರಿಸಿರುವುದು ಹಲವರ ಹುಬ್ಬುಗಳು ಮೇಲಕ್ಕೇರಲು ಕಾರಣವಾಗಿವೆ.

ಕೆಲವರಿಗೆ ಮಹಿಳೆಯ ಎದುರು ಕ್ಯಾಟ್ ವಾಕ್ ಮಾಡುವುದು ಮುಜುಗರ ಹುಟ್ಟಿಸಿದ್ದರೆ, ಇನ್ನು ಕೆಲವರಿಗೆ ಇಲ್ಲದ ಆತ್ಮದ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

ಪ್ರತಿಭಾನ್ವಿತ ಪಾಟೀಲರು ಈ ಶಾಸಕರ ಪೆರೇಡ್‌ನ ಪರದಾಟ ನೋಡಿ ಅಪ್ರತಿಭರಾದರು. ರಾಂಪ್ ಮೇಲೆ ಕೆಲವು ಶಾಸಕರು ಜಯವಾಗಲಿ ಅಂತ ಕೂಗುತ್ತಾ, ಮತ್ತೆ ಕೆಲವರು ಧಿಕ್ಕಾರ ಎಂದು ಕೂಗುತ್ತಾ ಕ್ಯಾಟ್ ಮತ್ತು ಡಾಗ್ ವಾಕ್‌ಗಳನ್ನು ಮಾಡುವುದನ್ನು ನೋಡುವುದೇ ಒಂದು ನಾಟಕೀಯ ವಿದ್ಯ-ಮಾನವಾಗಿತ್ತು ಅಂತ ನಮ್ಮ ಮೂಗುದಾರ ಹಾಕಿದ ಬಾತ್ಮೀದಾರರು ದೆಹಲಿಯ ಕೆಂಪುಕೋಟೆಯ ಕೆಳಗೆ ನಿಂತು ವರದಿ ಮಾಡಿದ್ದಾರೆ.

ಈ ಶಾಸಕರನ್ನು ಅಲ್ಲಿಗೆ ಕರೆದೊಯ್ಯಲು ಐಷಾರಾಮಿ ಬಸ್ಸುಗಳು, ನಾಲ್ಕೈದು ವಿಮಾನಗಳ ಏರ್ಪಾಟು ಮಾಡಲಾಗಿದ್ದು, ಇವುಗಳ ಖರ್ಚುಗಳೆಲ್ಲವನ್ನೂ ಕರು-ನಾಡಿನ ಮರುಮರುಗುತ್ತಿರುವ ಪ್ರಜೆಗಳ ತೆರಿಗೆಯಿಂದ ಭಾವೀ ಸರಕಾರವು ಭರಿಸಲಿದೆ ಎಂದು ತಿಳಿದುಬಂದಿದೆ.

ಅವರಿಗೆ ಪಂಚ ಅಥವಾ ದಶ ತಾರಾ ಹೋಟೆಲುಗಳ ವ್ಯವಸ್ಥೆ ಮಾಡಲಾಗಿದ್ದು, ಕೆಲವರಿಗೆ ಒಂದೇ ತಾರೆಯಿರುವ ಹೋಟೇಲನ್ನೂ ನೀಡಲಾಗಿದೆ. ಕಳೆದ ಇಪ್ಪತ್ತು ತಿಂಗಳುಗಳಿಂದ ಶಾಸಕರಿಗೆಲ್ಲಾ ಈ ರೆಸಾರ್ಟ್, ಪ್ರವಾಸ, ಪಾನ ಗೋಷ್ಠಿ.... ಅಲ್ಲಲ್ಲ ಪತ್ರಿಕಾ ಗೋಷ್ಠಿ... ಇತ್ಯಾದಿಗಳೆಲ್ಲಾ ದೈನಂದಿನ ಚಟುವಟಿಕೆಯಾಗಿತ್ತು. ಹೀಗಾಗಿ ಒಂದು ಕೊಠಡಿಯಲ್ಲಿ ಎಷ್ಟೇ ತಾರೆಗಳಿದ್ದರೂ ಈ ಶಾಸಕರಿಗೆ ಸಾಲುತ್ತಿಲ್ಲ ಎಂದು ನಮ್ಮ ನಿಗೂಢ ಬಾತ್ಮೀದಾರರು ಒದರಿ ಮಾಡಿದ್ದಾರೆ.

ದಣಿವರಿಯದ ಸಾಧನೆಗೆ ಪ್ರೇರಣೆ ಏನು?

ಆದರೂ ದಿನಕ್ಕೊಂದು ಬಾರಿ ದಿನಕ್ಕೊಬ್ಬ, ದನಕ್ಕೊಬ್ಬ ರಾಜಕಾರಣಿ ಆಗಾಗ್ಗೆ ದೆಹಲಿಗೆ ಹೋಗಿ ಬರುತ್ತಿರುವುದು ಮತ್ತು ಬೆಳಗಿನ ಉಪಾಹಾರ ಅಲ್ಲಿ, ಮಧ್ಯಾಹ್ನ ಇಲ್ಲಿ, ರಾತ್ರಿ ಪುನಃ ಅಲ್ಲಿ ಎಂಬಂತಹ ಪರಿಸ್ಥಿತಿಗಳಿಂದಾಗಿ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿರುವ ಶಾಸಕರ ಈ ಸಾಮರ್ಥ್ಯದ ಹಿಂದಿನ ಪ್ರಧಾನ ಕಾರಣವೆಂದರೆ ದೂರದಲ್ಲೆಲ್ಲೋ ಗೋಚರಿಸುತ್ತಿರುವ "ಕುರ್ಚಿ"ಯೇ ಆಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಪ್ರೇಮ ಪತ್ರ ಬರವಣಿಗೆ ಸ್ಪರ್ಧೆ

ಈ ನಡುವೆ, ಈ ಹಿಂದೆ ಧರಂ ಸಿಂಗರು ಗರಂ ಗರಂ ಆಗುತ್ತಲೇ ಇರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ವೇದೇಗೌಡರ ಆಗಾಗ್ಗೆ ಪತ್ರ ಬರೆಯುತ್ತಿರುವ ಹವ್ಯಾಸದ ಬಗ್ಗೆ ವಿಶೇಷ ಸಂಶೋಧನೆಯೊಂದನ್ನು ಕೈಗೊಳ್ಳಲಾಗಿದ್ದು, ಮಿತ್ರ ಪಕ್ಷಗಳೆಲ್ಲಾ ಸೇರಿ ತಮ್ಮ ತಮ್ಮ ಶಾಸಕರಿಗೆ ಈ ಪತ್ರ ಬರವಣಿಗೆ ಕಲೆಯನ್ನು ಕರಗತ ಮಾಡಿಸುವ ನಿಟ್ಟಿನಲ್ಲಿ ಶಿಕ್ಷಣ ನೀಡಲು ನಿರ್ಧರಿಸಿವೆ.

ಒಮ್ಮೆ ಅಧಿಕಾರಕ್ಕೇರಿದ ತಕ್ಷಣವೇ, ಈ ಪ್ರೇಮ ಪತ್ರ ಬರೆಯುವುದು ಹೇಗೆ ಎಂಬ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಬೀಜ-ಪೀ ಮತ್ತು ಜೇಡಿಸ್ ಶಾಸಕರು ಒಕ್ಕೊರಲಿನಿಂದ ಘೋಷಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ’ಫ್ಯಾಷನ್ ಶೋ’ನ ಸ್ಪರ್ಧಿಗಳ ಕೈನಲ್ಲಿ ಪಾಸಿಂಗ್ ಶೋ ಸಿಗರೇಟು ಇದ್ದದ್ದು ಕಂಡು ಬರಲಿಲ್ವಾ ಅನ್ವೇಷಿಗಳೇ!!!
  ಶೇರ್‍ದಿಲ್ ಇರೋ ಶಾಸಕರು ದಿಲ್ಲಿಗೆ ಹೋದ ನಂತರ ಬಿಲ್ಲಿ ಆಗ್ತಾರೆ ಎಂದು ಕೇಳಲ್ಪಟ್ಟೆ. ಇದು ದಿಟವೇ?

  ಅಂದ ಹಾಗೆ ದೀವಾಳಿ ಸಮಯದಲ್ಲಿ ಯಾರು ಯಾರು ದೀವಾಳಿ ಆಗ್ತಿದ್ದಾರೆ ಅನ್ನುವ ಬಗ್ಗೆ ಒಂದು ವರದಿ ತಯಾರು ಮಾಡುವಿರಾ? ಶೇರು ಮಾರುಕಟ್ಟೆಯಲ್ಲಿ ಹುಡುಗಾಟ ಆಡಲು ಹೋದ ಅಂಬೋಣ ವಿಶ್ವದ ಮೊದಲನೆಯ ದೀವಾಳಿ ಆಗುವರು ಎಂದು ಜ್ಯೋತಿಷಿಗಳು ಹೇಳ್ತಿದ್ದಾರೆ. ಇದರ ಬಗ್ಗೆ ನಿಮ್ಮ ವದರಿಗಾರರ ಒದರುವಿಕೆಯನ್ನು ನಿರೀಕ್ಷಿಸುತ್ತಿರುವೆ.

  ಪ್ರತ್ಯುತ್ತರಅಳಿಸಿ
 2. ಕಳ್ಳ ಬೆಕ್ಕುಗಳಿಂದ cat walk;
  ಬಾಲ ಅಲುಗಾಡಿಸುವವರಿಂದ dog walk;
  ಈ fashion paradeನಲ್ಲಿರುವ (ಕು)ರೂಪದರ್ಶಿಗಳಲ್ಲಿ ಕುಮಾರಿ ಬೆಂದಕಾಳೂರು ಎಂದು ಆಯ್ಕೆ ಆಗುವರು ಯಾರು, ಸೊಂಪಾದ ಕರುವೆ? Missed ಒದೆಯೂರಮ್ಮನವರೆ?

  ಪ್ರತ್ಯುತ್ತರಅಳಿಸಿ
 3. ಸರಿ ಈ ಫ್ಯಾಷನ್ ಶೋಗೆ ನೀವು ಹೋಗದಿದ್ದುದು ಒಳ್ಳೆಯದೇ ಆಯಿತು.ಯಾವ ಕ್ಷಣದಲ್ಲಿ ಯಾರು ಯಾರ ಬಟ್ಟೆ ಹರಿಯುತ್ತಾರೆಂದು ಈಗ ಹೇಳಲು ಬರುವುದಿಲ್ಲ :))

  ಪ್ರತ್ಯುತ್ತರಅಳಿಸಿ
 4. ಶ್ರೀನಿವಾಸರೆ,

  ಅಧಿಕಾರ ಸಿಗೋ ಮೊದ್ಲು ಹುಲಿಯಂತಿರುವ ಎಲ್ಲರು ಕೂಡ ಅಧಿಕಾರ ಸಿಕ್ಕ ಕೂಡಲೇ ಇಲಿಯಂತೆ ಯಾರ ಕೈಗೂ ಸಿಗದೆ, ತಮ್ಮ ಮನೆಯಲ್ಲಿ ಕೂಡಿ ಹಾಕುವುದಕ್ಕೇ ಸೀಮಿತವಾಗಿಬಿಡುತ್ತಾರೆ ಅನ್ನೋ ನಿಯಮವಿರುವ ಕಾರಣ, ನಿಮ್ಮ ಆಮಶಂಕೆ ಖಂಡಿತವಾಗಿಯೂ ದಿಟವೇ.

  ಶೇರು ಮಾರುಕಟ್ಟೆ ಅಲುಗಾಡಿಸುತ್ತಿರುವುದು ಪರಮಾಣು ಒಪ್ಪಂದವೇ ಎಂಬುದು ನಿಮಗೆ ಗೊತ್ತಾಗಿಲ್ವಾ... ಒದರುತ್ತೇವೆ ಒದರುತ್ತೇವೆ...

  ಪ್ರತ್ಯುತ್ತರಅಳಿಸಿ
 5. ಸುಧೀಂದ್ರರೆ,

  ಈ ಪಟ್ಟಿಗೆ ಗುಳ್ಳೆ ನರಿ ವಾಕ್ ಕೂಡ ಸೇರಲೇಬೇಕೆಂದು ಹಲವಾರು ಶಾಸಕರು ಒತ್ತಾಯ ಮಾಡಿದ್ದಾರೆ. ಹಾಗಾಗಿ ಮಿಸ್‌ಕೋಮಾರಿ ಆಗುವಲ್ಲಿ ಗುಳ್ಳೆ ನರಿ ವಾಕ್ ಮಾಡಿದವರಲ್ಲೇ ಹೆಚ್ಚು ಪೈಪೋಟಿ ಇದೆ.

  ಪ್ರತ್ಯುತ್ತರಅಳಿಸಿ
 6. ನೀವೇ ಅವರೆ, ಅವರೆಯೇ ನೀವೇ? ನೀವು ಅವರೆಯೇ? ನೀವೇ ಅವರೆಯೇ???

  ನಮ್ಮ ಇಲ್ಲದ ಮಾನವನ್ನು ಕಾಪಾಡಲು ನೀವಾದರೂ ಇದ್ದೀರಲ್ಲ ಎಂಬುದೇ ನಮಗೆ ಹುಚ್ಚು ಹಿಡಿಸುವ ಸಂಗತಿ...

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D