ಬೊಗಳೆ ರಗಳೆ

header ads

ನೀರು ಇಲ್ಲವೇ? ಚಿಂತೆ ಬೇಡ, ಪರಿಹಾರ ಇಲ್ಲಿದೆ!

(ಬೊಗಳೂರು ಗಂಭೀರ ಸಂಶೋಧನಾ ಬ್ಯುರೋದಿಂದ)
ಬೊಗಳೂರು, ಸೆ. 10- ಕರ್ನಾಟಕ - ತಮಿಳುನಾಡು, ತಮಿಳುನಾಡು-ಕೇರಳ, ಆಂಧ್ರ-ಕರ್ನಾಟಕ, ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳು ಒಂದು ಹನಿ ನೀರಿಗಾಗಿ ಪರಸ್ಪರ ಕಚ್ಚಾಡುತ್ತಿರುವುದು ಏಕೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸತೊಡಗಿದಾಗ ಬೊಗಳೆ ರಗಳೆ ಬ್ಯುರೋಗೆ ಜ್ಞಾನೋದಯವಾಗಿದೆ.

"ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂದು ಬೊಗಳೆ ಬ್ಯುರೋಗೇ ಹೇಳಿದ್ದಾಗಿ ನೆನಪಿಸಿಕೊಂಡು, ರಾತ್ರಿಯಿಡೀ ಎದ್ದು ಯೋಚಿಸತೊಡಗಿದಾಗ ಈ ವಿಷಯವು ತಲೆ ಇಲ್ಲದ ತಲೆಯೊಳಗೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ನೀರಿಗಾಗಿ ಕಚ್ಚುವ ಆಟ, ಕಾಲೆಳೆಯುವ ಆಟ, ಕೆಸರೆರಚುವ ಆಟ ಆಡುವುದಕ್ಕೆ ನೀರು ಇಲ್ಲದಿರುವುದೇ ಪ್ರಧಾನ ಕಾರಣ ಎಂದು ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಲಾಗಿದೆ. ನದಿಮೂಲ, ಋಷಿ ಮೂಲ ಮತ್ತು ಸ್ತ್ರೀಮೂಲ ಕೆದಕಬಾರದು ಎಂದು ಹೇಳಿದ್ದರೂ ಆ ನಿಯಮವನ್ನು ಮುರಿದು ಈ ವಿಷಯವನ್ನು ಶೋಧಿಸಲಾಗಿದೆ.

ನೀರಿಂದಲೇ ಜನ ಮಾತ್ರವಲ್ಲ ಸಕಲ ಜೀವರಾಶಿಗಳು ಕೂಡ ಬದುಕೋದು, ಹಾಗಿದ್ದರೂ ನೀರೇಕೆ ಇಲ್ಲ ಎಂಬ ಪ್ರಶ್ನೆಯ ಎಳೆಯನ್ನು ಹಿಡಿದು ಹೊರಟು, ಬಹು ದೂರ ಸಾಗಿದಾಗ ನಮಗೆ ಗೋಚರವಾಗಿದ್ದೆಂದರೆ, ಆ ನೀರೆಲ್ಲವೂ ಭೂಮಿಯ ಮೇಲಿದೆ. ಅಂದರೆ ಭೂಮಿಯಲ್ಲಿ ಶೇ.70 ಭಾಗದಲ್ಲಿ ನೀರು ಇದೆ. ಆದ ಕಾರಣ ಎಲ್ಲಾ ನೀರು ಭೂಮಿಯಲ್ಲೇ ಇರುವುದರಿಂದ, ನಮಗೆಲ್ಲಾ ನೀರಿನ ಸಮಸ್ಯೆ ಎದುರಾಗಿದೆ.

ಈ ಶೇ.70 ಭಾಗದಲ್ಲಿ ಶೇ.97 ಭಾಗವೂ ಉಪ್ಪು ನೀರು. ಇದರಲ್ಲಿ ನಾವು ಜಗಳವಾಡುತ್ತಿರುವ ನದಿ ನೀರಿನ ಅಂದರೆ ಸಿಹಿನೀರಿನ ಪಾಲು ಶೇ.3 ಮಾತ್ರ. ಈ ಅತ್ಯಲ್ಪ ಭಾಗದಲ್ಲಿ, ಬಟ್ಟೆ ಒಗೆಯಲು, ಕೈತೊಳೆಯಲು, ಸ್ನಾನ, ಶೌಚಕ್ಕೆ ಹೆಚ್ಚಿನ ಪಾಲು ಮೀಸಲಾಗುತ್ತದೆ. ಬಳಿಕ ಎರಡು ಬಗೆಯ "ತೀರ್ಥ"ಗಳಿಗೆ ನೀರು ಬೇಕೇಬೇಕು. (ಪಟ್ಟಣ ಪ್ರದೇಶಗಳಲ್ಲಿ ನೀರಿಗಿಂತ ಬೀರಿನ ಪ್ರಮಾಣವೇ ಹೆಚ್ಚಿರುವುದು ಇಲ್ಲಿ ಉಲ್ಲೇಖಾರ್ಹ.)

ಇದೀಗ ಈ ಸಮಸ್ಯೆಯ ನಿವಾರಣೆ ಏನು? ಹೇಗೆ ಎಂದು ಕೂಡ ನಿದ್ದೆಗಣ್ಣಲ್ಲೇ (ತೀರ್ಥ ಸೇವಿಸಿದ ಕಣ್ಣಿನಲ್ಲಿ ಅಂತ ನಮಗಾಗದವರು ದೂರು ಹೊಗಳುತ್ತಿದ್ದಾರೆ, ಇರಲಿ ಬಿಡಿ.) ನಮ್ಮ ಬ್ಯುರೋ ಗಂಭೀರ ಚಿಂತನೆ ಮಾಡಿದೆ.

ಮಗದೊಂದು ಅಧ್ಯಯನದ ಪ್ರಕಾರ, ರಾಜ್ಯ ರಾಜ್ಯಗಳ ನಡುವೆ ಜಗಳ ನಡೆಯುತ್ತಿರುವುದು ಅಕ್ಷರ ದೋಷದಿಂದಾಗಿರಬಹುದೇ? ಎಂಬ ಶಂಕೆಯೊಂದು ಬೊಗಳೂರು ಬ್ಯುರೋವನ್ನು ಕಾಡಿದ್ದು, "ಬೀರು" ಬದಲು "ನೀರು" ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಕಾರಣವೇ ಎಂಬ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.

ಭೂಮಿಯಿಂದ ನೀರನ್ನು ತಂದು ಜಗಳವಾಡುತ್ತಿರುವ ರಾಜ್ಯಗಳಿಗೆ ಹಂಚುವುದರಿಂದ ಎಲ್ಲಾ ಸಮಸ್ಯೆಗಳು ಮುಕ್ತಾಯವಾಗುತ್ತದೆ. ಹಾಗಾಗಿ ಕಾವು ಏರುವ ಮತ್ತು ಏರಿಸುವ ಅನ್ಯಾಯ ಮಂಡಳಿಗಳಿಗಾಗಿ ಮಾಡುವ ಖರ್ಚು ಕೂಡ ಉಳಿಯುತ್ತದೆ ಎಂದು ಹೇಳಿ ನಾವು ನಮ್ಮ ಅಧ್ಯಯನ ಭರಿತ ಒಂದೆರಡು ಮಾತುಗಳನ್ನು ಕೊನೆಗೊಳಿಸುತ್ತೇವೆ. ಜೈಹಿಂದ್...

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ನಮ್ಮೂರಿನಲ್ಲಿ ನೀರಿನ ಸಮಸ್ಯೆ ಇಲ್ಲ - ಕುಡಿಯಲು ನೀರು ಯಥೇಚ್ಛವಾಗಿ ದೊರೆಯುವುದು - ಇನ್ನು ಬೇರೆ ಕೆಲಸಗಳಿಗೆ ಪಕ್ಕದಲ್ಲೇ ಸಮುದ್ರ ಇದೆ - ಹಾಗಿದ್ದ ಮೇಲೆ ಇಂದಿನ ನಿಮ್ಮ ಲೇಖನ ನಾನು ಓದಲೇಬೇಕಾ?

  ಜಗತ್ತೆಲ್ಲಾ ಮಲಗಿದ್ದಾಗ ಅವನ್ಯಾಕೆ ಎದ್ದ? :o ಅವನ್ಯಾರು? ಹಾಗೆ ಏಳೋದ್ರಿಂದ ಮತ್ತೆ ನಿದ್ರೆ ಬರೋಲ್ವಂತೆ - ಹೌದಾ? ಆಗ ನೀರು ಕುಡಿದರೆ ಮತ್ತೆ ಮತ್ತೆ ಏಳಬೇಕಾಗತ್ತಂತೆ - ಹೌದಾ?

  ಸಮಂಜಸವಾದ ಉತ್ತರ ದೊರಕದಿದ್ದಲ್ಲಿ ...

  ಪ್ರತ್ಯುತ್ತರಅಳಿಸಿ
 2. ಮಧ್ಯರಾತ್ರಿಯಲ್ಲಿ ನೀರಡಿಕೆಯಾಗಿದ್ದರಿಂದ ಬುದ್ಧನಿಗೆ ಎಚ್ಚರವಾಯಿತು. ನೀರನ್ನು ಹುಡುಕುತ್ತಾ, ಹುಡುಕುತ್ತಾ ಹೋದವನಿಗೆ ಕೊನೆಗೆ ಸಿಕ್ಕಿದ್ದು ಒಂದು ಈಚಲ ಮರ. ಅದರ ಕೆಳಗೆ ಕುಳಿತು ಈಚಲ ಮರ ನೀಡಿದ ರಸ ಕುಡಿಯುತ್ತಿದ್ದಾಗ ಅವನಿಗೆ ಜ್ಞಾನೋದಯವಾಯಿತು. ಅವನು ನೀದಿದ ಉಪದೇಶಗಳಲ್ಲಿ ನಾವು ಕೇಳಿಸಿಕೊಂಡಷ್ಟನ್ನು ಸಾರ್ವಜನಿಕ ಉಪಯೋಗಕ್ಕಾಗಿ ಇಲ್ಲಿ ಸಾರುತ್ತಿದ್ದೇವೆ:
  (೧) ನೀರು ಸಿಗದಿದ್ದರೆ ಬೀರು ಕುಡಿ.
  (೨) ನೀರು ಸಿಗದಿದ್ದರೆ ಮುಖ ತೊಳೆಯಬೇಡ.
  (೩) ನೀರು ಸಿಗದಿದ್ದರೆ ಬಟ್ಟೆ ಒಗೆಯಬೇಡ.
  (೪) (ಬೇರೆಯವರ) ಪ್ರಾಣ ಹೋದರೂ ಸರಿ, ಕಾವೇರಿ ನೀರನ್ನು ಬಿಟ್ಟುಕೊಡಬೇಡ. (ಈ ಉಪದೇಶವನ್ನು ಈಗ ಮರಣಾನಿಧಿ ಎನ್ನುವ ಮುಖ್ಯ ಮಂತ್ರಿಗಳು ತಮ್ಮ ರಾಜ್ಯನೀತಿಯನ್ನಾಗಿ ಮಾಡಿದ್ದಾರೆ.)

  ಪ್ರತ್ಯುತ್ತರಅಳಿಸಿ
 3. ನಮಗೂ ಗೊತ್ತಿದೆ ಶ್ರೀನಿವಾಸರೆ, ನಿಮ್ಮೂರಿನಲ್ಲಿ ಇರುವುದು ಬೀರಿನ ಸಮಸ್ಯೆ ಮಾತ್ರ ಅಂತ.

  ಲೇಖನ ಓದದಿದ್ದರೂ ಪರವಾಗಿಲ್ಲ, ನಮ್ಮ ಪತ್ರಿಕೆ ಖರೀದಿಸಿದರೆ ಸಾಕು. ಮತ್ತು ನಮಗೆ ಸಂದಾಯವಾಗಬೇಕಾದ್ದು ಸಂದಾಯವಾಗ್ತಾ ಇದ್ದರೆ ಸಾಕು.

  ನಿಮ್ಮ ಮತ್ತೊಂದು ಪ್ರಶ್ನೆಯಲ್ಲಿ, "ಕುಡಿದರೆ ಮತ್ತೆ ಏಳಲೇಬೇಕಾ" ಅಂತ ಕೇಳಿದ್ದೀರಿ. ಈಗ ಎಲ್ಲಿದ್ದೀರಿ? ಚರಂಡಿಯಲ್ಲಾದರೆ, ಯಾರದೇ ಉಪದ್ರವ ಇರುವುದಿಲ್ಲ. ಹಾಗಾಗಿ ಏಳಲೇಬೇಕಾಗಿಲ್ಲ.

  ಪ್ರತ್ಯುತ್ತರಅಳಿಸಿ
 4. ಸುಧೀಂದ್ರರೇ,
  ನೀವು ಈಚಲಮರದ ಕೆಳಗೆ ಕುಳಿತಿದ್ದಾಗ ಆದ ಜ್ಞಾನೋದಯದಲ್ಲಿ ನಮಗೂ ಪಾಲು ನೀಡಬೇಕೆಂದು ನಾವು ಕೂಡ ಶೀಘ್ರದಲ್ಲೇ ಗಲಾಟೆ ಆರಂಭಿಸುವವರಿದ್ದೇವೆ. ಅದರ ಜತೆಗೆ ದುರ್ಜನ ಸಿಂಗರಿಗೆ ಹೇಳಿಸಿ, ಆ ಜ್ಞಾನೋದಯದಲ್ಲಿ ನಮಗೂ ಮೀಸಲಾತಿ ದೊರಕಿಸುವಂತೆ ಮಾಡಿ ಅಂತ ಕೇಳಿಕೊಳ್ಳಲಿದ್ದೇವೆ. ರೆಡಿಯಾಗಿರಿ,

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D