ಬೊಗಳೆ ರಗಳೆ

header ads

ಬೆಲೆ ಹೊತ್ತ ಉಪದ್ರವ ಯಶಸ್ವಿ ಉಡ್ಡಯನ!

(ಬೊಗಳೂರು ಏರುತಿಹುದು... ಬ್ಯುರೋದಿಂದ)
ಬೊಗಳೂರು, ಸೆ.3- ಜಿಎಸ್ಎಲ್‌ವಿ ಉಪದ್ರವವನ್ನು ಉಡಾವಣೆ ಮಾಡಿದ್ದು ನಾನು, ತಾನು ಎಂದು ಹೇಳಿಕೊಳ್ಳುತ್ತಾ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿವೆ ಎಂದು ಬೊಗಳೂರು ಬ್ಯುರೋ ವರದಿ ಮಾಡಿದೆ.

ಭಾರತದ ಪ್ರಜೆಗಳ ಜೀವನಾವಶ್ಯಕ ವಸ್ತುಗಳ ಬೆಲೆಗಳನ್ನು ಹೊತ್ತ ಉಪದ್ರವವೊಂದನ್ನು ನಿನ್ನೆ ಶ್ರೀಹರಿ ಖೋತಾದಿಂದ ಬಾಹ್ಯಾಕಾಶಕ್ಕೆ ಹಾರಿಬಿಡಲಾಗಿತ್ತು. ಇದು ನಮ್ಮ ಸಾಧನೆ ಎಂದು ಅಜ್ಞಾನಿಗಳು ಹೇಳಿಕೊಳ್ಳತೊಡಗಿದ ಬೆನ್ನಿಗೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಏರುತಿಹುದು, ಹಾರುತಿಹುದು ನೋಡು ನಮ್ಮ ಬೆಲೆಗಳು... ಎನ್ನುತ್ತಾ "ನಮ್ಮದು" ಎಂಬುದನ್ನು ಒತ್ತಿ ಹೇಳುತ್ತಾ ಬೀದಿಗಿಳಿದಿವೆ.

ಉಪದ್ರವದ ಬಾಲಕ್ಕೆ ಬೆಲೆಗಳನ್ನು ಕಟ್ಟಿದ್ದು ನಾವೇ ಎಂದು ಕೇಂದ್ರವು ಹೇಳಿಕೊಳ್ಳತೊಡಗಿದ್ದರೆ, ನಾವು ಆ ಉಪದ್ರವದ ಮೂತಿಗೇ ಬೆಲೆಗಳನ್ನು ಕಟ್ಟಿದ್ದೇವೆ. ಅದೀಗ ಜನಸಾಮಾನ್ಯರ ಕೈಗೆ ಎಟುಕದಂತೆ ಮಾತ್ರವಲ್ಲದೆ ಕಣ್ಣಿಗೂ ಗೋಚರಿದಷ್ಟು ಮೇಲಕ್ಕೇರಿದ್ದು, ಬಾಹ್ಯಾಕಾಶದಲ್ಲಿ ರಾರಾಜಿಸುತ್ತಿದೆ ಎಂದು ಉಭಯ ಸರಕಾರಗಳೂ ಪೇಚಿಗೆ ಬಿದ್ದಂತೆ ಸಾರತೊಡಗಿವೆ.

ಈ ಮಧ್ಯೆ, ಬೆಲೆಗಳನ್ನು ಹೊತ್ತ ಉಪದ್ರವವು ಯಶಸ್ವಿಯಾಗಿ ತನ್ನ ಕಕ್ಷೆ ಸೇರಿರುವುದರಿಂದ ದೇಶದ ಬಡಪ್ರಧಾನಿ ಮತ್ತು ರಾಷ್ಟ್ರಪತಿಗಳು, ಬೆಲೆ ಏರಿಕೆಗೆ ಸಹಕರಿಸಿದ ಎಲ್ಲಾ ಅಜ್ಞಾನಿಗಳ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಬೆಲೆಗಳನ್ನು ಏರಿಸಿರುವುದರಿಂದ ದೇಶದ ಕೀರ್ತಿ ಪತಾಕೆಯು ಕೂಡ ಎತ್ತರೆತ್ತರದಲ್ಲಿ ಹಾರಾಡಲಿದೆ. ಜನಸಾಮಾನ್ಯರು ಇನ್ನು ಏರುತ್ತಿರುವ ಬೆಲೆಗಳ ಬಗ್ಗೆ ಚಿಂತೆಯೇ ಮಾಡಬೇಕಾಗಿಲ್ಲ. ಯಾಕೆಂದರೆ ಅದು ಇನ್ನು ಬರಿಗಣ್ಣಿಗೆ ಗೋಚರಿಸದಷ್ಟು ದೂರ ಹೋಗಿ ಆಗಿದೆ. ಇದು ನಮ್ಮ ಸರಕಾರದ ಸಾಧನೆ ಎಂದು ನಿಧಾನಮಂತ್ರಿಯವರು ತಮ್ಮ ಪಕ್ಷದ ಮುಖ್ಯಸ್ಥರಿಂದ ಅನುಮತಿ ಪಡೆದು ಹೇಳಿಕೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಬೊಗಳೂರು ಕೇಂದ್ರದಿಂದ ಹಾರಿಬಿಡಲಾದ ಈ ಉಪದ್ರವದಲ್ಲಿ ತೇಲಾಡುತ್ತಿದ್ದಂತಹ ತ್ರಿಶಂಕು ಪ್ರಯಾಸಿಯನ್ನು ಬೊಗಳೂರು ವದರಿಗಾರರು ತಮ್ಮ ಆರನೆಯ ಇಂದ್ರಿಯದಿಂದ ಸಂಪರ್ಕಿಸಿದಾಗ ತಿಳಿದದ್ದೆಂದರೆ, ಈ ಪ್ರಯಾಸಿಯು ಕರ್ನಾಟಕದಲ್ಲಿಯ ‘ರೈತ’ ಎನ್ನುವ ಪ್ರಬೇಧಕ್ಕೆ ಸೇರಿದ ಪ್ರಾಣಿ. ಈ ಪ್ರಾಣಿಗೆ ಹುಟ್ಟುತ್ತಲೆ ಸಾಲ ಮಾಡುವ ಹಾಗು ಉಪವಾಸ ಮಾಡುವ ತರಬೇತಿ ನೀಡಲಾಗಿದೆ. ಮಾಜಿ ಮು.ಮ. ಕೃಷ್ಣ ಎನ್ನುವ ಅವತಾರಿಗಳು ಈ ಪ್ರಾಣಿಗೆ, ‘ಬದುಕಿದರೆ ಸಾಲ, ಸತ್ತರೆ ವೀರಸ್ವರ್ಗ’ ಎನ್ನುವ ಗೀತೋಪದೇಶ ನೀಡಿದ್ದು, ಈ ಪ್ರಾಣಿಯು ಸ್ವರ್ಗ ಸೇರುವ ಇರಾದೆಯಿಂದ ನೇಣು ಹಾಕಿಕೊಳ್ಳುವಾಗ, ‘ಸರಕಾರಿ ಆತ್ಮಹತ್ಯಾ ಆಯೋಗ’ದವರು “ ನಾವು ನಿನ್ನನ್ನು ನೇರವಾಗಿ ಸ್ವರ್ಗಕ್ಕೆ ಕಳುಹಿಸುತ್ತೇವೆ” ಎಂದು ಆಶ್ವಾಸನೆ ಕೊಟ್ಟು ಉಪದ್ರವದಲ್ಲಿ ಕೂಡಿಸಿ ಹಾರಿಸಿದ್ದಾರೆ. ಈತನನ್ನು ಸರಕಾರಿ ಸ್ಕೀಮಿನಲ್ಲಿ ‘ರೈತರ ಕೋಟಾ’ದ ಅಡಿಯಲ್ಲಿ ಹಾರಿಸಲಾಗಿದ್ದು , ಕರ್ನಾಟಕದ ಎಲ್ಲಾ ಸತ್(ತ) ಪ್ರಜೆಗಳಿಗೂ ಅವರವರ ಕೋಟಾದಲ್ಲಿ ಹಾರಿಸಲಾಗುವದು ಎಂದು ಹೆಣಕಾಸು ಮಂತ್ರಿ ಅಡವೀರಪ್ಪನವರು ಭರವಸೆ ನೀಡಿದ್ದಾರೆ. ಸಂಸದರಿಗೆ ಮಾತ್ರ ಚೈನಾದಲ್ಲಿಯೆ ಚೈನಿ ಮಾಡಿಸಲಾಗುವದು ಎಂದು ಮು.ಮ. ಕೊಮಾರಣ್ಣ ಹೇಳಿದ್ದರಿಂದ ಎಲ್ಲಾ ಸಂಸದರು ಬೇಜಾರು ಮಾಡಿಕೊಂಡು ಅಲ್ಲಿಯೆ ಸ್ವರ್ಗ ಕಂಡುಕೊಂಡರಾಯಿತು ಎಂದು ಪರಸ್ಪರ ಸಮಾಧಾನ ಮಾಡಿಕೊಳ್ಳುತ್ತಿದ್ದಾರಂತೆ.

    ಪ್ರತ್ಯುತ್ತರಅಳಿಸಿ
  2. ಸುಧೀಂದ್ರರೆ,
    ನಿಮ್ಮ ಈ ಕಾಮೆಂಟಿಗೆ ಡಾಕ್ಟರ್ಏಟು ನೀಡಲು ಬೊಗಳೂರು ವಿವಿ ನಿರ್ಧರಿಸಿದೆ. ಆದರೆ ಅದು ಕಾರ್ಯಗತಗೊಳ್ಳುವಲ್ಲಿ ವಿಳಂಬವಾಗುತ್ತಿದೆ. ಇದಕ್ಕೆ ಕಾರಣವೆಂದರೆ, ನಿಮ್ಮ ಈ ಥೀಸಿಸ್ ಓದಿದ ಮೌಲ್ಯಮಾಪಕರು ನಗು ನಗುತ್ತಲೇ ಸ್ವರ್ಗದತ್ತ ಪ್ರಯಾಣಬೆಳೆಸಿದ್ದಾರೆ. ಇನ್ನೊಬ್ಬ ಮೌಲ್ಯಮಾಪಕರನ್ನು ನೇಮಿಸಲು ವಿಳಂಬವಾಗಿದೆ.

    ಒಂದೇ ವಾಕ್ಯದಲ್ಲಿ ರಾಜ್ಯ ರಾಜಕಾರಣವನ್ನು ಗುಡಿಸಿ ತೆಗೆದಿದ್ದೇ ಈ ಡಾಕುಏಟು ನೀಡಲು ಪ್ರಧಾನ ಕಾರಣ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D