(ಬೊಗಳೂರು ತಲೆ ಇಲ್ಲದ ಬ್ಯುರೋದಿಂದ)
ಬೊಗಳೂರು, ಆ.22- ತಲೆ ಇಲ್ಲದ ಚಿಕನ್‌ಗಳನ್ನು ತಿನ್ನುವವರಿಗೂ ತಲೆ ಇರುವುದಿಲ್ಲ ಎಂಬ ಆರೋಪ ಮಾಡಿರುವ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿಯ ವಿರುದ್ಧ ಸಂಸದರೆಲ್ಲಾ ಹೆಗಲು ಮುಟ್ಟಿಕೊಂಡು ತೀವ್ರವಾಗಿ ಪ್ರತಿಭಟನೆ ನಡೆಸಿದ ಪ್ರಸಂಗವೊಂದು ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.

ತಲೆ ಇಲ್ಲದ ಚಿಕನ್‌ಗಳಂತೆ ಅತ್ತಿತ್ತ ಅಲೆದಾಡುವಿರೇಕೆ ಎಂದು ರಾಯಭಾರಿ ಹೇಳಿರುವುದು ನಮಗಲ್ಲ ನಮಗಲ್ಲ ಎಂದು ಸಂಸದರು ಒತ್ತಿ ಒತ್ತಿ ಸ್ಪಷ್ಟನೆ ನೀಡುತ್ತಿರುವ ದೃಶ್ಯವನ್ನು ದೇಶದಲ್ಲೇ ಬೊಗಳೆ ರಗಳೆ ಬ್ಯುರೋಗೆ ಸೆಡ್ಡು ಹೊಡೆಯುತ್ತಿರುವ ಐಬಿಎನ್ ನ್ಯೂಸ್ ಬ್ಯುರೋ ವರದಿ ಮಾಡಿರುವುದನ್ನು ಇಲ್ಲಿಂದ ಕದ್ದು ಬೊಗಳೆ ರಗಳೆ ಬ್ಯುರೋ ಓದುಗರಿಗಾಗಿ ಹಾಕಲಾಗಿದೆ.


ಈ ಮಧ್ಯೆ, ಆ ರಾಯಭಾರಿ ಆ ರೀತಿ ಹೇಳಿಕೆ ನೀಡಿರುವುದು ಬೊಗಳೆ ರಗಳೆ ಬ್ಯುರೋ ಬಗೆಗೂ ಅಲ್ಲ ಎಂದು ನಮ್ಮ ಸಂತಾಪಕರು ಕೂಡ ಒತ್ತಿ ಒತ್ತಿ, ಕುರ್ಚಿ ಎತ್ತಿ ಹೇಳತೊಡಗಿರುವುದು ನಮ್ಮ ಏಕಸದಸ್ಯ ಬ್ಯುರೋದಲ್ಲಿರುವ ಎಲ್ಲರಿಗೂ ಕುತೂಹಲ ಮೂಡಿಸಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಆ ರಾಯಭಾರಿ ನೀಡಿರುವ ಸ್ಪಷ್ಟನೆ. ಇದನ್ನು ತಾನು ಹೇಳಿದ್ದು ಸಂಸದರಿಗಲ್ಲ, ನಮ್ಮ ಮಾಧ್ಯಮ ಮಿತ್ರರಿಗೆ ಎಂದು ಅವರು ಹೇಳಿರುವುದರಿಂದ ಅವರ ಮಾಧ್ಯಮ ಮಿತ್ರರ ಬಳಗದಲ್ಲಿ ಬೊಗಳೆ ಬ್ಯುರೋ ಕೂಡ ಸೇರಿಕೊಂಡಿರಬಹುದೇ ಎಂಬ ಸಂದೇಹಗಳು ಕಾಡುತ್ತಿವೆ ಎಂದು ವರದಿಯಾಗಿದೆ.

ಆದರೂ ಸಾವರಿಸಿಕೊಂಡಿರುವ ನಮ್ಮ ಬ್ಯುರೋ, ತಲೆ ಇಲ್ಲದ ಚಿಕನ್ ತಿಂದರೆ ತಲೆ ಇರುವುದಿಲ್ಲ ಎಂಬುದನ್ನು Someಶೋಧನೆ ಮೂಲಕ ಪತ್ತೆ ಹಚ್ಚಿದೆ. ಆದುದರಿಂದ ಯಾರು ಕೂಡ ತಲೆ ಇಲ್ಲದ ಚಿಕನ್ ತಿನ್ನುವ ಬದಲು, ತಲೆ ಇರುವ ಇಡೀ ಚಿಕನನ್ನು ಗುಳುಂಕರಿಸುವುದೇ ಸೂಕ್ತ ಎಂಬ ಪುಕ್ಕಟೆ ಸಲಹೆ ನೀಡಲಾಗುತ್ತಿದೆ.

4 Comments

ಏನಾದ್ರೂ ಹೇಳ್ರಪಾ :-D

 1. ಚಿಕನ್ ಎಂದರೇನು? ಚಿಕ್ಕಣ್ಣನನ್ನು ಮುದ್ದಾಗಿ ಚಿಕನ್ ಎಂದು ಕರೆಯುತ್ತಾರಾ? ಅದ್ಯಾಕೆ ಚಿಕ್ಕಣ್ಣನನ್ನು ತಿನ್ನಬೇಕು? ತಿನ್ನೋಕ್ಕೆ ಬೇರೆ ಏನೂ ಸಿಗುತ್ತಿಲ್ಲವಾ? ಚಿಕನ್‍ಗೇನೋ ತಲೆ ಇಲ್ಲ ಅಂದ್ರಿ - ಈ ಸೂತ್ರಕ್ಕೂ ತಲೆ ಇಲ್ವಾ? (ಚಿತ್ರ ಕಾಣಿಸ್ತಾನೇ ಇಲ್ಲ - ಬರೀ ಬೋಳು ಬೋಳು) :( ಅಥವಾ ಚಿಕನ್ ಎನ್ನುವುದು ಕೆಟ್ಟ ದೃಶ್ಯವಾ? ಅದಕ್ಕೇ ಚಿತ್ರ ಕಾಣಿಸದ ಹಾಗೆ ಮಾಡಿದ್ದೀರಾ? ಹೋಗ್ಲಿ ನಿಮ್ಮ ಕಡೆ ಮಳೆ ಬೆಳೆ ಹೇಗಿದೆ? ನೀವ್ಯಾಕೋ ಬಹಳ ಸೊರಗಿಹೋದ ಹಾಗೆ ಕಾಣಿಸುತ್ತಿದ್ದೀರಿ

  ReplyDelete
 2. ಇತ್ತೀಚೆಗೆ ಭಾರತೀಯ ಅಜ್ಞಾನಿಗಳು ಒಂದು ಹೊಸ ತಳಿಯನ್ನು ಸೃಷ್ಟಿಸಿದ್ದಾರೆ: ತಲೆ ಇಲ್ಲದ ತಳಿ:-ತಲೆ ಇಲ್ಲದ ಚಿಕನ್, ತಲೆ ಇಲ್ಲದ ರಾಯಭಾರಿಗಳು, ತಲೆ ಇಲ್ಲದ ಸಂಸದರು, ತಲೆ ಇಲ್ಲದ ಜನ ಇತ್ಯಾದಿ. ತಲೆ ಇಲ್ಲದವರಿಂದ ತಲೆ ಇಲ್ಲದವರಿಗಾಗಿ ತಯಾರಿಸಿದ ಚಿಕನ್ನೇ ತಲೆ ಇಲ್ಲದ ಚಿಕನ್.

  ReplyDelete
 3. ಶ್ರೀನಿವಾಸರೆ,
  ಚಿಕನ್ ಎಂಬ ಸದ್ದು ಕೇಳಿದ ತಕ್ಷಣ ನೀವು ಓಡಿ ಬಂದಿರೋದು ನೋಡಿದ್ರೆ, ನಿಮಗೆ ಅದರ ಅರ್ಥ ಅಥವಾ ಅರುಚಿ ಖಂಡಿತಾ ಗೊತ್ತಿದೆ ಅಂತ ಶ್ರುತಪಟ್ಟಂತಾಗಿದೆ.

  ಮಳೆ ಜಾಸ್ತಿ ಇದ್ರೂ, ಬೆಳೆ ಇಲ್ಲದೆ ಸೊರಗಿದ ಸೋರೇಕಾಯಿಯಾಗಿದೆ ನಮ್ಮ ಬ್ಯುರೋ...!!

  ReplyDelete
 4. ಸುಧೀಂದ್ರರೆ,

  ನಮ್ಮ ಅಜ್ಞಾನಿಗಳು ಮತ್ತೊಂದು ಸಾಧನೆಯನ್ನೂ ಮಾಡಿದ್ದಾರೆ. ಅದೆಂದರೆ ತಳಿಯೇ ಇಲ್ಲದ ತಲೆಯನ್ನು ಮಾತ್ರ ಸೃಷ್ಟಿಸಿರುವುದು. ಹಾಗಾಗಿಯೇ ನಮ್ಮ ದೇಶದಲ್ಲಿ ಮೃತಪಟ್ಟವರ ಹೆಸರು ಕೂಡ ಮತದಾರರ ಪಟ್ಟಿಯಲ್ಲಿ ಧುತ್ತನೆ ಕಾಣಿಸಿಕೊಳ್ಳುತ್ತದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post