ಬೊಗಳೆ ರಗಳೆ

header ads

ಸ್ವತಂತ್ರ ರಾಶಿ ಭವಿಷ್ಯ: ನಿಮ್ಮ ರಾಶಿ ನೀವೇ ಆರಿಸಿ!

ನಮ್ಮ ಜಾತಕವು ಬೇರೊಬ್ಬರ ಕೈಯಲ್ಲಿದೆ ಎಂಬುದು ಖಚಿತವಾಗಿರುವ ಕಾರಣದಿಂದಾಗಿ ಬೊಗಳೆ ರಗಳೆಯ ಭವಿಷ್ಯವಾಣಿ ಬ್ಯುರೋದ ಬಾಗಿಲನ್ನು ಮತ್ತೆ ತೆರೆಯಲಾಗಿದ್ದು, ಕೆಲವು ರಾಶಿಗಳ ದಿನ/ವಾರ/ಮಾಸ/ವರ್ಷ ಭವಿಷ್ಯವನ್ನು ಒಟ್ಟುಸೇರಿಸಿ ಇಲ್ಲಿ ನೀಡಲಾಗಿದೆ.

ಯಾರು ಬೇಕಾದರೂ ಯಾವುದೇ ರಾಶಿಯನ್ನು ಆಯ್ದುಕೊಳ್ಳಬಹುದು ಎಂಬುದು 60ನೇ ಸ್ವಾತಂತ್ರ್ಯ ದಿನದ ನಮ್ಮ ಕೊಡುಗೆಯಾಗಿರುತ್ತದೆ.

ಹಾಗಾಗಿ ರಾಶಿ ಹೆಸರುಗಳ ಬದಲಾಗಿ ಒಂದೊಂದು ಚುಕ್ಕಿಗಳನ್ನು ಇಟ್ಟಿದ್ದೇವೆ...

ರಾಶಿ ಭವಿಷ್ಯ ಇಂತಿದೆ:

  • ಶನಿಯ ವಕ್ರ ದೃಷ್ಟಿಯಿಂದಾಗಿ, ಚಾಕಲೇಟು ಕೊಡಿಸದ ನಿಮ್ಮನ್ನು ನಿಮ್ಮ ಪುಟ್ಟ ಮಕ್ಕಳೇ ವಕ್ರ ದೃಷ್ಟಿಯಿಂದ ನೋಡಬಹುದು.
  • ಬಂಧುಗಳು, ಮಿತ್ರರ ಮಧ್ಯಸ್ಥಿಕೆಯಿಂದ ಸಂತಾನ ಯೋಗ. ರಾಜ್ಯಭಾರದಿಂದಾಗಿ ನಿಮಗೆ ಜೀವನವೇ ಭಾರವಾದೀತು. ಚೀಲ ತುಂಬಾ ಹಣ ತೆಗೆದುಕೊಂಡರೆ ಜೇಬು ತುಂಬಾ ಅಕ್ಕಿ ದೊರೆಯುವ ಸಾಧ್ಯತೆಗಳು ಹೆಚ್ಚು.
  • ಕುಜನು ನೀಚ ರಾಶಿಯಲ್ಲಿರುವುದರಿಂದ ಪಕ್ಕದ ಮನೆಯಲ್ಲಿ ಸಂತಾನ ಸಂಭ್ರಮ. ಮನೆಯಲ್ಲಿ ಮಾತ್ರ ಕುರುಕ್ಷೇತ್ರ.
  • ಪಕ್ಕದ ಮನೆಯವರ ಜೊತೆ ಸರಸ, ಮನೆಯಲ್ಲಿ ವಿರಸ. ಚಂದ್ರನು ಮಂಗಳನ ಮನೆಗೆ ಹೋಗುವುದರಿಂದ ಮಂಗಳ ಊರಿನಲ್ಲಿ ಕಲಹವೇರ್ಪಡಬಹುದು. ಚಂದ್ರನು ಹಳೆಯ ಬಾಕಿ ಕೇಳಲೆಂದೇ ಮಂಗಳನ ಮನೆಗೆ ಹೋಗಿದ್ದುದೇ ಇದಕ್ಕೆ ಕಾರಣವಿರಬಹುದು.
  • ಸೊನ್ನೆಯಿಂದ 9 ವರೆಗಿನ ಅಂಕಿಗಳನ್ನು ನಿಮಗೆ ಸರಿಯಾಗಿ ಬರೆಯಲು ಬರುತ್ತದೆಯೆಂದಾದರೆ ಪ್ರಾಥಮಿಕ ಶಾಲೆಯಲ್ಲಿ ನಿಮಗೆ ಸರಿಯಾಗಿ ಟೀಚರ್ ಪಾಠ ಮಾಡಿದ್ದಾರೆಂದರ್ಥ. ಅದರಲ್ಲೂ ಆ ಅಂಕಿಗಳನ್ನು ಕೂಡಿಸಲು, ಕಳೆಯಲು ನಿಮಗೆ ತಿಳಿದಿದ್ದರೆ, ಖಂಡಿತವಾಗಿಯೂ ನೀವು ರಾಜಕಾರಣಿಯಾಗಲು ಯೋಗ್ಯ, ಹಣದ ಲೆಕ್ಕ ಪಕ್ಕಾ ಇರುತ್ತದೆ.
  • ಶುಕ್ರನು ವಕ್ರವಾಗಿದ್ದರೆ ನೀವು ಆ ಕಡೆಯಿಂದ ಸಂಪಾದಿಸಿದ ಹಣವನ್ನು ಈ ಕಡೆ ಸುರಿಯುವುದರಿಂದಾಗಿ ಧನ ವ್ಯಯವಾಗಬಹುದು. ತೊಟ್ಟೆ, ಬಾಟಲಿ ಇತ್ಯಾದಿಗಳ ಬದಲು ಪೀಪಾಯಿಯನ್ನೇ ಸುರಿದರೆ ಮತ್ತಷ್ಟು ಧನ ಹಾನಿಯಾಗುತ್ತದೆ.
  • ಮಂಗಳಳ ಮನೆಗೆ ಧೂಮದಂತೆ ಕೇತು ಪ್ರವೇಶಿಸುವುದರಿಂದ ಅಮಂಗಳ ಕಾರ್ಯ ಹೆಚ್ಚಾಗಬಹುದು. ಅಲ್ಲದೆ ತೋಟಕ್ಕೆ ಮಂಗಗಳ ಕಾಟವೂ ಹೆಚ್ಚಿ, ಅಡಿಕೆ, ತೆಂಗು, ಮಾವು, ಬೇವು, ಬೆಳೆ, ಕಳೆಗಳೆಲ್ಲಾ ಕುಲಗೆಟ್ಟು ಹೋದಾವು...
  • ನಿಮ್ಮನ್ನು ಬಾರಿಗೆ ಕರೆದೊಯ್ಯುವ ಗುರುವು ವಕ್ರವಾಗಿದ್ದರೆ, ನೀವು ಕೂಡ ಮರಳಿ ಮನೆಗೆ ಬರುವಾಗ ವಕ್ರ ವಕ್ರವಾಗಿಯೇ ಚಲಿಸುತ್ತಿರಬಹುದು.
  • ಮನೆಯಲ್ಲಿ ಪಕ್ಕದ ಮನೆಯ ಶಾಂತಿಯಿಂದ ಸಂತಾನ ಪ್ರಾಪ್ತಿಯಾಗುವುದರಿಂದ ಸ್ವಂತ ಮನೆಯಲ್ಲಿ ಅಶಾಂತಿ. ಮಂಗಗಳ ಕಾಟದಿಂದ ಅಮಂಗಳ ಕಾರ್ಯ.
  • ಪಕ್ಕದ ಮನೆಯ ನಾಯಿಗಳು ಕೂಡ ತಮಗೆ ದೊರೆತ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದರಿಂದಾಗಿ ಎರಡೂ ಮನೆಯ ಮಾಲೀಕರ ನಡುವೆ ತೀವ್ರ ವಾಗ್ಯುದ್ಧ. ಅದೇ ರೀತಿ ದನಗಳು ಕೂಡ ಸ್ವಾತಂತ್ರ್ಯ ಆಚರಿಸಿದ್ದರಿಂದಾಗಿ ಮನೆಯ ಆವರಣದ ಸುತ್ತಮುತ್ತ ಕಾಗೆ-ಬೆಕ್ಕು-ನಾಯಿಗಳ ಅರಚಾಟದ ಮಾದರಿಯ ಕೂಗಾಟ ಕೇಳಿಬರಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

3 ಕಾಮೆಂಟ್‌ಗಳು

  1. ಅಸತ್ಯಾನ್ವೇಶಿಗಳೆ,
    ನಿಮ್ಮ ಭವಿಷ್ಯ ಬ್ಯೂರೋದವರು ಬರೆದ ಅಕ್ರಮ ಸಂತಾನ, ಅಕ್ರಮ ಧನಲಾಭ, ಅಕ್ರಮ-ಸಕ್ರಮ ಯೋಗ ಮೊದಲಾದ ರಾಜಯೋಗಗಳ ಬಗೆಗೆ ಓದಿ ಬಾಯಲ್ಲಿ ಜೊಲ್ಲು ಸುರಿಯಿತು. ಆದರೆ ಇದೀಗ ಮರ್ಕಟ ರಾಶಿಯವರ ಭವಿಷ್ಯದ ಬಗೆಗೆ ಏನಾದರೂ ಹೇಳಬಹುದೆ? ಯಾಕೆಂದರೆ ಅಕ್ಟೋಬರ ಮಾಸದಲ್ಲಿ, ಧರಣಿಮಂಡಲ ಮಧ್ಯದಲ್ಲಿ ಮೆರೆಯುತಿಹ ಕರ್ನಾಟ ದೇಶದಲ್ಲಿ ಗುರು ಮತ್ತು ಶನಿ ಗ್ರಹಗಳ ಬದಲಾವಣೆಯಿಂದ “ಹಸ್ತಾಂತರ ಯೋಗ”ವಾಗುವದು. ಆ ಸಮಯದಲ್ಲಿ ಮರದಿಂದ ಮರಕ್ಕೆ ಹಾರಲಿರುವ ಲಾಂಗೂಲಚಾಲಕರ ಭವಿಷ್ಯದ ಬಗೆಗೆ ಏನಾದರೂ ಸುಳಿವು ಸಿಕ್ಕರೆ ದಯವಿಟ್ಟು ಅರ್ಜಂಟಾಗಿ ತಿಳಿಸಿ.

    ಪ್ರತ್ಯುತ್ತರಅಳಿಸಿ
  2. ಸುಧೀಂದ್ರರೇ,
    ಮೊದಲಾಗಿ, ನೀವು ಹೇಳಿದ ಅಕ್ರಮಗಳ ಪಟ್ಟಿಯಲ್ಲಿದ್ದುದನ್ನು ನಮ್ಮ ಬ್ಯುರೋದವರು ಬರೆದಿದ್ದು ಮಾತ್ರ, ಮಾಡಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

    ಹಸ್ತಾಂತರ ಯೋಗಕ್ಕೂ ಕಾಳಸರ್ಪ ಯೋಗಕ್ಕೂ ಹತ್ತಿರದ ಸಂಬಂಧವಿರುವುದರಿಂದ ನಾಡಿನ ಪ್ರಜೆಗಳಿಗೆ ಮಾತ್ರ ತೊಂದರೆ ಇದೆಯೇ ಹೊರತು, ಲಂಗೂರಗಳಿಗೆ ಏನೂ ಆಗದು. ಅವುಗಳು ಸುಖ ಸಮೃದ್ಧಿಯಿಂದ ಮತ್ತಷ್ಟು ದಷ್ಟಪುಷ್ಟವಾಗುತ್ತವೆ ಎಂದು ನಮ್ಮ ಬ್ಯುರೋ ಜ್ಯೋತಿಷ್ಯರು ಖಚಿತಪಡಿಸಿದ್ದಾರೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D