ಬೊಗಳೆ ರಗಳೆ

header ads

ಆತ್ಮ- ಹತ್ಯೆಗೆ ಮುನ್ನ ಆತ್ಮ-ಶೋಧನೆಗೆ ಕರೆ

(ಬೊಗಳೂರು ರೈತಕಾಳಜಿ ಬ್ಯುರೋದಿಂದ)
ಬೊಗಳೂರು, ಜು.1- ಮಾಜಿ ಸಚಿವರೊಬ್ಬರ ಮಾತಿನಿಂದ ಪ್ರೇರಣೆಗೊಂಡ ಮಾಜಿ ನಿಧಾನಿಗಳು, ತಮ್ಮ ಆತ್ಮವನ್ನು ಶೋಧಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿರುವುದು ಬೊಗಳೆ ರಗಳೆ ಬ್ಯುರೋವನ್ನು ಬೆಚ್ಚಿ ಬೀಳಿಸಿದೆ.

ಇದಕ್ಕೆ ಕಾರಣವೆಂದರೆ ಅಸತ್ಯ ಶೋಧನೆಯಲ್ಲಿ ನಿರತವಾಗಿರುವ ಬೊಗಳೆ ರಗಳೆ ಬ್ಯುರೋಗೇ ಅವರು ಸೆಡ್ಡು ಹೊಡೆಯುತ್ತಿರುವುದು. ಈ ಹಿನ್ನೆಲೆಯಲ್ಲಿ, ಆತ್ಮ ಹತ್ಯೆ ಮಾಡಿಕೊಂಡ ರೈತರ ಆತ್ಮವನ್ನು ಮಾಜಿ ನಿಧಾನಿಗಳು ಶೋಧಿಸಹೊರಟಿದ್ದು, ಕುತೂಹಲ ಮೂಡಿಸಿದೆ.

ಆತ್ಮಹತ್ಯೆ ಮಾಡಿಕೊಂಡ ರೈತರು ಈಗ ಏನು ಮಾಡುತ್ತಿದ್ದಾರೆ, ಅವರ ಸಾಲ ಮನ್ನಾ ಮಾಡಬೇಕೇ, ಸಾಲ ಮನ್ನಾ ಮಾಡಿದರೆ ಅವರು ಮರಳಿ ಬರುತ್ತಾರೆಯೇ ಎಂಬಿತ್ಯಾದಿ ವಿಷಯಗಳನ್ನು ಸಂ-ಶೋಧನೆಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.
ಇದಲ್ಲದೆ, ಆತ್ಮಹತ್ಯೆಗೆ ಶರಣಾಗುವ ಮುನ್ನ ಈ ರೈತರು ಮುದ್ದೆ ತಿಂದು ನಿದ್ದೆಗೆ ಶರಣಾಗಿದ್ದರೇ ಎಂಬುದನ್ನೂ ಈ ಆತ್ಮಶೋಧನಾ ಪ್ರಕ್ರಿಯೆ ವೇಳೆ ಪತ್ತೆ ಹಚ್ಚಲು ತೀರ್ಮಾನಿಸಲಾಗಿದೆ.

ಈ ಕುರಿತು ರದ್ದಿಗಾರರೊಂದಿಗೆ ಮಾತನಾಡಿದ ಮಾಜಿ ನಿಧಾನಿಗಳು, ಆತ್ಮ ಹತ್ಯೆ ಮಾಡಿಕೊಳ್ಳುವವರು ಅದಕ್ಕೆ ಮುನ್ನ ತಮ್ಮ ಹಾಗೂ ನೆರೆಮನೆಯ ರೈತರ ಆತ್ಮದ ಶೋಧನೆ ಮಾಡಿಕೊಂಡರೆ ಒಳಿತು ಎಂದು ಕರೆ ನೀಡಿದರು. ಈ ರೀತಿ ಮಾಡಿದರೆ, ತಾನು ಆತ್ಮಶೋಧನೆ ಮಾಡಿಕೊಳ್ಳುವಂತೆ ಬೇರೆಯವರು ನನಗೆ ಸಲಹೆ ನೀಡುವುದು ಉಳಿಯುತ್ತದೆ. ಮಾತ್ರವಲ್ಲದೆ, ರೈತರಿಂದಲೇ ಪ್ರಧಾನಿ ಗಾದಿಗೇರಿದ ತನಗೆ ರೈತರ ಆತ್ಮಗಳು ಮುಂದೆಂದಾದರೂ ಕಿರುಕುಳ ನೀಡಬಹುದಾದ ಸಾಧ್ಯತೆಗಳನ್ನೂ ನಿವಾರಿಸಬಹುದಾಗಿದೆ ಎಂದು ಅವರು ತರ್ಕ ಮಂಡಿಸಿದರು.

ಮಹಾರಾಷ್ಟ್ರದ ವಿದರ್ಭದಲ್ಲಿ ಪ್ರಧಾನಿಯವರು ಪರಿಹಾರ ಪ್ಯಾಕೇಜ್ ಘೋಷಿಸಿದ ತಕ್ಷಣವೇ, ಆತ್ಮವನ್ನು ಶೋಧಿಸಿಕೊಂಡ ರೈತರು, ಸರಕಾರದಿಂದ ಬರುವ ಪರಿಹಾರ ಧನದ ರೀತಿ ನೀತಿಗಳು, ವಿಳಂಬಗಳು, ನುಂಗಣ್ಣ ಅಧಿಕಾರಿಗಳ ಕಾಟ... ಇತ್ಯಾದಿ ಎಲ್ಲವನ್ನೂ ಕಂಡುಕೊಂಡಬಳಿಕ, ಪೈಪೋಟಿಗೆ ಬಿದ್ದವರಂತೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದನ್ನು ಇಲ್ಲಿ (ಚಿರ)ಸ್ಮರಣೆ ಮಾಡಿಕೊಳ್ಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಮಾಜಿ ನಿಧಾನಿಗಳು ಪಾಜಿ ಜೊತೆ ಸೇರಿದ್ದಾರಾ? ಯಾಕೆ ಅಂದರೆ ಪಾಜಿಗಳಿಗೆ ಆತ್ಮಗಳ ಹತ್ಯೆ ಬಗ್ಗೆ ಡಾಕ್ಟರೇಟ್ ಸಿಕ್ಕಿದೆಯಂತೆ.
  ಅಂದ ಹಾಗೆ ಮತ್ತೊಂದು ವಿಷಯಕ್ಕೆ ಸ್ಪಷ್ಟೀಕರಣ ಬೇಕಿತ್ತು. ಇಲ್ಲಿ ಯಾರ ಆತ್ಮವನ್ನು ಹತ್ಯೆ ಮಾಡಬೇಕಿತ್ತು. ಯಾರ ಆತ್ಮವನ್ನು ಶೋಧಿಸಬೇಕು. ತಮ್ಮದೇ ಆತ್ಮವನ್ನು ಶೋಧಿಸಬೇಕಾದರೆ, ತಾವು ಎಲ್ಲಿರಬೇಕಾಗುವುದು?

  ವಾರೆಯಲ್ಲಿ:
  ಪಾತರಗಿತ್ತಿ ಮದುವೆಯಲ್ಲಿ ಏನೇನು ತಿನಿಸು ಮಾಡಿದ್ರಂತೆ, ನಿಮಗೇನಾದರೂ ಪಾರ್ಸಲ್ ಬಂದಿದೆಯೇ? ಹಾಗೆ ಬಂದಿದ್ರೆ, ಎಲ್ಲವನ್ನೂ ಖಾಲಿ ಮಾಡಿದ್ರಾ ಅಥವಾ ಏನಾದ್ರೂ ಉಳಿಸಿದ್ದೀರೋ?

  ಪ್ರತ್ಯುತ್ತರಅಳಿಸಿ
 2. ಮಾಜಿ ನಿಧಾನಿಗಳಿಗೆ ಹಾಗು ಇತರ ಜಾರಕಾರಣಿಗಳಿಗೆ ಆತ್ಮ ಇದೆಯೊ ಇಲ್ಲವೊ ಎಂದು ಸಂಶೋಧನೆ ಮಾಡುವದು ಸರಿಯಾದ ಕ್ರಮ.

  ಪ್ರತ್ಯುತ್ತರಅಳಿಸಿ
 3. ಶ್ರೀನಿವಾಸರೆ,
  ಆತ್ಮಹತ್ಯೆ ಕುರಿತು ಡಾಕ್ಟರೇಟ್ ಪದವಿ ಪಡೆಯಲು Practical ಕ್ಲಾಸ್ ಇತ್ತೇ ಎಂಬುದನ್ನು ಸ್ಪಷ್ಟಪಡಿಸಿ.

  ತಮ್ಮ ಆತ್ಮ ಶೋಧ ಮಾಡಬೇಕಾದರೆ ನಾವು ಈ ಲೋಕದಿಂದ ಪ್ರವಾಸ ಆರಂಭಿಸಬೇಕಾಗುತ್ತದೆ.
  --------
  ಪಾತರಗಿತ್ತಿ ಮದುವೆಗೆ ಹೋಗಬೇಕೂಂತ ಇಲ್ಲಿ ಪತರಗುಟ್ಟಿದರೂ... ನಮ್ಮನ್ನು ಕಟ್ಟಿ ಹಾಕಿದ್ದರು. ಹಾಗಾಗಿ ಅವರ ಸ್ವೀಟ್ ಡ್ರೀಮ್ಸ್ ಸಿಹಿಯನ್ನೇ ಎಲ್ಲರಿಗೂ ಹಂಚಲಾಗುತ್ತಿದೆ.

  ಪ್ರತ್ಯುತ್ತರಅಳಿಸಿ
 4. ಸುನಾಥರೆ,
  ನೀವು ಈ ರೀತಿ ಬುಡಕ್ಕೇ ಕೈ ಹಾಕುವುದು ಸಮ್ಮತವಲ್ಲ... ಎಲ್ಲವನ್ನೂ ಶೋಧಿಸಿದರೆ ಜಾರಕಾರಣಿಗಳ ಗುಟ್ಟು ಬಯಲಾಗುತ್ತದೆ. ಮತ್ತು ಹಣ ಮಾಡುವ ದಂಧೆಗೆ (ಜಾರಕಾರಣ)ಇಳಿಯಬೇಕಿದ್ದರೆ ಆತ್ಮದ ಅಗತ್ಯವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಾದರೆ, ಕಬಳಿಸಲು ತೀವ್ರ ಪೈಪೋಟಿ ಎದುರಾಗುತ್ತದೆ ಎಂಬುದು ಜಾರಕಾರಣಿಗಳ ಕಳವಳ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D