ಬೊಗಳೆ ರಗಳೆ

header ads

ಮಾವಗಳಿಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ

(ಬೊಗಳೂರು ಮಾವಂದಿರ ಬ್ಯುರೋದಿಂದ)
ಬೊಗಳೂರು, ಮೇ 29- ಭಾರತದ ಮಾವಂದಿರಿಗೆ ವಿದೇಶದಲ್ಲಿ ಭರ್ಜರಿ ಬೇಡಿಕೆಯುಂಟಾಗಿದೆ ಎಂದು ಇಲ್ಲಿ ವರದಿಯಾಗಿರುವಂತೆಯೇ ಜಪಾನ್ ಕೂಡ ಭಾರತದಿಂದ ಮಾವಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ಈಗಾಗಲೇ ಅಮೆರಿಕಕ್ಕೆ ಭಾರತೀಯ ಮಾವರನ್ನು ಆಹ್ವಾನಿಸಿ ಅಲ್ಲಿ ಮಾವನ ಹಬ್ಬ ಆಚರಿಸಲಾಗಿದೆ. ಇದೀಗ ಮುಂದಿನ ಸರದಿ ಜಪಾನ್ ಆಗಿದ್ದು, ಅಲ್ಲಿಯೂ ಮಾವಂದಿರ ಪ್ರದರ್ಶನ, ಹಬ್ಬ, ಮಾರಾಟ ಇತ್ಯಾದಿ ನಡೆಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಮಕ್ಕಳಿಗೆ ಮದುವೆ ಮಾಡಿಸುವುದು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗತೊಡಗಿದೆ. ಹೀಗಾಗಿ ಭಾರತದಲ್ಲಿರುವ ಎಲ್ಲ ಹೆ.ಹೆ. ತಳಿಯ ಮಾವ ಮತ್ತು ಗಂ.ಹೆ. ತಳಿಯ ಮಾವರು ವಿದೇಶಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಲು ನಿರ್ಧರಿಸಿದ್ದಾರೆ. ಸರಕಾರವು ಕೂಡ ಈ ತಳಿಯ ಮಾವರನ್ನು ವಿದೇಶಕ್ಕೆ ಸಾಗಹಾಕಲು ಒಪ್ಪಿಗೆ ಸೂಚಿಸಿರುವುದು ಸಂತಸದ ಬೆಳವಣಿಗೆ ಎಂದು ಅಖಿಲ ಭಾರತ ಮಾವ ಕಳೆಗಾರರ ಸಂಘವು ಹರ್ಷ ವ್ಯಕ್ತಪಡಿಸಿದೆ. (*ಹೆ.ಹೆ.=ಹೆಣ್ಣು ಹೆತ್ತ, *ಗಂ.ಹೆ.=ಗಂಡು ಹೆತ್ತ)

ಭಾರತದಿಂದ ಮಾವಗಳನ್ನು ರಫ್ತು ಮಾಡಲಾಗುತ್ತಿದ್ದರೂ, ವಿದೇಶೀ ಜೀವನ ಶೈಲಿಗೆ ಅಲ್ಲಿನ ಮಾವಗಳು ಒಗ್ಗುವವೇ ಎಂಬುದು ಕಾದುನೋಡಬೇಕಾದ ಅಂಶ. ಯಾಕೆಂದರೆ ವಿದೇಶೀಯರು ಮಾವನ ಮಗಳನ್ನು ಅಥವಾ ಮಗನನ್ನು ಮದುವೆಯಾಗಿ ಒಂದೆರಡು ವರ್ಷ ಮಾತ್ರವೇ ರುಚಿ ನೋಡಿ ಎಸೆಯುವ ಪರಿಪಾಠ ಹೆಚ್ಚಾಗುತ್ತಿದೆ. ಒಂದೆರಡು ವರ್ಷದಲ್ಲೇ ಮಾವ ಹಾಗೂ ಅದರ ಜತೆಗೆ ಮಾವನ ಮಿಡಿ ಕೂಡ ಹುಳಿ- ಎಂಬುದು ಅವರ ಅರಿವಿಗೆ ಬಾರದಿದ್ದರೂ ಬಂದಂತೆ ನಟಿಸುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ನಡುವೆ, ಭಾರತದ ಮಾವಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಾದ ಕಾರಣ ಹೆಚ್ಚು ಹೆಚ್ಚು ಮಾವನ ಮ(ರ)ಗಳನ್ನು ಬೆಳೆಸಿ ಪೋಷಿಸಲು ಅಖಿಲ ಭಾರತ ಫಲಭರಿತ ಮಾವ ಬೆಳೆಗಾರರ ಸಂಘ ನಿರ್ಧರಿಸಿದೆ.

ಆದರೆ ಹೆಚ್ಚಿನ ಮಾವಗಳು ತಮ್ಮ ಮಿಡಿಗಳನ್ನು ವಿದೇಶಕ್ಕೆ ಮಾರಾಟ ಮಾಡಲು ಸಜ್ಜು ನಡೆಸುತ್ತಿರುವುದು ಎಲ್ಲರ ಹುಬ್ಬೇರಿಸಲು ಕಾರಣವಾಗಿರುವುದು ಕೂಡ ಒಂದೆಡೆ ಆತಂಕ ಸೃಷ್ಟಿಸತೊಡಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಸುದ್ದಿಯನ್ನು ವಿಡಂಬನಾತ್ಮಕ ಶೈಲಿಯಿಂದ ನೋಡುವ ನಿಮ್ಮ ಬುದ್ದಿ ಶಕ್ತಿಗೆ 'ಹ್ಯಾಟ್ಸ್-ಅಫ್'. ವಿಷಯವಸ್ತುವೊಂದನ್ನು ಹಾಸ್ಯಭರಿತವಾಗಿ ಅಕ್ಷರಿಕರಿಸುವ ನಿಮ್ಮ ಕಲೆ ಓದುಗರನ್ನು ತಮ್ಮತ್ತ ಸೆಳೆದುಕೊಳ್ಳುತ್ತದೆ.
  ಉಳಿದೆಲ್ಲ ಲೆಖನಗಳು ಸಹ ಚೆನ್ನಾಗಿ ಮೂಡಿಬಂದಿವೆ, ಇಂತೆಯೆ ಈ ಲೇಖನದಲ್ಲಿ ಮಾವಂದಿರು(ಮಾವಿನ ಹಣ್ಣು ಮತ್ತು ಹೆಣ್ಣುಹೆತ್ತ ಮಾವ)ಎರಡನ್ನು ಹೋಲಿಸಿ, ಮಾವುಗೆ ವಿದೇಶದಲ್ಲಿ ಏರುತ್ತಿರುವ ಬೇಡಿಕೆ ಕುರಿತು ಚೆನ್ನಾಗಿ, ಹಾಸ್ಯಭರಿತವಾಗಿ ವಿವರಿಸಿದ್ದಿರಿ.
  ನಿಮ್ಮ ಬರವಣಿಗೆ ಸದಾ ಹೀಗೆ ಇರಲಿ ಸಾರ್.

  ಪ್ರತ್ಯುತ್ತರಅಳಿಸಿ
 2. ಮೊದಲನೆಯ ಹಾಗು ಎರಡನೆಯ ದರ್ಜೆಯ ಮಾವನ ಮಿಡಿಗಳು ಮಾತ್ರ ಅಮೇರಿಕಾಕ್ಕೆ ರಫ್ತು ಆಗುತ್ತಿವೆ;ಮೂರನೆಯ ದರ್ಜೆಯ ಮಾವನ ಮಿಡಿಗಳು ಭಾರತೀಯರ ಸೇವನೆಗೆ ಸದಾ ಲಭ್ಯವಿವೆ.ಆತಂಕಕ್ಕೆ ಏನೂ ಕಾರಣವಿಲ್ಲ,ಅಸತ್ಯಾನ್ವೇಶಿಗಳೆ!

  ಪ್ರತ್ಯುತ್ತರಅಳಿಸಿ
 3. ನಮಸ್ಕಾರ ಅಸತ್ಯಿಗಳಿಗೆ !

  ಎನ್ರೀ..ನಾನೇನೋ ಪೋಲಿಸ್ ಮಾವನ ಬಗ್ಗೆ ಹೇಳ್ತಾ ಇದೀರಾ ಅಂದುಕೊಂಡಿದ್ದೆ..ನೋಡಿದರೆ ಇದು ಬೇರೆ ಮಾವು..

  ಅಂದಾಗೆ ಇಲ್ಲಿಂದ ಹೋದ ತಳಿ..ಅಲ್ಲಿನ ತಳಿಗಳೊಂದಿಗೆ ಬೆರೆತು..ಬೇರೊಂದು ತಳಿಯಾದಾಗ..ಅದು ಯಾವ ತಳಿಗೆ ಸೇರುತ್ತೆ?

  ಪ್ರತ್ಯುತ್ತರಅಳಿಸಿ
 4. ಕಲ್ಯಾಣ ಕಿರಣ ಅವರಿಗೆ ಸ್ವಾಗತ
  ಬರವಣಿಗೆ ಹಾಸ್ಯಭರಿತವಾಗಿದೆ ಎಂದು ಹೇಳಿದ್ದೀರಿ. ಇನ್ನು ಮುಂದೆ ಈ ಬಗ್ಗೆ ಎಚ್ಚರ ವಹಿಸಲಾಗುತ್ತದೆ ಎಂದು ಭರವಸೆ ನೀಡುತ್ತೇವೆ.
  ನೀವು ಇದೇ ರೀತಿ ಆಗಾಗ್ಗೆ ಬಂದು ಉಗಿಯುತ್ತಾ ಇರಿ ಎಂದು ಕೋರಿಕೆ.

  ಪ್ರತ್ಯುತ್ತರಅಳಿಸಿ
 5. ಸುನಾಥರೆ,
  ನೀವು ಹೇಳಿದ ಮೂರನೇ ದರ್ಜೆಯನ್ನು ನಾವು ಇಂಗ್ಲಿಷಿಗೆ ಥರ್ಡ್ ಕ್ಲಾಸ್ ಎಂದು ಭಾಷಾಂತರಿಸಲು ಇಚ್ಛಿಸುವುದಿಲ್ಲ. ಆದರೆ ಈ ಬಗ್ಗೆ ಅಸತ್ಯಾನ್ವೇಷಿಗೆ ಆತಂಕಕ್ಕೆ ಕಾರಣವಿಲ್ಲ ಎಂದು ಹೇಳಿರುವುದು ನಮ್ಮ ಓದುಗ ಬಳಗದಲ್ಲಿ ಶಂಕೆ ಮೂಡಲು ಕಾರಣವಾಗಿದೆ. ಕೂಡಲೇ ಸ್ಪಷ್ಟನೆ ನೀಡಲು ಕೋರಿಕೆ.

  ಪ್ರತ್ಯುತ್ತರಅಳಿಸಿ
 6. ಶಿವ್ ಅವರೆ

  ಪೋಲಿ ಮಾವುಗಳ ಬಗ್ಗೆ ಬರೆದಷ್ಟೂ ಇರುತ್ತವೆ. ಈ ಬಡಪಾಯಿ ಮಾವಗಳ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

  ನಿಮ್ಮ ಎರಡನೇ ಪ್ರಶ್ನೆಗೆ ಉತ್ತರ ಸಂಶೋಧಿಸಲು ಈಗಿನ ಪರಿಸ್ಥಿತಿಯಲ್ಲಿ ನೀವು ಖಂಡಿತಾ ಪ್ರಯತ್ನಿಸುವುದಿಲ್ಲ ಎಂಬ ಭರವಸೆ ನಮಗಿದೆ. ಆದರೂ ನೀವು ನೀವು "ಅಲ್ಲಿ"ಯೇ ಇರುವುದರಿಂದ ನಿಮಗೆ ಈ ಮಿಶ್ರತಳಿಗಳು ನೋಡಲು ಸಾಕಷ್ಟು ಸಿಗಬಹುದು ಎಂಬುದು ನಮಗೂ ತಿಳಿದಿದೆ. ಕೂಡಲೇ ವಿಶ್ಲೇಷಿಸಿ ಬರೆಯತಕ್ಕದ್ದು.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D