ಬೊಗಳೆ ರಗಳೆ

header ads

ಮಾನವ ಶಕ್ತಿ ಕೊರತೆ : ಗಾರ್ದಭರಲ್ಲಿ ಮಿಂಚಿನ ಸಂಚಾರ

(ಬೊಗಳೂರು ಕಳವಳ ಬ್ಯುರೋದಿಂದ)
ಬೊಗಳೂರು, ಮೇ 22- ಇತ್ತೀಚಿನ ವರ್ಷಗಳಲ್ಲಿ ವೇತನ ಮಟ್ಟ ಮತ್ತು ಜನರ ಜೀವನ ಮಟ್ಟ ಹೆಚ್ಚುತ್ತಾ ಹೋದಂತೆ ಮಾನವೀಯತೆಯ ಮಟ್ಟವು ಕಳವಳಕಾರಿಯಾಗಿ ಕೆಳಗೆ ಬಂದಿರುವುದು ಬೊಗಳೆ ರಗಳೆಗೆ ಸಂತಸ ತಂದಿರುವ ವಿಚಾರವಾಗಿದೆ.

ಈಗೀಗ ಹಲವಾರು ಮಾರಣ ಹೋಮಗಳು ನಡೆಯುತ್ತಾ, ದೇಶದಲ್ಲಿ ರಕ್ತದ ಸುಭಿಕ್ಷೆಯಾಗುತ್ತಿದ್ದು, ಮಾನವ ಜೀವಗಳನ್ನೆಲ್ಲಾ ಹೊಡೆದು ಉರುಳಿಸಿ, ಈ ಭೂಮಂಡಲದಲ್ಲಿ ಪ್ರಾಣಿಗಳು ಮಾತ್ರವೇ ಉಳಿಯುವಂತೆ ಆಗುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದು ಎಲ್ಲೋ ಅವಿತುಕೊಂಡಿರುವ ಬೊಗಳೆ ರಗಳೆ ಬ್ಯುರೋದ ಪ್ರಾಣಿ-ಪ್ರಿಯ ವರದಿಗಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ, ಭಾರತಕ್ಕೆ ಮಾನವ ಶಕ್ತಿ ಕೊರತೆಯಾಗುತ್ತಿರುವ ಕುರಿತು ಇಲ್ಲಿ ಪ್ರಕಟವಾದ ವರದಿಯಿಂದ ತೀವ್ರ ಆನಂದತುಂದಿಲ ಆಗಿರುವ ಗಾರ್ದಭ ಸಮಾಜವು, ಇನ್ನು ಮೇಲಾದರೂ ಗಾರ್ದಭ ಶಕ್ತಿಗೆ ಉತ್ತಮ ಬೆಲೆ ದೊರೆತೀತು ಎಂದು ಆಶಾವಾದ ವ್ಯಕ್ತಪಡಿಸಿದೆ.

ಇಷ್ಟರವರೆಗೆ ಮಾನವರನ್ನು ಹೀಯಾಳಿಸಲು "ಕತ್ತೆ ದುಡಿದಂತೆ" ದುಡಿಯುತ್ತಾರೆ ಎಂಬ ಪದಸಮೂಹವನ್ನು ಪ್ರಯೋಗಿಸುತ್ತಿದ್ದರು. ಈಗ ಮನುಷ್ಯರಿಗೆ ಬುದ್ಧಿ ಬಂದಂತಿದೆ. ಕಚೇರಿಯಲ್ಲಿ 12 ಗಂಟೆಗೂ ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತು ಬಾಹ್ಯ ಜಗತ್ತನ್ನೇ ಮರೆಯುವ ಮಾನವ ಸಮುದಾಯಕ್ಕೆ ದುಡಿಯುವುದು ಅಂದರೆ ಏನು ಎಂಬುದರ ಅರಿವಾಗಿದೆ. ಇದೇ ಕಾರಣಕ್ಕಾಗಿ ಈಗ ಮಾನವ ಶಕ್ತಿ ಕೊರತೆಯ ಹುಯಿಲೆಬ್ಬಿಸುತ್ತಿದೆ ಎಂದು ಹೇಳಿರುವ ಅಖಿಲ ಭಾರತ ಗಾರ್ಧಭ ಸಮಾಜದ ಅಧ್ಯಕ್ಷರು, ಈಗಾಗಲೇ ನಮ್ಮ ಸಮುದಾಯದಲ್ಲಿ ನಿರಂತರವಾಗಿ ಸುಮ್ಮನೇ ನಿಂತುಕೊಂಡು, ಎಲ್ಲೋ ನೋಡುತ್ತಾ ಏನೋ ಯೋಚಿಸುತ್ತಿರುವವರಿಗೆ "ಮಾನವರಂತೆ ಯೋಚಿಸುತ್ತಿದ್ದಾನೆ ನೋಡು" ಅಂತ ಹೀಯಾಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯು ಒಂದು ಗಾರ್ದಭಾಂದೋಲನದ ರೂಪದಲ್ಲಿ ನಡೆಯಲಿದೆ ಎಂದು ತಿಳಿಸಿರುವ ಅವರು, ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸ.... ಅಲ್ಲಲ್ಲ... ಕಾಲು.... ಅಲ್ಲಲ್ಲ ಹಿಂಗಾಲು ಜೋಡಿಸಬೇಕು ಎಂದು ತಮ್ಮ ಸಮುದಾಯದ ಅತ್ಯಂತ ಪ್ರಬಲ ಆಯುಧಕ್ಷೇತ್ರ ಎಂದೇ ಪರಿಗಣಿಸಲ್ಪಟ್ಟಿರುವ ದೇಹದ ಭಾಗವನ್ನು ನಿಖರವಾಗಿ ಉಲ್ಲೇಖಿಸುತ್ತಾ ಹೇಳಿದರು.

ಇಂದಿನ ದಿನಗಳಲ್ಲಿ ಕಂಪ್ಯೂಟರ್ ತಿಳಿಯದಿದ್ದವರು ಮೂಲೆಗುಂಪಾಗುತ್ತಿದ್ದಾರೆ. ಪದವಿ ಪೂರೈಸಿದವರು ಆಟೋರಿಕ್ಷಾ ಓಡಿಸುತ್ತಲೋ, ಚಹಾದಂಗಡಿ ಇರಿಸಿಯೋ ಕಾಲ ಕಳೆಯುತ್ತಿದ್ದರೆ, ಕಂಪ್ಯೂಟರ್ ಕಲಿತವರ ಬೆರಳುಗಳು ಜಡ್ಡುಗಟ್ಟಿ ಹೋಗುತ್ತಿವೆ ಎಂದಿರುವ ಅವರು, ಈ ಬೆರಳುಗಳ ಜಡ್ಡುಗಟ್ಟುವಿಕೆಗೆ ಕಾಲೇಜು ಹಂತದಲ್ಲೇ ಚಾಲನೆ ದೊರೆಯುತ್ತಿದೆ ಎಂದು ತಮ್ಮ ಸಂಶೋಧನಾ ವರದಿಯನ್ನು ಮುಂದಿಟ್ಟಿದ್ದಾರೆ.

ಅದು ಹೇಗೆ ಹಾಗನ್ನುತ್ತೀರಿ ಎಂದು ಏನೂ ಅರಿಯದವರಂತೆ ಕೇಳಿದ ವರದಿಗಾರರಿಗೆ ಉತ್ತರಿಸಿದ ಅವರು, ಮೊಬೈಲ್ ಫೋನಿನಲ್ಲಿ ಎಸ್ಸೆಮ್ಮೆಸ್ ಕಳಿಸುತ್ತಲೇ ತಮ್ಮ ಕೈಬೆರಳುಗಳನ್ನು ಹಿಂದಿನ ಸಿನಿಮಾಗಳಲ್ಲಿ ಕಾಣಿಸುತ್ತಿದ್ದ ಕುಷ್ಠರೋಗಿಗಳ ಕೈಗಳನ್ನು ನೆನಪಿಸುವಂತೆ ಜಡ್ಡುಗಟ್ಟಿಸಿಕೊಂಡಿರುವ ಯುವ ಸಮುದಾಯವು, ಕಾಲೇಜು ಬಿಟ್ಟ ತಕ್ಷಣ ಕಂಪ್ಯೂಟರ್ ಮುಂದೆ ಕೂರಲು ಸರ್ವ ಸನ್ನದ್ಧತೆ ನಡೆಸಿಕೊಳ್ಳುತ್ತಿದೆ ಎಂಬ ಅಮೂಲ್ಯ ಶೋಧವೊಂದನ್ನು ಬಯಲುಗೊಳಿಸಿದರು.

ಈ ಮಧ್ಯೆ Horse Power ಎಂಬ ಅಭಿದಾನದಿಂದ ವಿಶ್ವವಿಖ್ಯಾತವಾಗಿರುವ ಹಯ ಸಮುದಾಯವೂ ಧುತ್ತನೆ ಮೇಲೆದ್ದು ನಿಂತಿರುವುದು ಬೊಗಳೆ ರಗಳೆಯ ಪ್ರಾಣಿಪ್ರಿಯತೆಯ ಹೋರಾಟದ ಸಾಲಿಗೆ ಮತ್ತೊಂದು ಸೇರ್ಪಡೆಯಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸತೊಡಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ngnjafವದರಿಗಾರರೇ, ಎಲ್ಲಿ ನಿಮ್ಮ ಕೈ ತೋರಿಸಿ. ನಿಮ್ಮ ಬೆರಳುಗಳೆಲ್ಲಾ ಏಕೆ ಹೀಗೆ ಸೆಟೆದುಕೊಂಡಿವೆ.
  ಓಹ್! ಈಗರ್ಥವಾಯಿತು, ಬೊ-ರದಲ್ಲಿ ಸಕ್ರಿಯತೆ ಯಾಕೆ ಕಡಿಮೆಯಾಗಿದೆ ಎಂದು. ಇಲ್ಲಿ ಬರೆದಿರುವ ವದರಿ ನಿಮ್ಮದೇ ಕತ್ತೆಯಲ್ಲವಾ? ಕ್ಷಮಿಸಿ ಕತೆಯಲ್ಲವಾ?

  ಇಂದಿನ ವರದಿ ಸತ್ಯಕ್ಕೆ ಅತಿ ಹತ್ತಿರವಾದದ್ದು ಎಂದು ಗಂಟೆ ಕಟ್ಟಿಕೊಂಡು ಹೇಳಲಿಚ್ಛಿಸುವೆವು.

  ಪ್ರತ್ಯುತ್ತರಅಳಿಸಿ
 2. ಬೆಂಗಳೂರಿನ ಶ್ವಾನಪ್ರಿಯರು ಹಾಗು ಪ್ರಾಣಿ ದಯಾ ಸಂಘದವರು ಮಾನವ ಜೀವನಕ್ಕಿಂತ ಪ್ರಾಣಿಗಳ ಜೀವನ ಹೆಚ್ಚು ಅಮೂಲ್ಯವಾದದ್ದೆಂದು ಕಂಡು ಹಿಡಿದಿದ್ದಾರೆ. ಇದು ಎಲ್ಲಾ ಪ್ರಾಣಿಗಳಿಗೆ,ಮುಖ್ಯವಾಗಿ ನಾಯಿಗಳಿಗೆ ಹಾಗು ಕತ್ತೆಗಳಿಗೆ ಸಂತೋಷ ತಂದಿದೆ. ತಮ್ಮ ಸಂತೋಷ ಸೂಚಿಸಲು ಈ ಸಲದ ಅಗಸ್ಟ್ ೧೫ರ ಮಧ್ಯರಾತ್ರಿ ಎಲ್ಲ ಶ್ವಾನಗಳು ಹಾಗು ಗಾರ್ದಭಗಳು ಒಟ್ಟಾಗಿ ರಾಗಮಾಲಿಕೆ ಏರ್ಪಡಿಸಿವೆ.ವರದಿ ಮಾಡಲು ಮರೆಯ ಬೇಡಿರಿ.

  ಪ್ರತ್ಯುತ್ತರಅಳಿಸಿ
 3. ಶ್ರೀನಿವಾಸರೆ
  ಒದರಿಗಾರಿಕೆ ಸತ್ಯಕ್ಕೆ ಹತ್ತಿರವಾಗಿದೆ ಎನ್ನುತ್ತಾ ಮಾನ ಹರಾಜು ಹಾಕಲು ಹೊರಟಿರುವುದಕ್ಕೆ ಧನ್ಯವಾದಗಳು.

  ಇದು ನಮ್ಮ ಕತ್ತೆ ಗೊತ್ತಲ್ಲಾ....? ಅದರ ಹಿಂಗಾಲು ಕೂಡ ಗಟ್ಟಿಯಾಗಿದೆ ಎಂದು ರೇಗಿಸುತ್ತಿದ್ದೇವೆ.

  ಪ್ರತ್ಯುತ್ತರಅಳಿಸಿ
 4. ಸುನಾಥರೆ,
  ನಿಮ್ಮ ಸಂಯೋಜನೆಯಲ್ಲಿ ನಡೆಯಲಿರುವ ರಾಗಮಾಲಿಕೆಗೆ ದಯವಿಟ್ಟು ಬೊಗಳೆ ರಗಳೆ ವದರಿಗಾರರಿಗೆ ಆಹ್ವಾನ ನೀಡಬಾರದೆಂದು ಬೇಡಿಕೊಳ್ಳುತ್ತಿದ್ದೇವೆ. ಯಾಕೆಂದರೆ ಮರುದಿನ ಜಾರಕಾರಣಿಗಳ ಭಾಷಣವನ್ನು ಸರಿಯಾಗಿ ಕೇಳಿಸಿಕೊಂಡು ವರದಿಮಾಡಬೇಕಿದೆ.!!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D