(ಬೊಗಳೂರು ಎಚ್ಚೆತ್ತ ಬ್ಯುರೋದಿಂದ)
ಬೊಗಳೂರು, ಮೇ 15- ವಿಶ್ವಾದ್ಯಂತ ಪತ್ರಿಕೆಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ತೀರಾ ಅನಿಯತಕಾಲಿಕವಾಗುತ್ತಿರುವ ಬೊಗಳೆ ರಗಳೆ ಪತ್ರಿಕೆಯೂ ತನ್ನ ಓದುಗರ ಸಂಖ್ಯೆಯನ್ನು ಒಂದಕ್ಕೆ ಏರಿಸಿಕೊಂಡಿದೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಟಿವಿ, ಇಂಟರ್ನೆಟ್ಟುಗಳು ಹೆಚ್ಚು ಜನರನ್ನು ತಲುಪುತ್ತಿದ್ದರೂ, ವರ್ತಮಾನ ಪತ್ರಿಕೆಗಳ ಬೇಡಿಕೆ ಇಳಿದಿಲ್ಲ. ಆದರೆ ಇಂಟರ್ನೆಟ್ಟೂ ಅಲ್ಲದ, ಟೀವಿಯೂ ಅಲ್ಲದ ಮತ್ತು ಮುದ್ರಿತ ಪತ್ರಿಕೆಯ ಸಾಲಿಗೂ ಸೇರದ ತ್ರಿಶಂಕುವಿನಂತಿರುವ ಬೊಗಳೆ ರಗಳೆಯು, ವರ್ತಮಾನ ಪತ್ರಿಕೆಗಿಂತಲೂ ಭವಿಷ್ಯದ ಪತ್ರಿಕೆ ಎಂದು ಹಣೆಪಟ್ಟಿ ಹಚ್ಚಿಕೊಳ್ಳಲು ತೀವ್ರ ಹೆಣಗಾಟ ನಡೆಸಿರುವುದನ್ನು ಇಲ್ಲಿ ಓದುಗರು ಗಮನಿಸಿದ್ದಿರಬಹುದು.

ಜಾಗತಿಕ ಮಟ್ಟದಲ್ಲಿ ಪತ್ರಿಕೆಗಳ ಬೇಡಿಕೆಯು ಶೇ. 1.9ರಷ್ಟು ಏರಿದೆ ಎಂದು ವರದಿ ತಿಳಿಸಿದ್ದು, ಇದು ಸುಳ್ಳು, ಈ ಏರಿಕೆಯ ಪ್ರಮಾಣವು 0.00000000001ರಷ್ಟು ಹೆಚ್ಚಿದೆ. ಬೊಗಳೆ ರಗಳೆ ಬ್ಯುರೋವನ್ನು ಈ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲಗಿರುವುದರಿಂದಾಗಿ ಈ ಪ್ರಮಾದ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಆದರೆ ಜನಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಪತ್ರಿಕಾ ಓದುಗರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿರುವುದರಿಂದ ತೀವ್ರ ಕಳವಳಗೊಂಡಿರುವ ಬೊಗಳೆ ರಗಳೆ ಬ್ಯುರೋ ಸಂಪಾದಕರು, ಹಾಗಿದ್ದರೆ, ಪತ್ರಿಕೆಗಳನ್ನು ಮುಚ್ಚಿಬಿಟ್ಟರೆ ಜನಸಂಖ್ಯೆ ಇಳಿಮುಖವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರಲ್ಲದೆ, ಬೊಗಳೆ ರಗಳೆಯನ್ನೇ ಮುಚ್ಚಿಸಲು ಜನಸಂಖ್ಯಾ ವಿರೋಧಿಗಳು ಸಂಚು ಹೂಡಬಹುದೆಂಬ ಭೀತಿ ವ್ಯಕ್ತಪಡಿಸಿದ್ದಾರೆ.

ಹೇಗಿದ್ದರೂ, ಈ ವರದಿಯಲ್ಲಿ "ಎಲ್ಲ ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚುತ್ತಿದೆ" ಎಂದು ಸಾಮೂಹಿಕವಾಗಿ ಹೇಳಿರುವುದರಿಂದ ಅದರಲ್ಲಿ ಬೊಗಳೆ ರಗಳೆಯೂ ಸೇರಿಕೊಂಡಿರಬಹುದೆಂದು ಅಮಾನ್ಯ ಸೊಂಪಾದಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

4 Comments

ಏನಾದ್ರೂ ಹೇಳ್ರಪಾ :-D

 1. ಹಸಿ ಸುಳ್ಳು!!!

  ನಾನೇ ಮೂರು ನಾಲ್ಕು ಹೆಸರುಗಳಲ್ಲಿ - ದಿನಕ್ಕೆ ಇಪ್ಪತ್ತು ಸಲ ಬೊಗಳೆ - ರಗಳೆ ಕೇಳೋಕ್ಕೆ, ನೋಡೋಕ್ಕೆ, ಓದೋಕ್ಕೆ (ನನಗೆ ಓದೋಕ್ಕೆ ಬರತ್ತಾ ಅಂತ ಮಾತ್ರ ಕೇಳ್ಬೇಡಿ) ಬರ್ತಿರ್ತೀನಿ. ಈ ವರದಿಯಲ್ಲಿ ನೋಡಿದ್ರೆ ಒಬ್ಬರ ಗಣತಿಯಾಗಿದೆ ಎಂದು ಹೇಳಿದ್ದಾರೆ. ನಾನೂ ಇವರ ಹಾಗೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಅಂತಾನಾ? ರೀ, ಬೊಗಳೆ ಅಣ್ಣ ಮತ್ತು ರಗಳೆ ತಮ್ಮ ಅವ್ರೇ, ನಿಮ್ಮಾಟ ನನ್ನ ಹತ್ರ ನಡೆಯೋಲ್ಲ. ನೀವೇ ಲೆಕ್ಕಕ್ಕಿಲ್ಲ ಬರೇ ಆಟಕ್ಕಿರೋದು. ನಾನೇ ಲೆಕ್ಕಕ್ಕಿರೋದು - ನಿಮ್ಮ ಮೇಲೆ ಇದೀಗಲೇ ಪತ್ರಿಕಾ ಸಮುದಾಯಕ್ಕೆ ದೂರನ್ನು ನೀಡುತ್ತಿರುವೆ.

  ReplyDelete
 2. "ಅಸತ್ಯಮೇವ ಜಯತೆ" ಎನ್ನುವ ಧ್ಯೇಯವಾಕ್ಯವಿರುವ "ಬೊಗಳೆ-ರಗಳೆ"ಯ ಪ್ರಸಾರ ಸಂಖ್ಯೆ ಈ ಕಲಿಯುಗದಲ್ಲಿ ಹೆಚ್ಚುವದು ಸಹಜ.ಪತ್ರಿಕೆಗಳ ಪ್ರಸಾರವನ್ನು ಲೆಕ್ಕಿಸಿದವರೂ ಸಹ ಬುರುಡೆ ಬಿಟ್ಟಿರಬಹುದು. ನೀವು ಧೈರ್ಯವಾಗಿ ಹಿನ್ನಡೆಯಿರಿ; ಜನತೆ ನಿಮ್ಮೊಂದಿಗೆ ಬಂದೇ ಬರುತ್ತದೆ. ಮುನ್ನಡೆಯಲು ಹೋಗಬೇಡಿರಿ; ಕಾಣದ ಗುಂಡಿಯಲ್ಲಿ ಬೀಳಬಹುದು.

  ReplyDelete
 3. ಶ್ರೀನಿವಾಸರೆ
  ನಿಮ್ಮ ಹಿಟ್ಟುಗಳನ್ನೆಲ್ಲಾ ಒಟ್ಟುಗೂಡಿಸಿದ್ದೇವೆ. ಕೆಟ್ಟು ಹೋಗದಂತೆ ಕಾಪಾಡುತ್ತಿದ್ದೇವೆ.

  ನೀವು ಪತ್ರಿಕಾ ಸಮುದಾಯಕ್ಕೆ ದೂರು ನೀಡಲು ನಿರ್ಧರಿಸಿರುವುದು ಕೇಳಿ ತುಂಬಾ ಸಂತೋಷವಾಯಿತು. ಹೀಗೇ ಮುಂದುವರಿಯುತ್ತಿರಿ.

  ReplyDelete
 4. ಸುನಾಥರೆ
  ಹಿನ್ನಡೆಯಬೇಕು ಎಂದು ಈ ಜಮಾನದಲ್ಲಿ ಯಾರೂ ಹೇಳುತ್ತಿಲ್ಲ. ಎಲ್ಲರೂ "ಹಿಂದುಳಿದವರು ಮುಂದೆ ಬರಬೇಕು" ಅದಕ್ಕೆ ಖೋಟಾವೇ ಮಾರ್ಗ ಎನ್ನುವವರೇ. ನೀವಾದರೂ ಹಿನ್ನಡೆಯುವಂತೆ ಹೇಳಿ ನಮ್ಮನ್ನು ವಾನರರನ್ನಾಗಿಸಿದ್ದೀರಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post