(ಬೊಗಳೂರು ಮಕ್ಕಳಾಟ ಬ್ಯುರೋದಿಂದ)
ಬೊಗಳೂರು, ಏ.10- ಮುಖ್ಯಮಂತ್ರಿ "ಕುಮಾರ"ಸ್ವಾಮಿ ಅವರನ್ನು ಮಕ್ಕಳ ಸಾಲಿಗೆ ಸೇರಿಸಿರುವ ತಮಿಳುನಾಡಿನ ಹಿರಿಯ ಕರುಣಾಜನಕನಿಧಿ ಅವರ ಕ್ರಮ ಸಮರ್ಥನೀಯ ಎಂದು ಹೇಳಿರುವ ವಿರೋಧ ಪಕ್ಷಗಳು, ಮಕ್ಕಳಾಟ ಆಡಬೇಕಿದ್ದವರು ಬಾಲಕಾರ್ಮಿಕರಂತೆ ದುಡಿಯುತ್ತಿದ್ದಾರೆ ಎಂದು ಆರೋಪಿಸಿವೆ.

ಈ ಕಾರಣಕ್ಕೆ, ಮಣ್ಣಿನ ಮಗನ "ಕುಮಾರ"ನ ಮೇಲೆ ಬಾಲಕಾರ್ಮಿಕತನ ನಿಷೇಧ ಕಾಯ್ದೆಯ ಅನುಸಾರ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಇಷ್ಟು ಸಣ್ಣ ವಯಸ್ಸಿಗೇ ಅವರು ಚಾಣಕ್ಯ ತಂತ್ರ ರೂಪಿಸಿ ವಿರೋಧ ಪಕ್ಷ ಬಿಜೆಪಿಯೊಂದಿಗೆ ಜತೆ ಸೇರಿ ಅಧಿಕಾರಕ್ಕೇರಿದ್ದಾರೆ. ಸಣ್ಣ ಪ್ರಾಯದಲ್ಲೇ ಇಂಥಹ ಮಕ್ಕಳಾಟಿಕೆ ಪ್ರದರ್ಶಿಸಿದರೆ, ಇನ್ನು ತಮ್ಮ ಪ್ರಾಯಕ್ಕೆ ಬಂದಾಗ ಅವರು ಏನೆಲ್ಲಾ ಮಾಡಬಹುದು ಎಂದು ಮೂಗಿನ ಮೇಲೆ ಎರಡೂ ಬೆರಳಿಟ್ಟಿರುವ ವಿರೋಧಿಗಳು, ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ಚಿವುಟದಿದ್ದರೆ, ವೃದ್ಧರಿಗೆ ರಾಜಕಾರಣ ಮಾಡುವ ಅವಶ್ಯಕತೆಯೇ ಎದುರಾಗದಿರುವ ಭೀತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ತಾವರೆಯನ್ನು ಮಹಿಳೆಯ ತಲೆ ಮೇಲಿರುವ ಬೈಹುಲ್ಲಿನ ಮೇಲಿಟ್ಟು ಬೆಳೆಸುತ್ತಿರುವ "ಕುಮಾರ", ತಮ್ಮ ಅಧಿಕಾರಾವಧಿ ಕೊನೆಗೊಳ್ಳುತ್ತಿರುವ ಹಂತ ತಲುಪಿರುವ ಅವಧಿಯಲ್ಲೇ ಇಂಥ "ತ್ಯಾಗ"ಕ್ಕೆ ಸಿದ್ಧರಾಗಿರುವುದರಿಂದ ಕುಮಾರಲೀಲೆಯ ಮತ್ತೊಂದು ಅಧ್ಯಾಯ ತೆರೆದುಕೊಳ್ಳಲಿದೆ ಎಂದು ಬೊಗಳೆ ರಗಳೆ ಬ್ಯುರೋದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಕಿಡಿ ಸ್ಪಷ್ಟನೆ: 1968ರಿಂದ ಇದುವರೆಗೆ ಕಾವೇರಿಯನ್ನು ಒಪ್ಪಿಸಬೇಕೆಂದು 10 ಮಂದಿ ಕರ್ನಾಟಕ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದರೂ, ಇದುವರೆಗೆ ಯಾರು ಕೂಡ ಈ ರೀತಿ ಮಕ್ಕಳಂತೆ ಆಟವಾಡುತ್ತಿರಲಿಲ್ಲ. ತಾನು ಇನ್ನೂ ಹತ್ತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಆಶಾವಾದ ವ್ಯಕ್ತಪಡಿಸಿರುವ 90ರ ಹರೆಯದ ಕಿಡಿ, ತನ್ನ ವಯಸ್ಸಿಗಾದರೂ ಆತ ಬೆಲೆ ಕೊಡಬೇಡವೇ? ಇದಕ್ಕಾಗಿಯೇ ತಾನು ಆತನನ್ನು ಮಕ್ಕಳಾಟಿಕೆ ಮಾಡುತ್ತಿದ್ದಾರೆ ಎಂದಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

2 Comments

ಏನಾದ್ರೂ ಹೇಳ್ರಪಾ :-D

  1. ಕರುಣಾಜನಕರ ಮಾತು ಸರಿಯಾಗಿಯೇ ಇದೆ. ಅವರ ಮಿತ್ರ ವೇದಣ್ಣನವರ ಮಗನಲ್ವೇ ಕುಮಾರು :o. ಅಂದ ಹಾಗೆ ಕುಮಾರು ಮೂಗಿನೊಳಗೆ ಬೆರಳಿಟ್ಟದ್ದೂ ನಿಮಗೆ ಗೊತ್ತಾಗಿ ಹೋಯಿತೇ? ಛೇ! ಯಾರಿಗೂ ಹೇಳ್ಬೇಡಿ, ಸಪ್ಪೆಯಾದ ಬೆರಳನ್ನು ಚೀಪಿ ಬೇಜಾರಾಗಿದೆ ಎಂದು ಆಗಾಗ ಮೂಗಿನೊಳಗೆ ಬೆರಳನ್ನು ಆಡಿಸ್ತಿದ್ರು. ಅದನ್ನೂ ಬಹಿರಂಗ ಮಾಡಿದ ನಿಮ್ಮ ಮೇಲೆ ಯಾಕೆ ಬಾಲ ಕಾರು ಮಿಕ ನಿಷೇಧ ಕಾಯ್ದೆ ಹೇರಬಾರದು! (ಯಾಕೇಂದ್ರೆ ಮಕ್ಕಳ ಆಟವನ್ನು ನೋಡಿ ಆಡಿಕೊಳ್ಳುವವರೂ ಮಕ್ಕಳೇ ಎಂಬುದು ನಮ್ಮ ಬೀರುವಿನ ಅಂಬೋಣ)

    ReplyDelete
  2. ಶ್ರೀನಿವಾಸರೆ
    ಅಂದರೆ ಕರು ನಾಟಕದಲ್ಲಿ ಅಧಿಕಾರವೆಂಬೋ ಬೆರಳು ಚೀಪಿ ಚೀಪಿ ಸಪ್ಪೆಯಾಗಿದೆ, ಹೇಗಿದ್ದರೂ ಹಸ್ತಾಂತರಿಸುವ ಸಮಯ ಬಂದಿದೆ ಎಂಬುದು ನಿಮ್ಮ ಮಾತಿನ ಅರ್ಥ ಎಂದು ನಾವು ನೇರವಾಗಿ ಕುಮಾರುಗೆ ದೂರು ನೀಡಲಿದ್ದು, ನಿಮ್ಮ ಬೀರುವನ್ನು ಭದ್ರ ಪಡಿಸಿಕೊಳ್ಳಲು ಸೂಚಿಸುತ್ತಿದ್ದೇವೆ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post