ಬೊಗಳೆ ರಗಳೆ

header ads

ನಳ್ಳಿ ತಿರುಗಿಸಿದರೆ ಗಾಳಿ: ತ.ನಾ. ಹೊಸ ಪ್ರಯೋಗ

(ಬೊಗಳೂರು ನೀರು ಕುಡಿಸುವ ಬ್ಯುರೋದಿಂದ)
ಬೊಗಳೂರು, ಏ.4- ಗೋಡೆಗೆ ತಗುಲಿಕೊಂಡಿರುವ ನಳ್ಳಿ ತಿರುಗಿಸಿದರೆ ಭುರ್ರನೇ ಗಾಳಿ ಬರುವುದು ಕರ್ನಾಟಕದ ವಿವಿಧ ಹಳ್ಳಿಗಳು ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ಸರ್ವೇ ಸಾಮಾನ್ಯ. ಅಂಥದ್ದು ಈಗ ತಮಿಳುನಾಡಿನಲ್ಲೂ ಬರಲಿದೆ ಎಂಬುದನ್ನೇ ದೊಡ್ಡ ಸುದ್ದಿ ಮಾಡಿ ಇಲ್ಲಿ ಪ್ರಕಟಿಸಿರುವುದು ಹಲವಾರು ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕದಿಂದ ಕಾವೇರಿ ನೀರು ಕಸಿದುಕೊಂಡರೂ ತಮಿಳುನಾಡಿನಲ್ಲಿ ನಳ್ಳಿ ನೀರು ಪೂರೈಕೆ ವ್ಯವಸ್ಥೆ ಅತ್ಯಂತ ಕಡಿಮೆ. ವಿಶೇಷವಾಗಿ ಚೆನ್ನೈನಲ್ಲಿ ಪ್ರತಿಮನೆಗೂ ಬೋರ್‌ವೆಲ್ ಮಾದರಿಯ ಕೈಪಂಪ್‌ನಿಂದಲೇ ಮೆಟ್ರೋ ನೀರು ಮೇಲೆತ್ತಲಾಗುತ್ತಿದೆ. ಹಾಗಿರುವಾಗ, ಜೀವಮಾನದಲ್ಲೇ ಮೊದಲ ಬಾರಿಗೆ ನಳ್ಳಿ ಮೂಲಕ ಪೂರೈಕೆ ವ್ಯವಸ್ಥೆ ಇಲ್ಲಿ ಕೇಳಿಬರುತ್ತಿರುವುದರಿಂದ ನಳ್ಳಿಯಲ್ಲಿ ಗಾಳಿ ಬರುವುದೇ ಅವರಿಗೆ ದೊಡ್ಡ ಸುದ್ದಿಯಾಗಿಬಿಡುತ್ತಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಕಂಡುಕೊಂಡಿದೆ.

ಕರ್ನಾಟಕದಿಂದ ಕಾವೇರಿ ನೀರನ್ನು ಕಸಿದುಕೊಂಡರೂ ಪೈಪಿನಲ್ಲಿ ಗಾಳಿಯನ್ನೇ ಒದಗಿಸುತ್ತಿರುವ ತಮಿಳುನಾಡು ಸರಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪಗಳು ಕೇಳಿಬರುತ್ತಿದೆ. ಇದು ನಳ್ಳಿಯಲ್ಲಿ ಗಾಳಿ ಬಿಟ್ಟು ಮತ ಸೆಳೆಯುವ ತಂತ್ರ ಎಂದು ಮಾಜಿ ಅಮುಖ್ಯರಾದ ಗಜಲಲಿತಾ ಆರೋಪಿಸಿದ್ದಾರೆ.

ಈ ಸರಕಾರ ಹೀಗೆಯೇ ಮುಂದುವರಿಯಲು ಬಿಟ್ಟರೆ ಇಲ್ಲಿ ಹಳಿಯಿಲ್ಲದ ರೈಲುಗಳನ್ನೂ ಕಾಣುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದಲ್ಲೇ ಪ್ರಥಮ ಬಾರಿ ನಳ್ಳಿಯಲ್ಲಿ ಗಾಳಿ ಪೂರೈಸುತ್ತೇವೆ ಎಂದು ಬೊಗಳೆ ಬಿಡುತ್ತಿರುವುದರ ವಿರುದ್ಧ ಸಿಡಿದೆದ್ದಿರುವ ಕರ್ನಾಟಕ ಸರಕಾರವು, ತಮ್ಮಲ್ಲಿ ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. ಹಾಗಾಗಿ ಮೊತ್ತ ಮೊದಲ ಬಾರಿಗೆ ಎಂಬ ನಾಮವಿಶೇಷಣವು ಕರ್ನಾಟಕ ಸರಕಾರಕ್ಕೇ ಸೇರಬೇಕು ಎಂದು ಅಧಿಕಾರಾರೂಢರು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಹೊರಟಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ತಮಿಳುನಾಡಿನ ನಲ್ಲಿಗಳಲ್ಲಿ (ನಳ್ಳಿ ಅಂದ್ರೆ ಕಳ್ಳಿ ಬರ್ತಾಳೆ - ಕಳ್ಳಿ ಅಂದ್ರೆ ಗಜಲಲಿತಾಗೆ ಕೋಪ ಬರತ್ತಂತೆ), ಈಗಿನ್ನೂ ಗಾಳಿ ಬರ್ತಿದೆಯಾ? ಬೆಂಗಳೂರಿಗೆ ಕಾವೇರಿ ಏರೋ ಹೊತ್ತಿಗೆ ಜಯನಗರ ಬಡಾವಣೆಯಲ್ಲಿಯ ನಲ್ಲಿಗಳಲ್ಲಿ, ಮೊದಲಿಗೆ ಗಾಳಿ, ನಂತರ ಕಪ್ಪೆ, ಹಾವು, ಚೇಳು, ಮೊರಾರ್ಜಿ ಟಾನಿಕ್ ಇತ್ಯಾದಿ ಬಂದಿತ್ತಂತೆ. ಅವೆಲ್ಲಾ ಆದ ಮೇಲೆ ತೊಟ್ಟ ತೊಟ್ಟ ತೊಟ್ಟು ಮುಟ್ಟಿದವ ಕೆಟ್ಟ ಅಂತ ಹನಿ ಹನಿಯಾಗಿ ಕೇಶರಾಶಿಯೊಂದಿಗೆ ಜಲರಾಶಿ ಬಂದಿತಂತೆ. ಇದರ ಕಾಮಗಾರಿಯನ್ನು ಕೈಗೆತ್ತಿಕೊಂಡ ಸಮಾಜ ಸೇವಕರ ಹೆಸರು ಮಗ ದುಂ ಎಂದಂತೆ. ಇದನ್ನೆಲ್ಲಾ ನಟಭಯಂಕರ ಹಿರಣ್ಣಯ್ಯನವರು ಹೇಳ್ತಾರೆ.

  ಹಾಗಿದ್ರೆ ತಮಿಳುನಾಡಿನಲ್ಲಿ ಮೀಸಲಾತಿಯನ್ನು ಇನ್ನೂ ಬಹಳ ವರ್ಷಗಳವರೆವಿಗೆ ಮುಂದುವರೆಸಲೇಬೇಕು. ಬಹಳ ಹಿಂದುಳಿದಿದ್ದೀರಿ, ಬಿಡಿ.

  ಪ್ರತ್ಯುತ್ತರಅಳಿಸಿ
 2. ನಳ್ಳಿಯಲ್ಲಿ ನೀರಿನ ಬದಲಾಗಿ ಗಾಳಿಯನ್ನು ಕಳುಹಿಸುತ್ತಾ, ಮತದಾರರಿಗೆ ಗಾಳಿ ಹಾಕುವ ಪ್ರಯತ್ನವನ್ನು ತ.ನಾ ಮಾಡುತ್ತಿದ್ದರೆ ಇತ್ತ ಕ.ನ್ನಾದಲ್ಲಿ ಸಾರಾಯಿಯನ್ನು ಎಡಗೈಯಲ್ಲಿ ಕಿತ್ತುಕೊಂಡು ಬಲಗೈಲಿ ಮದ್ಯ ಕೊಡುವ ಮಹತ್ ಸಾಧನೆ ನಡೆದಿರುವುದು ಬೆಳೆಕಿಗೆ ಬರುತ್ತಲಿದೆ. ಅವರು ನಳ್ಳಿಯಲ್ಲಿ ಕೇವಲ ಗಾಳಿ ಕಳುಹಿಸಿದರೆ ನಾವು ನಳ್ಳಿಯಲ್ಲಿ ಮದ್ಯವನ್ನೇ ಕಳುಹಿಸುತ್ತೇವೆ. ಆ ಮೂಲಕ ಜನಸೇವೆಗೆ ನಿಲ್ಲುತ್ತೇವೆ ಎಂದು ನಮ್ಮ ವದರಿಗಾರನಿಗೆ ಫೋಸು ಕೊಟ್ಟಿದ್ದು ನಮ್ಮ ವದರಿಗಾರ ಕೆಮರಾದಲ್ಲಿ ರೀಲಿಲ್ಲದೆ ಫೋಟೊ ತೆಗೆದುಕೊಂಡು ಬಂದಿದ್ದಾನೆ.

  ಪ್ರತ್ಯುತ್ತರಅಳಿಸಿ
 3. ಗಾಳಿಯೋ ನೀರೋ, ಪಂಚಭೂತಗಳಲ್ಲಿ ಯಾವುದಾದರೊಂದು ನಲ್ಲಿಯಲ್ಲಿ ಬರುತ್ತಿದ್ದರೆ ಅಷ್ಟೇ ಸಾಕು! ಗಾಳಿ ಕುಡಿದುಕೊಂಡು ಬದುಕುವ ಪ್ರವೃತ್ತಿ ಮನುಕುಲಕ್ಕೆ ಹೊಸದೇನೂ ಅಲ್ಲ, ಅಲ್ಲವೇ?

  ಪ್ರತ್ಯುತ್ತರಅಳಿಸಿ
 4. ಓಹ್! ಇಷ್ಟು ದಿನ ಬರೀ " ನೀರು " ಕಿತ್ಕೊಂಡಿದ್ದಾರೆ ಅನ್ಕೊಂಡಿದ್ದೆ..!! ಈಗ ಗಾಳಿನೂ ಕಿತ್ಕೊಂಡಿದ್ದಾರ??!!

  ಪ್ರತ್ಯುತ್ತರಅಳಿಸಿ
 5. ಶ್ರೀನಿವಾಸರೆ,
  ಗಜಲಲಿತಾ ಅವರು ನಿಮ್ಮ ಮಾತಿನಿಂದ ಕೆರಳಿ ಕೆಂಡವಾಗಿ ಮೂಗಿನ ಹೊಳ್ಳೆಗಳಿಂದಲೂ ಗಾಳಿ ಬಿಡುತ್ತಿದ್ದಾರಂತೆ. ಎಚ್ಚರವಾಗಿರಿ

  ಪ್ರತ್ಯುತ್ತರಅಳಿಸಿ
 6. ಸುಪ್ರೀತರೆ,
  ನಳ್ಳಿಯಲ್ಲಿ ಅವರು ಏನು ಕಳುಹಿಸಿದ್ದರು ಎಂಬುದನ್ನು ನಿಮ್ಮ ವದರಿಗಾರರ ವರದಿ ನೋಡಿಯೇ ತಿಳಿದುಕೊಂಡಿದ್ದೇವೆ. ಕೆಮರಾಕ್ಕೆ ರೀಲು ಹಾಕದೆ ಫೋಟೋ ತೆಗೆದಿದ್ದೂ ಅದೇ ಕಾರಣದಿಂದ ಎಂಬುದನ್ನು ಪತ್ತೆ ಹಚ್ಚಲಾಗಿದೆ.

  ಪ್ರತ್ಯುತ್ತರಅಳಿಸಿ
 7. ಸತೀಶರೆ,
  ಪಂಚಭೂತಗಳು ದೇಹದೊಳಕ್ಕೆ ಸೇರಿಕೊಳ್ಳುವುದಕ್ಕೆ ತಗಾದೆಯಿಲ್ಲ. ಆದರೆ ಗಾಳಿ ಕುಡಿದವರು ಗಾಳಿ ಬಿಡಲೇಬೇಕು ಎಂಬ ಅಲಿಖಿತ ನಿಯಮವಿರುವುದು ಮಾತ್ರ ತುಸು ಎಚ್ಚರಿಕೆ ವಹಿಸಬೇಕಾಗ ಸಂಗತಿ.

  ಪ್ರತ್ಯುತ್ತರಅಳಿಸಿ
 8. ಅನಾನಿಮಸ್ಗಿರಿಯವರೆ,
  ಹೀಗೇ ಆದರೆ, ವಿಶ್ವ ಕಪ್ ಕ್ರಿಕೆಟಿನಲ್ಲಿ ಭಾಗವಹಿಸಿದ ಭಾರತ ತಂಡದಂತೆ ಎಲ್ಲಾ ಕಿತ್ಕೊಂಡು ಬರ್ಮುಡಾ ಮಾತ್ರ ಉಳಿಸುತ್ತಾರೆ!!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D