ಬೊಗಳೆ ರಗಳೆ

header ads

ಮಕ್ಕಳಿಗೆ ಮೊಟ್ಟೆ ತಿನ್ನಿಸಲು ಮಿತ್ರರ ಕಾದಾಟ

(ಬೊಗಳೂರು ಮೊಟ್ಟೆ ಕೆಟ್ಟೆ ಬ್ಯುರೋದಿಂದ)
ಬೊಗಳೂರು, ಫೆ.1- ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಕುರಿತು ಭಾರಿ ಚರ್ಚೆಗಳಾಗುತ್ತಿದ್ದರೂ, ಅದು ಯಾವುದರ ಮೊಟ್ಟೆ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂಬ ಮಹತ್ವದ ಸಂಗತಿಯನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಈಗಾಗಲೇ ಸರಕಾರ ಒದಗಿಸಿದ ಬಿಸಿಯೂಟಕ್ಕೆ ಹಲವೆಡೆ ಮಕ್ಕಳು ಬಲಿಯಾಗಿರುವ ವರದಿಗಳು ಈಗಾಗಲೇ ಪ್ರಕಟವಾಗಿವೆ. ಇದಕ್ಕೆ ಕಾರಣ ಬಿಸಿಯೂಟಕ್ಕೆ ಒದಗಿಸುವ ಅಕ್ಕಿ-ಬೇಳೆಗಳು ಗೋಣಿಗಟ್ಟಲೆಯಾಗಿ "ನಿಜಕ್ಕೂ ಸಂಬಂಧಪಟ್ಟ ಅಧಿಕಾರಿಗಳ" ಪಾಲಾಗುತ್ತಿತ್ತು, ಮತ್ತು ಮಕ್ಕಳಿಗೆ ಕಳಪೆ ಮತ್ತು ಕಲಬೆರಕೆ ಅಕ್ಕಿ-ಬೇಳೆ ಬಳಸಿ ಊಟ ನೀಡಲಾಗುತ್ತಿತ್ತು. ಇದೀಗ ಪುಟ್ಟ ಮಕ್ಕಳ ಹೊಟ್ಟೆ ಕೆಡದಂತಾಗಲು ಮೊಟ್ಟೆ ಒದಗಿಸುವ ನಾನ್ ವೆಜ್ ರಾಜಕಾರಣಿಗಳ ನಿರ್ಧಾರದ ಹಿಂದೆ ಬೊಗಳೆ ರಗಳೆ ಕೈವಾಡವಿದೆ. ಈ ಕುರಿತು ಸಲಹೆ ನೀಡಿದ್ದು ಬೊಗಳೆ ರಗಳೆ ಬ್ಯುರೋ ಎಂದು ಬೆನ್ನು ತಟ್ಟಿಕೊಳ್ಳಲಾಗುತ್ತಿದೆ.

ಗೋಣಿಚೀಲದೊಳಗಿನ ಅಕ್ಕಿ ಕದ್ದು ಸಾಗಿಸಬಹುದು, ಆದರೆ ಮೊಟ್ಟೆಯೊಳಗಿರುವುದನ್ನು ಕದಿಯಲಾಗುವುದಿಲ್ಲ. ಹಾಗೆಯೇ ಅಕ್ಕಿಗೆ ಕಲ್ಲು ಬೆರಸಬಹುದು, ಆದರೆ ಮೊಟ್ಟೆಯೊಳಗೆ ಏನನ್ನೂ ತೂರಿಸುವುದು ಅಸಾಧ್ಯವಾಗಿರುವುದರಿಂದ ಮೊಟ್ಟೆಯೊಳಗಿನ ವಸ್ತುವನ್ನು ಕಲಬೆರಕೆ ಮಾಡಲಾಗದು ಎಂದು ಬೊಗಳೆ ರಗಳೆ ಬ್ಯುರೋ ಸೂಚಿಸಿದ ತಕ್ಷಣ ಎಚ್ಚೆತ್ತ ಮೊಟ್ಟೆ ಲಾಬಿಗಳು, ಈ ಕುರಿತು ಕುಮಾರಣ್ಣನ ಬೆನ್ನು ಹತ್ತಲು ಶುರು ಮಾಡಿದರು ಎಂದು ತಿಳಿದುಬಂದಿದೆ. ಮೊಟ್ಟೆಯನ್ನು ಸುಲಭವಾಗಿ ಕಿಸೆಯಲ್ಲಿ ಹಾಕಿಕೊಂಡು ಒಯ್ಯಬಹುದು.... ಅಲ್ಲಲ್ಲ.... ಮನೆಗೆ ಸಾಗಿಸಬಹುದು ಎಂಬುದು ಕೆಲವು ಲಾಬಿಗಳ ದೂರದ ದುರಾಲೋಚನೆ.

ಈ ಕುರಿತು ಮಿತ್ರರಾಗಿರುವ ನಾನ್ ವೆಜ್ ಪಕ್ಷ ಜೆಡಿಎಸ್ ಮತ್ತು ವೆಜ್ ಪಕ್ಷ ಬಿಜೆಪಿ ನಡುವೆ ತಗಾದೆ ಎದ್ದಿದ್ದು, ಮಕ್ಕಳು ಇಷ್ಟರವರೆಗೆ ಪೋಷಕಾಂಶ ಇಲ್ಲದೆಯೇ ಬೆಳೆದಿದ್ದಾರೆ. ಹಾಗಾಗಿ ಅವರು ಬೆಳೆದು ದೊಡ್ಡವರಾದಾಗ ಬೊಗಳೆ ರಗಳೆ ಮುಂತಾದ ಬ್ಯುರೋಗಳು ಈ ರೀತಿಯಾಗಿ ಕಾರ್ಯ ನಿರ್ವಹಿಸುವಂತಾಗಿವೆ. ಹಾಗಾಗಿ ಪೋಷಕಾಂಶ ಬೇಕೇ ಬೇಕು ಎಂದು ತೀರ್ಮಾನಿಸಿದ ಕೆಲವರು ಮೊಟ್ಟೆ ಕೊಡೋಣ ಎಂದು ವಾದಿಸಿದರೆ, ಮತ್ತೆ ಕೆಲವರು ಹಾಲು ಹಾಲು ಎನ್ನತೊಡಗಿದರು.

ಮೊಟ್ಟೆ ತಿಂದರೆ ಮಕ್ಕಳ ಹೊಟ್ಟೆ ಕೆಟ್ಟು ಹೋಗುತ್ತವೆ, ಹಾಲು ಕೆಲವರ ಆರೋಗ್ಯಕ್ಕೆ ಹಾಳು ಎಂಬ ವಾದಗಳೂ ಹುಟ್ಟಿಕೊಂಡಿತೇ ಹೊರತು ಯಾವುದರ ಮೊಟ್ಟೆ ಮತ್ತು ಯಾವುದರ ಹಾಲು ಎಂಬುದು ತೀರ್ಮಾನವಾಗಲೇ ಇಲ್ಲ.

(ಯಾವುದು ಒಳ್ಳೆಯದು ಎಂಬ ಬಗ್ಗೆ ನಡೆದ ರಂಪಾಟದ ಬಗ್ಗೆ ನಾಳಿನ ಸಂಚಿಕೆಯಲ್ಲಿ ನಿರೀಕ್ಷಿಸಿ).

ಕಾಮೆಂಟ್‌‌ ಪೋಸ್ಟ್‌ ಮಾಡಿ

13 ಕಾಮೆಂಟ್‌ಗಳು

 1. ಹಿಹ್ಹಿಹ್ಹಿ! ಹೌದು, 'ಯಾವುದರ ಮೊಟ್ಟೆ, ಯಾವುದರ ಹಾಲು' ಎಂಬುದರ ಬಗ್ಗೆ ಯೋಚಿಸಿರಲೇ ಇಲ್ಲ. ಸರೀ ನಗೆ ಬಂತು ಮಾರಾಯ್ರೆ ಓದಿ..! ಹೆಹ್ಹೆ :)

  ಪ್ರತ್ಯುತ್ತರಅಳಿಸಿ
 2. ಪಾಪ.....ಮಕ್ಕಳಿಗೆ ಬರೀ ಆಸೆ ತೋರಿಸ್ತಾ ಇದ್ದಾರೆ...ಹಾಲು...ಹಣ್ಣು...ಮೊಟ್ಟೆ ಅಂತೆಲ್ಲಾ....ಸುಮ್ಮನೆ ಯಾವುದೋ ಒಂದು
  ಕೊಟ್ಟರೆ ಆಯ್ತಲ್ವಾ...ಹೀಗೆ ಮಾಡ್ತಾ ಇದ್ರೆ...ಮಕ್ಕಳು....ಓದೋದು ಬಿಟ್ಟು...ಇವತ್ತು ನಮ್ಮಿಸ್ಸು....ಮೊಟ್ಟೆ ಕೊಡ್ತಾರೋ....ಹಣ್ಣು ಕೊಡ್ತಾರೋ....ಹಾಲೇ ಕೊಡ್ತಾರೋ ಅಂತ ಬೆಟ್ ಕಟ್ತಾರೆ ಅಷ್ಟೇ....

  ಪ್ರತ್ಯುತ್ತರಅಳಿಸಿ
 3. ವೆಜ್, ನಾನ್ ವೆಜ್ ರಾಜಕಾರಣಿಗಳು - ಈ ಹೊಸ ಪದಗಳು ಕನ್ನಡ ಪದಕೋಶಕ್ಕೆ ಬೊಗಳೆ ರಗಳೆ ಕೊಡುಗೆ :)

  ಪ್ರತ್ಯುತ್ತರಅಳಿಸಿ
 4. ಶ್ರೀನಿವಾಸ್ ಅವರೆ, ನಿಮ್ಮ ಪದ್ಯ ಚೆನ್ನಾಗಿದೆ....ನಾನು ಈ ಪದ್ಯನ ಎಲ್ಲೋ ಒಮ್ಮೆ ಓದಿದ ನೆನಪು...

  ಅಮ್ಮ ನೋಡೆ ಕಣ್ಬಿಟ್ಟು
  ನಮ್ಮಯ ಶಾಲೆಯ ಉಪ್ಪಿಟ್ಟು

  ಮೇಷ್ಟ್ರಿಗೆಲ್ಲಾ ಅಷ್ಟಷ್ಟು
  ನಮಗೆ ಮಾತ್ರ..ಇಷ್ಟೇ ಇಷ್ಟು...

  ಪ್ರತ್ಯುತ್ತರಅಳಿಸಿ
 5. ಸುಶ್ರುತರೇ,
  ಹೇಗಿದ್ರೂ ರಾಜಧಾನೀಲೇ ಇದ್ದೀರಾ...ನೀವಾದ್ರೂ ನಮ್ಮ ಸರಕಾರಕ್ಕೆ ಸ್ವಲ್ಪ ಸಲಹೆ ಕೊಡ್ಬಾರ್ದಾ... ಯಾವುದ್ರ ಮೊಟ್ಟೆ, ಯಾವುದ್ರ ಹಾಲು ಕುಡಿಸ್ಬೇಕು ಅಂತ.. :)

  ಪ್ರತ್ಯುತ್ತರಅಳಿಸಿ
 6. ಅನಾನಸ್ ರಸದವರೆ,
  ಶಾಲೆ ಪಕ್ಕದಲ್ಲೇ ಈಗ ಬೆಟ್ಟಿಂಗ್ racket ತಾಣಗಳನ್ನು ಸ್ಥಾಪಿಸುವ ಯೋಚನೆ ಇದೆ. ನಿಮ್ಮ ಬೆಂಬಲ ಕೋರುತ್ತೇವೆ.

  ಪ್ರತ್ಯುತ್ತರಅಳಿಸಿ
 7. ಶ್ರೀತ್ರಿ ಅವರೆ,
  ಇದು ಅನರ್ಥಕೋಶದಲ್ಲಿ ಹಿಡಿಸದೆ ಹೊರಗೆ ಚೆಲ್ಲಿದ ಶಬ್ದಗಳು.

  ಪ್ರತ್ಯುತ್ತರಅಳಿಸಿ
 8. ಶ್ರೀನಿವಾಸರೆ,
  ಈಗಿನ ಶಿಕ್ಷಕರು ಹೆಚ್ಚು ತಿಂದರೆ ಏನಾಗುತ್ತೆ ಅಂತ ತಾವೇ ಪರೀಕ್ಷಿಸಿ, ಮಕ್ಕಳಿಗೆ ಉಪವಾಸ ಇರುವುದು ಹೇಗೆ ಅಂತಾನೂ ಕಲಿಸ್ತಾ ಇದ್ದಾರೆ ಅಂತ ಅಲ್ಲಲ್ಲಿಂದ ವರದಿಗಳು ಬರುತ್ತಿರುವುದು ಮಧ್ಯಾಹ್ನದೂಟ ಯೋಜನೆಯ ಯಶಸ್ಸಿನ ಲಕ್ಷಣಗಳಲ್ಲೊಂದು.

  ಪ್ರತ್ಯುತ್ತರಅಳಿಸಿ
 9. ಅನಾನಿಮಸರೆ,
  <>ಶ್ರೀನಿವಾಸ್ ಅವರೆ, ನಿಮ್ಮ ಪದ್ಯ ಚೆನ್ನಾಗಿದೆ....ನಾನು ಈ ಪದ್ಯನ ಎಲ್ಲೋ ಒಮ್ಮೆ ಓದಿದ ನೆನಪು...<>

  ನೀವು ಶಾಲೆಗೆ ಹೋಗಿದ್ದನ್ನು ಮರೆತೇಬಿಟ್ರಾ?

  ಪ್ರತ್ಯುತ್ತರಅಳಿಸಿ
 10. ಇಷ್ಟು ದಿನ ಅಕ್ಕಿಯಲ್ಲಿ ಜಿರಲೆ ಮೊಟ್ಟೆ ಕೊಡ್ತಾ ಇದ್ದರು ಮಕ್ಕಳಿಗೆ..ಈಗ ಯಾವುದಾರ ಮೊಟ್ಟೆ ಬಗ್ಗೆ ಹೇಳ್ತಾ ಇದರೋ ಎನೋ..

  ಪ್ರತ್ಯುತ್ತರಅಳಿಸಿ
 11. ನಮ್ ಸ್ಕೂಲ್ ಲ್ಲಿ ಈ ತರ ಪದ್ಯ ಹೇಳಿಕೊಡ್ತಾ ಇರ್ಲಿಲ್ಲ...ಅನ್ವೇಷಿಗಳೇ...!! ನಾನು ಓದಿದ "ಕಾನ್ವ್ಂಟ್" ಸಿಸ್ಟರ್ ಗಳು...ನಮಗೆ ಬಿಸಿಯೂಟನು ಹಾಕ್ತಾ ಇರಲಿಲ್ಲ...ಹಾಲು...ಮೊಟ್ಟೆ ಎನೂ ಕೊಡ್ತಾ ಇರಲಿಲ್ಲ....ಆದರೆ...ಕೈ ಮೇಲೆ...:ನಾಗರ ಬೆತ್ತ" ತಗೊಂಡು..."ಬಿಸಿ ಬಿಸಿ ಕಜ್ಜಾಯ" ಮಾತ್ರ ತಪ್ಪದೆ ಕೊಡ್ತಾ ಇದ್ದರು :-(

  ಪ್ರತ್ಯುತ್ತರಅಳಿಸಿ
 12. ಶಿವ್ ಅವರೆ,
  ಈಗ ಕಾಲ ಬದಲಾಗಿರೋದ್ರಿಂದ ಮತ್ತು ಎಲ್ಲ ಪ್ರಾಣಿಗಳೂ ಮೊಟ್ಟೆ ಉದ್ಯಮವೇ ಲೇಸು ಅಂದುಕೊಂಡು ಮೊಟ್ಟೆ ಇಡಲಾರಂಭಿಸಿರುವುದರಿಂದ ಏನು ಬೇಕಾದರೂ ಕೊಡಬಹುದಲ್ಲವೇ?

  ಪ್ರತ್ಯುತ್ತರಅಳಿಸಿ
 13. ಅನಾನಿಮಸ್ಗಿರಿಯವರೆ,
  ನಾಗರಬೆತ್ತದ ರುಚಿ ನೋಡಿದ ನಿಮ್ಮ ಕೈಗಳ ಆರೋಗ್ಯ ಈಗ ಹೇಗಿದೆ? ಎಷ್ಟು ಬೇಕಾದರೂ ಕಜ್ಜಾಯ ಹಾಕಿಸಿಕೊಳ್ಳಲು ಸಾಧ್ಯವಾಗುವಷ್ಟು ಪರಿಪಕ್ವವಾಗಿದೆಯೇ?

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D